ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಯೋಧನಾಗಿ ‘ಹ್ಯಾಟ್ರಿಕ್ ಹೀರೊ’ ಶಿವಣ್ಣ

Last Updated 24 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‘ಹ್ಯಾಟ್ರಿಕ್ ಹೀರೊ’ ಶಿವಣ್ಣ ಅವರ ಹೊಸ ಚಿತ್ರ ಆರಂಭವಾಗುತ್ತಿದೆ. ಇತ್ತೀಚೆಗೆ ತೆರೆಕಂಡಿದ್ದ ‘ದ್ರೋಣ’ ಚಿತ್ರದಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಪಾಠ ಮಾಡಿದ್ದ ಶಿವಣ್ಣ ತಮ್ಮ ಮುಂದಿನ ಚಿತ್ರದಲ್ಲಿ ದೇಶದ ಗಡಿ ಕಾಯುವ ಯೋಧನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಶಿವಣ್ಣ ‘ಮಾಸ್‌ ಲೀಡರ್‌’ ಚಿತ್ರದಲ್ಲಿ ಸೇನಾ ಕ್ಯಾಪ್ಟನ್‌ ಆಗಿ ನಟಿಸಿದ್ದರು. ಶಿವಣ್ಣ ಜತೆಗೆ ವಿಜಯರಾಘವೇಂದ್ರ ಮತ್ತು ಗುರು ಜಗ್ಗೇಶ್‌ ಯೋಧರಾಗಿ ಅಭಿನಯಿಸಿದ್ದರು.

ತೆಲುಗಿನ ನಿರ್ದೇಶಕ ರಾಮ್ ಧುಲಿಪುಡಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ವರನಟ ಡಾ.ರಾಜ್‌ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಚಿತ್ರ ಘೋಷಿಸಲಾಗಿದೆ. ಚಿತ್ರದ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲವನ್ನು ಚಿತ್ರತಂಡ ಕಾಯ್ದುಕೊಂಡಿದ್ದು, ಉಳಿದ ಕಲಾವಿದರ ಆಯ್ಕೆ ನಡೆಸುತ್ತಿದೆ. ಶೀರ್ಷಿಕೆಯನ್ನು ಸದ್ಯದಲ್ಲೇ ಪ್ರಕಟಿಸಲಿದೆ.

ಭಾವನಾತ್ಮಕ ವಿಚಾರಗಳೊಂದಿಗೆ ಪ್ರೀತಿಯನ್ನು ಎತ್ತಿಹಿಡಿಯುವ ಕಥಾಹಂದರ ಇದರಲ್ಲಿದೆಯಂತೆ. ಆರಂಭದಲ್ಲಿ ಶಿವರಾಜ್ ಕುಮಾರ್ ಅವರಿಗೆ ರಾಮ್ ಧುಲಿಪುಡಿ ಕಥೆಯ ಸಣ್ಣ ಎಳೆಯನ್ನು ಹೇಳಿದ್ದರಂತೆ. ಕಥಾವಸ್ತುವನ್ನು ಅಪಾರವಾಗಿ ಇಷ್ಟಪಟ್ಟ ಶಿವಣ್ಣ ಪೂರ್ತಿ ಕಥೆ‌ ಕೇಳಿ, ತಕ್ಷಣವೇ ಒಪ್ಪಿಗೆ ಸೂಚಿಸಿದ್ದರು. ಹೀಗೆ ಆರಂಭವಾದ ಸಿನಿಮಾದ ಕೆಲಸ ಈಗ ಪರಿಪಕ್ವ ರೂಪುರೇಷೆ ಪಡೆದಿದೆ.

ಐವತ್ತೈದು ದಿನಗಳ ಕಾಲ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಶಿವಮೊಗ್ಗ, ಜಮ್ಮು ಮತ್ತು ಕಾಶ್ಮೀರ ಸೇರಿ ದೇಶದ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡದ್ದಾಗಿದೆ.

ತೆಲುಗಿನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ, ಚಿತ್ರಕಥೆ, ಸಂಭಾಷಣೆ ಬರಹಗಾರರಾಗಿ ಹೆಸರು ಮಾಡಿರುವ ರಾಮ್ ಧುಲಿಪುಡಿ ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವ ಚಿತ್ರವಿದು.

ಶ್ರೀಚರಣ್ ಪಕಲ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿಕುಮಾರ್ ಸನಾ ಛಾಯಾಗ್ರಹಣವಿರಲಿದೆ. ಬಾಲಶ್ರೀರಾಂ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲ ಶ್ರೀನಿವಾಸ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಕುಡಿಪುಡಿ ವಿಜಯ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT