ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರು ನಟನೆಯ ‘ಶಿವಾರ್ಜುನ’ ಅ.16ಕ್ಕೆ ಮರು ಬಿಡುಗಡೆ

Last Updated 13 ಅಕ್ಟೋಬರ್ 2020, 5:31 IST
ಅಕ್ಷರ ಗಾತ್ರ

ಕೋವಿಡ್‌–19 ಲಾಕ್‌ಡೌನ್‌ಗೂ ಕೆಲವು ದಿನಗಳ ಮುನ್ನ ಬಿಡುಗಡೆಯಾಗಿದ್ದ ಚಿರಂಜೀವಿ ಸರ್ಜಾ ಮತ್ತು ಅಮೃತಾ ಅಯ್ಯಂಗಾರ್‌ ಮುಖ್ಯ ಭೂಮಿಕೆಯಲ್ಲಿರುವ ‘ಶಿವಾರ್ಜುನ’ ಚಿತ್ರ ಇದೇ 16ರಂದು ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ.

ಚಿತ್ರ ಗಳಿಕೆಯ ಹಾದಿಯಲ್ಲಿರುವಾಗಲೇ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದರಿಂದ ‘ಶಿವಾರ್ಜುನ’ ಚಿತ್ರಕ್ಕೂ ತೊಂದರೆಯಾಯಿತು. ಅದೇ ವೇಳೆಗೆ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ತುತ್ತಾದರು. ಇದರಿಂದ ನಿರ್ಮಾಪಕರಿಗೂ ದೊಡ್ಡ ನಷ್ಟ ಉಂಟಾಗಿತ್ತು. ಚಿತ್ರ ಮರುಬಿಡುಗಡೆಗೆ ಅನುಮತಿ ನೀಡಬೇಕೆಂದು ಚಿತ್ರದ ನಿರ್ಮಾಪಕಶಿವಾರ್ಜುನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಕೋರಿಕೆ ಇಟ್ಟಿದ್ದರು.

‘ಇದು ನನ್ನ ನಿರ್ಮಾಣದ ಮೊದಲ ಸಿನಿಮಾ. ಮಾರ್ಚ್‌ 12ರಂದು ಬಿಡುಗಡೆ ಮಾಡಲಾಗಿತ್ತು. ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುತ್ತಿರುವಾಗಲೇ ಲಾಕ್‌ಡೌನ್‌ ಆಯಿತು. ಈಗ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದು, ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರವೇ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯಲಿದೆ’ ಎಂದು ನಿರ್ಮಾಪಕ ಶಿವಾರ್ಜುನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಚಿರಂಜೀವಿ ಸರ್ಜಾ ಅನುಪಸ್ಥಿತಿಯಲ್ಲಿ ಈ ಸುದ್ದಿಗೋಷ್ಠಿ ನಡೆಯುತ್ತಿರಬಹುದು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ. ಬದಲಿಗೆ ಸ್ಫೂರ್ತಿಯಾಗಿ ನಮ್ಮೆಲ್ಲರ ಜತೆ ಅವರು ಸದಾ ಇರಲಿದ್ದಾರೆ. ಸಿನಿಮಾ ಮೂಲಕ ಇಂದಿಗೂ ಅವರು ಜೀವಂತವಾಗಿದ್ದಾರೆ. ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿರುವಾಗ ಪ್ರೇಕ್ಷಕರು ಎಂದಿನಂತೆ ಚಿತ್ರಮಂದಿರಕ್ಕೆ ಬಂದು ಕನ್ನಡ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು’ ಎಂದುನಿರ್ದೇಶಕ ಶಿವತೇಜಸ್‌ ಮನವಿ ಮಾಡಿದರು.

‘ಈಗ ಸಿನಿಮಾ ಮಂದಿರಗಳು ಬಾಗಿಲು ತೆರೆಯುತ್ತಿವೆ ಎಂದು ಖುಷಿಪಡಬೇಕೋ ಅಥವಾ ಚಿರು ಇಲ್ಲದೇ ಈ ಸಿನಿಮಾ ಮರು ಬಿಡುಗಡೆ ಆಗುತ್ತಿರುವುದಕ್ಕೆ ಬೇಸರದಲ್ಲಿ ಮಾತನಾಡಬೇಕೋ ಗೊತ್ತಾಗುತ್ತಿಲ್ಲ. ನಿಜಕ್ಕೂ 2020 ವರ್ಷ ಚಿತ್ರರಂಗದ ಮಟ್ಟಿಗೆ ಕರಾಳ ವರ್ಷ. ಸಾವು– ನೋವು ಒಂದೆಡೆಯಾದರೆ, ಕೊರೊನಾ ಆಘಾತ ಮತ್ತೊಂದು ಕಡೆ. ಇದೆಲ್ಲವನ್ನು ದಾಟಿಕೊಂಡು ಇದೀಗ ನಮ್ಮ ಚಿರಂಜೀವಿ ಶಿವಾರ್ಜುನನಾಗಿ ಮತ್ತೆ ತೆರೆಮೇಲೆ ಬರುತ್ತಿದ್ದಾರೆ.ಚಿತ್ರಮಂದಿರಕ್ಕೆ ಎಲ್ಲರೂ ಬನ್ನಿ’ ಎಂದು ಪ್ರೇಕ್ಷಕರನ್ನು ನಟಿ ತಾರಾ ಅನೂರಾಧಾ ಆಹ್ವಾನಿಸಿದರು.

ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆಎಂ.ಬಿ.ಮಂಜುಳಾ ಶಿವಾರ್ಜುನ್ ದಂಪತಿ ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಬಂಡವಾಳ ಹೂಡಿದ್ದಾರೆ.

ಅಕ್ಷತಾ, ತಾರಾ ಅನೂರಾಧಾ, ಅವಿನಾಶ್, ಕುರಿ ಪ್ರತಾಪ್, ರವಿ ಕಿಶನ್, ಶಿವರಾಜ್ ಕೆ.ಆರ್.ಪೇಟೆ ಅವರ ತಾರಾಗಣವಿದೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ.ನಾಗೇಂದ್ರ ಪ್ರಸಾದ್‌ ಸಾಹಿತ್ಯ, ಸುರಾಗ್ ಸಾಧು ಕೋಕಿಲಾ ಸಂಗೀತ ಸಂಯೋಜನೆ, ಸಾಧು ಕೋಕಿಲಾ ಅವರ ಹಿನ್ನೆಲೆ ಸಂಗೀತ, ಎಚ್.ಸಿ. ವೇಣು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT