ನನ್ನ ಬದುಕಿಗೆ ಗಡಿರೇಖೆಗಳಿಲ್ಲ: ಶುಭಾ ಪೂಂಜಾ

7
ಸಂದರ್ಶನ

ನನ್ನ ಬದುಕಿಗೆ ಗಡಿರೇಖೆಗಳಿಲ್ಲ: ಶುಭಾ ಪೂಂಜಾ

Published:
Updated:

ಶುಭಾ ಪೂಂಜಾ ಎಂದರೆ ಒಂದಿಷ್ಟು ಹಸಿಬಿಸಿ ದೃಶ್ಯಗಳು ಇಲ್ಲವೇ ಇನ್ನೊಂದಿಷ್ಟು ವಿವಾದಗಳೇ ನೆನಪಾಗುತ್ತವೆ. ಆದರೆ ಇಂಥ ಥಳುಕಿನ ಹೊರನೋಟದಾಚೆ ಅವರೊಳಗೊಬ್ಬ ಪ್ರಬುದ್ಧ ಕಲಾವಿದೆಯಿದ್ದಾರೆ. ಹಲವು ನೋವುಗಳನ್ನು ಔಡುಗಚ್ಚಿ ದಾಟಿಬಂದ ಛಲಗಾತಿಯಿದ್ದಾಳೆ. ಕೊನೆಯುಸಿರವರೆಗೂ ನಟಿಸುತ್ತಲೇ ಇರುತ್ತೇನೆಂಬ ಕನಸುಗಾತಿಯಿದ್ದಾಳೆ. ‘ನಟನೆ’ಯ ಬಣ್ಣಗಳನ್ನು ವೃತ್ತಿಗಷ್ಟೇ ಅಲ್ಲ; ಬದುಕಿಗೂ ಬಳಿದುಕೊಂಡವರು ಅವರು. ಬದುಕು, ನಟನೆ, ನೋವು, ಕನಸು ಹೀಗೆ ಹಲವು ಸಂಗತಿಗಳ ಕುರಿತು ಅವರ ಜತೆ ನಡೆಸಿದ ಮುಕ್ತ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ಕಳೆದ ಹದಿಮೂರು ವರ್ಷಗಳ ಸಿನಿಮಾ ಬದುಕನ್ನೊಮ್ಮೆ ಹೊರಳಿ ನೋಡಿದರೆ ಏನನಿಸುತ್ತದೆ? 
ಇದುವರೆಗೆ ಸುಮಾರು 40 ಸಿನಿಮಾಗಳಲ್ಲಿ ನಟಿಸಿದ್ದೇನೆ. ಯುಶಸ್ಸುಗಳನ್ನೂ ನೋಡಿದ್ದೀನಿ. ವೈಫಲ್ಯಗಳನ್ನೂ ನೋಡಿದ್ದೀನಿ. ಆದರೆ ಈ ಪಯಣ ತುಂಬ ಶ್ರೀಮಂತವಾಗಿತ್ತು. ಕನ್ನಡ ಚಿತ್ರರಂಗ ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ಹಲವು ಸೋಲುಗಳು ಒಟ್ಟೊಟ್ಟಿಗೇ ಬಂದಾಗಲೂ ನನಗೆ ಅವಕಾಶಗಳು ಕಡಿಮೆಯಾಗಲಿಲ್ಲ. ನಟಿಸುತ್ತಲೇ ಬಂದಿದ್ದೀನಿ. ಅವುಗಳಲ್ಲಿ ಕೆಲವು ಗೆದ್ದಿವೆ, ಕೆಲವು ಸೋತಿವೆ. ಕೆಲವು ಸುಮಾರಾಗಿ ಹೋಗಿದೆ. ಕೆಲವು ಸಲ ಗ್ಯಾಪ್ ಆಗಿವೆ. ಇವೆಲ್ಲವುಗಳ ಜತೆಗೇ ನನ್ನ ಈ ಪ್ರಯಾಣ ಮುಂದುವರಿಯುತ್ತಲೇ ಇದೆ. ಇಂದಿನವರೆಗೂ ನಾನು ಬ್ಯುಸಿಯಾಗಿಯೇ ಇದ್ದೀನಿ.

ಈ ಪಯಣದಲ್ಲಿ ಕಲಿತಿದ್ದು ತುಂಬ ಇದೆ. ಚಿತ್ರರಂಗಕ್ಕೆ ಬಂದಾಗ ಇದ್ದ ಶುಭಾಗೂ ಈಗಿನ ಶುಭಾಗೂ ತುಂಬ ವ್ಯತ್ಯಾಸ ಇದೆ. ಚಿತ್ರರಂಗದ ಗಂಧಗಾಳಿಯೇ ಇಲ್ಲದೆ ಇಲ್ಲಿಗೆ ಬಂದವಳು ನಾನು. ವೃತ್ತಿಯಲ್ಲಿಯೂ, ಬದುಕಿನಲ್ಲಿಯೂ ಚಿತ್ರರಂಗ ನನಗೆ ಹಲವು ವಿಷಯಗಳನ್ನು ಕಲಿಸಿದೆ. 

* ಅಂದರೆ ಸೋಲು– ಗೆಲುವು ಎನ್ನುವುದನ್ನು ನಿಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಅಲ್ಲವೇ? 
ಖಂಡಿತವಾಗಿಯೂ. ನನ್ನ ವೈಯಕ್ತಿಕ ಬದುಕಿನಲ್ಲಿಯೂ ನಾನು ಹಲವು ಸೋಲು– ಗೆಲುವುಗಳನ್ನು ಕಂಡಿದ್ದೇನೆ. ಸಾಮಾನ್ಯ ವ್ಯಕ್ತಿಗೆ ವೈಯಕ್ತಿಕ ನೋವುಗಳು ಖಾಸಗಿಯಾಗಿಯೇ ಇರುತ್ತದೆ. ಆದರೆ ನಾವು ಕಲಾವಿದರಿಗೆ ವೈಯಕ್ತಿಕ ಗಾಯಗಳೂ ಸಾರ್ವಜನಿಕ ಸೊತ್ತಾಗಿಬಿಡುತ್ತವೆ. ಅದರ ಜತೆ ಹೋರಾಡುತ್ತಲೇ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. 

ಎಂಥ ಸಮಯದಲ್ಲಿಯೂ ನಾವು ನಮ್ಮ ನೋವನ್ನು ತೋರಿಸಿಕೊಳ್ಳುವ ಹಾಗಿಲ್ಲ. ನನಗಿನ್ನೂ ನೆನಪಿದೆ; ಒಮ್ಮೆ ಯಾವುದೋ ಕಾರಣಕ್ಕೆ ಇಡೀ ರಾತ್ರಿ ಅತ್ತುಕೊಂಡು ಕೂತಿದ್ದೆ. ಮರುದಿನ ಬೆಳಿಗ್ಗೆ ಮಂಗಳೂರಿನಲ್ಲಿ ಒಂದು ಕಾರ್ಯಕ್ರಮ. ಅದರಲ್ಲಿ ನಾನು ಭಾಗವಹಿಸಬೇಕು. ಹಾಗೆ ಊದಿಕೊಂಡ ಮುಖಕ್ಕೇ ಬಣ್ಣ ಬಳಿದುಕೊಂಡು ಕಾರ್ಯಕ್ರಮಕ್ಕೆ ಹೋಗಿ ನಕ್ಕು ಬರಬೇಕು. ಇಂಥ ಅನುಭವಗಳಿವೆಲ್ಲ, ಅವೇ ನನ್ನನ್ನು ಬೆಳೆಸಿವೆ. ಎಷ್ಟೋ ಸಲ ನಾನು ತುಂಬ ಖಿನ್ನಳಾಗಿ ಬೇಯುತ್ತಿರುವಾಗ ಯಾರೋ ಅಭಿಮಾನಿಗಳು ಬಂದು ಫೋಟೊ ತೆಗೆಸಿಕೊಳ್ಳಬೇಕು ಅನ್ನುತ್ತಾರೆ. ಆಗ ನಗಲೇ ಬೇಕು. ಈ ನಟನಾವೃತ್ತಿ ಎನ್ನುವುದು ಬದುಕಿನ ಯಾವುದೇ ಪರಿಸ್ಥಿತಿಯಲ್ಲಿಯೂ ನಗುವುದನ್ನು ಹೇಳಿಕೊಡುತ್ತದೆ. 

* ‘ಮೊಗ್ಗಿನ ಮನಸ್ಸು’ ಸಿನಿಮಾ ನಂತರ ನಿಮ್ಮೊಳಗಿನ ನಟಿಯನ್ನು ಪ್ರಖರವಾಗಿ ತೋರಿಸುವ ಮತ್ತೊಂದು ಪಾತ್ರ ಬಂದೇ ಇಲ್ಲ ಅಲ್ಲವೇ? 
‘ಮೊಗ್ಗಿನ ಮನಸ್ಸು’ ಚಿತ್ರದ ನಂತರ ‘ಸ್ಲಂ ಬಾಲ’ ಎನ್ನುವ ಸಿನಿಮಾ ಬಂತು. ಅದರಲ್ಲಿಯೂ ನನಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಇತ್ತೀಚೆಗೆ ಬಂದ ‘ಗೂಗಲ್’ ಚಿತ್ರದಲ್ಲಿಯೂ ಬೇರೆ ಥರದ ಪಾತ್ರ ಮಾಡಿದ್ದೆ. ಈಗ ‘ನರಗುಂದ ಬಂಡಾಯ’ ಎನ್ನುವ ಸಿನಿಮಾ ಬರ್ತಿದೆ. ಅದರಲ್ಲಿ ಒಳ್ಳೆಯ ಪಾತ್ರ ಇದೆ. ಆದರೆ ಹೆಚ್ಚಾಗಿ ನಾನು ಕಮರ್ಷಿಯಲ್ ಸಿನಿಮಾಗಳಲ್ಲಿ ಗ್ಲ್ಯಾಮರಸ್ ಪಾತ್ರಗಳನ್ನೇ ಮಾಡಿಕೊಂಡು ಬಂದೆ. ಶುಭಾ ಎಂದರೆ ಗ್ಲ್ಯಾಮರಸ್ ಪಾತ್ರಗಳು ಎನ್ನುವ ಹಾಗಾಯ್ತು. ಒಂದು ಘಟ್ಟದಲ್ಲಿ ನನಗೂ ಬೇಸರವಾಯ್ತು. ನಾನೂ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾಡಬೇಕು ಅನಿಸಿತು. ಆದರೆ ಗ್ಲ್ಯಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ನಿರ್ಧಾರವೂ ನನ್ನದೇ ಆಗಿತ್ತು. ಗ್ಲ್ಯಾಮರಸ್ ಆಗಿ ಕಾಣಿಸಿಕೊಳ್ಳುವುದು ನನ್ನ ಇಷ್ಟ. ಆ ಆಸೆ ನನಗೆ ನೆರವೇರಿದೆ. ಹಾಗೆಯೇ ನನ್ನೊಳಗಿನ ನಟಿಯನ್ನೂ ಪರಿಚಯ ಮಾಡಿಕೊಡಬೇಕು ಎನ್ನುವ ಆಸೆಯೂ ನನಗೆ ಇದೆ ಮತ್ತು ಅದು ಇನ್ನು ಮುಂದೆ ನೆರವೇರುತ್ತದೆ ಎಂಬ ಗಟ್ಟಿ ನಂಬಿಕೆಯೂ ನನಗಿದೆ. 

ನಾನು ಯಾವತ್ತೂ ಇಷ್ಟೇ ಎಂದು ನನಗೆ ಬೌಂಡರಿ ಹಾಕಿಕೊಳ್ಳುವುದಿಲ್ಲ. ಈ ಗುಣ ನನ್ನ ಬದುಕಲ್ಲಿ, ವೃತ್ತಿಬದುಕಿನಲ್ಲಿ ಕೊನೆಯವರೆಗೂ ಇರುತ್ತದೆ. ಖಂಡಿತವಾಗಿಯೂ ನಾನು ಸಾಯುವವರೆಗೂ ಇರುವ ಈ ವೃತ್ತಿಯಲ್ಲಿ ಒಳ್ಳೆಯ ಪಾತ್ರಗಳನ್ನೂ ಮಾಡಿ ಜನರ ಮನಸ್ಸನ್ನು ಗೆಲ್ತೀನಿ ಎನ್ನುವ ವಿಶ್ವಾಸ ಪೂರ್ತಿಯಾಗಿ ಇದೆ. 

* ಆದರೆ ನಿಮ್ಮ ಬದುಕಿಗೆ ಬೇರೆಯವರು ಬೌಂಡರಿ ಹಾಕುವ ಪ್ರಯತ್ನ ಮಾಡಿರಬೇಕಲ್ಲವೇ? 
ಬೌಂಡರಿ ಹಾಕುವವರು ಎಲ್ಲ ಕಡೆಗಳಲ್ಲಿಯೂ ನಮಗೆ ಸಿಗುತ್ತಾರೆ. ಪ್ರತಿ ಹಂತದ ಬದುಕಿನಲ್ಲಿಯೂ ಇಂಥ ಅನುಭವಗಳು ಎದುರಾಗಿವೆ. ಈಗಲೂ ನನಗೆ ತುಂಬ ಜನರು ಹೇಳುತ್ತಾರೆ. ‘ನಲ್ವತ್ತು ಸಿನಿಮಾಗಳು ಆಯ್ತಲ್ವಾ? ಇನ್ನು ಸಾಕಲ್ವಾ?’ ‘ನೀನು ಬರೀ ಗ್ಲ್ಯಾಮರಸ್ ಆಗಿಯೇ ಮಾಡಿದ್ದೀಯಾ. ನೀನು ಇಷ್ಟೇನಾ?’ ಇಂಥ ಮಾತುಗಳು ನನಗೆ ಯಾವಾಗಲೂ ಕೇಳಿಬರುತ್ತಿರುತ್ತವೆ. ಆದರೆ ಅದು ಬೇರೆಯವರು ನಮಗೆ ಹಾಕುವ ಗಡಿರೇಖೆ. ನಮ್ಮ ಬದುಕಿಗೆ ನಾವೇ ಯಾವತ್ತು ಬೌಂಡರಿ ಹಾಕಿಕೊಳ್ಳುತ್ತೇವೆಯೋ ಆಗಲೇ ಅದು ನಿಜವಾಗುವುದು. ಈಗ ಐದು ವರ್ಷಗಳ ಹಿಂದೆಯೇ ‘ಶುಭಾ ನಟನಾಬದುಕು ಮುಗಿಯಿತು. ಇನ್ನೇನು ನಟಿಸಲ್ಲ ಅವಳು’ ಎಂಬ ಮಾತುಗಳು ಕೇಳಿಬಂದವು. ಆದರೆ ನಾನು ನಿಲ್ಲಲಿಲ್ಲ. ನಟಿಸುತ್ತಲೇ ಬಂದೆ. ಈವತ್ತಿನವರೆಗೆ ನಟಿಸುತ್ತಲೇ ಇದ್ದೇನೆ. ಇಷ್ಟು ದೂರ ಕರೆದುಕೊಂಡು ಬಂದಿರುವ ನನ್ನ ಛಲ, ಇನ್ನೂ ಮುಂದಕ್ಕೆ ಒಳ್ಳೆಯ ಪಾತ್ರಗಳ ಮೂಲಕವೂ ಗುರ್ತಿಸಿಕೊಳ್ಳುತ್ತೀನಿ ಎಂಬ ಹಟ ಇರುವವರೆಗೆ ನನಗೆ ಬೌಂಡರಿ ಹಾಕುವುದು ಸಾಧ್ಯವಿಲ್ಲ. ಯಾರೇ ಬೌಂಡರಿ ಹಾಕಿದರೂ ಅದನ್ನು ಮೀರಿ ಬರುತ್ತೀನಿ. ನಾನು ಯಾವತ್ತೂ ಹೋರಾಟವನ್ನು ನಿಲ್ಲಿಸುವುದಿಲ್ಲ. ಹಾಗೆಯೇ ಸಿನಿಮಾ ಕೂಡ ನನ್ನ ಕೈ ಬಿಡಲ್ಲ ಎಂಬ ನಂಬಿಕೆಯೂ ನನಗಿದೆ. ಯಾಕೆಂದರೆ ನಾನು ತುಂಬ ಕಷ್ಟಪಟ್ಟು ಆಸೆಪಟ್ಟು ಆಯ್ದುಕೊಂಡಿರುವ ದಾರಿ ಇದು.

* ನಿಮ್ಮ ಬದುಕಿಗೆ ಅಂಟಿಕೊಂಡಿರುವ ವಿವಾದಗಳನ್ನು ಈಗ ಒಂದಿಷ್ಟು ಅಂತರದಲ್ಲಿ ನಿಂತು ನೋಡಿದಾಗ ಏನನಿಸುತ್ತದೆ? 
ಆ ಸಮಯದಲ್ಲಿ ನನಗೆ ತುಂಬ ಬೇಸರವಾಗಿತ್ತು. ಯಾಕೆ ನನಗೇ ಇಷ್ಟು ವಿವಾದಗಳು ಬೆನ್ನತ್ತಿವೆ ಎಂದು ನೋವಾಗುತ್ತಿತ್ತು. ಆದರೆ ನಾನು ಪ್ರಬುದ್ಧಳಾಗಿದ್ದು ಅಂಥ ನೋವುಗಳಿಂದಲೇ ಎಂದು ಅನಿಸುತ್ತದೆ. ಒಂದಿಷ್ಟು ವರ್ಷಗಳ ನಂತರ ನೋಡಿದಾಗ ಯಾವುದು ಯಾವ ಸಮಯದಲ್ಲಿ ಆಗಬೇಕಾಗಿತ್ತೋ ಅದು ಆಗಿದೆ ಅಂದುಕೊಳ್ಳುತ್ತೇನೆ.

ನಾನು ಚಿತ್ರರಂಗಕ್ಕೆ ಬಂದಾಗ ತುಂಬ ಮುಗ್ಧೆ, ಪ್ರಪಂಚವೇ ಗೊತ್ತಿರಲಿಲ್ಲ. ಆದರೆ ನಾನು ಮಾಡಿದ ಸಣ್ಣ ಪುಟ್ಟ ತಪ್ಪುಗಳು, ನನಗೆ ಜೀವನದ ದೊಡ್ಡ ದೊಡ್ಡ ಪಾಠಗಳನ್ನು ಹೇಳಿಕೊಟ್ಟಿವೆ. ಮುಂದೆ ಆಗಬಹುದಾದ ದೊಡ್ಡ ತಪ್ಪುಗಳನ್ನು ತಪ್ಪಿಸಿ, ಸಣ್ಣ ವಯಸ್ಸಿನಲ್ಲಿಯೇ ಸಣ್ಣಪುಟ್ಟ ತಪ್ಪುಗಳನ್ನು ಮಾಡಿಸಿ ಅದರಿಂದ ಪಾಠ ಕಲಿಸಿ ಇನ್ನಾದರೂ ಸರಿಯಾಗಿ ನಡೆದುಕೊಂಡು ಹೋಗು ಎಂದು ಬದುಕು ಹೇಳಿದೆ. ಬೇರೆಯವರು ಹೇಳಿಕೊಟ್ಟಿರುವ ಸಂಗತಿಗಳು ನಮ್ಮ ಜೀವನದ ಪಾಠ ಆಗಿರುವುದಿಲ್ಲ. ಅನುಭವ ಆಗುವುದಿಲ್ಲ. ಆದರೆ ನಾನೇ ಎಡವಿ ಬಿದ್ದಿರುವ ಹಳ್ಳಗಳಿಂದ ನಾನೇ ಎದ್ದು ಬಂದಿದ್ದೇನೆ. ಅಂದರೆ ಆ ಅನುಭವ ನನಗೆ ಜೀವನದಲ್ಲಿ ಅಷ್ಟೇ ಶಕ್ತಿಯನ್ನು ಕೊಟ್ಟಿದೆ. ಎಂಥ ಹಳ್ಳದಿಂದಲೂ ಎದ್ದು ಬರಬಲ್ಲೆ ಎಂಬ ವಿಶ್ವಾಸವನ್ನು ಕೊಟ್ಟಿದೆ. 

ಆದರೆ ಆ ಕ್ಷಣದಲ್ಲಿ ಇಷ್ಟು ವಿಶ್ವಾಸ ಇರಲಿಲ್ಲ. ತುಂಬ ಡಿಪ್ರೆಸ್ ಆಗಿದ್ದೆ. ನರಳಿದ್ದೇನೆ. ಆದರೆ ಅದರ ಮೂಲಕವೇ ಮಾಗಿ ಇನ್ನಷ್ಟು ಗಟ್ಟಿಯಾಗಿ ಎದ್ದು ಬಂದಿದ್ದೇನೆ. 

* ಪಾತ್ರಕ್ಕಾಗಿ ಪಲ್ಲಂಗ (ಕಾಸ್ಟಿಂಗ್ ಕೌಚ್)ದಂಥ ಅನಿಷ್ಠ ಪದ್ಧತಿಯ ಬಗ್ಗೆ ಏನು ಹೇಳುತ್ತೀರಿ? 
ಇದು ಕೇವಲ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಪ್ರಪಂಚದ ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಚಿತ್ರರಂಗದ ಸಂಗತಿ ಹೈಲೈಟ್ ಆಗುತ್ತಿದೆ ಅಷ್ಟೆ. ಇಲ್ಲಿಯೂ ತುಂಬ ಒಳ್ಳೆಯವರಿದ್ದಾರೆ. 

ಇಲ್ಲಿ ತುಂಬ ಹಣದ ರಿಸ್ಕ್‌ ಇರುತ್ತದೆ. ಎಲ್ಲರೂ ಬರೀ ಕಾಸ್ಟಿಂಗ್ ಕೌಚ್ ಮಾಡುವುದಕ್ಕೋಸ್ಕರವೇ ಇಲ್ಲಿಗೆ ಬರುವುದಿಲ್ಲ. ಈ ಕೆಲಸದಲ್ಲಿ ತುಂಬ ಗಂಭೀರವಾಗಿ, ವೃತ್ತಿಪರವಾಗಿ ಕೆಲಸ ಮಾಡುವ ಹಲವು ತಂಡವಿರುತ್ತದೆ. ನಾವು ಅಂಥ ತಂಡಗಳನ್ನು ಆಯ್ದುಕೊಂಡು ಕೆಲಸ ಮಾಡಬೇಕು. ನಮ್ಮ ಮನಸ್ಸನ್ನು ದುರ್ಬಲ ಮಾಡಿಕೊಂಡು ಇಲ್ಲಿ ಬದುಕಬೇಕು ಎಂದರೆ ಇದೊಂದೇ ದಾರಿ ಅಂದುಕೊಂಡುಬಿಟ್ಟರೆ ಬೇರೆ ದಾರಿಗಳು ನಮ್ಮ ಪಾಲಿಗೆ ತೆರೆಯುವುದೇ ಇಲ್ಲ. ಬದಲಿಗೆ ಮನಸ್ಸು ಗಟ್ಟಿ ಮಾಡಿಕೊಂಡು ‘ಇಲ್ಲ’. ನಾನು ಅಡ್ಡದಾರಿಯ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುವುದಿಲ್ಲ’ ಎಂದು ನಿರ್ಧರಿಸಿದರೆ ಅಂಥ ಸನ್ನಿವೇಶಗಳು ಬರುವುದಿಲ್ಲ. ಆ ಆಯ್ಕೆ ನಮ್ಮ ಕೈಯಲ್ಲಿಯೇ ಇರುತ್ತದೆ. ಅದಕ್ಕಾಗಿ ಬೇರೆಯವರನ್ನು ದೂಷಿಸಿ ಪ್ರಯೋಜನ ಇಲ್ಲ.

ಎಲ್ಲಿಯೇ ಹೋದರೂ ನನ್ನ ನೋಡಿದಾಗ ಜನರ ಮುಖದಲ್ಲಿ ಒಂದು ನಗು ಅರಳುತ್ತದೆ. ಹಾಗೆ ನಗುವನ್ನು ಅರಳಿಸುವ ಶಕ್ತಿಯನ್ನು ನನಗೆ ಕೊಟ್ಟಿರುವುದು ಚಿತ್ರರಂಗ. ನಟನೆ ನನ್ನ ಬದುಕು. ನನ್ನ ಅನ್ನ ಅದು. ಇಷ್ಟೆಲ್ಲ ಕೊಟ್ಟಿರುವ ಈ ಚಿತ್ರರಂಗಕ್ಕೆ ನಾನೂ ಏನಾದರೂ ಕೊಡಬೇಕು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !