ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್‌! ಶ್ವೇತಾ ಚಿತ್ರಕತೆ...

cinema
Last Updated 16 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

‘ಸಾಕಷ್ಟು ನಿರ್ದೇಶಕರು ಬಂದು ಕತೆಗಳನ್ನು ಹೇಳಿ ಹೋಗಿದ್ದಾರೆ. ಅದರಲ್ಲಿ ಎರಡು ಕತೆಗಳು ನನಗೆ ತುಂಬ ಇಷ್ಟ ಆಗಿವೆ. ಆದರೆ, ಇನ್ನೂ ಯಾವುದೂ ಅಂತಿಮಗೊಂಡಿಲ್ಲ. ಕೇವಲ ಮಾತುಕತೆ ಹಂತದಲ್ಲಿವೆ. ಆದರೆ, ನಾನು ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳುವುದು ಮಾತ್ರ ಪಕ್ಕಾ. ಹತ್ತಿರತ್ತಿರ ಎರಡು ವರ್ಷ ಬಿಡುವು ತೆಗೆದುಕೊಂಡಿದ್ದೇನೆ. ಅದಕ್ಕೆಂದೇ ಚಿತ್ರಕತೆ ಬರೆಯುವುದಕ್ಕೆ ಶುರು ಮಾಡಿದ್ದೇನೆ.

ಒಬ್ಬ ನಟಿ ತಾಯಿಯಾದ ತಕ್ಷಣ ಅಲ್ಲಿಗೆ ಆಕೆಯ ಚಿತ್ರ ಭವಿಷ್ಯ ನಿಂತುಹೋಯಿತು ಎಂಬ ಪೂರ್ವಗ್ರಹ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇದೆ. ಇಲ್ಲಿ ಸಕ್ರಿಯವಾಗಿರುವ ನಟಿಯರು ಮದುವೆಯಾದ ನಂತರ ಮತ್ತೆ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ತುಂಬ ಕಷ್ಟಪಡಬೇಕು. ಅದೇ ಸತ್ಯ. ಆದರೆ, ಬಿ-ಟೌನ್‌ನಲ್ಲಿ ಈ ಮನಃಸ್ಥಿತಿ ಇಲ್ಲ. ಕರೀನಾ, ಐಶ್ವರ್ಯರಂಥ ಹಲವು ಉದಾಹರಣೆಗಳಿವೆ..

ನಾನು ತಾಯಿಯಾದ ಮೇಲೆ ನನಗೆ ಗ್ಲ್ಯಾಮರಸ್ ಪಾತ್ರಗಳನ್ನು ಮಾಡುವುದಕ್ಕೆ ಆಗುವುದಿಲ್ಲ ಅಂತ ಯಾವತ್ತೂ ಅನಿಸಿಲ್ಲ. ನನ್ನ ಮನಸ್ಸಿನಲ್ಲಿ ಕಲ್ಪನೆಯ ಪಾತ್ರಗಳು ಸಾಕಷ್ಟಿವೆ. ಎಲ್ಲ ಬಗೆಯ ಪಾತ್ರ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ತುಡಿತ ಹಿಂದೆಯೂ ಇತ್ತು, ಮುಂದೆಯೂ ಇರಲಿದೆ. ನಾನು ಈಗ ಸ್ವತಂತ್ರಳಾಗಿದ್ದೇನೆ. ನನ್ನ ಕೌಟುಂಬಿಕ ಆಸೆಗಳು ಪೂರ್ತಿಯಾಗಿವೆ. ಹಾಗಾಗಿ, ನನ್ನ ಮುಂದಿನ ಜೀವನವನ್ನೆಲ್ಲಾ ಸಿನಿಮಾಕ್ಕಾಗಿಯೇ ಮುಡಿಪಾಗಿಡುವ ಯೋಜನೆ ಇದೆ.

ಸಿನಿಮಾ ಕತೆ ಬರೆಯುವುದರ ಜತೆಗೆ ಚಿತ್ರದ ನಿರ್ದೇಶನ, ನಿರ್ಮಾಣ ಎಲ್ಲವನ್ನೂ ನಾನೇ ಮಾಡಬೇಕು ಎಂಬ ಕನಸಿದೆ. ಆದರೆ, ಯಾವುದಕ್ಕೂ ಆತುರ ಮಾಡುವುದಿಲ್ಲ. ಸಮಯ ಸಾಕಷ್ಟಿದೆ. ಎಲ್ಲವನ್ನೂ ಆರಾಮವಾಗಿ ಮಾಡುತ್ತೇನೆ. ಒಳ್ಳೆ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ. ಪ್ರೇಕ್ಷಕರ ಭಾವತಂತುವನ್ನು ಮೀಟುವಂತಹ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೇನೆ.

ಸದ್ಯ ಚಂದನವನದಲ್ಲಿ ಚಾಲ್ತಿಯಲ್ಲಿರುವುದು ಪಕ್ಕಾ ಟಿಪಿಕಲ್, ಕಮರ್ಷಿಯಲ್ ಮಂತ್ರ. ಇಂತಹ ಸಂದರ್ಭದಲ್ಲಿ ಅವಕಾಶಗಳು ಸಿಗುವುದು ತುಂಬ ಕಡಿಮೆ. ನಾನು ಸಿನಿಮಾಗಳಲ್ಲಿ ನಟಿಸಬೇಕು ಎಂದು ನಿರ್ಧರಿಸಿದಾಗಲೇ ನನ್ನ ಮದುವೆ ಆಗಿಹೋಗಿತ್ತು. ಆ ವಿಚಾರ ಇಂಡಸ್ಟ್ರಿಯವರಿಗೆ ತಿಳಿದ ಮೇಲೆ ನನಗೆ ಅವಕಾಶಗಳ ಕೊರತೆ ಎದುರಾಯಿತು. ಪೋಷಕ ಪಾತ್ರಗಳಿಗೆ ಆಫರ್ ಇಡುತ್ತಿದ್ದರು. ಅಂತಹ ಸಂದರ್ಭದಲ್ಲೇ ನಾನು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ವಿಶ್ವಾಸ ಕಳೆದುಕೊಳ್ಳಲಿಲ್ಲ. ಮನಸ್ಸನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡೆ. ಕ್ರಮೇಣ ಬೆಳೆದೆ.

ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳು ಹಿಟ್ ಆಗುವುದೇ ಕಷ್ಟ. ಅಂತಹದ್ದರಲ್ಲಿ ನಾನು ಮಾಡಿದ ಎರಡು ಸಿನಿಮಾಗಳು ಸೂಪರ್‌ಹಿಟ್ ಆಗಿವೆ. ಉಳಿದ ಚಿತ್ರಗಳಿಗೂ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಹಾಗಾಗಿ, ನಾನು ಸದಾಕಾಲ ಪಾಸಿಟಿವ್ ಆಗಿರುತ್ತೇನೆ. ಪ್ರತಿಯೊಬ್ಬರ ಜೀವನ ಪಯಣವೂ ಬೇರೆ ಬೇರೆಯಾಗಿರುತ್ತದೆ. ನನ್ನೊಳಗಿನ ಅಂತಃಶಕ್ತಿ ತುಂಬ ಬಲಿಷ್ಠವಾಗಿದೆ. ನಾನು ಎಲ್ಲೀವರೆಗೆ ಹೊಸತನದಿಂದ ಯೋಚಿಸಲು ಸಾಧ್ಯವೋ ಅಲ್ಲೀವರೆಗೂ ಎತ್ತರಕ್ಕೆ ಹಾರುತ್ತಲೇ ಇರುತ್ತೇನೆ. ಬುದ್ಧವಂತಿಕೆ, ಶಿಕ್ಷಣವೇ ನಮ್ಮ ಶಕ್ತಿಯಾಗಿದ್ದಾಗ ಅದನ್ನು ನಾವು ಹೇಗೆ ಉಪಯೋಗಿಸಿಕೊಂಡು ಮೇಲೆ ಬರುತ್ತೇವೆ ಎಂಬುದು ಮುಖ್ಯವಾಗುತ್ತದೆ.

ತಾಯಿ ಎಂಬ ಕಾರಣಕ್ಕೆ ನನಗೆ ಆಫರ್‌ಗಳು ಸಿಗದಿದ್ದರೆ ಬೇಜಾರು ಮಾಡಿಕೊಳ್ಳುವುದಿಲ್ಲ. ಏಕೆಂದರೆ, ನನ್ನ ಪ್ರತಿಭೆಗೆ ತಕ್ಕಂತೆ ನಾನೇ ಒಂದು ವೇದಿಕೆ ಕಲ್ಪಿಸಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ನನಗಿದೆ. ಮತ್ತೆ ಚಿತ್ರರಂಗಕ್ಕೆ ಬರುವುದೇ ಒಂದು ಸವಾಲು. ಆ ಸವಾಲಿಗೆ ಎದೆಯೊಡ್ಡಲು ನಾನು ಸದಾ ಸಿದ್ಧಳಿದ್ದೇನೆ. ಇಂತಹದ್ದೇ ಪಾತ್ರ ಬೇಕು ಅಂದುಕೊಳ್ಳದೇ, ಎಲ್ಲ ಬಗೆಯ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನ ಆಸೆ. ನಟಿಸುವುದಕ್ಕೆ ನಾನು ಎಂದಿಗೂ ಬೌಂಡರಿ ಹಾಕಿಹಾಕಿಕೊಳ್ಳುವುದಿಲ್ಲ, ಏಕೆಂದರೆ, ನನ್ನ ಬದುಕಿಗೆ ಪ್ರೇರಣೆ ತುಂಬುವಂತಹ ಸ್ಫೂರ್ತಿದಾಯಕ ಕತೆಗಳು ನನ್ನ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತಲೇ ಇರುತ್ತವೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT