ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಬ ಜೊತೆ ಶಿವರಾಜ್ ಸಾಂಗತ್ಯ

Last Updated 23 ಜನವರಿ 2020, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡವರು ಶಿವರಾಜ್ ಕೆ.ಆರ್.ಪೇಟೆ. ‘ಜನರನ್ನು ನಗಿಸುವುದೇ ನನ್ನ ಕಾಯಕ ಎನ್ನುವ ಅವರು ಅಭಿನಯಿಸಿರುವ ‘ಗುಂಡ ಮತ್ತು ನಾನು’ ಚಿತ್ರ ಇದೇ ಶುಕ್ರವಾರ (ಜ. 24) ತೆರೆಗೆ ಬರುತ್ತಿದೆ.

‘ಈ ಚಿತ್ರದಲ್ಲಿ ನೀವು ನನ್ನ ಪಾತ್ರದಿಂದ ಹಾಸ್ಯವನ್ನು ಮಾತ್ರವಲ್ಲದೆ, ಬೇರೆ ಒಂದಿಷ್ಟು ಭಾವಗಳನ್ನೂ ನಿರೀಕ್ಷೆ ಮಾಡಬಹುದು’ ಎನ್ನುತ್ತಾರೆ ಶಿವರಾಜ್.

ಈ ಚಿತ್ರದಲ್ಲಿ ಅವರದ್ದು ಆಟೊ ಚಾಲಕನ ಪಾತ್ರ. ಆ ಪಾತ್ರದ ಹೆಸರು ಶಂಕರ. ಆತ ಒಂಚೂರು ಕುಡಿಯುವ ಅಭ್ಯಾಸ ಕೂಡ ಇಟ್ಟುಕೊಂಡವ! ಶಂಕರನ ಪತ್ನಿಯ ಪಾತ್ರವನ್ನು ಸಂಯುಕ್ತಾ ಹೊರನಾಡು ನಿಭಾಯಿಸಿದ್ದಾರೆ. ಶಂಕರನಿಗೆ ತನ್ನ ಆಟೊ ಮೇಲೆ ಬಹಳ ಪ್ರೀತಿ. ಆಟೊ ಜೊತೆ ಆತ ಆಗಾಗ ಮಾತನಾಡುತ್ತಾನೆ. ಅವನು ಹೆಚ್ಚಿನ ಸಮಯ ಕಳೆಯುವುದು ತನ್ನ ಆಟೊ ಜೊತೆಯಲ್ಲೇ. ಸ್ನೇಹಿತರ ಜೊತೆ ಆಗಾಗ ಕುಡಿದು, ಖುಷಿಪಡುವುದೂ ಇದ್ದೇ ಇರುತ್ತದೆ. ಇವೆಲ್ಲದರ ಜೊತೆ ವಿಶಿಷ್ಟವಾಗಿ ಕಾಣಿಸುವುದು ನಾಯಿಯ ಸ್ವಾಮಿನಿಷ್ಠೆ.

‘ನಾನು ಇದುವರೆಗೆ ಮಾಡಿದ ಪಾತ್ರಗಳು ಒಂದೇ ರೀತಿಯಲ್ಲಿ ಇರುತ್ತಿದ್ದವು. ಆದರೆ ಈ ಚಿತ್ರದಲ್ಲಿ ನಾನು ಭಿನ್ನ ರೀತಿಯಲ್ಲಿ ಅಭಿನಯಿಸಲು ಅವಕಾಶ ಇತ್ತು. ಹಾಗಾಗಿಯೇ ಈ ಪಾತ್ರ ಒಪ್ಪಿಕೊಂಡೆ’ ಎಂದು ಅವರು ಹೇಳುತ್ತಾರೆ.

ಈ ಚಿತ್ರದ ಪೋಸ್ಟರ್‌ನಲ್ಲಿ ಕಾಣಿಸುವ ನಾಯಿಯ ಹೆಸರು ಸಿಂಬ. ಅದರದ್ದು ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರ. ‘ಆತ ಒಳ್ಳೆಯ ತರಬೇತಿ ಪಡೆದ ನಾಯಿ. ತರಬೇತಿ ಪಡೆದಿರುವ ಕಾರಣ ಆತ ನಿಲ್ಲು ಅಂದರೆ ನಿಲ್ಲುತ್ತಿದ್ದ, ಕೂತುಕೋ ಅಂದರೆ ಕುಳಿತುಕೊಳ್ಳುತ್ತಿದ್ದ’ ಎಂದು ನಾಯಿಯ ಜೊತೆಗಿನ ಚಿತ್ರೀಕರಣಕ್ಕೆ ಸಂಬಂಧಿಸಿದ ಅನುಭವ ಹೇಳುತ್ತಾರೆ ಅವರು.

ಸಿಂಬ ಜೊತೆ ನಾಯಕನಿಗೆ ಸಲುಗೆ ಬೆಳೆಯಲಿ ಎಂಬ ಉದ್ದೇಶದಿಂದ, ಚಿತ್ರೀಕರಣದ ಸ್ಥಳದಲ್ಲಿ ಶಿವರಾಜ್ ಇದ್ದಲ್ಲೆಲ್ಲ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಆಗೆಲ್ಲ ಅವರು ಸಿಂಬನಿಗೆ ಒಂದಿಷ್ಟು ಬಿಸ್ಕತ್ ತಿನ್ನಿಸಿ, ಅವನ ಜೊತೆ ಸಲುಗೆ ಬೆಳೆಸಿಕೊಂಡಿದ್ದರಂತೆ.

‘ಚಿತ್ರೀಕರಣದ ಅವಧಿಯಲ್ಲಿ ನಮಗೆ ಸಿಂಬನಿಂದ ಯಾವ ತೊಂದರೆಯೂ ಆಗಲಿಲ್ಲ. ಆದರೆ, ಹೇಗಪ್ಪಾ ನಾಯಿಯ ಜೊತೆ ನಟಿಸುವುದು ಎಂದು ಮೊದಲ ಒಂದು ವಾರದ ಅವಧಿಯಲ್ಲಿ ಅನಿಸಿತ್ತು. ಆಮೇಲೆ, ಸಿಂಬ ಜೊತೆ ನಟಿಸುವುದಕ್ಕೆ ಹೊಂದಿಕೊಂಡೆ. ಕೊನೆಕೊನೆಗೆ, ಚಿತ್ರೀಕರಣದ ಸ್ಥಳದಲ್ಲಿ ಸಿಂಬ ಇಲ್ಲ ಅಂದರೆ ಬೇಜಾರಾಗುತ್ತಿತ್ತು. ನಾಯಿಯ ಜೊತೆಗಿನ ಚಿತ್ರೀಕರಣ ನಮಗೆ ಯಾವ ತೊಂದರೆಯನ್ನೂ ನೀಡಲಿಲ್ಲ. ಸಿಂಬ ನಮ್ಮ ಇಡೀ ಚಿತ್ರತಂಡದ ಪ್ರೀತಿಯ ಸದಸ್ಯ ಆಗಿದ್ದ’ ಎಂದು ನೆನಪಿಸಿಕೊಂಡರು ಅವರು.

ಶಿವರಾಜ್ ಹೇಗೆ ಕಾಣಿಸಲಿದ್ದಾರೆ?

‘ಈ ಚಿತ್ರದಲ್ಲಿ ನನಗೆ ದೊರೆತಿರುವುದು ವಿಶೇಷ, ವಿಭಿನ್ನ ಪಾತ್ರ. ನಾನು ಹಾಸ್ಯನಟ. ಈ ಚಿತ್ರದ ಪಾತ್ರದಲ್ಲಿಯೂ ಹಾಸ್ಯವಿ‌ದೆ. ಅದರ ಜೊತೆಯಲ್ಲೇ ನಟನಾಗಿ ನಾನು ಇದರಲ್ಲಿ ಬೇರೆ ಬೇರೆ ಬಗೆಯ ಭಾವಗಳನ್ನೂ ಅಭಿವ್ಯಕ್ತಿಸಿದ್ದೇನೆ. ನನ್ನನ್ನು ಭಿನ್ನ ರೀತಿಯಲ್ಲಿ ತೋರಿಸಲಾಗುತ್ತದೆ ಎಂದು ಸಿನಿಮಾ ತಂಡ ಮೊದಲೇ ಹೇಳಿತ್ತು’ ಎಂದು ಅವರು ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ‘ಆಟೊ ಚಾಲಕರಿಗೆ ಬಹಳ ಇಷ್ಟವಾಗುತ್ತದೆ ಈ ಸಿನಿಮಾ’ ಎಂಬ ಮಾತನ್ನು ಕೊನೆಯಲ್ಲಿ ಹೇಳಲು ಮರೆಯಲಿಲ್ಲ.

ಕಥೆಯ ಗುಟ್ಟು ಬಿಚ್ಚಿಟ್ಟ ನಿರ್ಮಾಪಕ

‘ಆಟೊ ಚಾಲಕನೊಬ್ಬನಿಗೆ ತನ್ನ ನಾಯಿಯ ಜೊತೆ ಬಹಳ ಆತ್ಮೀಯವಾದ ನಂಟು ಇತ್ತು. ಇದು ನನಗೆ ಸ್ಫೂರ್ತಿ ನೀಡಿತು. ಆತ ಆ ನಾಯಿಯನ್ನು ಎಲ್ಲ ಕಡೆಯೂ ಕರೆದುಕೊಂಡು ಹೋಗುತ್ತಿದ್ದ. ಆತನ ಬಗ್ಗೆ ಹಾಗೂ ಆ ನಾಯಿಯ ಬಗ್ಗೆ ಒಂದು ಕಿರುಚಿತ್ರ ಮಾಡೋಣ ಎಂದು ನಾವು ತೀರ್ಮಾನಿಸಿದ್ದೆವು. ಆದರೆ, ಆಗ ನಮ್ಮನ್ನು ಕಾಡಲಾರಂಭಿಸಿದ ಭಾವನೆಗಳು, ನಾವು ಒಂದು ಪೂರ್ಣ ಪ್ರಮಾಣದ ಸಿನಿಮಾ ಸಿದ್ಧಪಡಿಸುವಂತೆ ಮಾಡಿದವು’ ಎಂದು ಚಿತ್ರದ ಹಿಂದಿನ ಕಥೆಯನ್ನು ಬಿಚ್ಚಿಡುತ್ತಾರೆ ನಿರ್ಮಾಪಕ ರಘು ಹಾಸನ್.

ಚಿತ್ರದಲ್ಲಿ ಐದು ಹಾಡುಗಳು ಇವೆ. ‘ಹಾಡುಗಳಿಗೆ ಪ್ರಯೋಗಾತ್ಮಕ ರೀತಿಯಲ್ಲಿ ಸಂಗೀತ ನೀಡಿಲ್ಲ; ಮಾಧುರ್ಯವಿರುವ ಸಂಗೀತ ನೀಡಲಾಗಿದೆ’ ಎಂದು ಹೇಳಿದರು ಸಂಗೀತ ನಿರ್ದೇಶಕ ಕಾರ್ತಿಕ್. ಸಿಂಬ ಎನ್ನುವ ಹೆಸರಿನ ನಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ಆದರೆ ಎಲ್ಲಿಯೂ ಕಂಪ್ಯೂಟರ್‌ ಗ್ರಾಫಿಕ್ಸ್‌ ಬಳಕೆ ಆಗಿಲ್ಲ, ಎಲ್ಲವನ್ನೂ ಸಹಜವಾಗಿ ಚಿತ್ರೀಕರಿಸಲಾಗಿದೆ ಎನ್ನುವುದು ಸಿನಿತಂಡ ಹೇಳಿರುವ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT