ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಕಂಗಳ ಬೆಡಗಿ ಸಿಂಧೂ ಮಾರ್ಗ

Last Updated 22 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹಾಲು ಬಿಳುಪಿನ ಬೆಡಗಿಯ ಕಪ್ಪು ಕಂಗಳಲ್ಲಿ ಮುಗ್ಧತೆ ಮಡುಗಟ್ಟಿದೆ. ಬೀಸುವ ತಂಗಾಳಿಯ ಜತೆಗೆ ಸೊಗಸಿನಿಂದ ಲಾಸ್ಯವಾಡುವ ಕಂದು–ಕಪ್ಪು ಮಿಶ್ರಿತ ತಲೆಗೂದಲು ಅವರ ರೂಪಕ್ಕೆ ಮತ್ತಷ್ಟು ಆಕರ್ಷಣೆ ತುಂಬಿದೆ. ಮಾಡೆಲಿಂಗ್‌ನಲ್ಲಿ ಮಿಂಚಲು ಬೇಕಿರುವ ಸೌಂದರ್ಯದ ಜತೆಗೆ ಉತ್ತಮ ದೇಹಾಕಾರ ಹೊಂದಿರುವ ಸಿಂಧೂ ರಾಜ್‌ ವಸ್ತ್ರವಿನ್ಯಾಸಕರ ಕಣ್ಮಣಿ. ‘32, 26, 34’ ಎಂದು ತನ್ನ ಅಂಗಸೌಷ್ಠವವನ್ನು ವಿವರಿಸುವ ಇವರು, ಐದು ಅಡಿ ಐದು ಅಂಗುಲ ಎತ್ತರದ ರೂಪಸಿ.

ಪದವಿ ವ್ಯಾಸಂಗದ ಸಂದರ್ಭದಲ್ಲೇ ಫ್ಯಾಷನ್‌ ಜಗತ್ತಿನ ಜತೆಗೆ ಸಖ್ಯ ಬೆಳೆಸಿಕೊಂಡ ರೂಪದರ್ಶಿ ಸಿಂಧೂ ರಾಜ್‌, ಈಗ ಕರ್ನಾಟಕದ ಸೂಪರ್‌ ಮಾಡೆಲ್‌ಗಳಲ್ಲಿ ಒಬ್ಬರು. 2016ರಲ್ಲಿ ಫ್ಯಾಷನ್‌ ಜಗತ್ತಿಗೆ ಪದಾರ್ಪಣೆ ಮಾಡಿದ ಸಿಂಧೂ ಅವರು ಅನೇಕ ಟೈಟಲ್‌ಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರ‍್ಯಾಂಪ್‌ ಅನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಸಿನಿ ಕ್ಷೇತ್ರಕ್ಕೆ ಜಿಗಿಯುವ ಉತ್ಸಾಹದಲ್ಲಿದ್ದಾರೆ.

‘2016 ನನ್ನ ಜೀವನಕ್ಕೆ ತಿರುವು ನೀಡಿದ ವರ್ಷ. ಓದಿನಲ್ಲಿ ತೊಡಗಿಸಿಕೊಂಡಿದ್ದ ನಾನು ಝಗಮಗಿಸುವ ಬಣ್ಣದ ಬೆಳಕಿನ ಲೋಕಕ್ಕೆ ಬಂದು ನಿಂತೆ. ಅದಕ್ಕೆ ಕಾರಣವಾಗಿದ್ದು ಕಾಲೇಜಿನಲ್ಲಿ ನಡೆದ ಒಂದು ಫ್ಯಾಷನ್‌ ಶೋ. 2016ರಲ್ಲಿ ನಡೆದ ಮಿಸ್‌. ಬೆಂಗಳೂರು ಸ್ಪರ್ಧೆಯಲ್ಲಿ ವಿಜೇತಳಾದೆ. ಆದಾದ ಮೇಲೆ ಮಿಸ್‌.ಇಂಡಿಯಾ ಸೌತ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿ, ಅಲ್ಲಿ ಬೆಸ್ಟ್‌ ಆ್ಯಟಿಟ್ಯೂಡ್‌ ಟೈಟಲ್‌ ಗೆದ್ದುಕೊಂಡೆ. ಮಿಸ್‌.ಫ್ಯಾಷನೇಟ್‌ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ನಗು ತುಳುಕಿಸಿದೆ. 2017ರಲ್ಲಿ ಮೈಸೂರಿನಲ್ಲಿ ನಡೆದ ‘ಮಿಸ್‌. ಮಾಡೆಲ್‌ ಆಫ್‌ ದಿ ಇಯರ್‌’ ಸ್ಪರ್ಧೆಯಲ್ಲಿ ಮಿಸ್‌. ಮಾಡೆಲ್‌ ಆಫ್‌ ದಿ ಟೀನ್‌ ಪಟ್ಟ ಲಭಿಸಿತು. ಇದಾದ ನಂತರ ನನ್ನ ಜೀವನದಲ್ಲಿ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಂಡಿತು’ ಎನ್ನುತ್ತಾರೆ ಸಿಂಧೂ ರಾಜ್.

ರ‍್ಯಾಂಪ್‌ ಮೇಲೆ ಸಿಕ್ಕ ಜನಪ್ರಿಯತೆ ರೂಪದರ್ಶಿ ಸಿಂಧೂ ರಾಜ್‌ ಅವರಿಗೆ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿತು. ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಇ–ಕಾರ್ಮಸ್‌ ಅಂಗಡಿಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡರು. ಕಾಲೇಜುಗಳಲ್ಲಿ ನಡೆಯುವ ಫ್ಯಾಷನ್‌ ಶೋಗಳಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡರು. ಜಾಹೀರಾತುಗಳ ಜತೆಗೆ ‘ವರ್ಜಿನ್‌ ಬಾಯ್ಸ್‌’ ಎಂಬ ವೆಬ್‌ ಸಿರೀಸ್‌ನಲ್ಲೂ ಇವರು ನಟಿಸಿದ್ದಾರೆ.

‘ಕಾಲೇಜಿನಲ್ಲಿ ನಡೆದ ಫ್ಯಾಷನ್‌ ಶೋ ಒಂದರಲ್ಲಿ ಭಾಗವಹಿಸಿದ್ದೇ ಮಾಡೆಲಿಂಗ್‌ಗೆ ಜಗತ್ತಿಗೆ ಕಾಲಿಡುವ ಸ್ಫೂರ್ತಿ ತುಂಬಿತು. ಅದೇ ವೇಳೆಗೆ, ‘ಮಿಸ್‌.ಬೆಂಗಳೂರು ಪೇಜೆಂಟ್‌ ನಡೆಯುತ್ತಿದೆ, ಭಾಗವಹಿಸು’ ಎಂದು ಸ್ನೇಹಿತರು ಹುರಿದುಂಬಿಸಿದರು. ‘ಟ್ರೈ ಮಾಡಿ ನೋಡುವಾ’ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅಲ್ಲಿಂದ ಶುರುವಾದ ಮಾಡೆಲಿಂಗ್‌ ಪಯಣ ನನ್ನನ್ನು ಇಲ್ಲೀವರೆಗೂ ಕರೆದು ತಂದು ನಿಲ್ಲಿಸಿದೆ. ಸಾಕಷ್ಟು ಸೆಲೆಬ್ರಿಟಿ ಡಿಸೈನರ್‌ಗಳ ವಸ್ತ್ರಗಳನ್ನು ಧರಿಸಿ ರ‍್ಯಾಂಪ್‌ ವಾಕ್‌ ಮಾಡಿದ್ದೇನೆ’ ಎನ್ನುತ್ತಾರೆ ಅವರು.

ಅಂದಹಾಗೆ, ಸಿಂಧೂ ರಾಜ್‌ ಅವರು, ‘ಬಾಡಿ ಅಂಡ್‌ ಲವ್‌’ ಎಂಬ ಇಂಗ್ಲಿಷ್‌ ಆಲ್ಬಂನಲ್ಲಿ ಕೂಡ ನಟಿಸಿದ್ದಾರೆ. ಈ ಆಲ್ಬಂನ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ವಿಡಿಯೊ ಮೇ 7ರಂದು ರಿಲೀಸ್‌ ಆಗಲಿದೆ.

‘ಬೆಂಗಳೂರಿನ ಡಿಜೆ ಒಬ್ಬರು ಈ ಆಲ್ಬಂ ಸಾಂಗ್‌ ಕಂಪೊಸಿಷನ್‌ ಮಾಡಿದ್ದಾರೆ. ಆದರೆ, ಅದನ್ನು ನಿರ್ದೇಶನ ಮಾಡಿರುವುದು ದಕ್ಷಿಣ ಆಫ್ರಿಕಾದ ಹುಡುಗರು. ಸೋಷಿಯಲ್‌ ಮೀಡಿಯಾದಿಂದ ನನಗೆ ಈ ಆಲ್ಬಂನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈಗ ಸದ್ಯಕ್ಕೆ ಒಂದು ಸಾಂಗ್‌ ಮಾಡಿದ್ದಾರೆ. ‘ಬಾಡಿ ಅಂಡ್‌ ಲವ್‌’ ಆಲ್ಬಂನ ಪಾರ್ಟ್‌ 2, 3 ಕೂಡ ಬರಲಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಆಗಿರುವ ಈ ಆಲ್ಬಂ ಗೀತೆ 5 ನಿಮಿಷದ್ದು’ ಎಂದು ಮಾಹಿತಿ ನೀಡುತ್ತಾರೆ ಅವರು.

‘ಮಾಡೆಲಿಂಗ್‌ಗೆ ಬಂದ ನಂತರ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಬಂದವು. ಆದರೆ, ಮನಸ್ಸಿಗೆ ಹಿಡಿಸುವಂತಹ ಪಾತ್ರಗಳು ಸಿಗದ ಕಾರಣದಿಂದಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ನಾನು ಬಬ್ಲಿ, ಕ್ಯೂಟ್‌ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದೇನೆ. ಒಂದು ಒಳ್ಳೆ ಪಾತ್ರ, ಬ್ಯಾನರ್‌ ಮೂಲಕ ಬೆಳ್ಳಿತೆರೆ ಪ್ರವೇಶಿಸಬೇಕು ಎಂಬುದು ನನ್ನ ಆಸೆ. ಶೀಘ್ರದಲ್ಲೇ ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

‘ಸಿನಿಮಾ, ಫ್ಯಾಷನ್‌ ಜಗತ್ತಿನಲ್ಲಿ ಸೌಂದರ್ಯದ ಜತೆಗೆ ದೇಹ ಕಾಳಜಿಯು ಮುಖ್ಯ. ಅದಕ್ಕಾಗಿ ನಾನು ನಿತ್ಯವೂ ಜಿಮ್‌ಗೆ ಹೋಗಿ ದೇಹ ದಂಡಿಸುತ್ತೇನೆ. ವಾಕಿಂಗ್‌ ಮಾಡುತ್ತೇನೆ. ಡಾನ್ಸ್‌ ಅಂದರೆ ತುಂಬ ಇಷ್ಟ. ವಾರಕ್ಕೊಮ್ಮೆ ಈಜುಕೊಳದಲ್ಲಿ ಮನದಣಿಯುವಷ್ಟು ಈಜುತ್ತಾ ರಿಲ್ಯಾಕ್ಸ್‌ ಆಗುತ್ತೇನೆ. ಪ್ರವಾಸ ಕೈಗೊಳ್ಳುವುದು ಅಚ್ಚುಮೆಚ್ಚು. ಊಟದಲ್ಲಿ ಕಟ್ಟುನಿಟ್ಟು ಇಲ್ಲ. ಆದರೆ, ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸುತ್ತೇನೆ’ ಎಂದು ತಮ್ಮ ಫಿಟ್‌ನೆಸ್‌ ಬಗ್ಗೆ ಹೇಳುತ್ತಾರೆ ಸಿಂಧೂ ರಾಜ್‌.

‘ಕಠಿಣ ಪರಿಶ್ರಮ, ಶ್ರದ್ಧೆ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಬೆಳೆಯಬಹುದು’ ಎನ್ನುವ ಸಿಂಧೂ ರಾಜ್‌ ಅವರಿಗೆ ಫ್ಯಾಷನ್‌ ಕ್ಷೇತ್ರದಲ್ಲಿ ಈವರೆಗೆ ಮುಜುಗರ ಅನ್ನಿಸುವಂತಹ ಸಂದರ್ಭ, ಸನ್ನಿವೇಶಗಳು ಎದುರಾಗಿಲ್ಲವಂತೆ. ಈಗಷ್ಟೇ ಪದವಿ ಮುಗಿಸಿರುವ ಅವರು ಇನ್ನು ಮುಂದೆ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಹಾಗೂ ಫ್ಯಾಷನ್‌ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಗುರಿ ಇರಿಸಿಕೊಂಡಿದ್ದಾರೆ. ಜತೆಗೆ ಎಂಬಿಎ ಮುಗಿಸಬೇಕು ಎಂಬುದು ಅವರ ಮಹದಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT