ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿ ಕಥನಗಳ ನಡುವೆ ಸೋನಾಲಿ

Last Updated 25 ಡಿಸೆಂಬರ್ 2018, 17:12 IST
ಅಕ್ಷರ ಗಾತ್ರ

Now, I’m taking this #OneDayAtATime

ಐದಾರು ತಿಂಗಳುಗಳಿಂದ ನಟಿ ಸೋನಾಲಿ ಬೇಂದ್ರೆ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುತ್ತಿರುವ ಬಗೆಯನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ. ಮೇಲಿನ ಸಾಲು ಕೂಡ ಇನ್‌ಸ್ಟಾಗ್ರಾಂನ ಅವರ ಒಂದು ಪೋಸ್ಟ್‌ನಲ್ಲಿ ಕಂಡದ್ದು.

ತಮಗೆ ‘ಮೆಟಾಸ್ಟ್ಯಾಟಿಕ್‌ ಕ್ಯಾನ್ಸರ್‌’ ಇದೆ ಎನ್ನುವುದು ಸೋನಾಲಿಗೆ ಗೊತ್ತಾದದ್ದು ಜುಲೈನಲ್ಲಿ. ಆಮೇಲೆ ಚಿಕಿತ್ಸೆಯಿಂದ ಚೇತರಿಕೆ ಕಂಡಿದ್ದಾರೆ. ಸಿನಿಮಾ ಅಭಿನೇತ್ರಿಯಾಗಿ ಅವರ ಸುಂದರ ವದನ ಕಂಡಿದ್ದ ಅಭಿಮಾನಿಗಳು ಒಂದೂ ಕೂದಲಿಲ್ಲದ ಅವರ ತಲೆಯನ್ನು ಕಂಡು ‘ಛೆ’ ಎಂದುಕೊಂಡದ್ದುಂಟು. ಆದರೆ, ಸೋನಾಲಿ ಹೋರಾಡಿದರು.

‘ನನ್ನ ಮೆಚ್ಚಿನ ಲೇಖಕ ಇಸಾಬೆಲ್ ಅಲೆಂಡ್‌ ಒಂದು ಮಾತು ಹೇಳಿದ್ದಾರೆ–‘ನಾವು ಎಷ್ಟು ಶಕ್ತಿಶಾಲಿಗಳೆಂದು ನಮಗೇ ಗೊತ್ತಿರುವುದಿಲ್ಲ. ಒಳಗಿನ ಸಾಮರ್ಥ್ಯವನ್ನು ಹೊರಗೆ ಹಾಕುವ ಸಂದರ್ಭ ಅದನ್ನು ರುಜುವಾತು ಪಡಿಸುತ್ತದೆ. ದುರಂತ, ಯುದ್ಧ, ಅತಿ ತುರ್ತು ಸನ್ನಿವೇಶದಲ್ಲಿ ಜನರು ಏನೆಲ್ಲ ಅದ್ಭುತಗಳನ್ನು ಮಾಡುತ್ತಾರೆ. ಉಳಿವು ಹಾಗೂ ಪುನರುತ್ಥಾನಕ್ಕಾಗಿ ಮನುಷ್ಯನ ಹೋರಾಟವೇ ಗಮನಾರ್ಹ.’ ಈ ಮಾತನ್ನು ಮೊದಲು ನಾನು ಓದಿದ್ದೆ. ಆಮೇಲೆ ಅದನ್ನು ಪ್ರತ್ಯಕ್ಷ ಕಂಡೆ. ಬದುಕನ್ನು ನಾನು ನೋಡುವ ಕ್ರಮವನ್ನೇ ಕ್ಯಾನ್ಸರ್‌ ಬದಲಿಸಿಬಿಟ್ಟಿತು’ ಎಂಬ ಸೋನಾಲಿ ಬೇಂದ್ರೆ ಪೋಸ್ಟ್‌ ನೋಡಿದ ಅನೇಕ ಹೃದಯಗಳು ಮಿಡಿದಿದ್ದವು.

ಸಾಮಾಜಿಕ ಜಾಲತಾಣ ಬಹುತೇಕರಿಗೆ ಕಾಲಹರಣದ ದಾರಿಯಾಗಿರುವಾಗ, ಸೋನಾಲಿ ಪಾಲಿಗೆ ಅದು ಪ್ರೇರಣಾದಾಯಕ ಕಥೆಗಳ ಕಣಜವಾಯಿತು. ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಅನೇಕರು ತಮ್ಮ ಅನುಭವಗಳನ್ನು ಅಲ್ಲಿ ಪೋಸ್ಟ್‌ ಮಾಡಿದರು. ಓದಿದಷ್ಟೂ ಮುಗಿಯದ ಕಥನಗಳನ್ನು ಕಂಡು ಸೋನಾಲಿ ಮನಸ್ಸು ಅವರನ್ನೇ ಸಂತೈಸತೊಡಗಿತು. ಅವರೊಳಗಿನ ಜೀವನ್ಮುಖಿ ಮರುಹುಟ್ಟು ಪಡೆದದ್ದೇ ಅಂಥ ಕಥನಗಳಿಂದ.

ಸೋನಾಲೀಸ್‌ ಬುಕ್‌ ಕ್ಲಬ್‌ (ಎಸ್‌ಬಿಸಿ) ಎಂಬ ಫೇಸ್‌ಬುಕ್‌ ಗ್ರೂಪ್‌ ಕೂಡ ಈಗ ಸುದ್ದಿ ಮಾಡುತ್ತಿದೆ. ಮಗ ರಣವೀರ್‌ ಬೆಹ್ಲ್‌ನಲ್ಲಿ ಓದುವ ಅಭಿರುಚಿ ಬಿತ್ತುವ ಉದ್ದೇಶದಿಂದ ಪ್ರಾರಂಭವಾದ ಈ ಕ್ಲಬ್‌ನಲ್ಲೀಗ ಸುಮಾರು ಹನ್ನೆರಡೂವರೆ ಲಕ್ಷ ಸದಸ್ಯರಿದ್ದಾರೆ. ಮೊದಲ ‘ಎಸ್‌ಬಿಸಿ’ ಲೈವ್‌ ಆಯೋಜಿಸಿದ್ದ ಮಗನಿಗೆ ಅಷ್ಟೆಲ್ಲ ಬೆಂಬಲ ಸಿಕ್ಕಿದ್ದನ್ನು ಕಂಡು ಸೋನಾಲಿ ಮೂಕವಿಸ್ಮಿತರಾಗಿದ್ದರು. ಈಗ ಅವರ ಕೈಲಿ ಕೆನೆತ್ ಒಪೆಲ್ ಬರೆದಿರುವ ‘ಒಪೆಲ್ಸ್‌ ಹಾಫ್‌ ಬ್ರದರ್’ ಎಂಬ ಪುಸ್ತಕವಿದೆ. ಚಿಂಪಾಂಜಿ ಮರಿಯೊಂದನ್ನು ಮಾನವನ ಮಗುವಿನಂತೆ ಬೆಳೆಸುವ ಪ್ರಕ್ರಿಯೆಯ ಕಥಾನಕವನ್ನು ಆ ಕೃತಿ ಒಳಗೊಂಡಿದೆ. ಮಗ ಅದನ್ನು ಓದುವಂತೆ ಶಿಫಾರಸು ಮಾಡಿದ್ದಾನೆ.

ಹನ್ನೆರಡು ವರ್ಷದ ರಣವೀರ್‌, ಸೋನಾಲಿ ಪಾಲಿಗೆ ಆಗೀಗ ಪೋಷಕನಂತೆಯೂ ಕಂಡಿದ್ದಾನೆ. ಪುಟ್ಟ ವಯಸ್ಸಿಗೇ ಅವನ ಹೊಣೆಗಾರಿಕೆ ಕಂಡು ಅವರು ಎಷ್ಟೋ ಸಲ ಹನಿಗಣ್ಣಾಗಿದ್ದಾರೆ. ಆಗ ಅವನೇ ಬಂದು ಕಣ್ಣೊರೆಸಿ, ತಲೆ ಮೇಲೆ ಕೈಯಾಡಿಸಿದನೆಂದರೆ ನೆಮ್ಮದಿ.

ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಪತ್ನಿಗೆ ಪತಿ ಗೋಲ್ಡಿ ಬೆಹ್ಲ್‌ ಕೂಡ ಸಾಥ್‌ ನೀಡಿದ್ದಾರೆ. ಹೆಂಡತಿಯನ್ನು ಚೆಂದಗಾಣಿಸಲೆಂದೇ ಅವರು ಕೆಲವು ವಿಗ್‌ಗಳನ್ನು ತರಿಸಿ, ಅಲಂಕಾರ ಮಾಡಿಸಿ, ಮುಖದ ಮೇಲೊಂದು ನಗು ತುಳುಕಿಸುವಂತೆ ಮಾಡಿದ್ದಾರೆ. ಕರಣ್ ಜೋಹರ್, ಏಕ್ತಾ ಕಪೂರ್, ಮನೀಷ್ ಮಲ್ಹೋತ್ರ, ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ, ಬಿಪಾಶಾ ಬಸು, ಶಿಲ್ಪಾ ಶೆಟ್ಟಿ ಮೊದಲಾದವರು ಸೋನಾಲಿ ನಗುವಿದ್ದ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಎಲ್ಲರ ಹಾರೈಕೆ, ಸ್ಫೂರ್ತಿ ಕಥನಗಳನ್ನು ಗುಡ್ಡೆಹಾಕಿಕೊಂಡು ಕೂತಿರುವ ಸೋನಾಲಿಗೀಗ ಸೂರ್ಯನ ಪ್ರತಿದಿನದ ಕಿರಣವೂ ಹೊಸತಾಗಿ ಕಾಣುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT