ಖಡಕ್‌ ನಿರೂಪಣೆಯ ‘ಸೊಂಚಿರಿಯಾ’ ಟ್ರೇಲರ್‌

7

ಖಡಕ್‌ ನಿರೂಪಣೆಯ ‘ಸೊಂಚಿರಿಯಾ’ ಟ್ರೇಲರ್‌

Published:
Updated:
Prajavani

ನಿರೀಕ್ಷೆಯಂತೆ ‘ಸೊಂಚಿರಿಯಾ’ದ ಟ್ರೇಲರ್‌ ಜನವರಿ ಏಳರಂದು ಬಿಡುಗಡೆಯಾಗಿದೆ. ಚಂಬಲ್‌ ಕಣಿವೆಯ ಡಕಾಯಿತರ ಕಥಾವಸ್ತು ಚಿತ್ರದಲ್ಲಿದೆ ಎಂಬುದನ್ನು ಟ್ರೇಲರ್‌ ಮತ್ತಷ್ಟು ಖಚಿತಪಡಿಸುತ್ತದೆ.

‘ಇಷ್ಕಿಯಾ’ ಮತ್ತು ‘ಉಡ್ತಾ ಪಂಜಾಬ್’ ಚಿತ್ರದ ನಿರ್ದೇಶಕ ಅಭಿಷೇಕ್ ಚೌಬೆ ನಿರ್ದೇಶನದ ಚಿತ್ರ ‘ಸೊಂಚಿರಿಯಾ’. ಸುಶಾಂತ್ ಸಿಂಗ್ ರಾಥೋಡ್‌ ಮತ್ತು ಭೂಮಿ ಪೆಡ್ನೇಕರ್‌ ಜೋಡಿಯಾಗಿ ನಟಿಸಿರುವುದು ಮತ್ತು ಚೌಬೆ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಬಹಳ ನಿರೀಕ್ಷೆ ಹುಟ್ಟಿಸಿದೆ. 

ಚೌಬೆ ಅವರ ದಿಟ್ಟ ನಿರ್ದೇಶನ, ಟ್ರೇಲರ್‌ನ ಪ್ರತಿ ದೃಶ್ಯದಲ್ಲೂ ಹಾಸುಹೊಕ್ಕಾಗಿ ಕಾಣುತ್ತದೆ. ಚಂಬಲ್‌ ಕಣಿವೆಯ ಠಾಕೂರರ ಸ್ವಾಭಿಮಾನ, ಜಾತಿ ಆಧಾರದಲ್ಲಿ ಕಾರ್ಯಾಚಾರಣೆಗಳನ್ನು ಕೈಗೊಳ್ಳುವ ಪೊಲೀಸರ ಸೊಕ್ಕಿನ ನಡೆ, ಸುಶಾಂತ್‌ ಸಿಂಗ್ ರಾಥೋಡ್‌, ಭೂಮಿ ಪೆಡ್ನೇಕರ್‌ ಮತ್ತು ಮನೋಜ್‌ ಬಾಜಪೇಯಿ ಅವರ ಪ್ರಭಾವಿ ನಟನೆ, ಚಂಬಲ್‌ ಒಣಭೂಮಿ ಮತ್ತು ಹವೆಯನ್ನು ಸಮರ್ಥವಾಗಿ ಕಟ್ಟಿಕೊಡುವ ಛಾಯಾಗ್ರಹಣ... ಟ್ರೇಲರ್‌ನಲ್ಲೇ ‘ಸೊಂಚಿರಿಯಾ’ ಇಷ್ಟವಾಗಲು ಹೀಗೆ ಅನೇಕ ಕಾರಣಗಳಿವೆ.

ಪೊಲೀಸರಿಗೆ ಶರಣಾಗಬೇಕೇ ಬೇಡವೇ ಎಂಬ ಗೊಂದಲದಲ್ಲಿರುವ ಹತ್ತಾರು ಡಕಾಯಿತರ ಗುಂಪಿನ ಮುಖಂಡರಾದ ಸುಶಾಂತ್‌ ಮತ್ತು ಮನೋಜ್‌ ತಮ್ಮ ಖಡಕ್‌ ಮುಖಭಾವದಿಂದಲೇ ಗಮನ ಸೆಳೆಯುತ್ತಾರೆ. ಪೊಲೀಸರೊಂದಿಗೆ ಮುಖಾಮುಖಿಯಾಗುವ ಸನ್ನಿವೇಶದಲ್ಲಿ ಸುಶಾಂತ್‌, ‘ನಮ್ಮ ಶತ್ರುಗಳು ಇಲ್ಲೇ ಇದ್ದಾರೆ ಶೂರರೆಲ್ಲರೂ ಜಾಗೃತರಾಗಿ’ ಎಂದು ಚೀರುತ್ತಲೇ ಪೊಲೀಸ್‌ ವಾಹನದತ್ತ ಗುಂಡಿನ ಮಳೆಗರೆಯುವ ಸನ್ನಿವೇಶ, ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವ ನೋಟಗಳು ಮೈ ಜುಮ್ಮೆನಿಸುತ್ತವೆ.

1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಂಬಲ್‌ನ ಡಕಾಯಿತರಿಗೆ ಶರಣಾಗಲು ಅವಕಾಶ ನೀಡುವ ಸರ್ಕಾರ ಪೊಲೀಸರ ಮೂಲಕ ಪೊಳ್ಳು ಆಶ್ವಾಸನೆ ಕೊಡುವ, ಜಾತೀಯತೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಅಂಶಗಳು ಬಹಳ ಸಮರ್ಥವಾಗಿ ಚಿತ್ರಿತವಾಗಿವೆ. ಮೊದಲ ದೃಶ್ಯದಲ್ಲಿ ಗುಡಿಸಲಿನೊಳಗೆ ಬಚ್ಚಿಟ್ಟುಕೊಂಡಿರುವ ಡಕಾಯಿತರ ಪಾತ್ರದಲ್ಲಿ ಸುಶಾಂತ್‌, ಮನೋಜ್ ಮತ್ತು ರಣವೀರ್‌ ಶೋರೆ ಗಮನ ಸೆಳೆಯುತ್ತಾರೆ. ಬಂದೂಕಿನ ಟ್ರಿಗರ್‌ ಎಳೆಯುವ ಭರ ಮತ್ತು ವೇಗ ನೋಡುಗರಲ್ಲಿ ಕಂಪನವನ್ನುಂಟು ಮಾಡುತ್ತದೆ. ಶರಣಾಗಿ ಜೀವ ಉಳಿಸಿಕೊಳ್ಳಿ ಎಂದು ತನ್ನ ಸಹವರ್ತಿಗಳಿಗೆ ನಾಯಕ (ಸುಶಾಂತ್‌) ಹೇಳುವಾಗ ಅವರೆಲ್ಲರೂ ಅವನನ್ನೇ ಜರೆಯುತ್ತಾರೆ.

ಸಣ್ಣ ಬಾಲಕಿಯೊಂದಿಗೆ ಕಣಿವೆಯಲ್ಲಿ ಓಡಿಹೋಗುತ್ತಿರುವ ದೃಶ್ಯದಲ್ಲಿ ಭೂಮಿ ಪೆಡ್ನೇಕರ್ ಕಾಣಿಸಿಕೊಳ್ಳುತ್ತಾರೆ. ಆದರೆ ಕಣಿವೆಯ ಮೇಲ್ಭಾಗದಲ್ಲಿ ನಿಂತ ಪೊಲೀಸರ ಬಂದೂಕಿನ ಬಾಯಿ ಅವರನ್ನು ತಡೆಯುತ್ತದೆ. ಈಕೆಯೂ ಬಂದೂಕನ್ನು ಅವರತ್ತ ಗುರಿಯಿಡುವ ದೃಶ್ಯದಲ್ಲಿ ಭೂಮಿಯ ಅಬ್ಬರದ ನಟನೆ ಮನೋಜ್ಞವಾಗಿದೆ. ‘ನಿನ್ನ ಜಾತಿ ಯಾವುದು’ ಎಂಬ ಪೊಲೀಸರ ಪ್ರಶ್ನೆಗೆ, ‘ಠಾಕೂರ್’ ಎನ್ನುತ್ತಾಳೆ. ‘ಆ ಹುಡುಗಿ?’ ‘ಇವಳು ನನ್ನ ಸಹೋದರಿ’ ಎಂಬ ಬಿಡುಬೀಸಾದ ಉತ್ತರ. ಭ್ರಷ್ಟ ಪೊಲೀಸ್‌ ಅಧಿಕಾರಿಯಾಗಿ ಅಶುತೋಷ್‌ ರಾಣಾ, ‘ಚಂಬಲ್‌ ಕಣಿವೆಯನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನಷ್ಟೇ ನನಗೆ ವಹಿಸಿರುವುದು’ ಎಂದು ಹೇಳುತ್ತಲೇ ನಾಗರಿಕರ ಮೇಲೆ ಗುಂಡು ಹಾರಿಸುತ್ತಾರೆ.

ಟ್ರೇಲರ್‌ಗೆ ಕೊಂಡಿ: https://youtu.be/aejAkKGiimk

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !