ಸೋನಿಕಾ ಸಿನಿ ಮನ

ಶುಕ್ರವಾರ, ಏಪ್ರಿಲ್ 26, 2019
21 °C
ದೂರದೃಷ್ಟಿಯುಳ್ಳ ಹುಡುಗಿಯ ಆಯ್ಕೆಯಲ್ಲಿ ದಿಟ್ಟತನ

ಸೋನಿಕಾ ಸಿನಿ ಮನ

Published:
Updated:
Prajavani

‘ಬಂದ ಅವಕಾಶಗಳನ್ನೆಲ್ಲಾ ಕಣ್ಮುಚ್ಚಿ ಒಪ್ಪಿಕೊಳ್ಳುವುದು ನನಗೆ ಇಷ್ಟವಿಲ್ಲ. ಕೇಳಿದ ಕತೆ ಎದೆಗೆ ಇಳಿಯಬೇಕು; ನಿರ್ವಹಿಸುವ ಪಾತ್ರ ಮನಸ್ಸಿಗೆ ಒಪ್ಪಿಗೆಯಾಗಬೇಕು. ಆಗ ಮಾತ್ರ ನಾನು ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ’– ಹೀಗೆ ತಮ್ಮ ಸಿನಿಮಾ ಆಯ್ಕೆಯ ಕುರಿತು ದಿಟ್ಟತನದಿಂದ ಹೇಳುತ್ತಾರೆ ನಟಿ ಸೋನಿಕಾ ಗೌಡ.

ಫ್ಯಾಷನ್‌ ಡಿಸೈನಿಂಗ್‌ ಮುಗಿಸಿರುವ ಸೋನಿಕಾ ಗೌಡ ಸ್ವಂತದ್ದೊಂದು ಬುಟಿಕ್‌ ಕೂಡ ನಡೆಸುತ್ತಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಇವರು ಮಾಡೆಲಿಂಗ್‌ನಲ್ಲಿ ಮಿಂಚು ಹರಿಸಿದವರು. ಸೋನಿಕಾ ರ‍್ಯಾಂಪ್‌ ಮೇಲೆ ನಿಂತು ಚೆಲ್ಲಿದ ಬೆಳದಿಂಗಳಿನಂತಹ ನಗುವಿಗೆ ಲೆಕ್ಕವಿಲ್ಲದಷ್ಟು ಮಂದಿ ಮನಸೋತಿದ್ದಾರೆ. ಹಾಲು ಬಿಳುಪಿನ ಚೆಲುವೆ ಸೋನಿಕಾಗೆ ಮಾಡೆಲಿಂಗ್‌ನಲ್ಲಿ ಸಿಕ್ಕ ಜನಪ್ರಿಯತೆ ಚಂದನವನದಲ್ಲೂ ಅವಕಾಶದ ಬಾಗಿಲು ತೆರೆಯಿತು.

‘ನಾನು ನಟಿಸಿದ ಮೊದಲ ಕನ್ನಡ ಸಿನಿಮಾ ‘ಶತಾಯ ಗತಾಯ’. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಯಿತು. ಡೆಬ್ಯೂ ಸಿನಿಮಾದಲ್ಲಿ ಸಿಕ್ಕ ಹೆಸರಿನಿಂದಾಗಿಯೇ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಬರತೊಡಗಿದವು. ಈಗ ‘ನಾನೇ ರಾಜ’ ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಎರಡನೇ ತಮ್ಮ ಉಮೇಶ್‌ ಚಿತ್ರದ ನಾಯಕನಟ. ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ. ಪ್ರೇಕ್ಷಕರನ್ನು ರಂಜಿಸುವಂತಹ ಸಾಕಷ್ಟು ಅಂಶಗಳು ಚಿತ್ರದಲ್ಲಿವೆ. ಈ ಚಿತ್ರದಲ್ಲಿ ನಾನು ನಿರ್ವಹಿಸಿರುವ ಪಾತ್ರ ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ’ ಎನ್ನುತ್ತಾರೆ ನಟಿ ಸೋನಿಕಾ ಗೌಡ.

ಭಿನ್ನ ಪಾತ್ರಗಳಿಗೆ ಜೀವ ತುಂಬಬೇಕು ಎಂಬುದು ಪ್ರತಿಯೊಬ್ಬ ಕಲಾವಿದೆಯ ಕನಸು. ಅಂತೆಯೇ, ನಟಿ ಸೋನಿಕಾ ಅವರಿಗೆ ಕ್ರೀಡೆ ಹಾಗೂ ದೇಶಭಕ್ತಿ ಪ್ರಧಾನವಾಗಿರುವಂತಹ ಸಿನಿಮಾಗಳಿಗೆ ಬಣ್ಣ ಹಚ್ಚಬೇಕು ಎಂಬ ಆಸೆ ಇದೆ.

‘ನಟಿಯಾಗಿ ಎಲ್ಲ ಬಗೆಯ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಕ್ರೀಡಾ ಸ್ಫೂರ್ತಿ ಹಾಗೂ ದೇಶಭಕ್ತಿಯನ್ನು ಬಿಂಬಿಸುವಂತಹ ಪಾತ್ರಗಳಿಗೆ ಬಣ್ಣ ಹಚ್ಚಬೇಕು ಎಂಬುದು ನನ್ನ ಕನಸು. ಅಂತಹ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದೇನೆ. ಬಾಲಿವುಡ್‌ನಲ್ಲಿ ಈ ಬಗೆಯ ಸಿನಿಮಾಗಳು ಸಾಕಷ್ಟು ರೂಪುಗೊಳ್ಳುತ್ತಲೇ ಇರುತ್ತವೆ. ಆದರೆ, ಕನ್ನಡ ಚಿತ್ರೋದ್ಯಮದಲ್ಲಿ ಈ ರೀತಿಯ ಪ್ರಯೋಗಾತ್ಮಕ ಸಿನಿಮಾಗಳು ತಯಾರಾಗುವುದು ಕಡಿಮೆ. ಕಳೆದು ಮೂರು ನಾಲ್ಕು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಹಾರರ್‌ ಸಿನಿಮಾಗಳ ಟ್ರೆಂಡ್‌ ಜೋರಾಗಿತ್ತು. ಈಗ ಮತ್ತೇ ಕಮರ್ಷಿಯಲ್‌ ಸಿನಿಮಾಗಳ ಅಬ್ಬರ ಜೋರಾಗಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ನಾನು ಒಪ್ಪಿಕೊಂಡಿರುವ ಹೊಸ ಸಿನಿಮಾ ಯುವಜನತೆಗೆ ತುಂಬ ಇಷ್ಟವಾಗಲಿದೆ’ ಎನ್ನುತ್ತಾರೆ ಸೋನಿಕಾ ಗೌಡ.

ಕನ್ನಡ ಚಿತ್ರರಂಗದ ನಂಬರ್‌ ಒನ್‌ ಹೀರೋ ಶಿವರಾಜ್‌ ಕುಮಾರ್‌ ಹಾಗೂ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಜತೆಗೆ ತೆರೆ ಹಂಚಿಕೊಳ್ಳಬೇಕು ಎಂಬುದು ನಟಿ ಸೋನಿಕಾ ಅವರ ಮಹದಾಸೆ.

‘ನಾನು ಚಿತ್ರರಂಗಕ್ಕೆ ಬರುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಇದೆಲ್ಲವೂ ನನಗೆ ಬಯಸದೇ ಬಂದ ಭಾಗ್ಯ. ಚಿತ್ರರಂಗಕ್ಕೆ ಬಂದ ನಂತರ ಅಭಿಮಾನಿಗಳ ಪ್ರೀತಿ ದೊರಕಿದೆ. ಕೈ ತುಂಬ ಅವಕಾಶಗಳೂ ಸಿಗುತ್ತಿವೆ. ಒಂದು ಭೋಜ್‌ಪುರಿ ಸಿನಿಮಾ ಕೂಡ ಮಾಡಿ ಮುಗಿಸಿದ್ದೇನೆ. ಹ್ಯಾಟ್ರಿಕ್‌ ಹೀರೋ ಶಿವಣ್ಣ ಮತ್ತು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನನ್ನ
ಅಚ್ಚುಮೆಚ್ಚಿನ ನಟರು. ಅವರ ಜತೆಗೆ ನಟಿಸಬೇಕು ಎಂಬುದು ನನ್ನ ಕನಸು. ಅಂತಹ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇನೆ. ಒಂದಲ್ಲ ಒಂದು ದಿನ ನನ್ನ ಕನಸು ನಿಜವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಸೋನಿಕಾ.

ತಮ್ಮ ಅದ್ಭುತ ಸೌಂದರ್ಯದಿಂದಲೇ ಎಲ್ಲರ ಮನ ಕದ್ದಿರುವ ಸೋನಿಕಾ ಗೌಡ ಅವರನ್ನು ನಿಮ್ಮ ಚೆಲುವಿನ ಗುಟ್ಟೇನು ಎಂದು ಪ್ರಶ್ನಿಸಿದರೆ ಅದಕ್ಕೆ ಅವರು ಉತ್ತರಿಸಿದ್ದು ಹೀಗೆ:

‘ಮಾಡೆಲಿಂಗ್‌ ಸಖ್ಯ ನನ್ನಲ್ಲಿ ಸೌಂದರ್ಯ ಕಾಳಜಿ ಬೆಳೆಸಿತು. ಸಾಕಷ್ಟು ಫೋಟೊಶೂಟ್‌ಗಳಲ್ಲಿ ಭಾಗವಹಿಸಿದ್ದೇನೆ. ಅದಕ್ಕಾಗಿ ದೇಹದ ಫಿಟ್‌ನೆಸ್‌ ಕಾಪಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿನಿತ್ಯ ಜಿಮ್‌ನಲ್ಲಿ ದೇಹ ದಂಡಿಸುತ್ತೇನೆ. ಅದು ಮಿಸ್‌ ಆದರೆ ತಪ್ಪದೇ ವಾಕಿಂಗ್‌ ಮಾಡುತ್ತೇನೆ. ಎಲ್ಲ ಕಾಲದಲ್ಲೂ ನೀರನ್ನು ಹೆಚ್ಚು ಕುಡಿಯುತ್ತೇನೆ. ಹಣ್ಣುಗಳನ್ನು ತಿನ್ನುತ್ತೇನೆ. ನಾನ್‌ವೆಜ್‌ ಅಂದರೆ ತುಂಬ ಇಷ್ಟ. ಚಿಕನ್‌ ಖಾದ್ಯಗಳೆಂದರೆ ಪಂಚಪ್ರಾಣ. ಅದರಲ್ಲೂ ನಾಟಿ ಸ್ಟೈಲ್‌ ಮಾಂಸಾಹಾರದ ಖಾದ್ಯಗಳೆಂದರೆ ಇನ್ನೂ ಅಚ್ಚು
ಮೆಚ್ಚು. ಬೀಗರ ಔತಣದಲ್ಲಿ ಮಾಡುವ ಮಾಂಸಾಹಾರ ಖಾದ್ಯಗಳನ್ನು ನೆನೆದುಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ನಾನು ಫುಡ್ಡಿ. ಊಟ ತಿಂಡಿ ವಿಚಾರದಲ್ಲಿ ಕಟ್ಟು ಮಾಡುವುದಿಲ್ಲ. ತಿಂದಷ್ಟೇ ಚೆನ್ನಾಗಿ ವರ್ಕೌಟ್‌ ಮಾಡುತ್ತೇನೆ. ಹಾಗಾಗಿ, ದೇಹ ಫಿಟ್‌ ಆಗಿದೆ. ಮನಸ್ಸು ಖುಷಿಯಾಗಿದೆ. ವೆರಡರಿಂದಾಗಿಯೇ ನನ್ನ ಚೆಲುವು ತಾಜಾ ಆಗಿದೆ’.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !