ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗದ ಬೆನ್ನೇರಿ...

Last Updated 27 ಜೂನ್ 2019, 12:56 IST
ಅಕ್ಷರ ಗಾತ್ರ

‌ನಾನು ಎಲ್ಲ ರೀತಿಯ ಪ್ರಯೋಗಕ್ಕೂ ಒಗ್ಗಿಕೊಳ್ಳುವವಳು. ಇಂತಹದ್ದೇ ಪಾತ್ರಗಳು ಬೇಕೆಂದು ಅಪೇಕ್ಷೆಪಡುವವಳಲ್ಲ. ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ. ಕಾಮಿಡಿ ಪಾತ್ರ ನೀಡಿದರೂ ನಟಿಸಬಲ್ಲೆ. ಡೈಲಾಗ್‌ ಇಲ್ಲದ ಮೌನಿ ಪಾತ್ರಕ್ಕೂ ಜೀವ ತುಂಬಲು ಸಿದ್ಧ. ಸಿನಿಮಾವೊಂದರಲ್ಲಿ ಐದು ನಿಮಿಷದ ಗ್ಲಾಮರ್‌ ಪಾತ್ರವಿದ್ದರೂ ಅಭಿನಯಿಸಲು ಹಿಂದೇಟು ಹಾಕುವುದಿಲ್ಲ. ಆ ಪಾತ್ರ ಜನರಿಗೆ ಇಷ್ಟವಾಗಬೇಕು ಅಷ್ಟೇ.

ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್‌ ಹೇಗಿದೆ, ಪ್ರೊಡಕ್ಷನ್‌ ಯಾವುದು, ನಿರ್ದೇಶಕರು ಯಾರು ಎನ್ನುವುದರ ಮೇಲೆ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುತ್ತೇನೆ. ‍ಪಾತ್ರ ಪೋಷಣೆ ಚೆನ್ನಾಗಿದ್ದರೆ ನಟಿಸಲು ಹಿಂಜರಿಯಲಾರೆ.

ಪ್ರಸ್ತುತ ಚಿತ್ರರಂಗದಲ್ಲಿ ಅಗಾಧ ಬದಲಾವಣೆಯಾಗಿದೆ. ಎಲ್ಲವೂ ತಂತ್ರಜ್ಞಾನದ ಮಹಿಮೆ. ನಾನು ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಿದ್ದು ರೀಲ್‌ ಯುಗದ ಅಂತ್ಯದಲ್ಲಿ. ನನಗೆ ಆ್ಯಕ್ಟಿಂಗ್‌ ಕಲಿಸಿದ್ದು ರೀಲ್‌ ಸಿನಿಮಾವೇ. ನಾನೆಂದಿಗೂ ಅದನ್ನು ಮರೆಯಲಾರೆ.

ಆಗ ಒಂದು ಟೇಕ್‌ಗೂ ಮಹತ್ವ ಹೆಚ್ಚಿತ್ತು. ಅದಕ್ಕಾಗಿ ನಿರಂತರ ತಾಲೀಮು ನಡೆಯುತ್ತಿತ್ತು. ಪ್ರತಿಯೊಂದು ಟೇಕ್‌ ನಾವು ಅಂದುಕೊಂಡ ಹಾಗೆಯೇ ಬರಬೇಕೆಂಬ ತುಡಿತವಿತ್ತು. ಈಗ ಅಂತಹ ವಾತಾವರಣವೇ ಇಲ್ಲ.

ರೀಲ್‌ ಜಾಗದಲ್ಲಿ ಮೆಮೊರಿ ಕಾರ್ಡ್‌ ಕೂತಿದೆ. ಎಷ್ಟು ಟೇಕ್‌ ಬೇಕಾದರೂ ತೆಗೆದುಕೊಳ್ಳಬಹುದು. ಯಾರು ಬೇಕಾದರೂ ಸಿನಿಮಾ ರಂಗ ಪ್ರವೇಶಿಸುವುದು ಸುಲಭ. ಅವರಿಗೆ ನಟನೆಯ ಅನುಭವ ಇರಬೇಕು ಎನ್ನುವ ನಿಯಮವಿಲ್ಲ. ಅನುಭವ ಇಲ್ಲದೆ ನಟ, ನಟಿ, ನಿರ್ದೇಶಕರಾಗುವಂತಹ ವಾತಾವರಣವಿದೆ. ಇದರಿಂದ ಅನುಕೂಲ ಮತ್ತು ಅನನುಕೂಲ ಎರಡೂ ಇವೆ.

ದಶಕದ ಹಿಂದೆ ಇಂಡಸ್ಟ್ರಿ ತುಂಬಾ ಚಿಕ್ಕದಾಗಿತ್ತು. ನಿರ್ದೇಶನ ಕರಗತವಾಗಿದ್ದವರು ಮಾತ್ರವೇ ಇಲ್ಲಿದ್ದರು. ಇಂದು ಅಂತಹ ಸ್ಥಿತಿಯೇ ಇಲ್ಲ. ಯಾರೋ ಒಬ್ಬರು ಮೂರು ತಿಂಗಳ ನಿರ್ದೇಶನ ಅಥವಾ ನಟನೆಯ ಕೋರ್ಸ್‌ ಮಾಡುತ್ತಾರೆ. ಬಳಿಕ ನೇರವಾಗಿ ನಿರ್ದೇಶನಕ್ಕೆ ಇಳಿದು ಬಿಡುತ್ತಾರೆ.

ವೈದ್ಯರಾಗಲು ಕನಿಷ್ಠ ಆರು ವರ್ಷ ಎಂಬಿಬಿಎಸ್‌ ಶಿಕ್ಷಣ ಓದಬೇಕು. ಬಳಿಕ ಆಸ್ಪತ್ರೆಯಲ್ಲಿ ಇಂಟರ್ನಿಯಾಗಿ ಅನುಭವ ಪಡೆಯಬೇಕು. ಸಾಕಷ್ಟು ಪ್ರಾಕ್ಟಿಸ್‌ ಮಾಡಿದ ಬಳಿಕವಷ್ಟೇ ಅವರು ನುರಿತು ವೈದ್ಯರಾಗಲು ಸಾಧ್ಯ. ಈ ಮಾತು ಹೊಸದಾಗಿ ಸಿನಿಮಾ ರಂಗ ಪ್ರವೇಶಿಸುವವರಿಗೂ ಅನ್ವಯಿಸುತ್ತದೆ. ಕೋರ್ಸ್‌ ಓದಿಕೊಂಡು ಬಂದಾಕ್ಷಣ ಒಳ್ಳೆಯ ನಟ, ನಟಿ, ನಿರ್ದೇಶಕರಾಗಲು ಸಾಧ್ಯವಿಲ್ಲ. ಅವರ ಕಲಿಕೆಯನ್ನು ನಾನು ತಪ್ಪು ಎನ್ನುವುದಿಲ್ಲ. ಇದರಿಂದ ಪ್ರತಿಭಾವಂತರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ.

ಎರಡೂ ಇಷ್ಟ
ನಾನು ಕಮರ್ಷಿಯಲ್‌ ಮತ್ತು ಕಲಾತ್ಮಕ ಎರಡೂ ಪ್ರಕಾರಗಳ ಚಿತ್ರಗಳಲ್ಲಿ ನಟಿಸಿರುವೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗಷ್ಟೇ ಕಲಾತ್ಮಕ ಸಿನಿಮಾ ಮಾಡುತ್ತಾರೆ. ಇಲ್ಲಿ ಬಜೆಟ್‌ ಕಡಿಮೆ. ಕಮರ್ಷಿಯಲ್‌ ಎಂದಾಕ್ಷಣ ಬಜೆಟ್‌ನದ್ದೇ ಲೆಕ್ಕಾಚಾರ. ಅದು ಹಿಟ್‌ ಆದ ಮೇಲೆ ನಟಿಸಿದ ಕಲಾವಿದರ ವೃತ್ತಿಬದುಕು ಹೊಸ ಹಾದಿಗೆ ಹೊರಳುತ್ತದೆ.

ಕಮರ್ಷಿಯಲ್‌ ಅಥವಾ ಕಲಾತ್ಮಕ ಸಿನಿಮಾ ಎಂದು ಎರಡನ್ನೂ ಇಬ್ಭಾಗಿಸಿ ನೋಡಲಾರೆ. ನನಗೆ ಪಾತ್ರವಷ್ಟೇ ಮುಖ್ಯ. ಈಗ ಎರಡೂ ವಿಭಾಗದಲ್ಲೂ ಸ್ಪರ್ಧೆ ಕಾಣಬಹುದು. ಪಾತ್ರ ನಿಭಾಯಿಸುವಾಗ ಸವಾಲು ಇದ್ದಿದ್ದೇ.

ಶಾಲಿನಿ ಐಎಎಸ್ ಚಿತ್ರ
‘ಶಾಲಿನಿ ಐಎಎಸ್‌’ ಚಿತ್ರದಲ್ಲಿ ನನ್ನದು ಸಹಜ ಅಭಿನಯ. ಮೊದಲಿಗೆ ನಾನು ಐಎಎಸ್ ಅಧಿಕಾರಿ ಶಾಲಿನಿ ಅವರನ್ನು ಇಮಿಟೇಟ್‌ ಮಾಡಬೇಕೇನೊ ಎಂದುಕೊಂಡಿದ್ದೆ. ಆದರೆ, ಅದು ಅವರ ಜೀವನದ ಕಥೆಯಲ್ಲ. ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡುವುದು ಕಷ್ಟವಲ್ಲ ಎನ್ನುವುದಷ್ಟನ್ನೇ ಸಿನಿಮಾದಲ್ಲಿ ಹೇಳುತ್ತಿದ್ದೇವೆ ಎಂದರು ನಿರ್ದೇಶಕರು. ನೀವು ಅಧಿಕಾರಿಯಾಗಿದ್ದರೆ ಹೇಗೆ ಕಾರ್ಯಭಾರ ನಿರ್ವಹಿಸುತ್ತಿದ್ದಿರೋ ಹಾಗೆ ನಟಿಸಲು ಸಲಹೆಯಿತ್ತರು. ಹಾಗೆಯೇ ನಟಿಸಿದ್ದೇನೆ. ಯಾರನ್ನೂ ಅನುಕರಣೆ ಮಾಡಲು ಹೋಗಿಲ್ಲ.

ಪ್ರತಿದಿನ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಇತ್ತೀಚೆಗೆ ಹಾರರ್‌ ಕಥೆ ಕೇಳಿದೆ. ಆದರೆ, ನನ್ನ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದರಷ್ಟೇ ಕಥೆ ಒಪ್ಪಿಕೊಳ್ಳುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT