ಸೌಂದರ್ಯ ಲಹರಿ

7

ಸೌಂದರ್ಯ ಲಹರಿ

Published:
Updated:
Prajavani

‘ಲಾಕ್’ನಲ್ಲಿ ಮೊದಲ ದೃಶ್ಯ ಖಳನಟನ ಜತೆ ಇತ್ತು. ಬಾಗಿಲಿನಿಂದ ನನ್ನ ಮುಖ ಹೊರ ಹಾಕುವುದಕ್ಕಷ್ಟೇ ಆ ದೃಶ್ಯ ಮೀಸಲು.‌ ನನ್ನ ಕೈಯಲ್ಲಿ ಗನ್‌ ಹೊಳೆಯುತ್ತಿತ್ತು. ಇನ್ನೊಂದೆಡೆ ಮುಖದಲ್ಲಿ ಬೆವರು ಜಿನುಗುತ್ತಿತ್ತು. ನಿರ್ದೇಶಕರು ಟೇಕ್ ಮೇಲೆ ಟೇಕ್ ಹೇಳುತ್ತಿದ್ದರು. ನಟನೆಯಲ್ಲಿ ನಾನಿನ್ನೂ ಹೊಸಬಳು. ಅಂದು ಅಕ್ಷರಶಃ ನಡುಗಿಹೋಗಿದ್ದೆ’ ‌

ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಬಗೆಯನ್ನು ನಟಿ ಸೌಂದರ್ಯ ರಮೇಶ್‌ ವಿವರಿಸಿದ್ದು ಹೀಗೆ. ಈ ಚಿತ್ರದಿಂದ ಪಡೆದುಕೊಂಡ ಅನುಭವ ತನ್ನ ಮುಂದಿನ ಸಿನಿಮಾಗಳಿಗೆ ಸೇತುವೆಯಾಗಲಿದೆ ಎಂಬ ವಿಶ್ವಾಸ ಅವರ ಮಾತುಗಳಲ್ಲಿತ್ತು. 

ಈ ವಾರ ತೆರೆ ಕಾಣುತ್ತಿರುವ ಪರಶುರಾಮ್‌ ನಿರ್ದೇಶನದ ‘ಲಾ‌ಕ್’ ಅವರಿಗೆ ಮೊದಲ ಚಿತ್ರ. ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ ಇದು. ನಾಯಕ ಮತ್ತು ನಾಯಕಿ ಒಂದು ಘಟನೆಯ ಸತ್ಯಾಸತ್ಯತೆಯ ಪರೀಕ್ಷೆಗೆ ಇಳಿಯುವುದೇ ಈ ಕಥೆಯ ತಿರುಳು. 

ಸೌಂದರ್ಯ ಹುಟ್ಟಿದ್ದು ಮಾಗಡಿಯಲ್ಲಿ. ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಅಲ್ಲಿಯೇ ಶಿಕ್ಷಣ ಪೂರೈಸಿದರು. ಬಳಿಕ ದಂತ ವೈದ್ಯಕೀಯ ಶಿಕ್ಷಣದ ಅಧ್ಯಯನಕ್ಕಾಗಿ ಬೆಂಗಳೂರಿಗೆ ಕಾಲಿಟ್ಟರು. ಕಿಮ್ಸ್‌ನಲ್ಲಿ ಡೆಂಟಲ್ ಪದವಿ ಪೂರೈಸಿರುವ ಅವರು, ಪ್ರಸ್ತುತ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನ ನಿರತರಾಗಿದ್ದಾರೆ.

ಬಾಲ್ಯದಲ್ಲಿಯೇ ಬಣ್ಣದ ಲೋಕದ ಸೆಳೆತಕ್ಕೆ ಸಿಲುಕಿದರು. ಕಾಲೇಜು ಮೆಟ್ಟಿಲು ಹತ್ತಿದಾಗ ಮನದಲ್ಲಿ ಅವಿತಿದ್ದ ಈ ಆಸೆ ಗ‌ರಿಗೆದರಿತು. ಅದೊಂದು ದಿನ ಅಪ್ಪ, ಅಮ್ಮನ ಮುಂದೆ ಅಳುಕಿನಿಂದಲೇ ಈ ಕೋರಿಕೆ ಮುಂದಿಟ್ಟರು. ಮೊದಲು ಓದು ಮುಗಿಸು ಎಂಬ ಸಿದ್ಧಉತ್ತರ ಅವರಿಂದ ಧುತ್ತನೆ ಎದುರಾಯಿತು. 

ಪದವಿ ಓದುವಾಗ ಅವರು ಸ್ನೇಹಿತರ ಜೊತೆಗೆ ಸೇರಿ ‘ಅನ್‌ಫೆಂಡ್ರೆಡ್‌’ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು. ರ‍್ಯಾಗಿಂಗ್ ಹಾವಳಿ ತಡೆ ಕುರಿತ ಸಾಕ್ಷ್ಯಚಿತ್ರ ಇದು. ರ‍್ಯಾಗಿಂಗ್‌ನಿಂದ ತೊಂದರೆಗೆ ಸಿಲುಕಿನ ಹುಡುಗಿಯೊಬ್ಬಳ ಕಥೆಯೇ ಇದರ ಜೀವಾಳ. ಇದರಲ್ಲಿ ಸೌಂದರ್ಯ ಅವರೇ ನಟಿಸಿದ್ದಾರೆ. ಇದಕ್ಕೆ ಅವರಿಗೆ ಕಾಲೇಜಿನಲ್ಲಿ ಪ್ರಶಸ್ತಿಯೂ ಸಿಕ್ಕಿತಂತೆ. ಇದೇ ಅವರು ಸಿನಿಮಾ ರಂಗ ಪ್ರವೇಶಿಸಲು ಪ್ರೇರಣೆಯಾಯಿತು. 

‘ವೃತ್ತಿಯಲ್ಲಿ ನಾನು ದಂತವೈದ್ಯೆ. ಆದರೆ, ಸಿನಿಮಾವೆಂದರೆ ನನಗಿಷ್ಟ. ಯಾವಾಗ ಬೇಕಾದರೂ ವೃತ್ತಿ ಮುಂದುವರಿಸಬಹುದು. ಆದರೆ, ಸಿನಿಮಾಗಳಲ್ಲಿ ಅವಕಾಶ ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ, ಬಣ್ಣದ ಲೋಕಕ್ಕೆ ನನ್ನ ಮೊದಲ ಆದ್ಯತೆ. ವೃತ್ತಿ ಮತ್ತು ನಟನೆಯನ್ನು ಒಟ್ಟಾಗಿ ಸರಿದೂಗಿಸಿಕೊಂಡು ಹೋಗುತ್ತೇನೆ’ ಎಂದು ಕಣ್ಣು ಮಿಟುಕಿಸುತ್ತಾರೆ.

ನಿರ್ದೇಶಕರು ಕಥೆಯ ಬಗ್ಗೆ ಎಲ್ಲಿಯೂ ಹೇಳಿಲ್ಲ. ಕಥೆಯನ್ನೇ ಲಾಕ್‌ ಮಾಡಿದ್ದಾರೆ. ಆಯಾ ಕಲಾವಿದರ ನಟನೆಯ ಭಾಗವನ್ನು ಚಿತ್ರೀಕರಿಸಿದ್ದಾರೆ. ಹಾಗಾಗಿ, ಸೌಂದರ್ಯಗೂ ಸಿನಿಮಾದ ಕಥೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ‘ನನಗೆ ಸಿನಿಮಾದ ಕಥೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ನಿರ್ದೇಶಕರು ಹೇಳಿಲ್ಲ. ಹಿಂದಿನ ಜನ್ಮದ ರಹಸ್ಯ ಕುರಿತು ಕನಸುಗಳು ಬೀಳುತ್ತಿರುತ್ತವೆ. ಆ ಕನಸಿನ ಜಾಡು ಹುಡುಕಿಕೊಂಡು ಸಾಗುವುದೇ ನನ್ನ ಪಾತ್ರ’ ಎಂದು ವಿವರಿಸುತ್ತಾರೆ ಅವರು.

ಮೊದಲ ಚಿತ್ರದ ಬಳಿಕ ಅವರಿಗೆ ಕನ್ನಡದಿಂದ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಆದರೆ, ಪಾತ್ರಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚೂಸಿ. ಪ್ರಥಮ ಚಿತ್ರಕ್ಕೆ ಜನರಿಂದ ಯಾವ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದರ ಆಧಾರದ ಮೇಲೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

‘ಮೊದಲ ಚಿತ್ರದಲ್ಲಿ ರಫ್‌ ಅಂಡ್‌ ಟಫ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಗ್ಲಾಮರಸ್‌ ಪಾತ್ರಗಳಲ್ಲಿ ನಟಿಸಲು ನನಗಿಷ್ಟ. ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವ ಆಸೆಯೂ ಇದೆ’ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !