ಭಾನುವಾರ, ಆಗಸ್ಟ್ 25, 2019
21 °C

ಯಾರು ಇಲ್ಲಿ ‘ಸ್ಟಾರ್‌ ಕನ್ನಡಿಗ’?

Published:
Updated:
Prajavani

ಎಲ್ಲ ಕನ್ನಡಿಗರೂ ಸಿನಿಮಾ ಮಂದಿಯ ಪಾಲಿಗೆ ಸ್ಟಾರ್‌ಗಳೇ. ಆದರೂ, ‘ಸ್ಟಾರ್‌ ಕನ್ನಡಿಗ’ ಎಂಬ ಶೀರ್ಷಿಕೆ ಹೊತ್ತುಕೊಂಡು, ‘ಯಾರೋ ಒಬ್ಬನನ್ನು ಕನ್ನಡಿಗರ ಪೈಕಿ ಸ್ಟಾರ್‌ ಎಂದು ಕರೆಯಲು ಹೊರಟಿರಬಹುದು ಈ ಸಿನಿಮಾ, ಯಾರಿರಬಹುದು ಆ ಸ್ಟಾರ್‌’ ಎಂದು ಸಿನಿಮಾ ‍ಪ್ರಿಯರು ಕುತೂಹಲದಿಂದ ಕಾಯುವಂತೆ ಮಾಡುವ ಉದ್ದೇಶ ಹೊಂದಿದೆ ಈ ಚಿತ್ರತಂಡ.

ಹೊಸಬರೇ ತುಂಬಿರುವ ಈ ತಂಡದ ನಾಯಕ ವಿ.ಆರ್. ಮಂಜುನಾಥ‌್. ಚಿತ್ರದ ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಇವರದ್ದೇ. ಜೊತೆಗೆ ಚಿತ್ರದ ನಾಯಕ ಕೂಡ ಇವರೇ.

ಚಿತ್ರದ ಬಗ್ಗೆ ಮಾಹಿತಿ ನೀಡಲು ಮಂಜುನಾಥ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ‘ನಾನು ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದೇನೆ. ಮೊದಲೆಲ್ಲ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ಇನ್ನೂ ದೊಡ್ಡದೇನಾದರೂ ಮಾಡಬೇಕು ಅಂದುಕೊಂಡಾಗ ಸ್ನೇಹಿತರು ನೆರವಿಗೆ ಬಂದರು’ ಎಂದರು ಮಂಜುನಾಥ್.

ಸಿನಿಮಾ ಮಾಡಬೇಕು ಎಂಬ ಗುರಿ ಹೊಂದಿದ ನಾಲ್ಕು ಜನ ಯುವಕರ ತಂಡಕ್ಕೆ ಯುವತಿಯೊಬ್ಬಳ ಪರಿಚಯ ಆಗುತ್ತದೆ. ಕಥಾ ನಾಯಕನ ಜೊತೆಗಿನ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲಿಂದ ಮುಂದೆ ಏನಾಗುತ್ತೆ ಎಂಬುದು ಸಿನಿಮಾ ಕಥೆ. ಈ ಸಿನಿಮಾ ಮಾಮೂಲಿ ಸಿನಿಮಾಗಳಂತೆ ಅಲ್ಲ ಎಂದು ತಮ್ಮ ಚಿತ್ರದ ಬಗ್ಗೆ ತಿಳಿಸಿದರು ಮಂಜುನಾಥ್.

ನಾಯಕಿಯಾಗಿ ಶಾಲಿನಿ ಭಟ್ ಅಭಿನಯಿಸುತ್ತಿದ್ದಾರೆ. ‘ಚಿತ್ರ ಮಾಡಲು ಮುಂದೆ ಬಂದ ಯುವಕರ ತಂಡವನ್ನು ಕಂಡೇ ನನಗೆ ಖುಷಿಯಾಯಿತು. ಜೊತೆಯಲ್ಲಿ, ಚಿತ್ರದ ಹಾಡುಗಳು ಕೂಡ ಬಹಳ ಚೆನ್ನಾಗಿವೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ಹಾಡುಗಳು ಕೂಡ ಒಂದು ಕಾರಣ’ ಎಂದರು ಶಾಲಿನಿ.

ಈ ಚಿತ್ರದಲ್ಲಿ ನಟಿಸಿರುವ ಕೋಬ್ರಾ ನಾಗರಾಜ್ ಅವರಿಗೆ ಶಾಲಿನಿ ಅವರನ್ನು ಕಂಡು ಜೂನಿಯರ್ ಪೂಜಾ ಗಾಂಧಿ ಕಂಡಂತೆ ಅನಿಸಿತಂತೆ! ‘ಜೂನಿಯರ್‌ ಪೂಜಾ ಇರುವ ಈ ಸಿನಿಮಾ ಮುಂಗಾರು ಮಳೆ ಚಿತ್ರದಂತೆಯೇ ಎತ್ತರೆತ್ತರ ಬೆಳೆಯಲಿ’ ಎಂದು ಹಾರೈಸಿದರು ನಾಗರಾಜ್.

ರಾಕ್‌ಲೈನ್‌ ಸುಧಾಕರ್ ಅವರು ಇದರಲ್ಲಿ ಚಿತ್ರ ನಿರ್ಮಾಪಕನ ಪಾತ್ರ ನಿಭಾಯಿಸಿದ್ದಾರೆ. ‘ಇಷ್ಟು ಆಸೆಯಿಂದ ಸಿನಿಮಾ ಮಾಡುವ ಹುಡುಗರನ್ನು ನಾನು ನೋಡಿದ್ದು ಇದೇ ಮೊದಲು’ ಎಂದು ಶ್ಲಾಘಿಸಿದರು ಸುಧಾಕರ್. ಪವನ್ ಪಾರ್ಥ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಹದೇವ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Post Comments (+)