ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮ ಜೋಳಿಗೆಯ ಮಹಾಂತಗೆ ಅಕ್ಷರ ನಮನ

ಅಕ್ಷರ ಗಾತ್ರ

ಶರಣ ಲೋಕದಿಚ್ಛೆಯ ನುಡಿಯ, ಲೋಕದಿಚ್ಛೆಯ ನಡೆಯ. ಅವರು ಪುಣ್ಯದಂತೆ ಬಂದು, ಜ್ಞಾನದಂತೆ ಇದ್ದು, ಮುಕ್ತಿಯಂತೆ ಹೋಗುವರು. ಉಪಮಿಸಬಾರದ ಉಪಮಾತೀತರು. ಇದಕ್ಕೆ ಅನ್ವರ್ಥಕವಾಗಿ ಬಾಳಿದವರು ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ 19ನೆಯ ಪೀಠಾಧಿಪತಿಗಳಾಗಿದ್ದ ಡಾ. ಮಹಾಂತ ಸ್ವಾಮೀಜಿ.

ಅವರು ಭಕ್ತರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ನಮ್ಮಲ್ಲಿ ಮಠಗಳಿಗೆ, ಸ್ವಾಮೀಜಿಗಳಿಗೆ ಕೊರತೆ ಏನಿಲ್ಲ. ಆದರೆ ಆ ಮಠಕ್ಕೆ, ಸ್ವಾಮಿತನಕ್ಕೆ ಗೌರವ ಬರುವಂತೆ ನಡೆದುಕೊಂಡವರು ವಿರಳ. ಅಂಥ ವಿರಳರಲ್ಲಿ ಎದ್ದು ತೋರುವ ವ್ಯಕ್ತಿತ್ವ ಅವರದ್ದು. ಸರಳತೆಗೆ, ಪ್ರೀತಿಗೆ, ತಾಯ್ತನಕ್ಕೆ, ಬಸವ ಪ್ರೇಮಕ್ಕೆ ಮತ್ತೊಂದು ಹೆಸರೇ ಅವರು. ಶ್ರೀಗಳನ್ನು ಸುಮಾರು 40 ವರ್ಷಗಳಿಂದಲೂ ಬಲ್ಲೆವು. 89 ವರ್ಷ ಬಾಳಿದ ಅವರ ಬದುಕೇ ಒಂದು ಪವಾಡ. ಬಸವತತ್ವ ಪ್ರೇಮಿಗಳನ್ನು ಕಂಡರೆ ಮುಗಿದ ಕೈ, ಬಾಗಿದ ತಲೆಯವರಾಗಿ ಅವರನ್ನು ಅಪ್ಪಿಕೊಳ್ಳುವ, ಅವರ ಸೇವೆಯನ್ನು ಮಾಡುವ ಹೃದಯ ಶ್ರೀಮಂತರು. ಅವರೆಂದೂ ವ್ಯಕ್ತಿಯ ವಯಸ್ಸನ್ನು ನೋಡಿದವರಲ್ಲ. ಅಪ್ಪ ಬಸವಣ್ಣನವರ ಸೇವೆ ಮಾಡುವವರೆಲ್ಲ ಅವರಿಗೆ ಬಸವಸ್ವರೂಪಿಗಳೇ. ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಭೃತ್ಯಾಚಾರ ಅಳವಡಿಸಿಕೊಂಡಿದ್ದ ಅಪರೂಪದ ಸ್ವಾಮೀಜಿ ಅವರು. ಸರಳ ಜೀವನ, ಉನ್ನತ ಚಿಂತನೆ ಅವರ ಬದುಕಿನ ಬಂಡವಾಳವಾಗಿತ್ತು.

‘ದುಶ್ಚಟ, ದುರಭ್ಯಾಸಗಳನ್ನು ಕಳೆಯಲು ಲಿಂಗವ್ಯಸನ, ಜಂಗಮಪ್ರೇಮ ಸಹಕಾರಿ’ ಎನ್ನುವ ಬಸವ ಸಂದೇಶವನ್ನು ತಲೆಯ ಮೇಲೆ ಹೊತ್ತು ಮೆರೆದವರು ಮಹಾಂತ ಸ್ವಾಮೀಜಿ. ಮಹಾಂತ ಜೋಳಿಗೆಯ ಸ್ವಾಮಿ ಎಂದೇ ಅವರು ಪ್ರಖ್ಯಾತರು. ಅವರು ಜೋಳಿಗೆ ಹಾಕಿದ್ದು ಭಕ್ತರಿಂದ ಕಾಣಿಕೆ ಸಂಗ್ರಹಿಸಲು ಅಲ್ಲ; ಭಕ್ತರಲ್ಲಿರುವ ದುಶ್ಚಟಗಳ ಕಾಣಿಕೆ ಪಡೆಯಲು. ಊರೂರು ಅಲೆದು, ಮನೆ ಮನೆ ಸುತ್ತಿ ಜನರಲ್ಲಿರುವ ಕುಡಿತ, ಧೂಮಪಾನ, ಗುಟ್ಕಾ ಇತ್ಯಾದಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಅವರನ್ನು ಹೊಸ ಮನುಷ್ಯರನ್ನಾಗಿ ಮಾಡಿದವರು. ಅಷ್ಟೇ ಅಲ್ಲ; ಅವರು ಮುಂದೆಂದೂ ಆ ಚಟುವಟಿಕೆಗೆ ಬಲಿಯಾಗಬಾರದೆಂದು ಅವರಿಗೆ ಲಿಂಗದೀಕ್ಷೆ ನೀಡಿ ಜಂಗಮ ಪ್ರೇಮ ಬೆಳೆಸಿದವರು. ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕೆಂಬುದೇ ಅವರ ಕನಸಾಗಿತ್ತು. ಆ ಕನಸನ್ನು ನನಸಾಗಿಸಲು ಜೀವನಪರ್ಯಂತ ಹೋರಾಟ ಮಾಡಿದ ಅಪರೂಪದ ಜೀವ.

ಶ್ರೀಗಳ ಪ್ರಯತ್ನ, ಪರಿಶ್ರಮದಿಂದಾಗಿ ಸಹಸ್ರಾರು ಕುಟುಂಬಗಳು ವ್ಯಸನಮುಕ್ತವಾಗಿ ಇಂದು ನೆಮ್ಮದಿಯ ಜೀವನ ನಡೆಸುತ್ತಲಿವೆ. ಅದರ ಫಲವಾಗಿಯೇ ಅವರಿಗೆ ಮದ್ಯಪಾನ ಸಂಯಮ ಮಂಡಳಿಯ ಪ್ರಶಸ್ತಿ ಸಂದಿದೆ. ಅವರ ಬಸವಪ್ರೇಮ ಅನನ್ಯ. ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರ ಎಲ್ಲ ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕು ಎನ್ನುವ ಸಂಕಲ್ಪ ಅವರದಾಗಿತ್ತು. ಅದಕ್ಕಾಗಿ ಭಕ್ತರ ಮನೆ ಮನೆಗೆ ಹೋಗಿ ಅವರ ಮನೆಯಲ್ಲಿದ್ದ ಸ್ಥಾವರ ದೇವರುಗಳನ್ನೆಲ್ಲ ಕಟ್ಟಿ ಹೊಳೆಗೆಸೆಯುವಂತೆ ಮಾಡಿದರು. ದೇಹವೇ ದೇವಾಲಯವಾಗಬೇಕೆಂದು ಅಂಗಕ್ಕೆ ಲಿಂಗಸಂಬಂಧ ಬೆಳೆಸಿದರು. ಬಸವತತ್ವ ನಿಷ್ಠೆ ಅವರ ಮೈ ಮನಗಳಲ್ಲಿ ಜಂಗಮವಾಗಿ ಕೆಲಸ ಮಾಡುತ್ತಿತ್ತು. ಅವರು ಬಸವತತ್ವವನ್ನು ಹೇಳುವುದಕ್ಕಿಂತ ನಡೆದು ತೋರಿಸುತ್ತಿದ್ದರು. ನಾಗರ ಪಂಚಮಿಯಂದು ಕಲ್ಲು ನಾಗಪ್ಪನಿಗೆ ಹಾಲೆರೆವ ಬದಲು ಮಕ್ಕಳಿಗೆ ಹಾಲುಣಿಸಿ ಹಬ್ಬ ಮಾಡುವ ಪದ್ಧತಿಯನ್ನು ಜಾರಿಗೆ ತಂದವರು.

ಬೀದರ್‌ನಲ್ಲಿ ಬೃಹತ್ ಬಸವ ಸಂದೇಶ ಸಾರುವ ಸಮಾವೇಶ ನಡೆದಾಗ ಅದರಲ್ಲಿ ಭಾಗವಹಿಸಿದ್ದ ಅಂದಿನ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರು ‘ಬಸವತ್ವ ಹೇಳುವವರು ಅದರಂತೆ ನಡೆದಿದ್ದಾರೆಯೇ? ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನವರನ್ನು ಬಸವಣ್ಣನವರು ಅಪ್ಪ, ಬೊಪ್ಪ ಎಂದು ಕರೆದು ಗೌರವಿಸಿದರೆಂದು ಹೇಳುವ ಮಠಾಧೀಶರು ತಮ್ಮ ಮಠಗಳಿಗೆ ದಲಿತರನ್ನು ಸ್ವಾಮಿಗಳನ್ನಾಗಿ ಮಾಡಿಕೊಳ್ಳಬಲ್ಲರೇ’ ಎಂದು ಪ್ರಶ್ನೆ ಹಾಕಿದರಂತೆ. ಅಲ್ಲಿದ್ದ ಅನೇಕ ಸ್ವಾಮಿಗಳು ಮೌನವಹಿಸಿದಾಗ ಮಹಾಂತ ಸ್ವಾಮೀಜಿ ‘ನಮ್ಮ ಮಠ ಇಲ್ಲವೇ... ನಮ್ಮ ಶಾಖಾ ಮಠಗಳಿಗೆ ನಾವು ದಲಿತರನ್ನು ಸ್ವಾಮಿಗಳನ್ನಾಗಿ ಮಾಡುತ್ತೇವೆ’ ಎಂದು ಉತ್ತರಿಸಿದರಂತೆ. ಉತ್ತರ ಕುಮಾರನ ಪೌರುಷ ತೋರುವವರಿಗೇನೂ ಕೊರತೆ ಇಲ್ಲ. ಆದರೆ ಇವರು ಹೇಳಿದ್ದನ್ನು ಸಾಧಿಸಿ ತೋರಿದ್ದು ವಿಶೇಷ.

ಚಿತ್ರದುರ್ಗ ಜಿಲ್ಲೆಯ ಸಿದ್ದಯ್ಯನ ಕೋಟೆಯಲ್ಲಿರುವ ವಿಜಯ ಮಹಾಂತೇಶ್ವರ ಶಾಖಾಮಠಕ್ಕೆ ಮಾದಿಗರ ವಟುವನ್ನು ಆಯ್ಕೆ ಮಾಡಿ, ಅವರಿಗೆ ‘ಶ್ರೀ ಬಸವಲಿಂಗ ಮಹಾಸ್ವಾಮಿ’ ಎಂದು ನಾಮಕರಣ ಮಾಡಿ 1998ರಲ್ಲಿ ಪಟ್ಟಾಭಿಷಕ್ತರನ್ನಾಗಿಸಿದರು. ಇದು ಶ್ರೀಗಳ ದಲಿತ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಅಷ್ಟಕ್ಕೇ ತೃಪ್ತರಾಗದೆ 2001ರಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರಿನ ತಮ್ಮ ಶಾಖಾ ಮಠಕ್ಕೆ ಲಂಬಾಣಿ ಜನಾಂಗದ ವಟುವಿಗೆ ಸಿದ್ಧಲಿಂಗಸ್ವಾಮಿಗಳೆಂದು ನಾಮಕರಣ ಮಾಡಿ, ದೀಕ್ಷೆ ನೀಡಿ ಮಠದ ಜವಾಬ್ದಾರಿ ವಹಿಸಿದ್ದು ಶ್ರೀಗಳ ಬಸವತತ್ವ ಪ್ರೇಮಕ್ಕೆ ಸಾಕ್ಷಿಯಾಗಿದೆ. ದಲಿತ ವಟುಗಳಿಗೆ ಜಂಗಮದೀಕ್ಷೆ ನೀಡಿ ಅವರ ಪಾದಪೂಜೆ, ಪಾದೋದಕ ಸ್ವೀಕರಿಸುವಂತೆ ಮಾಡಿದ್ದು ಮರೆಯದ ಘಟನೆ. ಸ್ತ್ರೀಯರಿಗೂ ಜಂಗಮ ದೀಕ್ಷೆ ನೀಡಿದ್ದು ಗಮನಾರ್ಹ. ಅಂತೆಯೇ ದಲಿತರಿಗೆ ತಾಯಿಯಂತಿದ್ದು, ಅನೇಕ ದಲಿತ ಕುಟುಂಬಗಳನ್ನು ಬೆಳೆಸಿದ್ದು ಮರೆಯದ ಘಟನೆಗಳು.

ಪೂಜ್ಯರ ಬಸವತತ್ವ ಪ್ರೇಮ, ಜನಪರ ಕಾಳಜಿ, ಮಹಾಂತ ಜೋಳಿಗೆ ಮುಂತಾದವುಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಅವರಿಗೆ 2012ರಲ್ಲಿ ‘ಬಸವ ಪುರಸ್ಕಾರ’ ನೀಡಿ ₹ 10 ಲಕ್ಷ ಹಣ ನೀಡಿತು. ಅದಕ್ಕೆ ಇನ್ನಷ್ಟು ಹಣ ಸೇರಿಸಿ ಬಸವತತ್ವ ಪ್ರಚಾರ ಮಾಡುವ ಸಂಸ್ಥೆಗಳಿಗೆ, ಸಾಹಿತಿಗಳಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ದಾಸೋಹ ಮಾಡಿದ್ದು ವಿಶೇಷ. ಹಾಗೆ ಹಣ ಪಡೆದ ಪ್ರಮುಖರೆಂದರೆ ಡಾ. ಎಂ.ಎಂ. ಕಲಬುರ್ಗಿ, ಡಾ. ಪಾಟೀಲ ಪುಟ್ಟಪ್ಪ, ಡಾ, ಚೆನ್ನವೀರ ಕಣವಿ, ರಂಜಾನ್‌ದರ್ಗಾ, ಸಿದ್ದಣ್ಣ ಲಂಗೋಟಿ, ಡಾ, ಚಂದ್ರಶೇಖರ ಕಂಬಾರ, ಜಿ.ಎಚ್. ಹನ್ನೆರಡು ಮಠ, ಕೋ. ಚೆನ್ನಬಸಪ್ಪ ಮತ್ತಿತರರು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆವ ವಿವೇಕ ಅವರದು.

ಮೂಢನಂಬಿಕೆಗಳ ವಿರೋಧಿಗಳಾಗಿದ್ದ ಶ್ರೀಗಳು ಅವುಗಳನ್ನು ತೊಲಗಿಸಲು ಹಲವು ತೆರನಾದ ಪ್ರಯೋಗಗಳನ್ನು ಮಾಡಿದರು. ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮದುವೆ ಸಂದರ್ಭದಲ್ಲಿ ನೂತನ ದಂಪತಿಗಳ ತಲೆಯ ಮೇಲೆ ಅಕ್ಷತೆಯ ಬದಲು ಹೂ ಪತ್ರೆಗಳನ್ನು ಹಾಕಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದರು. ಅದನ್ನು ತುಂಬಾ ವ್ಯವಸ್ಥಿತವಾಗಿ ಮುಂದುವರಿಸಿದವರಲ್ಲಿ ಇಳಕಲ್ ಶ್ರೀಗಳೂ ಒಬ್ಬರು. ಅಕ್ಕಿ ಪ್ರಸಾದವಾಗುವಂತಹುದು. ಅಂಥ ಅಕ್ಕಿಯನ್ನು ಚೆಲ್ಲಿದರೆ ಪ್ರಸಾದವನ್ನೇ ಚೆಲ್ಲಿದಂತೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟು, ‘ಅಕ್ಕಿಯನ್ನು ಬಡವರಿಗೆ ನೀಡಿ ಅದರ ಬದಲು ಪುಷ್ಪವೃಷ್ಟಿ ಮಾಡಿ’ ಎಂದು ಅರಿವು ಮೂಡಿಸಿದರು. ಮದುವೆಗಳಲ್ಲಿ ವೇದಮಂತ್ರಗಳ ಬದಲಿಗೆ ವಚನಗಳನ್ನೇ ಮಂತ್ರಗಳಾಗಿ ಬಳಸುವ ಪದ್ಧತಿಯನ್ನು ರೂಢಿಯಲ್ಲಿ ತಂದರು. ಶ್ರೀಗಳ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಯನ್ನು ಪರಿಗಣಿಸಿ 2009ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಿತ್ತು. ಅವರ ವಿವಿಧ ಸೇವಾ ಕಾರ್ಯಗಳನ್ನು ಗುರುತಿಸಿ ಹಲವು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

ಶ್ರೀಗಳು ಮಾಡಿದ ಮತ್ತೊಂದು ಮಹತ್ವದ ಕಾರ್ಯವೆಂದರೆ ಜಂಗಮರಲ್ಲದವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು. ಜಂಗಮ ಜಾತಿಯವರೇ ಶ್ರೀಮಠದ ಗುರುಗಳಾಗಬೇಕೆಂದು ಹಲವು ಸಂಪ್ರದಾಯಸ್ಥರು, ಪಟ್ಟಭದ್ರ ಹಿತಾಸಕ್ತರು ಶ್ರೀಗಳ ಕಾರ್ಯವನ್ನು ಪ್ರತಿಭಟಿಸಿ ದೊಡ್ಡ ಹೋರಾಟವನ್ನೇ ಮಾಡಿದರು. ಪ್ರತಿಭಟನೆಯ ಸಂಕೇತವಾಗಿ ಚಪ್ಪಲಿ ಎಸೆದರು. ಸಮಾರಂಭದ ಚೇರುಗಳನ್ನು ಮುರಿದರು. ಕಲ್ಲು ತೂರಿದರು. ಏನೆಲ್ಲ ಬೆದರಿಕೆ ಒಡ್ಡಿದರು. ಅವುಗಳಿಗೆ ಸೊಪ್ಪು ಹಾಕದ ಪೂಜ್ಯರು, ‘ಬಸವಣ್ಣನವರ ತತ್ವ ಸಂದೇಶದಂತೆ ನಡೆಯುತ್ತಿದ್ದೇವೆ. ಇದು ಬಸವಣ್ಣನವರಿಗೆ ಒಪ್ಪಿಗೆ ಆಗದಿದ್ದರೆ ಅವರೇ ಈ ಕಾರ್ಯ ನಿಲ್ಲಿಸಲಿ’ ಎನ್ನುವ ಸಂಕಲ್ಪ ಮಾಡಿ ದೃಢ ಹೆಜ್ಜೆ ಇಟ್ಟರು.

ಎಲ್ಎಲ್‌ಬಿ ಮುಗಿಸಿ ಕರಿಯ ಕೋಟು ಧರಿಸಿದ್ದ ಶಿವನಾಗಪ್ಪನವರು ನ್ಯಾಯಾಲಯದಲ್ಲಿ ‘ನನ್ನಿಂದ ಸುಳ್ಳು ಹೇಳಲಾಗುವುದಿಲ್ಲ’ ಎಂದು ಆ ವೃತ್ತಿಯನ್ನೇ ಬಿಟ್ಟು ಚಿತ್ರದುರ್ಗದ ಮುರುಘಾಮಠದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದರು. ಸಿದ್ಧರಾಮ ಸ್ವಾಮೀಜಿ ಹೆಸರಿನಲ್ಲಿ ಮಠದ ವಿವಿಧ ಸೇವಾಕಾರ್ಯದಲ್ಲಿ ನಿರತರಾಗಿದ್ದರು. ಅಂಥವರನ್ನು ಗುರು ಮಹಾಂತಸ್ವಾಮಿ ಎಂದು ನಾಮಕರಣ ಮಾಡಿ, ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡರು ಮಹಾಂತ ಸ್ವಾಮೀಜಿ.

ಯೋಗ್ಯ ಗುರು ಸಿಕ್ಕರೆ ಶಿಷ್ಯನ ಬದುಕು ಬದಲಾಗುವುದು. ಅದೇ ರೀತಿ ಯೋಗ್ಯ ಶಿಷ್ಯ ಸಿಕ್ಕರೆ ಗುರುವಿಗೆ ಗೌರವ ಬರುವುದು ಎನ್ನುವಂತೆ ಗುರು ಮಹಾಂತಸ್ವಾಮೀಜಿ ವಿನಯ, ವಿವೇಕ, ಸರಳತೆ, ತತ್ವಪ್ರೇಮ, ಗುರು ಭಕ್ತಿ ಅನನ್ಯವಾದುದು. ಮಾತೃಸೇವಾ ಗುಣದಿಂದಾಗಿಯೇ ಅವರಿಗೆ ಇಷ್ಟು ವರ್ಷ ಬಾಳಲು ಸಾಧ್ಯವಾಯಿತು ಎನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ನಾವು ಕಂಡಂತೆ ಶ್ರೀಮಠಕ್ಕೆ ಯಾರೇ ಬಂದರೂ ಅವರನ್ನು ಅತ್ಯಂತ ಗೌರವದಿಂದ ಬರಮಾಡಿಕೊಂಡು ತಾವೇ ಪ್ರಸಾದಕ್ಕೆ ಎಡೆ ಮಾಡುತ್ತಿದ್ದರು. ಅವರ ತಾಯ್ತನದ ಪ್ರೇಮಾಮೃತವನ್ನು ನಾವು ಸಹ 2–3 ಬಾರಿ ಅವರ ಮಠದಲ್ಲಿ ಸವಿದಿದ್ದೇವೆ. ವೈಚಾರಿಕತೆ, ಧಾರ್ಮಿಕತೆ ದೂರ ದೂರ ಎನ್ನುವ ಕಾಲದಲ್ಲಿ ಅವೆರಡರ ಸಂಗಮದಂತಿದ್ದ, ಲಿಂಗಾಯತ ಧರ್ಮದ ಪ್ರತಿಪಾದಕರಾಗಿದ್ದ, ಬಸವ ಎನ್ನುವ ಶಬ್ದ ಕಿವಿಗೆ ಬಿದ್ದರೆ ಜೀವನೋತ್ಸಾಹ ಹೆಚ್ಚಿಸಿಕೊಳ್ಳುತ್ತಿದ್ದ, ಮಾತು ಮಾತಿಗೂ ‘ಶ್ರೀ ಗುರು ಬಸವಲಿಂಗಾಯ ನಮಃ’ ಎನ್ನುತ್ತಿದ್ದ ಕ್ರಿಯಾಶೀಲ ಜಂಗಮ ಜ್ಯೋತಿಯೊಂದು ಆರಿರುವುದು ಹಲವು ಆದರ್ಶಗಳು ಕಣ್ಮರೆಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT