ಗುರುವಾರ , ಫೆಬ್ರವರಿ 20, 2020
27 °C

ಗಿಫ್ಟ್‌ ಬಾಕ್ಸ್‌: ಮಾನವ ಕಳ್ಳಸಾಗಣೆಯ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿಂದೆ ‘ಪಲ್ಲಟ’ ಎಂಬ ಸಿನಿಮಾ ನಿರ್ದೇಶಿಸಿದ್ದ ಎಸ್.ಪಿ. ರಘು ಅವರು ಈಗ ಹೊಸದೊಂದು ಸಿನಿಮಾ ಸಿದ್ಧಪಡಿಸಿಕೊಂಡು ವೀಕ್ಷಕರ ಎದುರು ಬಂದಿದ್ದಾರೆ. ಅವರು ನಿರ್ದೇಶಿಸಿರುವ ‘ಗಿಫ್ಟ್‌ ಬಾಕ್ಸ್’ ಸಿನಿಮಾ ಶುಕ್ರವಾರ (ಫೆ. 14) ತೆರೆಗೆ ಬರುತ್ತಿದೆ.

ಇದು ಮಾನವ ಕಳ್ಳಸಾಗಣೆ ಹಾಗೂ ಲಾಕ್ಡ್‌–ಇನ್ ಸಿಂಡ್ರೋಂ ಬಗೆಗಿನ ಕಥೆಯನ್ನು ಹೊಂದಿರುವ ಸಿನಿಮಾ. ‘ಮಾನವ ಕಳ್ಳಸಾಗಣೆ ಬಗ್ಗೆ ಸಿನಿಮಾಗಳು ದೇಶದ ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಮಾನವ ಕಳ್ಳಸಾಗಣೆ ಅಂದಕೂಡಲೇ ಇದು ವೇಶ್ಯಾವಾಟಿಕೆಗೆ ಸಂಬಂಧಿಸಿದ್ದು ಎಂದು ಜನ ಭಾವಿಸುವುದಿದೆ. ಮಾನವ ಕಳ್ಳಸಾಗಣೆಯನ್ನು ತೋರಿಸದೆಯೇ, ಅದರ ಪರಿಣಾಮಗಳು ಏನಿರುತ್ತವೆ ಎಂಬುದರ ಬಗ್ಗೆ ಗಮನ ನೀಡಿ ಈ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ರಘು.

‘ಗಿಫ್ಟ್‌ ಬಾಕ್ಸ್‌’ನ ಕಥೆ ನಡೆಯುವುದು ಕರ್ನಾಟಕದಲ್ಲಿ. ರಘು ಅವರು ತಾವು ಕೇಳಿದ, ನೋಡಿದ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಥೆ ಹೊಸೆದಿದ್ದಾರಂತೆ. ಈ ಚಿತ್ರಕ್ಕೆ ಅವರು ಹಣ ಹೂಡಿಕೆ ಮಾಡಿದ್ದಾರೆ ಕೂಡ.

‘ನಾನು ಹಿಂದೆ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿನ ಕೆಲಸ ತೊರೆದ ನಂತರ ಮೈಸೂರಿನ ಒಡನಾಡಿ ಸೇವಾಸಂಸ್ಥೆಯ ಜೊತೆ ಕೆಲಸ ಮಾಡುತ್ತಿದ್ದೆ. ಅಲ್ಲಿನ ಮಕ್ಕಳಿಗೆ ನಾಟಕ, ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಸುತ್ತಿದ್ದೆ. ಮಾನವ ಕಳ್ಳಸಾಗಣೆಗೆ ಸಿಲುಕಿದ ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರುವ ಕೆಲಸವನ್ನು ಆ ಸಂಸ್ಥೆ ಮಾಡುತ್ತಿದೆ. ಅಲ್ಲಿನ ಮಕ್ಕಳ ಜೊತೆ ಒಡನಾಡುವಾಗ ಹಲವರ ಕಥೆಗಳನ್ನು ಕೇಳಿದೆ. ಅವನ್ನೆಲ್ಲ ಕೇಳಿದಾಗ ಬೇರೆ ದೃಷ್ಟಿಕೋನದಿಂದ ಆ ಕಥೆಗಳನ್ನು ಹೇಳಬೇಕು ಅನ್ನಿಸಿತು. ಒಡನಾಡಿಯ ಮಡಿಲಲ್ಲಿ ಇರುವ ನೊಂದವರ ಕಥೆ ಗಿಫ್ಟ್‌ ಬಾಕ್ಸ್‌ನಲ್ಲಿ ಇದೆ’ ಎಂದರು ರಘು.

ಈ ಚಿತ್ರದ ಒಂದೊಂದು ಪಾತ್ರವೂ ಒಂದೊಂದು ಕಥೆ ಹೇಳುತ್ತದೆ. ಆದರೆ ಹಸಿಹಸಿ ದೃಶ್ಯಗಳನ್ನು ಎಲ್ಲಿಯೂ ತೋರಿಸಿಲ್ಲ. ವೀಕ್ಷಕರು ಇಲ್ಲಿನ ಕಥೆಗಳ ಜೊತೆ ರಿಲೇಟ್ ಆಗಬಹುದು. ಇದರಲ್ಲಿ ಹಿಂಸೆಯನ್ನು ತೋರಿಸುವ ಅಥವಾ ವೀಕ್ಷಕರಲ್ಲಿ ಮುಜುಗರ ಹುಟ್ಟಿಸುವ ದೃಶ್ಯಗಳು ಇಲ್ಲ ಎಂಬ ಮಾತನ್ನು ಸೇರಿಸಿದರು.

‘ಈ ಚಿತ್ರವು ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಇರುವ ಎಲ್ಲ ಕಡೆ ಬಿಡುಗಡೆ ಆಗುತ್ತಿದೆ. ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ, ಅದು ಜನರಿಗೆ ತಲುಪಬೇಕು. ಮಾನವ ಕಳ್ಳಸಾಗಣೆಯನ್ನು ಭಿನ್ನ ದೃಷ್ಟಿಕೋನದಿಂದ ವಿವರಿಸಿದ್ದೇವೆ. ಕನ್ನಡದಲ್ಲಿ ಈ ಕೆಲಸ ಆಗಿರಲಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)