ಬುಧವಾರ, ನವೆಂಬರ್ 20, 2019
22 °C
ಮಲಯಾಳಂನಲ್ಲಿ ಹಿಟ್ ಹಾಡುಗಳ ಗೀತೆ ರಚನೆಕಾರ ವಿನಾಯಕ್ ಶಶಿ ಕುಮಾರ್

ವಯಸ್ಸು 25, ರಚಿಸಿದ್ದು 75 ಹಾಡು

Published:
Updated:
Prajavani

ಇತ್ತೀಚೆಗೆ ತೆರೆಕಂಡ ‘ಅಂಬಿಳಿ’ ಚಿತ್ರದಲ್ಲಿ ‘ಞಾನ್ ಜಾಕ್ಸನ್ ಅಲ್ಲಡಾ, ನ್ಯೂಟನ್ ಅಲ್ಲಡಾ, ಜೋಕರ್ ಅಲ್ಲಡಾ’ ಎಂದು ಶುರುವಾಗುವ ಹಾಡು ಹಿಟ್ ಆಗಿತ್ತು. ತಮಾಷೆಯಿಂದ ಕೂಡಿದ ಸಾಹಿತ್ಯ ಹಾಡಿನ ಪ್ಲಸ್ ಪಾಯಿಂಟ್. ಈ ಹಾಡು ರಚಿಸಿದ್ದು ವಿನಾಯಕ್ ಶಶಿಕುಮಾರ್, ವಯಸ್ಸು 25.

ಚೆನ್ನೈ ಲೊಯೊಲಾ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ವಿನಾಯಕ್ ಈಗ ಮಲಯಾಳ ಸಿನಿಮಾರಂಗದಲ್ಲಿ ಬಹು ಬೇಡಿಕೆಯ ಗೀತೆ ರಚನೆಕಾರರಾಗಿದ್ದಾರೆ.  2011ರಲ್ಲಿ ‘ಕುಟ್ಟೀಂ ಕೋಲುಂ’ ಎಂಬ ಸಿನಿಮಾದಲ್ಲಿ ‘ಕರಳಿಲ್ ಒಳುಗುಂ’ ಎಂಬ ಹಾಡು ರಚಿಸುವ ಮೂಲಕ ವಿನಾಯಕ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 2013ರಲ್ಲಿ ‘ನೀಲಾಕಾಂಶಂ ಪಚ್ಚಕಡಲ್ ಚುವನ್ನ ಭೂಮಿ’ ಸಿನಿಮಾಗಾಗಿ ಎರಡು ಹಾಡು ರಚಿಸಿದ್ದರು. ಇದಾದ ನಂತರ 10 ಸಿನಿಮಾಗಳಿಗೆ ಹಾಡು ರಚಿಸಿದ್ದರೂ ಬ್ರೇಕ್ ಸಿಕ್ಕಿದ್ದು 2016ರಲ್ಲಿ ತೆರೆಕಂಡ ‘ಗಪ್ಪಿ’ ಚಿತ್ರದಿಂದಾಗಿತ್ತು. ಈ ಚಿತ್ರದಲ್ಲಿನ ನಾಲ್ಕು ಹಾಡುಗಳಲ್ಲಿ ‘ತನಿಯೇ’ ಎಂಬ ಹಾಡು ಜನಪ್ರಿಯವಾಯಿತು. ಇದಾದ ನಂತರ ತೆರೆಕಂಡ ‘ವರತನ್’ ಸಿನಿಮಾದ ‘ಒಡುವಿಲೆ ತೀಯಾಯಿ’, ‘ಜೂನ್’ ಚಿತ್ರದ ‘ಮಿನ್ನಿ ಮಿನ್ನಿ’ ಹಾಡುಗಳು ಜನಪ್ರೀತಿ ಗಳಿಸಿದವು. ‘ಸಾಹೋ’ ಮಲಯಾಳ ಆವೃತ್ತಿಯಲ್ಲಿ ವಿನಾಯಕ್ ಮೂರು ಹಾಡುಗಳನ್ನು ರಚಿಸಿದ್ದಾರೆ.

ಮಲಯಾಳ ಸಿನಿಮಾ ರಂಗದಲ್ಲಿ ಗೀತರಚನೆಕಾರನಾಗಿ ಸುದ್ದಿಯಲ್ಲಿರುವ ವಿನಾಯಕ್, ಕಳೆದ ಎಂಟು ವರ್ಷಗಳಲ್ಲಿ 40 ಚಿತ್ರಗಳಿಗಾಗಿ 75 ಸಿನಿಮಾ ಹಾಡುಗಳನ್ನು ರಚಿಸಿದ್ದಾರೆ. ತನ್ನ ವೃತ್ತಿಜೀವನದ ಮೊದಲ ಸಿನಿಮಾ ಹಾಡು ರಚಿಸಿದಾಗ ಈತನ ವಯಸ್ಸು 18. ‘ಲೊಯೊಲಾ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗ ವಿಷ್ಣು ಶ್ಯಾಂ ಎಂಬ ಗೆಳೆಯ ಸಂಗೀತ ಸ್ವರ ಸಂಯೋಜನೆ ಮಾಡುತ್ತಿದ್ದ. ಅವನೊಂದಿಗೆ ಸೇರಿ ನಾನು ಎರಡು ಮೂರು ಹಾಡುಗಳನ್ನು ರಚಿಸಿದೆ. ನನ್ನ ಜತೆಗಿದ್ದ ಗೆಳೆಯರೆಲ್ಲ ಸಿನಿಮಾ ಇಷ್ಟ ಪಡುವವರಾಗಿದ್ದರು. ಚಿತ್ರಕತೆ ಬರೆಯಬೇಕು, ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಕನಸು ಇತ್ತು. ಆದರೆ ವಿಷ್ಣು ಶ್ಯಾಂ ಗೆಳೆತನದಿಂದಾಗಿ ನಾನು ಗೀತೆ ರಚನೆ ಮಾಡಬಹುದು ಎಂಬ ಆತ್ಮವಿಶ್ವಾಸ ಸಿಕ್ಕಿತು’ ಅಂತಾರೆ ವಿನಾಯಕ್.

ಅಂದಹಾಗೆ ಸಿನಿಮಾ ಗೀತರಚನೆಯ ಅವಕಾಶ ಈ ಯುವಕನ್ನು ಅರಸಿಕೊಂಡು ಬಂದಿಲ್ಲ. ‘ನಾನಾಗಿಯೇ ಅವಕಾಶವನ್ನು ಕೇಳಿ ಪಡೆದೆ. ಸಿನಿಮಾ ನಿರ್ದೇಶನ ಅಥವಾ ಚಿತ್ರಕತೆಗೆ ಅವಕಾಶ ಕೇಳುವವರು ಹಲವಾರು ಮಂದಿ ಇರುತ್ತಾರೆ. ಆದರೆ ಗೀತರಚನೆ ಮಾಡುತ್ತೇನೆ ಎಂದು ಮುಂದೆ ಬರುವವರು ವಿರಳ. ಹಾಗಾಗಿ ನನಗೆ ಅವಕಾಶ ಸಿಕ್ಕಿತು. ಅದನ್ನು ಸಮರ್ಥವಾಗಿ ಬಳಸಿಕೊಂಡೆ. ‘ನೀಲಾಕಾಶಂ ಪಚ್ಚಕಡಲ್ ಚುವನ್ನ ಭೂಮಿ’ ಸಿನಿಮಾದಲ್ಲಿ ನಾನು ರಚಿಸಿದ ‘ತಾಳ್ವಾರಂ ರಾಥಾರಂ ಉನ್ಮಾದಂ ತೂಗುಂ ನೇರಂ’ ಎಂಬುದು ಟ್ರಾವೆಲ್ ಸಾಂಗ್ ಆಗಿತ್ತು. ಈ ಹಾಡು ರಚನೆಯಲ್ಲಿ ತೊಡಗಿರುವಾಗಲೇ ಅದೇ ಸಿನಿಮಾದ ನಿರ್ಮಾಪಕರ ‘ನಾರ್ಥ್ 24 ಕಾಂತಂ’ ಸಿನಿಮಾದಲ್ಲಿ ಹಾಡು ರಚಿಸಿದೆ. ಇದಾದ ನಂತರ ಇದೇ ನಿರ್ಮಾಪಕರ 5 ಸಿನಿಮಾಗಳಿಗೆ ಹಾಡು ಬರೆದೆ. ಇದರ ಬೆನ್ನಲ್ಲೇ ‘ಇಯೋಬಿಂಡೆ ಪುಸ್ತಕಂ’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು’ ಎನ್ನುವುದು ಅವರ ಮಾತು.

ಕೆಲವೊಂದು ನಿರ್ದೇಶಕರು ಸಿನಿಮಾ ಎಡಿಟಿಂಗ್ ಮಾಡುವ ಹೊತ್ತಲ್ಲಿ ಹಾಡು ಬೇಕು ಎಂದು ಹೇಳುತ್ತಾರೆ. ವಿನಾಯಕ್ ಪಾಲಿಗೆ ಇದು ಚಾಲೆಂಜಿಂಗ್ ಕೆಲಸ. ನಿರ್ದೇಶಕರಿಗೆ ಅವರ ಮೇಲೆ ಭರವಸೆ ಇದೆ ಎಂಬುದನ್ನು ಇದು ತೋರಿಸುತ್ತದೆ. ತಕ್ಷಣವೇ ಅವರು ಹಾಡು ರಚಿಸುತ್ತಾರೆ.

‘ಸಿನಿಮಾದ ಸಂದರ್ಭಗಳು ವಿಭಿನ್ನವಾಗಿರುತ್ತವೆ. ಯುವ ಜನರು ಸದಾ ಗುನುಗುವಂತೆ ಮಾಡುವ ಹಾಡಿನ ಸಾಲುಗಳು ಅಲ್ಲಿರಬೇಕು. ಇತ್ತ ಸಾಹಿತ್ಯವೂ ಇರಬೇಕು. ಇದು ಒತ್ತಡದ ಕೆಲಸ ಆದರೂ ನಾನಿದನ್ನು ಇಷ್ಟಪಡುತ್ತೇನೆ. ಒಂದು ಬಾರಿ ನಾನು ಬರೆದ ಸಾಲುಗಳು ಇನ್ನೊಂದು ಹಾಡಿನಲ್ಲಿ ಬರದಂತೆ ಜಾಗ್ರತೆ ವಹಿಸುತ್ತೇನೆ. ನಾನು ಸದಾ ಹಾಡುಗಳನ್ನು ಕೇಳುತ್ತಿರುತ್ತೇನೆ. ಇತರ ಭಾಷೆಗಳ ಹಾಡುಗಳನ್ನು ಕೇಳುವುದು, ಹಳೇ ಸಿನಿಮಾಗಳನ್ನು ನೋಡುವುದು ನನಗಿಷ್ಟ. ಸಿಕ್ಕಾಪಟ್ಟೆ ಓದುತ್ತೇನೆ. ಕೆಲವೊಂದು ನಿರ್ದೇಶಕರು ಸಿನಿಮಾ ಸ್ಕ್ರಿಪ್ಟ್ ನನಗೆ ಓದಲು ಕೊಡುತ್ತಾರೆ. ಹೀಗೆ ಸ್ಕ್ರಿಪ್ಟ್ ಓದಿದಾಗ ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳು ಹೊಳೆಯುತ್ತವೆ. ಹಾಡಿನ ಮೊದಲ ಪದ ಅಥವಾ ಸಾಲು ಆಕರ್ಷಣೀಯವಾಗಿರಲು ನಾನು ಪ್ರಯತ್ನಿಸುತ್ತೇನೆ’ ಎನ್ನುವುದು ಅವರು ಹಾಡು ರಚಿಸುವುದರ ಹಿಂದಿನ ಗುಟ್ಟು.

ಇದೀಗ ತೆರೆ ಕಂಡ ಮತ್ತು  ತೆರೆಗೆ ಬರಲು ಸಿದ್ಧವಾಗಿರುವ ಹಲವಾರು ಸಿನಿಮಾಗಳ ಹಾಡುಗಳಲ್ಲಿ ವಿನಾಯಕ್ ಸಾಹಿತ್ಯವಿದೆ. ಮಲಯಾಳ ಸಿನಿಮಾ ರಂಗದಲ್ಲಿ ಗೀತೆ ರಚನೆ ಮಾಡುವವರು ಕವಿಗಳೂ ಆಗಿರುತ್ತದೆ. ಎಷ್ಟೋ ಗೀತರಚನೆಕಾರರು ಒಂದೆರಡು ಸಿನಿಮಾಗಳಿಗೆ ಗೀತರಚನೆ ಮಾಡಿ ಹೇಳ ಹೆಸರಿಲ್ಲದೆ ಮಾಯವಾಗುವ ಕಾಲದಲ್ಲಿ ಚಿಕ್ಕ ವಯಸ್ಸಿಗೆ ಗೀತರಚನೆಯನ್ನು ವೃತ್ತಿಯಾಗಿ ಆಯ್ದುಕೊಂಡವರು ವಿನಾಯಕ್.

ಪ್ರತಿಕ್ರಿಯಿಸಿ (+)