ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟ್ರೈಕರ್’ ಪವನ್ ಜೊತೆ ಎರಡು ಮಾತು

Last Updated 21 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಪವನ್ ತ್ರಿವಿಕ್ರಮ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಚಿತ್ರ ‘ಸ್ಟ್ರೈಕರ್’ ಶುಕ್ರವಾರ ತೆರೆಗೆ ಬರುತ್ತಿದೆ. ನಾಯಕನಿಗೆ ಇರುವ ಮನಃಶಾಸ್ತ್ರೀಯ ಸಮಸ್ಯೆಯೊಂದನ್ನು ಮೂಲವಾಗಿ ಇಟ್ಟುಕೊಂಡು ಹೆಣೆದಿರುವ ಕಥೆ ಇದು. ಕಥೆ ಹಾಗೂ ಸಿನಿಮಾ ಬಗ್ಗೆ ಪವನ್ ಅವರು ‘ಸಿನಿಮಾ ಪುರವಣಿ’ ಜೊತೆ ಆಡಿದ ಮಾತುಗಳ ಆಯ್ದ ಭಾಗ ಇಲ್ಲಿದೆ:

* ಚಿತ್ರದ ಒಂದು ದೃಶ್ಯದಲ್ಲಿ ನಾಯಕ ಚಿಕ್ಕವನಾಗಿದ್ದಾಗಿನ ವಿವರಣೆ ಬರುತ್ತದೆ. ಅದರಲ್ಲಿ ಆತನಿಗೆ ಚಡ್ಡಿಯಲ್ಲೇ ಮೂತ್ರ ಮಾಡಿಕೊಳ್ಳುವ ಸಮಸ್ಯೆ ಇರುವಂತೆ ತೋರಿಸಲಾಗಿದೆ. ಇದಕ್ಕೂ ಕಥೆಗೂ ಏನು ಸಂಬಂಧ?

ನಾಯಕನಿಗೆ ಒಂದು ಸಮಸ್ಯೆ ಇರುತ್ತದೆ. ಅದೇನು ಅಂದರೆ, ಆತನಿಗೆ ಕನಸು ಯಾವುದು ವಾಸ್ತವ ಯಾವುದು ಎಂಬ ವ್ಯತ್ಯಾಸ ಗೊತ್ತಾಗುವುದಿಲ್ಲ. ಅಂದರೆ, ಕನಸಿನಲ್ಲಿ ಮೂತ್ರ ಬಂದಂತೆ ಆಗಿದ್ದು ವಾಸ್ತವದಲ್ಲಿ ಎಂದು ಭ್ರಮಿಸಿ, ಮಲಗಿದ್ದಲ್ಲೇ ಮೂತ್ರ ಮಾಡಿಕೊಳ್ಳುತ್ತಾನೆ. ಇದು ಭಯದಿಂದ ಆಗುವುದಲ್ಲ.

ಈ ಚಿತ್ರದ ಕಥೆ ಇರುವುದು ದೌರ್ಬಲ್ಯಗಳ ಬಗ್ಗೆ. ಚಿತ್ರದ ಎಲ್ಲ ಪಾತ್ರಗಳಿಗೂ ಒಂದಲ್ಲ ಒಂದು ದೌರ್ಬಲ್ಯ ಇದೆ. ಕೆಲವು ದೌರ್ಬಲ್ಯಗಳು ಕೆಲವು ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತವೆ. ಆದರೆ, ಕೆಲವು ಸಂದರ್ಭಗಳಲ್ಲಿ ಅವು ತೊಂದರೆ ತಂದಿಡುತ್ತವೆ. ಅದೇ ಕಥೆಯ ಎಳೆ.

* ಈ ಕ್ರೈಂ ಥ್ರಿಲ್ಲರ್ ಕಥೆ ಹುಟ್ಟಿದ್ದು ಹೇಗೆ?

ನಾನು ಸಿನಿಮಾ ಮಾಡಬೇಕು ಎಂದು ತೀರ್ಮಾನಿಸಿದ ಹೊತ್ತಿನಲ್ಲಿ ರೊಮ್ಯಾಂಟಿಕ್ ಕಥೆಗಳು ಬಹಳಷ್ಟು ಬರುತ್ತಿದ್ದವು. ಆ ರೀತಿಯ ಕಥೆಯನ್ನು ನಾನು ಮಾಡುವುದು ಬೇಡ ಅನಿಸಿತು. ಆ್ಯಕ್ಷನ್ ಸಿನಿಮಾ ಮಾಡೋಣ ಅಂದರೆ ಹೊಸಬರನ್ನೇ ಹಾಕಿಕೊಂಡು ಆ ರೀತಿಯ ಸಿನಿಮಾ ಮಾಡಿದರೆ ಚೆನ್ನಾಗಿರುವುದಿಲ್ಲ ಅನಿಸಿತು. ಅಲ್ಲದೆ, ಆ್ಯಕ್ಷನ್ ಸಿನಿಮಾಕ್ಕೆ ಬಜೆಟ್ ಕೂಡ ಹೆಚ್ಚು ಬೇಕು. ತಾರಾಗಣ ಕೂಡ ದೊಡ್ಡದು ಬೇಕು. ನಾನು ಬಜೆಟ್ ಸಿನಿಮಾವನ್ನು, ಒಳ್ಳೆಯ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡೋಣ ಎಂದು ತೀರ್ಮಾನಿಸಿದೆ. ಹಾಗಾಗಿ ಕ್ರೈಂ ಥ್ರಿಲ್ಲರ್ ಕಥಾನಕ ಕಟ್ಟಿದೆ.

* ಇದು ಯಾವುದರಿಂದ ಪ್ರೇರಣೆ ಪಡೆದಿದ್ದು?

ಇದು ಸಂಪೂರ್ಣ ಕಾಲ್ಪನಿಕ ಕಥೆ. ಆದರೆ ಹೊಸ ಕಥೆಯೊಂದನ್ನು ಹೇಳಬೇಕು ಎಂಬ ಹಂಬಲ ಇತ್ತು. ಹಳೆಯದ್ದನ್ನೇ ಬೇರೆ ಬೇರೆ ರೀತಿ ತಿರುಗಿಸಿ ಹೇಳುವುದರಲ್ಲಿ ಆಸಕ್ತಿ ಇರಲಿಲ್ಲ. ಹೊಸ ಕಥೆಯ ಹುಡುಕಾಟದಲ್ಲಿ ಇದ್ದಾಗ ಹುಟ್ಟಿಕೊಂಡ ಕಥೆ ಇದು. ಇಲ್ಲಿ ಯಾವ ಪಾತ್ರಕ್ಕೂ ಯಾವುದೇ ವ್ಯಕ್ತಿಯ ನಿಜ ಜೀವನಕ್ಕೂ ಸಂಬಂಧ ಇಲ್ಲ.

* ಕ್ರೈಂ ಥ್ರಿಲ್ಲರ್ ಕಥೆ ಜನರಿಗೆ ಇಷ್ಟವಾಗುತ್ತದೆ ಎಂದು ಅನಿಸಿದ್ದು ಏಕೆ?

ಸಿನಿಮಾದಲ್ಲಿ ಇರುವ ಆರಂಭ ಹಾಗೂ ಮುಕ್ತಾಯ ಮಾತ್ರವೇ ಮುಖ್ಯವಲ್ಲ. ಅವೆರಡರ ನಡುವಿನ ಸಿನಿಮಾ ಯಾನ ಮುಖ್ಯ ಎಂಬುದು ನನ್ನ ಭಾವನೆ. ಈ ಯಾನ ಆಸಕ್ತಿಕರ ಆಗಿಸಲು ಥ್ರಿಲ್ಲಿಂಗ್ ಅಂಶಗಳು ಸಹಾಯ ಮಾಡುತ್ತವೆ. ಇಂತಹ ಕಥೆಗಳನ್ನು ಜನ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಈ ಸಿನಿಮಾ ಮಾತ್ರವೇ ಅಲ್ಲ, ಕಥೆಯ ಆರಂಭ ಹಾಗೂ ಅಂತ್ಯಕ್ಕಿಂತ ಅವುಗಳ ನಡುವಣ ಯಾನವೇ ಮುಖ್ಯ.

ಈ ಕ್ರೈಂ ಥ್ರಿಲ್ಲರ್ ಕಥೆ ಜನರಿಗೆ ಇಷ್ಟವಾಗುತ್ತದೆ ಎನ್ನುವುದಕ್ಕೆ ಸಿನಿಮಾ ಕಥೆಯೇ ನನಗೆ ಆಧಾರ.

* ಚಿತ್ರಕ್ಕೆ ಪಾತ್ರಗಳ ಆಯ್ಕೆ ಹೇಗೆ ಮಾಡಿದಿರಿ?

ಕಥೆ ಬರೆಯುವ ಹೊತ್ತಿನಲ್ಲೇ ಪಾತ್ರಗಳನ್ನು ಯಾರು ನಿಭಾಯಿಸಿದರೆ ಸೂಕ್ತ ಎಂಬ ಆಲೋಚನೆ ಇತ್ತು. ಪ್ರವೀಣ್ ತೇಜ್ ಸೇರಿದಂತೆ ಎಲ್ಲರನ್ನೂ ಆ ಆಲೋಚನೆಯ ಅನುಸಾರ ಆಯ್ಕೆ ಮಾಡಿಕೊಂಡೆ. ಯಾರನ್ನೂ ಆಡಿಷನ್ ಮೂಲಕ ಆಯ್ಕೆ ಮಾಡಲಿಲ್ಲ. ಹಾಗೆಯೇ ಇವರಲ್ಲಿ ಯಾರೂ ನನಗೆ ಮೊದಲೇ ಪರಿಚಿತರಲ್ಲ. ಎಲ್ಲರನ್ನೂ ತೆರೆಯ ಮೇಲೆ ನೋಡಿದ್ದೆ. ಅದನ್ನೇ ಆಧಾರವಾಗಿ ಇರಿಸಿಕೊಂಡು ಅವರನ್ನು ನನ್ನ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡೆ.

* ಚಿತ್ರದ ವೈಶಿಷ್ಟ್ಯ ಏನು?

ಹೀರೊಗೆ ಇರುವ ಮನಃಶಾಸ್ತ್ರೀಯ ಸಮಸ್ಯೆಯೇ ಈ ಚಿತ್ರದ ಪ್ರಮುಖ ಅಂಶ. ಕನಸು ಮತ್ತು ವಾಸ್ತವದ ನಡುವಿನ ವ್ಯತ್ಯಾಸ ಗೊತ್ತಾಗದಿರುವುದೇ ಹೈಲೈಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT