ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿ ಪಡೆದು ತೆರೆಕಾಣದ ಸಿನಿಮಾಗಳು 130!

Last Updated 23 ಅಕ್ಟೋಬರ್ 2019, 6:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯವು 2013 ರಿಂದ 2016ರ ಅವಧಿಯಲ್ಲಿ ಒಟ್ಟು 349 ಸಿನಿಮಾಗಳಿಗೆ ಸಹಾಯಧನ ನೀಡಲು ₹ 34.9 ಕೋಟಿ ವ್ಯಯಿಸಿದೆ. ಆದರೆ, ಸಹಾಯಧನ ಪಡೆದ ಈ ಸಿನಿಮಾಗಳ ಪೈಕಿ 130 ತೆರೆಕಂಡಿಲ್ಲ.

ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾದ ಮಹಾಲೇಖಪಾಲರ ವರದಿಯಲ್ಲಿ ಈ ಅಂಕಿ–ಅಂಶಗಳು ಇವೆ.

2011ರ ಕನ್ನಡ ಚಲನಚಿತ್ರ ನೀತಿ ಅನುಸಾರ, ‘ಉತ್ತಮ ಸಂದೇಶ ಸಾರುವ’ ಸಿನಿಮಾಗಳಿಗೆ ಸರ್ಕಾರದಿಂದ ತಲಾ ₹ 10 ಲಕ್ಷ ಸಹಾಯಧನ ದೊರೆಯುತ್ತದೆ. ಆದರೆ, ಸಹಾಯಧನ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕಾರಣ, ಸಹಾಯಧನದ ಮೊತ್ತದಲ್ಲಿ ಒಂದು ಪಾಲು ಮಧ್ಯವರ್ತಿಗಳಿಗೆ ಹೋಗುತ್ತಿದೆ ಎಂದು ಉದ್ಯಮದ ಮೂಲಗಳು ಹೇಳುತ್ತವೆ. ಅಷ್ಟೇ ಅಲ್ಲ, ಕೆಲವರು ಚಿತ್ರವನ್ನು ತೆರೆಗೆ ತರುವ ಉದ್ದೇಶವೇ ಇಲ್ಲದೆ, ಸಹಾಯಧನ ಪಡೆದುಕೊಳ್ಳಲಿಕ್ಕೆಂದೇ ಸಿನಿಮಾ ಮಾಡಿದ್ದಾರೆ ಎಂದೂ ಮೂಲಗಳು ಹೇಳುತ್ತವೆ.

‘ಸಹಾಯಧನ ಆಯ್ಕೆ ಸಮಿತಿಯಿಂದ ಅನುಮೋದನೆ ಕೊಡಿಸುತ್ತೇವೆ. ಇದಕ್ಕೆ ಪ್ರತಿಯಾಗಿ, ಸಹಾಯಧನದ ರೂಪದಲ್ಲಿ ಸಿಗುವ ₹ 10 ಲಕ್ಷದಲ್ಲಿ ₹ 3 ಲಕ್ಷವನ್ನು ನಮಗೆ ಕೊಡಬೇಕು ಎಂದು ಹೇಳುವ ಮಧ್ಯವರ್ತಿಗಳು ಇದ್ದಾರೆ. ಸಿನಿಮಾ ನಿರ್ಮಾಪಕರಿಗೆ ಹಣಕಾಸಿನ ಒತ್ತಡ ಇದ್ದರೆ ಈ ಬೇಡಿಕೆಗೆ ಒಪ್ಪಿಕೊಳ್ಳುತ್ತಾರೆ’ ಎಂದು ಸಿನಿಮಾ ಕ್ಷೇತ್ರದ ಹಿರಿಯರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.

ಸಹಾಯಧನ ಪಡೆದ ಸಿನಿಮಾಗಳೆಲ್ಲವೂ ಬಿಡುಗಡೆ ಆಗದ ಪರಿಣಾಮವಾಗಿ, ‘ಒಳ್ಳೆಯ ಸಂದೇಶ ಪ್ರಚಾರ ಮಾಡುವ ಮೂಲ ಉದ್ದೇಶ ಸಾಧಿಸಲಾಗಿಲ್ಲ’ ಎಂದು ಮಹಾಲೇಖಪಾಲರ ವರದಿ ಹೇಳಿದೆ. ‘ಚಲನಚಿತ್ರಗಳ ಬಿಡುಗಡೆಗೆ ಮೇಲ್ವಿಚಾರಣಾ ವ್ಯವಸ್ಥೆ ಇಲ್ಲದಿರುವುದರಿಂದ, ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳ ಪ್ರದರ್ಶನದ ಮೂಲ ಉದ್ದೇಶವನ್ನು ಸಾಧಿಸಿದಂತೆ ಆಗಿಲ್ಲ. ಹಾಗಾಗಿ, ಸಹಾಯಧನ ಪಡೆದ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಸರ್ಕಾರವು ಮೇಲ್ವಿಚಾರಣಾ ವ್ಯವಸ್ಥೆ ರೂಪಿಸುವುದನ್ನು ಪರಿಗಣಿಸಬೇಕು’ ಎಂದು ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.

‘ಚಲನಚಿತ್ರಗಳು ತೆರೆಗೆ ಬಾರದಿದ್ದರೆ ಸರ್ಕಾರವು ಸಹಾಯಧನ ನೀಡುವುದರ ಹಿಂದಿನ ಉದ್ದೇಶ ಈಡೇರುವುದಿಲ್ಲ. ಜನಸಾಮಾನ್ಯರಿಗೆ ಅಂತಹ ಸಿನಿಮಾಗಳನ್ನು ವೀಕ್ಷಿಸಲು ಆಗದಿದ್ದರೆ, ಅವುಗಳ ಮೇಲೆ ಹಣ ವ್ಯಯ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ವರ್ಷ ಸಹಾಯಧನ ಪಡೆದ ಸಿನಿಮಾಗಳ ಸಂಖ್ಯೆ ಸಬ್ಸಿಡಿ ಮೊತ್ತ ತೆರೆಕಂಡ ಸಿನಿಮಾಗಳು
2016 101 10.10 ಕೋಟಿ 46
2015 80 8 ಕೋಟಿ 52
2014 89 8.9 ಕೋಟಿ 58
2013 79 7.9 ಕೋಟಿ 63


ಒಟ್ಟು 349 34.90 ಕೋಟಿ 219

(‘ಉತ್ತಮ ಸಂದೇಶ ಸಾರುವ ಉದ್ದೇಶದ’ ಸಿನಿಮಾಗಳು ಇವು. ಆಧಾರ: ಮಹಾಲೇಖಪಾಲರ ವರದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT