ಮಂಗಳವಾರ, ನವೆಂಬರ್ 19, 2019
29 °C

ಪ್ರೇಮ್‌ ಜೊತೆ ಮತ್ತೆ ಸಿನಿಮಾ ಮಾಡ್ತೀನಿ ಎಂದ ನಟ ಸುದೀಪ್‌

Published:
Updated:
Prajavani

‘ನಿರ್ದೇಶಕ ಪ್ರೇಮ್‌ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ನಾನು ಯಾವಾಗಲೂ ಸಿದ್ಧನಿದ್ದೇನೆ’ ಎಂದು ನಟ ಸುದೀಪ್‌ ಹೇಳಿದ್ದು, ಈ ಇಬ್ಬರ ಕಾಂಬಿನೇಷನ್‌ನಡಿ ಮತ್ತೊಂದು ಚಿತ್ರ ನಿರ್ಮಾಣವಾಗುವುದು ಖಚಿತಗೊಂಡಿದೆ.

ಸೆ. 12ರಂದು ಸುದೀ‍ಪ್‌ ನಟನೆಯ ‘‍ಪೈಲ್ವಾನ್‌’ ಚಿತ್ರ ತೆರೆಕಾಣುತ್ತಿದೆ. ಆ ಬಳಿಕ ‘ಕೋಟಿಗೊಬ್ಬ 3’ ಬರಲಿದೆ. ನಂತರ ಜಾಕ್‌ ಮಂಜು ನಿರ್ಮಾಣದ ಸಿನಿಮಾವೊಂದರಲ್ಲಿ ಕಿಚ್ಚ ನಟಿಸಲಿದ್ದಾರೆ. ಅಲ್ಲದೇ, ‘ರಂಗಿತರಂಗ’ ಖ್ಯಾತಿಯ ಅನೂಪ್‌ ಭಂಡಾರಿ ಕೂಡ ಸುದೀ‍ಪ್‌ ಅವರ ಚಿತ್ರ ನಿರ್ದೇಶಿಸಲಿದ್ದಾರೆ. ಈ ನಡುವೆಯೇ ಪ್ರೇಮ್‌ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದಾಗಿ ಕಿಚ್ಚ ಹೇಳಿರುವುದು ಅವರ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಮತ್ತೆ ಪ್ರೇಮ್‌ ಮಲ್ಟಿಸ್ಟಾರ್‌ ಸಿನಿಮಾ ನಿರ್ದೇಶಿಸಲಿದ್ದಾರೆಯೇ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಹೊರಬಿದ್ದಿಲ್ಲ.

ಪ್ರೇಮ್‌ ನಿರ್ದೇಶಿಸಿದ್ದ ‘ದಿ ವಿಲನ್‌’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಮತ್ತು ಸುದೀಪ್‌ ನಟಿಸಿದ್ದರು. ಆ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಪ್ರೇಮ್‌ ಅವರು ಸುದೀಪ್‌ಗಾಗಿ ಮತ್ತೊಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದು ಅಷ್ಟೇ ವೇಗದಲ್ಲಿ ತಣ್ಣಗಾಗಿತ್ತು.  

ಮಾಧ್ಯಮದವರೊಂದಿಗೆ ಮಾತನಾಡಿದ ಸುದೀಪ್‌, ‘ಪ್ರೇಮ್‌ ನನ್ನ ಸಹೋದರ ಇದ್ದಂತೆ. ಆತ ಒಳ್ಳೆಯ ವ್ಯಕ್ತಿ. ಅಂತಹ ವ್ಯಕ್ತಿಗಳೊಂದಿಗೆ ಕೆಲಸ ಮಾಡುವುದು ನನಗೆ ಖುಷಿ ನೀಡುತ್ತದೆ. ಆತ ಪ್ರೀತಿಯಿಂದ ಸಿನಿಮಾ ಮಾಡುತ್ತಾನೆ. ಎಲ್ಲರೂ ಅಧ್ಭುತವಾದ ಸಿನಿಮಾ ಮಾಡಲು ಆಗುವುದಿಲ್ಲ. ಸೋಲು ಸಹಜವಲ್ಲವೇ’ ಎಂದಿದ್ದಾರೆ ಕಿಚ್ಚ.

‘ಒಂದು ಸಿನಿಮಾ ಗೆಲ್ಲಲಿಲ್ಲ ಎಂದಾಕ್ಷಣ ನಿರ್ದೇಶಕನನ್ನು ದೂಷಿಸುವುದು ಸರಿಯಲ್ಲ. ಇದರಿಂದ ಆತ ಖಿನ್ನತೆಗೆ ಸಿಲುಕುತ್ತಾನೆ. ಕನ್ನಡ ಚಿತ್ರರಂಗಕ್ಕೆ ಪ್ರೇಮ್‌ ಕೊಡುಗೆ ನೀಡಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)