ಬೆಂಗಳೂರಿನ ತಮ್ಮ ನಿವಾಸದ ಮುಂಭಾಗ ಹಾಗೂ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸುದೀಪ್ ಜನ್ಮದಿನವನ್ನು ಆಚರಿಸಿಕೊಂಡರು. ‘ಅಭಿಮಾನಿಗಳು ನಮ್ಮ ಪ್ರತಿಬಿಂಬ. ಹೋದಲೆಲ್ಲ ತಲೆಎತ್ತಿಕೊಂಡು ಓಡಾಡಲು ಅಭಿಮಾನಿಗಳೇ ಕಾರಣ. ಯಾವತ್ತೂ ನಾವು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸ ಇವರು ಮಾಡಿಲ್ಲ, ಮಾಡೋದೂ ಇಲ್ಲ. ವ್ಯಕ್ತಿತ್ವದಲ್ಲಿ ನಾವು ದೊಡ್ಡವರಾಗಬೇಕಾದರೆ ಕೇವಲ ಸಿನಿಮಾ ಮಾತ್ರ ಸಾಲುವುದಿಲ್ಲ. ನಮ್ಮ ಅಕ್ಕಪಕ್ಕ ಇರುವ ಸ್ನೇಹಿತರು, ಕುಟುಂಬ, ಮಾಧ್ಯಮ ಮಿತ್ರರು ಚೆನ್ನಾಗಿದ್ದಾರೆ. ಹೀಗಾಗಿ ನಾನೂ ಚೆನ್ನಾಗಿದ್ದೇನೆ. ನನ್ನ ಅಭಿಮಾನಿಗಳಲ್ಲಿ ಒಳ್ಳೆತನ ಇದೆ. ಅದಕ್ಕೇ ನಾವು ಇಷ್ಟು ಒಳ್ಳೆಯವರು. ಸದ್ಯದಲ್ಲೇ ಮ್ಯಾಕ್ಸ್ ಸಿನಿಮಾವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ’ ಎಂದರು ಸುದೀಪ್.