ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಾಣಿ ಹೇಳಿದ ಚಿತ್ರಕಥೆ

Last Updated 11 ಜುಲೈ 2019, 19:30 IST
ಅಕ್ಷರ ಗಾತ್ರ

‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಸ್ಪಂದನಾ ಪಾತ್ರ ನೆನಪಿದೆಯಲ್ಲ? ಅದೇ, ಸುಧಾರಾಣಿ ಅವರು ನಿಭಾಯಿಸಿದ ಮಧ್ಯಮ ವರ್ಗದ ಮಹಿಳೆಯ ಪಾತ್ರ. ತೀರಾ ಕಡಿಮೆ ಮಾತಿನ ಮೂಲಕವೇ, ಮನಸ್ಸಿಗೆ ಹಿತವಾದ ಕಚಗುಳಿ ಇಟ್ಟ ಸುಧಾರಾಣಿ, ಈಗ ‘ಚಿತ್ರಕಥಾ’ ಸಿನಿಮಾದಲ್ಲಿ ಮನಃಶಾಸ್ತ್ರಜ್ಞೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದ್ದು, ಸುಧಾರಾಣಿ ಅವರು ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ಹೊಸ ಸಿನಿಮಾ ತೆರೆಗೆ ಬರುತ್ತಿರುವ ನೆಪದಲ್ಲಿ ತಾವು ನಡೆದುಬಂದ ಹಾದಿಯನ್ನು ಮತ್ತೊಮ್ಮೆ ನೋಡಿಕೊಂಡರು.

‘ಚಿತ್ರಕಥಾ ಸಿನಿಮಾದಲ್ಲಿ ವ್ಯಕ್ತಿಯೊಬ್ಬನ ಜೀವನದ ಎಲ್ಲ ಘಟನೆಗಳಿಗೆ ನಾನು ಸಾಕ್ಷಿಯಾಗಿ ನಿಲ್ಲುತ್ತೇನೆ. ಈ ಸಿನಿಮಾ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸುತ್ತದೆ. ಇದರಲ್ಲಿ ಯಾರೂ ಕೂಡ ಹೆಚ್ಚಿನ ಸಿದ್ಧತೆ ಮಾಡಿಕೊಂಡವರಲ್ಲ. ಕೆಲವು ಪಾತ್ರಗಳು ಚೆನ್ನಾಗಿ ಮೂಡಿಬರಲು ಮುಗ್ಧತೆ ಕೂಡ ಬೇಕು. ಆ ಮುಗ್ಧ ಭಾವ ನನಗೆ ಈ ಸಿನಿಮಾ ತಂಡದಲ್ಲಿ ಕಂಡಿದೆ’ ಎಂದರು.

ಸುಧಾರಾಣಿ ಅವರಿಗೆ ಈಗ 45 ವರ್ಷ ವಯಸ್ಸು. ಹೆಣ್ಣಿನ ವಯಸ್ಸು ಹೇಳಬಾರದು, ಕೇಳಬಾರದು ಎಂಬ ಮಾತಿದೆ. ಆದರೆ, ಗೂಗಲ್‌ ಮಹಾಶಯನಿಗೆ ಹೆಣ್ಣಿನ ವಯಸ್ಸಿನ ಬಗ್ಗೆ ಒಂಚೂರೂ ಕನಿಕರ ಇಲ್ಲ. ಆತ ಎಲ್ಲವನ್ನೂ ಹೇಳಿಬಿಡುತ್ತಾನೆ. ‘ಇಷ್ಟು ವಯಸ್ಸಿನಲ್ಲೂ ಇಷ್ಟೊಂದು ಸಕ್ರಿಯರಾಗಿ ಇರುವ ಅವಕಾಶ ಕನ್ನಡದ ಎಲ್ಲ ನಟಿಯರಿಗೂ ಸಿಕ್ಕಿಲ್ಲ. ನೀವು ಮಾತ್ರ ಹೇಗೆ ಸಕ್ರಿಯರಾಗಿ ಉಳಿದುಕೊಂಡಿರಿ’ ಎಂದು ಕೇಳಿದಾಗ ಸುದೀರ್ಘ ಉತ್ತರ ನೀಡಿದರು.

‘ನಾನು ಸಿನಿಮಾ ರಂಗಕ್ಕೆ ಬಹಳ ಚಿಕ್ಕ ವಯಸ್ಸಿನಲ್ಲೇ ಬಂದೆ. ಡೈನೊಸಾರ್‌ ಕಾಲದಿಂದಲೂ ಇದ್ದೇನೆ ಎಂದು ನನ್ನನ್ನು ಉದ್ದೇಶಿಸಿ ಕಿಚಾಯಿಸಿ ಹೇಳುವವರಿದ್ದಾರೆ. ಆದರೆ ನಾನು ವಯಸ್ಸಿನ ಮಾನದಂಡ ಅಥವಾ ಕೆಲಸದ ಮಾನದಂಡ ಆಧರಿಸಿ ಹೇಳುವುದಾದರೆ, ನಿವೃತ್ತಿಯ ಅಂಚಿಗಂತೂ ಬಂದಿಲ್ಲ. ಒಳ್ಳೆಯ ಪಾತ್ರಗಳು ಸಿಕ್ಕರೆ ಇನ್ನಷ್ಟು ಚೆನ್ನಾಗಿ ಅಭಿನಯಿಸುವ ಕಸುವು ಉಳಿಸಿಕೊಂಡಿರುವೆ’ ಎಂದರು.

ಸುಧಾರಾಣಿ ಸಿನಿಮಾ ಲೋಕ ಪ್ರವೇಶಿಸಿದ ಕಾಲದಿಂದಲೂ ಚೂಸಿಯಾಗಿ ಉಳಿದವರು. ‘ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಉದ್ದೇಶದಿಂದ ಪಾತ್ರಗಳನ್ನು ಒಪ್ಪಿಕೊಳ್ಳುವ ಕೆಲಸ ಯಾವತ್ತೂ ಮಾಡಿಲ್ಲ. ಇಂದಿಗೂ ನನಗೆ ಪ್ರತಿದಿನ ಅವಕಾಶಗಳು ಬರುತ್ತಿರುತ್ತವೆ. ಆದರೆ, ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ನಾನು ಚೂಸಿ ಆಗಿರುವುದು ಮಾತ್ರವೇ ಅಲ್ಲ, ಲಕ್ಕಿ ಕೂಡ ಹೌದು’ ಎನ್ನುತ್ತಾರೆ ಅವರು.

ಕೆಲವರು ತಮಗೆ ವಯಸ್ಸಾಗಿದ್ದನ್ನು ಅರಿಯದೆ, ಹರೆಯದಲ್ಲಿ ಸಿಕ್ಕಂತಹ ಪಾತ್ರಗಳೇ ಪುನಃ ಸಿಗಲಿ ಎಂದು ಬಯಸುವುದು ಇದೆ. ಆದರೆ, ಸುಧಾರಾಣಿ ಹಾಗಿಲ್ಲ. ತಮ್ಮ ವಯಸ್ಸು ನಿಂತ ನೀರಲ್ಲ ಎಂಬುದನ್ನು ಅರಿತು, ಪಾತ್ರಗಳ ಆಯ್ಕೆಯಲ್ಲಿ ಕೂಡ ಬದಲಾವಣೆ ತಂದುಕೊಂಡವರು.

‘ನಾನು ಸಿನಿಮಾ ರಂಗ ಪ್ರವೇಶಿಸಿದ ಸಂದರ್ಭದಲ್ಲಿ ನನ್ನಮ್ಮ ಪಾತ್ರಗಳ ಆಯ್ಕೆಯಲ್ಲಿ ಹೆಚ್ಚಿನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಸಿನಿಮಾ ಎಂಬುದು ಚಕ್ರ; ಮೇಲೆ ಹೋಗುವುದು ಕೆಳಗೆ ಬರುವುದು ಇರುತ್ತದೆ. ಸೋಲು–ಗೆಲುವುಗಳಿಗೆ ಹೊಂದಿಕೊಳ್ಳವುದನ್ನು ಕಲಿಯಬೇಕು ಎಂದು ಅವರು ಹೇಳಿದ್ದರು. ಏನೇ ಬಂದರೂ ಸ್ವೀಕರಿಸುವುದನ್ನು ಕಲಿತುಕೋ. ಸೋಲು ಮತ್ತು ಗೆಲುವುಗಳನ್ನು ಘನತೆಯಿಂದ ಸ್ವೀಕರಿಸುವುದನ್ನು ಕಲಿ ಎಂದು ಹೇಳುತ್ತಿದ್ದರು’ ಎಂದು ತನ್ನ ಸಿನಿಮಾ ವ್ಯಕ್ತಿತ್ವ ರೂಪಿಸಿದ ತಮ್ಮಮ್ಮನ ಮಾತುಗಳನ್ನು ನೆನಪಿಸಿಕೊಂಡರು.

‘ನಾನು ಮತ್ತೆ ಆನಂದ್ ಸಿನಿಮಾದಲ್ಲಿನ ಪಾತ್ರ ನಿಭಾಯಿಸುತ್ತೇನೆ ಎಂದರೆ ಚೆನ್ನಾಗಿರುವುದಿಲ್ಲ. ನಮ್ಮ ವಯಸ್ಸಿಗೆ ತಕ್ಕುದಾದ ಪಾತ್ರಗಳನ್ನು ನಿಭಾಯಿಸುವುದನ್ನು ಕಲಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT