ಬಯಲಾಯ್ತು ಬೆತ್ತಲಾದವಳ ಕಥೆ

7

ಬಯಲಾಯ್ತು ಬೆತ್ತಲಾದವಳ ಕಥೆ

Published:
Updated:
Deccan Herald

ಸನ್ನಿ ಲಿಯೋನೆ ಒಂದಷ್ಟು ತಿರಸ್ಕಾರದ ಮಾತು, ವಿರೋಧದ ಕಟುನುಡಿಗಳು.. ಇವೆರಡನ್ನೂ ಮೀರುವ ಮುಗ್ಧನಗೆ. ಪಂಜಾಬ್‌ ಮೂಲದ ಕೆನಡಾ ವಾಸಿ, ಕರಣಜಿತ್‌ ಕೌರ್‌ ಸನ್ನಿಲಿಯೋನೆ ಆಗಿದ್ದು ಕೇವಲ ಕಥೆಯಲ್ಲ, ಅದೊಂದು ಸಂಘರ್ಷಗಾಥೆ.

ಸಂಘರ್ಷ ತನ್ನೊಂದಿಗೆ, ತನ್ನ ಮೌಲ್ಯಗಳೊಂದಿಗೆ. ತನ್ನತನದೊಂದಿಗೆ. ಸೋದರತ್ತೆಯ ಅಪಮಾನಗಳನ್ನು, ಅನುಮಾನಗಳನ್ನು ಸಹಿಸುತ್ತ ಬೆಳೆದ ಹುಡುಗಿ, ಗುರುದ್ವಾರದಲ್ಲಿ ಗುರುವಾಣಿ ಹಾಡುವ ಮುಗುದೆ.

ತನ್ನ ಕಾಲುಗಳ ಮೇಲೆ ಬೆಳೆದ ರೋಮ ನಿವಾರಣೆಯನ್ನೂ ಅರಿಯದವಳು. ಮನೆಯಲ್ಲಿದ್ದ ನೀಲಿ ಚಿತ್ರ ನೋಡಿ, ತಿರಸ್ಕಾರ ಹಾಗೂ ಅವಮಾನದಿಂದ ಕುಗ್ಗಿಹೋದವಳು. ಈ ಕರಣಜಿತ್‌, ಕೆನಡಾದಲ್ಲಿ ಕ್ಯಾರೆಲ್‌ ಆದಳು.

ಕ್ಯಾರೆಲ್‌ನ ತಲ್ಲಣಗಳೇ ಬೇರೆ. ಸಹಪಾಠಿಗಳ ನಡುವೆ ಚಂದವಾಗಿ ಕಾಣಿಸಿಕೊಳ್ಳಬೇಕು. ಬೋಲ್ಡ್‌ ಎನಿಸಿಕೊಳ್ಳಬೇಕು. ತನ್ನ ಸೋದರತ್ತೆಯ ಮಗಳಿಗಿಂತಲೂ ಮಿಗಿಲಾಗಿ ಕಾಣಬೇಕು. ಇಂಥವೇ ಹಲವು ತವಕಗಳು. ಅದಕ್ಕೆ ತದ್ವಿರುದ್ಧವಾಗಿ ಹೆಜ್ಜೆಹೆಜ್ಜೆಗೂ ಅವಮಾನ. ತನ್ನತನವನ್ನು ಸಾಬೀತು ಪಡಿಸಲು ತನ್ನ ಸೌಂದರ್ಯವನ್ನೇ ಅಸ್ತ್ರವಾಗಿಸಿಕೊಂಡಳು.

ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಲಾಂಜ್ರೆಗಳಿಗೆ ರೂಪದರ್ಶಿಯಾಗುತ್ತಾಳೆ. ಆ ಚಿತ್ರಗಳಿಂದಲೇ ಮಾದಕಲೋಕದ ಪ್ರವೇಶವಾಗುತ್ತದೆ. ಇಂಥ ಚಿತ್ರಗಳನ್ನು ಅಪ್ಪ ಅಮ್ಮ ನೋಡುವುದಿಲ್ಲ, ಹಣವಂತೂ ಸಿಗುತ್ತದೆ ಎಂಬ ಧೈರ್ಯದಿಂದಲೇ ರೂಪದರ್ಶಿಯಾಗುತ್ತಾಳೆ ಕ್ಯಾರೆಲ್‌. ಆದರೆ ಅವೇ ಚಿತ್ರಗಳು ‘ಪೆಂಟ್‌ಹೌಸ್‌’ ಮ್ಯಾಗ್ಜಿನ್‌ಗೆ ಕವರ್‌ಪೇಜ್‌ ಸುಂದರಿಯಾಗುತ್ತಾಳೆ. ಮಧ್ಯಪುಟದಲ್ಲಿ ತೆರೆದೆದೆಯ ಸುಂದರಿಗೆ ಕಪ್ಪು ಬಣ್ಣದ್ದೊಂದು ಹೊದಿಕೆ, ಮೈಸಿರಿಯನ್ನು ಮಾದಕವಾಗಿ ಕಾಣುವಂತೆ ಮಾಡುತ್ತಾರೆ. ಪ್ರತಿ ತಿಂಗಳು ಒಬ್ಬೊಬ್ಬ ಸುಂದರಿ ಈ ಸಂಚಿಕೆಯನ್ನು ಸಿಂಗರಿಸುತ್ತಾರೆ. ನಂತರ ವರ್ಷದ ಸುಂದರಿಯ ಪಟ್ಟ ಒಬ್ಬರಿಗೆ ನೂರು ಸಾವಿರ ಡಾಲರ್‌ ನಗದು ಬಹುಮಾನ ಹಾಗೂ ಪೆಂಟ್‌ಹೌಸ್‌ ಪೆಟ್‌ ಪ್ರಶಸ್ತಿ ಇರುತ್ತದೆ. ಈ ಪ್ರಶಸ್ತಿಯೂ ಅವಳನ್ನು ಅರಸಿಕೊಂಡು ಬಂದಾಗ, ಅಲ್ಲಿಯವರೆಗೂ ಮನೆಯಲ್ಲಿ ಮರೆ ಮಾಚಿದ್ದ ತನ್ನ ಉದ್ಯೋಗದ ಬಗೆಗೆ ಬಾಯ್ಬಿಡುತ್ತಾಳೆ ಕ್ಯಾರೆಲ್‌.

ಪೆಂಟ್‌ಹೌಸ್‌ಗೆ ರೂಪದರ್ಶಿಯಾದಾಗಲೇ ಅಲ್ಲಿಯ ಸಂಪಾದಕ ಒಂದು ಚಂದದ ಹೆಸರನ್ನು ಇಟ್ಟುಕೊಳ್ಳಲು ಸೂಚಿಸುತ್ತಾರೆ. ಅದೇ ಸಮಯಕ್ಕೆ ತಮ್ಮ ಸನ್ನಿಯ ಕರೆ ಎಡೆಬಿಡದಂತೆ ಬರುತ್ತಿರುತ್ತದೆ. ಅದನ್ನೇ ತನ್ನ ಹೆಸರಾಗಿಸಿಕೊಳ್ಳುತ್ತಾಳೆ ಕರಣಜಿತ್‌.

ಸಲಿಂಗ ಕಾಮದ ಬಗೆಗೆ ನಿರ್ಭಯದ ನುಡಿ, ತನ್ನ ಆಯ್ಕೆ, ತನ್ನ ಅನಿವಾರ್ಯವನ್ನು ತನ್ನ ಜೀವನದುದ್ದಕ್ಕೂ ಸಮರ್ಥಿಸಿಕೊಳ್ಳುತ್ತ ಬರುವ ಸನ್ನಿ ಲಿಯೋನೆ, ಭಾರತದ ಬಿಗ್‌ಬಾಸ್‌ 5 ಅವತರಣಿಕೆಯಲ್ಲಿ ಪಾಲ್ಗೊಳ್ಳುತ್ತಾಳೆ. ಅಲ್ಲಿಂದಲೇ ಆಕೆಯ ವೃತ್ತಿ ಹಾಗೂ ಚಾರಿತ್ರ್ಯದ ಬಗೆಗೆ ಇಲ್ಲಸಲ್ಲದ ಮಾತುಗಳು ಆರಂಭವಾಗುತ್ತವೆ.

‘ಹಿರಿಯರಿಗಾಗಿ, ಹಿರಿಯರ ಮನರಂಜನೆಗಾಗಿಯೇ, ಲೈಂಗಿಕ ಚಿತ್ರಗಳ ಹೆಸರಿನಲ್ಲಿಯೇ ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ನಟಿಸುತ್ತೇನೆ. ನನ್ನ ಗಂಡನೊಟ್ಟಿಗೆ ನಟಿಸುತ್ತೇನೆ. ಈ ಬಗ್ಗೆ ನನ್ನ ಗಂಡನಿಗಾಗಲೀ, ನನ್ನ ಕುಟುಂಬದವರಿಗಾಗಲೀ, ಸ್ನೇಹಿತರಿಗಾಗಲೀ ಯಾವುದೇ ತೊಂದರೆಗಳಿಲ್ಲ. ಉಳಿದವರಿಗೆ ನಾನು ಉತ್ತರಿಸಬೇಕಾಗಿಲ್ಲ’ ಎನ್ನುವುದು ಅವಳ ದಿಟ್ಟ ನಿಲುವು.

‘ಇಷ್ಟಕ್ಕೂ ಅವಕಾಶಗಳಿಗಾಗಿ, ಉನ್ನತಿಗಾಗಿ ಅಥವಾ ಇನ್ನಾವುದೋ ಕಾರಣವನ್ನಿರಿಸಿಕೊಂಡು ನಾನು ಈ ರಂಗಕ್ಕೆ ಬರಲಿಲ್ಲ. ಶೃಂಗಾರ ರೂಪದರ್ಶಿಯಾಗಿದ್ದವಳು, ಶೃಂಗಾರದ ನಟಿಯಾಗುವುದರಲ್ಲಿ ಒಂದು ಬಗೆಯ ಬೆಳವಣಿಗೆ ಇದೆ. ನಾನಂತೂ ಈ ಜೀವನವನ್ನು ಹಾಗೆಯೇ ಸ್ವೀಕರಿಸಿದ್ದೇನೆ. ಉಳಿದವರು ನನ್ನ ನಿಲುವನ್ನು, ಟೀಕಿಸಲಿ, ಸ್ವೀಕರಿಸಲಿ, ತಿರಸ್ಕರಿಸಲಿ, ಚರ್ಚಿಸಲಿ.. ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಜೀವನವನ್ನು ನಾನು ಬದುಕಿದ್ದೇನೆ’ ಎಂದಿದ್ದಾಳೆ.

‘ಅಮ್ಮನ ಒಳಗುದಿ, ನನ್ನಪ್ಪನ ಗೊಂದಲ, ನನ್ನ ಸಹೋದರನ ಪ್ರೀತಿ ಇವೆಲ್ಲವನ್ನೂ ನೋಡಿಕೊಳ್ಳುತ್ತಲೇ ನನ್ನ ವೃತ್ತಿಯಲ್ಲಿ ಮುಂದೆ ಬಂದವಳು ನಾನು. ನನ್ನ ಕುಟುಂಬದಿಂದ ಏನನ್ನೂ ಮರೆಮಾಚಿಲ್ಲ. ನನ್ನಷ್ಟಕ್ಕೆ ನಾನು ನಿಷ್ಠೆಯಿಂದಿರುವೆ. ಇನ್ನು ಉಳಿದವರ ಬಗ್ಗೆ ಚಿಂತಿಸುವುದಿಲ್ಲ. ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು, ಗೌರವಿಸಬೇಕು ಎಂದು ವಾದಿಸುವವರೆಲ್ಲ, ನನ್ನ ನಟನೆಯನ್ನು, ನನ್ನ ವೃತ್ತಿಯನ್ನು ದ್ವೇಷಿಸುವುದಾದರೆ ಅಂಥ ಚಿತ್ರಗಳನ್ನು ನೋಡುವುದು ಬಿಟ್ಟುಬಿಡಲಿ. ನನ್ನನ್ನು ವಿರೋಧಿಸುವುದರಲ್ಲಿ ಏನರ್ಥವಿದೆ?’ ಎಂದು ಪ್ರಶ್ನಿಸುವ ಸನ್ನಿಗೆ ಈಗಲೂ ಉತ್ತರ ಸಿಕ್ಕಿಲ್ಲವಂತೆ!

ಕಳೆದ ವರ್ಷ ಹೊಸ ವರ್ಷಕ್ಕೆ ಬೆಂಗಳೂರಿಗೆ ಭೇಟಿ ನೀಡಲಿದ್ದ ಸನ್ನಿಗೆ ಭದ್ರತೆಯ ಕೊರತೆಯಾಗುವುದು ಎಂಬ ಕಾರಣ ನೀಡಿ ಕಾರ್ಯಕ್ರಮವನ್ನು ನಿಷೇಧಿಸಲಾಗಿತ್ತು. ಇದೀಗ ಮತ್ತೆ ವಿರೋಧ, ಪ್ರತಿಭಟನೆಗಳು ಹೆಚ್ಚಾಗಿವೆ. ಅವರಿಗೆಲ್ಲ ಸನ್ನಿಯದ್ದೊಂದು ಪ್ರಶ್ನೆಯಿದೆ.. ನೀವು ಯಾರನ್ನು ವಿರೋಧಿಸುತ್ತಿರುವಿರಿ? ಕರಣ್‌ಜಿತ್‌ ಕೋರ್‌, ಕ್ಯಾರೆಲ್‌ ಅಥವಾ ಸನ್ನಿ ಲಿಯೋನೆ?

ಅನ್‌ಟೋಲ್ಡ್‌ ಸ್ಟೋರಿ ಆಫ್‌ ಸನ್ನಿಲಿಯೋನೆ

ಜಿ5 ZEE5 ವೆಬ್‌ ಸಿರೀಸ್‌ನಲ್ಲಿ ‘ಕರಣ್‌ಜಿತ್‌ ಕೌರ್ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಸನ್ನಿಲಿಯೋನೆ’ ಹೆಸರಿನ ಧಾರಾವಾಹಿಯೊಂದು ಎರಡು ಆವೃತಿಗಳಲ್ಲಿ ಪ್ರಸಾರವಾಗಿದೆ.

ಮೊದಲನೆಯದರಲ್ಲಿ 10 ಕಂತುಗಳು ಅವರ ವೃತ್ತಿ ಜೀವನದ ಸಂಘರ್ಷಗಳ ಬಗೆಗೆ, ಹಾಗೂ ನೀಲಿ ತಾರೆ ಉದಯಿಸಿದ ಬಗೆಗೆ, ಆ ಹಿಂದಿನ ಅವಳ ಕೌಟುಂಬಿಕ ಹಿನ್ನೆಲೆ, ಅಪ್ಪ ಅಮ್ಮನ ತೊಳಲಾಟ, ಅಣ್ಣನ ಸಹಕಾರ ಇಡೀ ಕುಟುಂಬದ ಕಥೆಯನ್ನು ಕಟ್ಟಿಕೊಡುತ್ತದೆ. ಈ ವೆಬ್‌ಸಿರೀಸ್‌ ನೋಡಿದವರಿಗೆ ಸನ್ನಿ ಬೆತ್ತಲಾದಂತನಿಸುವುದಿಲ್ಲ.. ಕೆಲವರ ಆಷಾಢಭೂತಿತನ ಬಯಲಾಗುತ್ತದೆ.

ಬರಹ ಇಷ್ಟವಾಯಿತೆ?

 • 25

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !