‘ಸ್ವಾರ್ಥರತ್ನ’ದಲ್ಲಿ ಹೊಸ ರಸ!

7

‘ಸ್ವಾರ್ಥರತ್ನ’ದಲ್ಲಿ ಹೊಸ ರಸ!

Published:
Updated:
Deccan Herald

ಶೃಂಗಾರ, ಹಾಸ್ಯ, ಬೀಭತ್ಸ, ರೌದ್ರ, ಕಾರುಣ್ಯ, ವೀರ, ಭಯಾನಕ, ಅದ್ಭುತ ಎನ್ನುವ ನವರಸಗಳ ಬಗ್ಗೆ ಭರತ ಮುನಿ ‘ನಾಟ್ಯಶಾಸ್ತ್ರ’ ಗ್ರಂಥದಲ್ಲಿ ಹೇಳಿದ್ದಾನೆ. ಈಗ, ‘ಸ್ವಾರ್ಥರತ್ನ’ ಚಿತ್ರದ ನಿರ್ದೇಶಕ ಅಶ್ವಿನ್ ಕೊಡಂಗೆ ಅವರು ಹತ್ತನೆಯ ರಸವೊಂದನ್ನು ಸಿನಿಮಾ ವೀಕ್ಷಕರಿಗೆ ತೋರಿಸಲಿದ್ದಾರೆ! ಈ ಹೊಸ ರಸಕ್ಕೆ ಅವರು ‘ಸ್ವಾರ್ಥರಸ’ ಎಂಬ ಹೆಸರು ಇಟ್ಟಿದ್ದಾರೆ.

‘ಸ್ವಾರ್ಥರತ್ನ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ನಾಯಕ ನಟ ಆದರ್ಶ್, ನಾಯಕಿಯರಾದ ಇಶಿತಾ ವರ್ಷಾ ಮತ್ತು ಸ್ನೇಹಾ ಸಿಂಗ್ ಸೇರಿದಂತೆ ಚಿತ್ರತಂಡದ ಎಲ್ಲರೂ ಅಲ್ಲಿದ್ದರು. ಜೊತೆಗೆ, ಸಾಹಿತಿ ಜಯಂತ ಕಾಯ್ಕಿಣಿ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಲು ನಿಂತವರು ಆದರ್ಶ್. ‘ಸಿನಿಮಾ ವೀಕ್ಷಿಸಿ ಜನ ನಗಬೇಕು ಎಂಬುದು ಮುಖ್ಯ ಉದ್ದೇಶ. ಆ ಕೆಲಸವನ್ನು ತಂಡ ಚೆನ್ನಾಗಿ ಮಾಡಿದೆ. ಹಾಸ್ಯದ ಜೊತೆಯಲ್ಲಿ ಲವ್ ಕೂಡ ಬೆರೆತಿದೆ’ ಎಂದರು. ಆದರ್ಶ್ ಅಭಿನಯದ ‘ಸನ್ಮಾನ ಸುಖ’ ಎನ್ನುವ ನಾಟಕ ವೀಕ್ಷಿಸಿದ ಅಶ್ವಿನ್, ಅದರಲ್ಲಿ ಆದರ್ಶ್ ತೋರಿದ ಅಭಿನಯ ಗಮನಿಸಿ, ಅವರಿಗೆ ಸೂಕ್ತವಾಗುವ ಅಂಶಗಳನ್ನು ಚಿತ್ರಕಥೆಯಲ್ಲಿ ಅಳವಡಿಸಿದ್ದಾರಂತೆ.

‘ನಮ್ಮ ಚಿತ್ರದಲ್ಲಿ ನವರಸಗಳನ್ನು ಮಾತ್ರವಲ್ಲದೆ, ಹೊಸ ರಸವೊಂದನ್ನು ತೋರಿಸಿದ್ದೇವೆ. ಹೊಸ ರಸವನ್ನು ಅಭಿನಯಿಸಿ ತೋರಿಸುವುದು ನನಗೂ ಕಷ್ಟವಾಗಿತ್ತು. ಹೊಸ ರಸದ ಹೆಸರು ಸ್ವಾರ್ಥರಸ’ ಎಂದರು ಆದರ್ಶ್.

‘ಎಲ್ಲಾ ಸರಿ, ಆದರೆ ಹೊಸದೊಂದು ರಸವನ್ನೇ ಸೃಷ್ಟಿಸಲು ಮುಂದಾಗಿದ್ದು ಏಕೆ’ ಎಂದು ಅಶ್ವಿನ್ ಅವರನ್ನು ಪ್ರಶ್ನಿಸಿದಾಗ, ‘ನಾವು ವಿಭಿನ್ನವಾಗಿ ಕಾಣಬೇಕು ಎಂಬ ಕಾರಣಕ್ಕೆ ಇದನ್ನು ಮಾಡಿದೆ’ ಎಂದು ನಕ್ಕರು. ‘ಎಲ್ಲರಲ್ಲೂ ಸ್ವಾರ್ಥ ಇರುತ್ತದೆ. ಆದರೆ ಅದು ವಿಪರೀತಕ್ಕೆ ಹೋದರೆ ಏನಾಗಬಹುದು? ಈ ವಿಚಾರ ನಮ್ಮ ಸಿನಿಮಾದಲ್ಲಿ ಇದೆ. ನಮ್ಮ ಸಿನಿಮಾ ಅನುಭವ ಹಾಗೂ ಯುವ ಚೈತನ್ಯದ ಮಿಶ್ರಣ. ಕುಟುಂಬದ ಎಲ್ಲರೂ ಸೇರಿ ಖುಷಿಯಿಂದ ನೋಡಬಹುದಾದ ಸಿನಿಮಾ ಇದು’ ಎಂದೂ ಅಶ್ವಿನ್ ಹೇಳಿಕೊಂಡರು.

ಈ ಚಿತ್ರದ ಚಿತ್ರೀಕರಣ ಸಕಲೇಶಪುರ, ಮೈಸೂರು, ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ನಡೆದಿದೆ. ಅರವತ್ತರ ದಶಕದ ಶೈಲಿಯ ಒಂಡು ಹಾಡು ಚಿತ್ರದಲ್ಲಿ ಇರುವುದು ಪ್ಲಸ್‌ ಪಾಯಿಂಟ್‌. ಇಶಿತಾ ವರ್ಷಾ ಅವರದ್ದು ಇದರಲ್ಲಿ ನಿಸ್ವಾರ್ಥಿ ಯುವತಿಯ ಪಾತ್ರ. ಸ್ನೇಹಾ ಸಿಂಗ್ ಅವರಿಗೆ ಇದು ಮೊದಲ ಸಿನಿಮಾ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !