ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯ ಹಾಯಿದೋಣಿಯಲ್ಲಿ ದಯಾನಂದ್‌ ಪಯಣ

Last Updated 8 ಏಪ್ರಿಲ್ 2019, 11:07 IST
ಅಕ್ಷರ ಗಾತ್ರ

2015ರಲ್ಲಿ ಬಿಡುಗಡೆಯಾಗಿದ್ದ ‘ಬೆಂಕಿಪಟ್ಣ’ ಸಿನಿಮಾ ನೆನಪಿಟ್ಟುಕೊಂಡವರು ಕಡಿಮೆ. ಅದುವರೆಗೆ ಕಥೆಗಾರ, ಲೇಖಕ, ಪತ್ರಕರ್ತನಾಗಿ ಗುರ್ತಿಸಿಕೊಂಡಿದ್ದ ಟಿ.ಕೆ. ದಯಾನಂದ್‌ ಅವರಿಗೆ ನಿರ್ದೇಶಕನ ಕ್ಯಾಪ್‌ ತೊಡಿಸಿದ ಸಿನಿಮಾ ಅದು. ಅನುಶ್ರೀ ಮತ್ತು ಪ್ರತಾಪ್‌ ನಾರಾಯಣ್‌ ಜತೆಗೆ ಅರುಣ್‌ ಸಾಗರ್‌ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ‘ಬೆಂಕಿಪಟ್ಣ’ ಗಲ್ಲಾಪೆಟ್ಟಿಗೆಯಲ್ಲೇನೂ ಕಿಡಿ ಹೊತ್ತಿಸಲಿಲ್ಲ. ಆದರೆ ಚಿತ್ರದ ಭೂಮಿಕೆ, ಚಿತ್ರವಿಚಿತ್ರ ಪಾತ್ರಗಳು ಕೆಲವೇ ಜನರ ಮನಸಲ್ಲಾದರೂ ಉಳಿದುಕೊಂಡಿದ್ದು ನಿಜ.

‘ಬೆಂಕಿಪಟ್ಣ’ದಲ್ಲಿ ಸೋಲಿನಿಂದ ಕೈಸುಟ್ಟುಕೊಂಡ ದಯಾನಂದ್‌ ಮತ್ತೆ ನಿರ್ದೇಶನದ ಸಾಹಸಕ್ಕೆ ಇಳಿದಿರಲಿಲ್ಲ. ಆದರೆ ಅವರ ಸಿನಿಮಾ ಮಾಧ್ಯಮದ ಕುರಿತ ಅವರ ವ್ಯಾಮೋಹವೇನೂ ಕಮ್ಮಿಯಾಗಿರಲಿಲ್ಲ. ಮೂಲತಃ ಕಥೆಗಾರರಾಗಿರುವ ದಯಾನಂದ್‌ ಅವರ ಬತ್ತಳಿಕೆಯಲ್ಲಿ ಸಾಕಷ್ಟು ಕಥಾಸ್ತ್ರಗಳು ಇದ್ದವು. ಅದು ಮತ್ತೆ ಹೊರಗೆ ಬಂದಿದ್ದು ‘ಬೆಲ್‌ ಬಾಟಂ’ ಸಿನಿಮಾದ ಮೂಲಕ. ಈ ಸಲ ತಾವು ನಿರ್ದೇಶಕನ ಕುರ್ಚಿಯಲ್ಲಿ ಕುಳಿತುಕೊಳ್ಳದೆ ಜಯತೀರ್ಥ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ಹೊರಿಸಿದರು. ಕಥೆಗಾರ ಪಾತ್ರವನ್ನಷ್ಟೇ ವಹಿಸಿಕೊಂಡರು. ಹಾಗಿದ್ದೂ ‘ಬೆಲ್‌ ಬಾಟಂ’ನ ಆರಂಭದಿಂದ ಬಿಡುಗಡೆಯ ನಂತರದವರೆಗೂ ಅವರ ‘ಛಾಪು’ ಇದ್ದೇ ಇತ್ತು.

ಜನರ ಉತ್ಸಾಹದ ಪ್ರತಿಸ್ಪಂದನದೊಂದಿಗೆ ಆರಂಭಗೊಂಡ ಡಿಟೆಕ್ಟಿವ್‌ ದಿವಾಕರನ ಓಟ ಈಗ ಐವತ್ತು ದಿನಗಳ ದಡ ತಲುಪುವುದರಲ್ಲಿದೆ. ಅತ್ತ ಹಿಂದಿ ಮತ್ತು ತೆಲುಗು ಭಾಷೆಗಳಿಗೂ ಈ ಚಿತ್ರ ರೀಮೇಕ್‌ ಆಗುತ್ತಿದೆ. 75 ಲಕ್ಷ ರೂಪಾಯಿಗಳಿಗೆ ರೀಮೇಕ್‌ ಹಕ್ಕು ಮಾರಾಟವಾಗಿದೆ. ಈ ಯಶಸ್ಸಿನಲ್ಲಿ, ಪತ್ತೆದಾರಿ ಅಡುಗೆಗೆ ಕಾಮಿಡಿ ಫ್ಲೆವರ್‌ ಅನ್ನು ಇಟ್ಟು ಕಥೆ ಕಟ್ಟಿದ ದಯಾನಂದ ಪಾಲು ದೊಡ್ಡದಿದೆ.

ಅತ್ತ ತಾವು ಸೃಷ್ಟಿಸಿದ ದಿವಾಕರ ಕನ್ನಡದ ಗಡಿ ದಾಟಿ ಬೇರೆ ಭಾಷೆಗಳಲ್ಲಿಯೂ ಪತ್ತೆದಾರಿ ನಡೆಸುತ್ತಿದ್ದರೆ ಇತ್ತ ದಯಾನಂದ್‌ ಹೊಸದೊಂದು ಕಥೆಯನ್ನು ಬತ್ತಳಿಕೆಯಿಂದ ತೆಗೆದು ಸ್ನೇಹಿತ ಮಂಸೋರೆಗೆ ನಿರ್ದೇಶನದ ನೊಗ ಕೊಟ್ಟು ಚಿತ್ರೀಕರಣ ಸ್ಥಳದ ಹುಡುಕಾಟದಲ್ಲಿ ಅಲೆದಾಡುತ್ತಿದ್ದಾರೆ.

‘ಇದು ಕಮರ್ಷಿಯಲ್‌ ಸಿನಿಮಾ. ನಿಜಘಟನೆಯೊಂದನ್ನು ಆಧರಿಸಿದ ಕಚ್ಚಾ ಪ್ರೇಮಕಥೆಯನ್ನು ಹೇಳಹೊರಟಿದ್ದೇವೆ. ಬೆಂಗಳೂರಿನಲ್ಲಿ ಈ ಚಿತ್ರ ಚಿತ್ರೀಕರಣವಾಗುವುದೇ ಇಲ್ಲ. ಕರಾವಳಿ ಮತ್ತು ಮಲೆನಾಡು ಕೂಡುವ ಥರದ ಜಾಗ ಬೇಕಿತ್ತು. ದಟ್ಟ ಕಾಡಿನ ಮಧ್ಯದ ಊರುಗಳನ್ನು ಚಿತ್ರೀಕರಣಕ್ಕಾಗಿ ಹುಡುಕಿದ್ದೇವೆ’ ಎಂದು ಹೊಸ ಸಿನಿಮಾದ ಬಗ್ಗೆ ದಯಾನಂದ್‌ ವಿವರಣೆ ನೀಡುತ್ತಾರೆ.

ಸಾಮಾನ್ಯವಾಗಿ ಸಿನಿಮಾದಲ್ಲಿ ಕಾಣುವ ಸಿದ್ಧಮಾದರಿಯ ಪ್ರೇಮಕಥೆಗಳನ್ನು ಮೀರುವ ಹಂಬಲವೂ ಅವರಿಗಿದೆ. ‘ನಾವು ಸಿನಿಮಾಗಳಲ್ಲಿ ವಿಜೃಂಬಿತ, ನಾಟಕೀಯ ಪ್ರೇಮಕಥೆಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಅದು ವಾಸ್ತವದಲ್ಲಿ ಹಾಗಿರುವುದಿಲ್ಲ ಎಂದು ನಮಗೆಲ್ಲರಿಗೂ ಗೊತ್ತಿರುತ್ತದೆ. ಹಾಗಾಗಿ ವಾಸ್ತವದ ನೆಲೆಗಟ್ಟನ್ನು ಅರ್ಥ ಮಾಡಿಕೊಂಡು ಅದರ ಮೇಲೆಯೇ ಸಿನಿಮಾ ರೂಪುಗೊಳ್ಳಬೇಕು ಎಂದು ನಿರ್ಧರಿಸಿದೆವು. ಇದೇ ಉದ್ದೇಶದಿಂದ ಸಣ್ಣ ಸಣ್ಣ ಊರಿನಿಂದ ಬಂದ ಸುಮಾರು 48 ಪ್ರೇಮಿಗಳನ್ನು ಮಾತನಾಡಿಸಿದ್ದೇವೆ. ನಾನು ಮತ್ತು ನಿರ್ದೇಶಕ ಮಂಸೋರೆ ಇಬ್ಬರೂ ಈಗಿನ ತಲೆಮಾರಿಗಿಂತ ಒಂದು ಹೆಜ್ಜೆ ಮುಂದಿದ್ದೇವೆ. ಹಾಗಾಗಿ ಅವರ ಮನಸ್ಥಿತಿಗೆ ಮರಳುವ ಪ್ರಯತ್ನವಾಗಿ ಹಲವು ಜೋಡಿಗಳನ್ನು ಮಾತನಾಡಿಸಿ, ಅವರ ಸಂವೇದನೆಗಳನ್ನು ಅರ್ಥಮಾಡಿಕೊಂಡು ಸಿನಿಮಾ ರೂಪಿಸಿದ್ದೇವೆ. ಇದು ಪ್ರೇಮವನ್ನು ಹೊಸ ಬಗೆಯಲ್ಲಿ ನೋಡುವ ಪ್ರಯತ್ನ. ಜತೆಗೊಂದು ಸಾಮಾಜಿಕ ಸಂದೇಶವೂ ಇದ್ದೇ ಇರುತ್ತದೆ’ ಎಂದು ಪ್ರೇಮದ ಹೊಸ ಪರಿಯನ್ನು ತೆರೆಯ ಮೇಲೆ ತರುವ ತಮ್ಮ ಪ್ರಯತ್ನದ ಸಿದ್ಧತೆಗಳ ಕುರಿತು ಅವರು ಮಾತನಾಡುತ್ತಾರೆ.

ಕರಾವಳಿಯ ಆಸುಪಾಸಿನ ಪ್ರದೇಶದಲ್ಲಿಯೇ ಈ ಸಿನಿಮಾವನ್ನು ಚಿತ್ರೀಕರಿಸುವ ಯೋಜನೆ ಅವರದ್ದು. ಇದಕ್ಕಾಗಿ ಜೋಯಿಡಾ, ದಾಂಡೇಲಿ ಮತ್ತು ಅಂಕೋಲ ಸುತ್ತಮುತ್ತಲಿನ ಸ್ಥಳಗಳನ್ನು ಆಯ್ದುಕೊಂಡಿದ್ದಾರೆ.

ಸದ್ಯಕ್ಕೆ ಕಥೆಯನ್ನು ಬರೆದು ಮುಗಿಸಿ ದೃಶ್ಯವಿಭಾಗೀಕರಣದ ಹಂತದಲ್ಲಿ ದಯಾನಂದ್‌ ಮತ್ತು ಮಂಸೋರೆ ಇಬ್ಬರೂ ಮಗ್ನರಾಗಿದ್ದಾರೆ.

ನಿರ್ದೇಶಕನಾಗುವ ವ್ಯಾಮೋಹವನ್ನು ಹಿನ್ನೆಲೆಗೆ ಸರಿಸಿ ಕಥೆಯ ಹಾಯಿದೋಣಿಯಲ್ಲಿ ಪಯಣಿಸುವ ಟಿ.ಕೆ.ದಯಾನಂದ್ ಅವರ ನಿರ್ಧಾರಕ್ಕೆ ಆರಂಭಿಕವಾಗಿಯಂತೂ ಯಶಸ್ಸಿನ ಗಾಳಿ ಸಾಥ್‌ ನೀಡಿದೆ. ಕಾಮಿಡಿ ಜಾನರ್‌ನಿಂದ ಪ್ರೇಮಕಥೆಯತ್ತ ಹೊರಳಿರುವ ಅವರಿಗೆ ಎರಡನೇ ಪ್ರಯತ್ನದಲ್ಲಿಯೂ ಯಶಸ್ಸು ಸಿಗುವ ವಿಶ್ವಾಸ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT