4
ಇಂದು ಸಂಜೆ 5 ಗಂಟೆಗೆ ಸಂಭ್ರಮಾಚರಣೆ ಶುರು

‘ಟಗರು’ 125ರ ಸಂಭ್ರಮಕ್ಕೆ ಜಯಂತ್ ಪದ್ಯಮೊಂಬತ್ತಿ

Published:
Updated:

ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಸಿನಿಮಾದ 125ನೇ ದಿನ ಸಂಭ್ರಮಾಚರಣೆ ಇಂದು (ಜೂನ್ 23) ಬೆಂಗಳೂರಿನ ಅರಮನೆ ಮೈದಾನದ ‘ವೈಟ್ ಪೆಟಲ್ಸ್‌’ನಲ್ಲಿ ಆಯೋಜಿಸಲಾಗಿದೆ. 

‘ಟಗರು’ ಚಿತ್ರದಲ್ಲಿ ನಿರೂಪಣೆಯ ವಿಧಾನದಲ್ಲಿ ಸೂರಿ ಹೊಸತನದ ದಾರಿಯನ್ನು ತುಳಿದಿದ್ದರು. ಜಯಂತ್ ಅವರು ಈ ಚಿತ್ರಕ್ಕೆ ಬರೆದ ‘ಗುಮ್ಮ ಬಂತು ಗುಮ್ಮ’, ‘ಬಲುಮಾ ಬಲುಮಾ’ ಹಾಡುಗಳು ಚರಣ್‌ರಾಜ್ ಸಂಯೋಜನೆಯಷ್ಟೇ ಸಾಹಿತ್ಯದ ತಾಜಾತನದಿಂದಲೂ ಜನಪ್ರಿಯವಾಗಿದ್ದವು. ಇದೀಗ 125ನೇ ದಿನದ ಸಂಭ್ರಮಾಚರಣೆಗಾಗಿಯೇ ಜಯಂತ್ ಒಂದಿಷ್ಟು ಸಾಲುಗಳ ಮೊಂಬತ್ತಿ ಹಚ್ಚಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳು ಕೈಯಲ್ಲಿ ಮೊಂಬತ್ತಿ ಹಿಡಿದುಕೊಂಡು ಹೇಳಲಿರುವ ಈ ಸಾಲುಗಳು ದೀಪದ ಬೆಳಕಿನಷ್ಟೇ ಉಜ್ವಲವಾಗಿದೆ. ಈ ಸಾಲುಗಳನ್ನು ಹೇಳುತ್ತಲೇ ಮಕ್ಕಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಎಳೆಯ ಮಕ್ಕಳು ಹಿರಿಯರಲ್ಲಿ ಕೇಳಿಕೊಳ್ಳುವ ದಾಟಿಯಲ್ಲಿರುವ ಈ ಸಾಲುಗಳು ಪರಿಸರದ ಕುರಿತು, ಭಾಷೆಯ ಕುರಿತು, ನೆಲದ ಕುರಿತು, ಕಥೆ– ಕನಸುಗಳ ಕುರಿತು ಹೃದಯಂಗಮವಾಗಿ ಬರೆದಿರುವ ಸಾಲುಗಳು ಮನಸನ್ನು ಆರ್ದ್ರಗೊಳಿಸುವಂತಿವೆ. ‘ಭಿನ್ನಹ’ ಎಂಬ ಶೀರ್ಷಿಕೆಯೇ ಇಡಿ ಪದ್ಯದ ಜೀವಾಳವನ್ನು ಉಸುರುವ ಹಾಗಿದೆ.

ಪದ್ಯದ ಪೂರ್ಣಪಾಠ ಇಲ್ಲಿದೆ:

ಹಿರಿಯರೇ ನಮಗಾಗಿ ಮರಗಳನು ಉಳಿಸಿ

ಮರಗಳೇ ನಮಗಾಗಿ ಹಕ್ಕಿಗಳ ಕರೆಸಿ

ಹಕ್ಕಿಗಳೇ ನಮಗಾಗಿ ಹಾಡನ್ನು ಕಲಿಸಿ

 

ಹಿರಿಯರೇ ನಮಗಾಗಿ ನೆಲವನ್ನು ಉಳಿಸಿ

ಅದರಲೀ ನಮಗಾಗಿ ಕೆರೆಯನ್ನು ಇರಿಸಿ

ಕೆರೆಗಳೇ ನಮಗಾಗಿ ನೀರನ್ನು ಉಣಿಸಿ

 

ಹಿರಿಯರೇ ನಮಗಾಗಿ ನುಡಿಯನ್ನು ಉಳಿಸಿ

ನುಡಿಗಳೇ ನಮಗಾಗಿ ಕಥೆಗಳನು ಬೆಳೆಸಿ

ಕಥೆಗಳೇ ನಮಗಾಗಿ ಕನಸನ್ನು ಕೊಡಿಸಿ

 

ಹಿರಿಯರೇ ನಮಗಾಗಿ ನಗುವನ್ನು ಉಳಿಸಿ

ಬಳಸಿದಾ ಮನೆಯಲ್ಲಿ ಕಸವನ್ನು ಗುಡಿಸಿ

ಮಮತೆಯಾ ಬೆಳಕಿಂದ ಭಯವನ್ನು ಅಳಿಸಿ

 

– ಜಯಂತ ಕಾಯ್ಕಿಣಿ

ಬರಹ ಇಷ್ಟವಾಯಿತೆ?

 • 30

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !