ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಮದುವೆಗೆ ಸಜ್ಜಾದ ನಟಿ ವನಿತಾ ವಿಜಯಕುಮಾರ್‌

Last Updated 22 ಜೂನ್ 2020, 7:58 IST
ಅಕ್ಷರ ಗಾತ್ರ

ಕಾಲಿವುಡ್‌ನಲ್ಲಿ ಪಂಚಕ್ಷರಂ ರಂಗಸ್ವಾಮಿ ಪಿಳ್ಳೈ ಎಂದರೆ ಯಾರು ಎಂಬುದು ಬಹುಬೇಗ ಹೊಳೆಯುವುದಿಲ್ಲ. ವಿಜಯಕುಮಾರ್‌ ಎಂದಾಕ್ಷಣ ಹಿರಿಯ ನಟ ಹಾಗೂ ರಾಜಕಾರಣಿಯ ಚಿತ್ರಣ ಕಣ್ಮುಂದೆ ಮೂಡುತ್ತದೆ. ಎಪ್ಪತ್ತರ ದಶಕದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ ಅವರು ತಮಿಳು ಸೇರಿದಂತೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.

ಅವರ ಕುಟುಂಬ ವೈವಾಹಿಕ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುವುದೇ ಹೆಚ್ಚು. ಈಗ ಅವರ ಪುತ್ರಿ ವನಿತಾ ವಿಜಯಕುಮಾರ್‌ ಮೂರನೇ ಮದುವೆಗೆ ತಯಾರಿ ನಡೆಸುತ್ತಿದ್ದು, ಮತ್ತೆ ವಿಜಯಕುಮಾರ್‌ ಕುಟುಂಬ ಚರ್ಚೆಗೆ ಗ್ರಾಸವಾಗಿದೆ.

ನಟಿ ವನಿತಾ ಅವರು ವಿಜಯಕುಮಾರ್‌ ಮತ್ತು ಮಂಜುಳಾ ದಂಪತಿಯ ಪುತ್ರಿ. ಈಕೆ ಬೆಳ್ಳಿತೆರೆ ಪ್ರವೇಶಿಸಿದ್ದು ದಳಪತಿ ವಿಜಯ್ ನಾಯಕರಾಗಿದ್ದ ‘ಚಂದ್ರಲೇಖಾ’ ಚಿತ್ರದ ಮೂಲಕ. ಇದು ತೆರೆಕಂಡಿದ್ದು 1995ರಲ್ಲಿ. ತಮಿಳು, ತೆಲುಗು, ಮಲಯಾಳದ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಕೆಗೆ ಬಣ್ಣದಲೋಕದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಸಿನಿಮಾಗಳಲ್ಲಿ ನಟಿಸುತ್ತಲೇ ಕಿರುತೆರೆಯಲ್ಲೂ ಆಕೆ ಅದೃಷ್ಟ ಪರೀಕ್ಷೆಗೆ ಇಳಿದರು. ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಆಕೆ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಕಮಲಹಾಸನ್‌ ನಡೆಸಿ ಕೊಡುತ್ತಿದ್ದ ತಮಿಳಿನ ಬಿಗ್‌ಬಾಸ್‌ ಸೀಸನ್‌ 3ರ ಸ್ಪರ್ಧಿಯೂ ಆಗಿದ್ದರು.

ವನಿತಾ ನಟನೆಗಿಂತ ವೈವಾಹಿಕ ವಿಷಯದಲ್ಲಿಯೇ ಹೆಚ್ಚು ಸುದ್ದಿಯಾಗಿರುವುದು ಉಂಟು. ಪ್ರಸ್ತುತ ಆಕೆ ಪೀಟ್‌ ಪಾಲ್‌ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಪಾಲ್ವಿಎಫ್‌ಎಕ್ಸ್‌ ಟೆಕ್ನಿಷಿಯನ್‌ಯಂತೆ. ಕಾಲಿವುಡ್‌, ಬಾಲಿವುಡ್‌ ಮತ್ತು ಹಾಲಿವುಡ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

ವನಿತಾಗೆ ವಿಜಯ ಶ್ರೀಹರಿ, ಜೋವಿಕಾ ಮತ್ತು ಜಯ್ನಿತಾ ಎಂಬ ಮೂವರು ಮಕ್ಕಳಿದ್ದಾರೆ. ಆಕೆ ಮೊದಲಿಗೆ ಕಿರುತೆರೆ ನಟ ಆಕಾಶ್‌ ಅವರನ್ನು ವರಿಸಿದ್ದರು. ಪುತ್ರ ವಿಜಯ ಶ್ರೀಹರಿ ಅಪ್ಪನೊಟ್ಟಿಗೆ ಇದ್ದಾನೆ. ಆಕಾಶ್‌ ಜೊತೆಗಿನ ಸಂಬಂಧ ಕಡಿದುಗೊಂಡು ಬಳಿಕ ಉದ್ಯಮಿ ಆನಂದ ಜಯರಾಜನ್‌ ಅವರನ್ನು ಮರುಮದುವೆಯಾದರು. ಈ ಇಬ್ಬರ ಬಾಂಧವ್ಯ ಐದು ವರ್ಷಗಳಲ್ಲೇ ಮುರಿದು ಬಿದ್ದಿತು.

ಅಂದಹಾಗೆ ವನಿತಾ, ಪೀಟ್‌ ಪಾಲ್‌ ಜೊತೆಗೆ ಸಪ್ತಪದಿ ತುಳಿಯುತ್ತಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಮ್ಮನ ಮೂರನೇ ಮದುವೆಯ ನಿರ್ಧಾರವನ್ನು ಸ್ವಾಗತಿಸಿರುವ 15 ವರ್ಷದ ಪುತ್ರಿ ಜೋವಿಕಾ, ಶುಭಾಶಯ ಕೂಡ ಹೇಳಿದ್ದಾಳೆ. ಚೆನ್ನೈನ ಅವರ ನಿವಾಸದಲ್ಲಿ ಜೂನ್‌ 27ರಂದು ಸಂಜೆ 4ಗಂಟೆಗೆ ಕುಟುಂಬದ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ಈ ಇಬ್ಬರ ನಡುವೆ ದೀರ್ಘಕಾಲದ ಗೆಳೆತನವಿತ್ತಂತೆ. ಆದರೆ, ಇಬ್ಬರ ನಡುವಿನ ಸಂಬಂಧ ಕುರಿತು ವನಿತಾ ಹೇಳುವುದೇ ಬೇರೆ. ‘ಲಾಕ್‌ಡೌನ್‌ ಶುರುವಾಗುವುದಕ್ಕೂ ಮೊದಲೇ ನಮ್ಮಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಲಾಕ್‌ಡೌನ್‌ ಮುಗಿಯುವ ವೇಳೆಗೆ ಮದುವೆ ನಡೆಯುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT