ನವದೆಹಲಿ: ತಮಿಳು ಸಿನಿಮಾ ʼಕೂಳಾಂಗಲ್ʼ (Koozhangal / Pebbles) 94ನೇ ಅಕಾಡೆಮಿ ಅವಾರ್ಡ್ಸ್‌ಗೆ (ಆಸ್ಕರ್) ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ.
ಹೆಂಡದ ಚಟಕ್ಕೆ ಬಿದ್ದ ಗಂಡ, ಹಿಂಸೆ ಸಹಿಸಲಾಗದೆ ಮನೆ ತೊರೆಯುವ ಹೆಂಡತಿ, ಮಗನೊಂದಿಗೆ ಮನೆಯೊಡತಿಯನ್ನು ಹುಡುಕುತ್ತ ಸಾಗುವ ತಂದೆ,...ಹೀಗೆ ಚಿತ್ರದ ಕಥೆ ಸಾಗುತ್ತದೆ. ವಿನೋತ್‌ರಾಜ್ ಪಿ.ಎಸ್ ನಿರ್ದೇಶನದ ʼಕೂಳಾಂಗಲ್ʼ ಆಸ್ಕರ್ ಅಂಗಳದಲ್ಲಿ ಭಾರತದ ಸಿನಿಮಾಗಳನ್ನು ಪ್ರತಿನಿಧಿಸಲಿದೆ.
ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಚೆಲ್ಲಪಾಂಡಿ ಮತ್ತು ಕರುಥಾಡೈಯಾನ್ ಅಭಿನಯಿಸಿದ್ದಾರೆ. ನಯನತಾರಾ ಮತ್ತು ವಿಗ್ನೇಶ್ ಶಿವನ್‌ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.
ʼಈ ವರ್ಷ ಆಸ್ಕರ್ ಪ್ರಶಸ್ತಿಗೆ ʼಕೂಳಾಂಗಲ್ʼ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ. ಈ ಚಿತ್ರವನ್ನು ಆಯ್ಕೆ ಮಾಡಿರುವುದಾಗಿ ನಿರ್ದೇಶಕ ಶಾಜಿ ಎನ್ ಕರುಣ್ ನೇತೃತ್ವದ 15 ತೀರ್ಪುಗಾರರ ತಂಡ ಅವಿರೋಧವಾಗಿ ಘೋಷಿಸಿದೆʼ ಎಂದು ಭಾರತೀಯ ಸಿನಿಮಾ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಸುಪ್ರಾಣ್ ಸೇನ್ ತಿಳಿಸಿದ್ದಾರೆ.
ಮಲಯಾಳಂನ ʼನಯಟ್ಟುʼ, ತಮಿಳಿನ ʼಮಂಡೇಲಾʼ, ನಿರ್ದೇಶಕ ಶೂಜಿತ್ ಸರ್ಕಾರ್ ಅವರ ʼಸರ್ದಾರ್ ಉಧಮ್ʼ (ಹಿಂದಿ), ವಿದ್ಯಾ ಬಾಲನ್ ಅಭಿನಯದʼಶೇರ್‌ನಿʼ (ಹಿಂದಿ), ಫರ್ಹಾನ್ ಅಖ್ತರ್ ಅವರ ʼತೂಫಾನ್ʼ (ಹಿಂದಿ), ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನಾಧಾರಿತ ʼಶೇರ್‌ಷಾʼ (ಹಿಂದಿ) ಮತ್ತು ಮರಾಠಿಯ ʼಗೋದಾವರಿʼ ಸಿನಿಮಾಗಳು ಈ ರೇಸ್‌ನಲ್ಲಿದ್ದವು.
ಆಸ್ಕರ್‌ನ ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ʼಕೂಳಾಂಗಲ್ʼಸ್ಪರ್ಧಿಸಲಿದೆ ಎಂದು ನಿರ್ಮಾಪಕ ಶಿವನ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.