ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌: ಸಂಕ್ರಾಂತಿ ಗೆಲುವು ಯಾರಿಗೆ?

Last Updated 30 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಸಂಕ್ರಾಂತಿ ಬಂತೆಂದರೆ, ತೆಲುಗು ಸಿನಿಮಾ ಕ್ಷೇತ್ರ ಕಳೆಗಟ್ಟುತ್ತದೆ. ಮುಖ್ಯವಾಗಿ ಸ್ಟಾರ್‌ ನಟರ ಚಿತ್ರಗಳೇ ತೆರೆ ಮೇಲೆ ಆರ್ಭಟಿಸುತ್ತವೆ. ತೆಲುಗಿನ ಸ್ಟಾರ್‌ ನಟರಾದ ಚಿರಂಜೀವಿ ಮತ್ತು ಬಾಲಕೃಷ್ಣ ಅವರೇಈವರೆಗೆ 14 ಬಾರಿ ಸಂಕ್ರಾಂತಿ ಸ್ಪರ್ಧೆಗೆ ಇಳಿದಿದ್ದರು.

ಹೀಗಾಗಿ ಪ್ರೇಕ್ಷಕರು ಕೂಡ ಸಂಕ್ರಾಂತಿ ಸೀಸನ್‌ಗಾಗಿ ಕಾತರದಿಂದ ಕಾಯುತ್ತಾರೆ. ಈ ಬಾರಿ ಕೂಡ ಸ್ಟಾರ್ ನಟರ ಚಿತ್ರಗಳು ತೆರೆ ಕಾಣಲು ತುದಿಗಾಲಲ್ಲಿ ನಿಂತಿವೆ.

ವೆಂಕಟೇಶ್– ತಮನ್ನಾ ಎಫ್‌2: ಈ ಸಂಕ್ರಾಂತಿಗೆ ತೆರೆಕಾಣುತ್ತಿರುವ ಹ್ಯಾಸ ಕಥೆ ಆಧಾರಿತ ಚಿತ್ರ ಫನ್‌ ಆ್ಯಂಡ್ ಫಸ್ಟ್ಟ್ರೇಷನ್‌ (ಎಫ್‌ 2). ಟಾಲಿವುಡ್‌ನ ಸ್ಟಾರ್‌ ನಟ ವಿಕ್ಟರಿ ವೆಂಕಟೇಶ್‌ ಮತ್ತು ಮೆಗಾ ಕುಟುಂಬದ ವರುಣ್‌ ತೇಜ್‌ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಚಿತ್ರದ ಟ್ರೇಲರ್‌ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ.

ಚಿತ್ರದಲ್ಲಿ ನಾಯಕ ನಟರು ಹೆಂಡತಿ ಮಾತಿಗೆ ಉಸಿರೆತ್ತದ ‘ಅಮ್ಮೌರ ಗಂಡ’ ಪಾತ್ರದಲ್ಲಿ ನಟಿಸಿದ್ದು, ಫ್ಯಾಮಿಲಿ ಎಂಟರ್‌ಟೈನರ್‌ ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು. ಇದೇ ಮೊದಲ ಬಾರಿಗೆ ಮಿಲ್ಕಿ ಬ್ಯೂಟಿ ತಮನ್ನಾ ವೆಂಕಟೇಶ್‌ ಜೋಡಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಅನಿಲ್ ರಾವಿಪೂಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಚಿತ್ರ ಇದೇ 12ಕ್ಕೆ ತೆರೆ ಕಾಣಲಿದೆ.

ರಾಮ್‌ಚರಣ್ ಆ್ಯಕ್ಷನ್‌: ಮೆಗಾ ಪವರ್ ಸ್ಟಾರ್ ರಾಮಚರಣ್ ನಟನೆಯ ‘ವಿನಯ ವಿಧೇಯ ರಾಮ’ ಚಿತ್ರ ಕೂಡ ಇದೇ 11ಕ್ಕೆ ತೆರೆ ಕಾಣಲಿದೆ. ಸಿಂಹ, ಲೆಜೆಂಡ್‌ನಂತಹ ಹಿಟ್‌ ಚಿತ್ರಗಳನ್ನು ನೀಡಿರುವ ಬೋಯಪಾಟಿ ಶ್ರೀನಿವಾಸ್‌ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರಿವೆ. ‘ಜೀನ್ಸ್’ ಖ್ಯಾತಿಯ ಪ್ರಶಾಂತ್‌, ರಾಮ್‌ಚರಣ್ ಸಹೋದರನಾಗಿ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಇನ್ನು ಬಾಲಿವುಡ್‌ನ ಖ್ಯಾತ ನಟ ವಿವೇಕ್‌ ಒಬೇರಾಯ್‌ ಈ ಚಿತ್ರದ ಮುಖ್ಯಪಾತ್ರವೊಂದನ್ನು ಪೋಷಿಸುತ್ತಿದ್ದು ಚಿತ್ರದ ಕಥೆ ಬಗ್ಗೆ ಆಸಕ್ತಿ ಕೆರಳಿದೆ. ಈ ಚಿತ್ರಕ್ಕೂ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ನಟಿ ಕಿಯಾರ ಅಡ್ವಾಣಿ ರಾಮ್‌ಚರಣ್ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.

ಎನ್‌ಟಿಆರ್ ಆಗಿ ಬಾಲಕೃಷ್ಣ: ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ನಟ ನಂದಮೂರಿ ತಾರಕ ರಾಮಾರಾವ್ ಜೀವನಾಧಾರಿತ ‘ಎನ್‌ಟಿಆರ್– ಕಥಾನಾಯಕುಡು’ ಚಿತ್ರ ಕೂಡ ಇದೇ ಸಂಕ್ರಾಂತಿ ಸೀಸನ್‌ಗೆ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನಸೂರೆಗೊಂಡಿದೆ.

ಬಾಲಕೃಷ್ಣ ನಟನೆಯ ‘ಗೌತಮಿ ಪುತ್ರ ಶಾತಕರ್ಣಿ’ ಐತಿಹಾಸಿಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕ್ರಿಷ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್ ನಟಿ ವಿದ್ಯಾಬಾಲನ್‌ ಎನ್‌ಟಿಆರ್ ಪತ್ನಿ ಬಸವ ತಾರಕಂ ಅವರ ಪಾತ್ರದಲ್ಲಿ ನಟಿಸಿದರೆ, ರಕೂಲ್‌ ಪ್ರೀತ್‌ಸಿಂಗ್‌ ಶ್ರೀದೇವಿ ಪಾತ್ರ ಪೋಷಿಸಿದ್ದಾರೆ. ಕನ್ನಡತಿ ಪ್ರಣಿತಾ ಸುಬಾಷ್‌ ಕೃಷ್ಣಕುಮಾರಿ ಪಾತ್ರ ನಿರ್ವಹಿಸಿದರೆ, ಅರ್ಜುನ್‌ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ ಸಾಹುಕಾರ್ ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ಜಯಪ್ರದ ಪಾತ್ರದಲ್ಲಿ, ಹನ್ಸಿಕಾ ಮೊತ್ವಾನಿ, ಸಾವಿತ್ರಿ ಪಾತ್ರದಲ್ಲಿ ನಿತ್ಯಾ ಮೀನನ್‌, ಜಯಸುಧಾ ಪಾತ್ರದಲ್ಲಿ ಪಾಯಲ್ ರಜಪೂತ್ ನಟಿಸಿದ್ದಾರೆ.

ಇವರಷ್ಟೇ ಅಲ್ಲದೇ, ಬಾಹುಬಲಿ ಖ್ಯಾತಿಯ ರಾಣಾ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ಮಿಂಚಿದರೆ, ಅಕ್ಕಿನೇನಿ ಸುಮಂತ್ ನಾಗೇಶ್ವರ್‌ ರಾವ್ ಅವರ ಪಾತ್ರವನ್ನು ಪೋಷಿಸಿದ್ದಾರೆ. ಪ್ರಕಾಶ್ ರೈ ತೆಲುಗು ನಿರ್ದೇಶಕ ನಾಗಿರೆಡ್ಡಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

ಬಹುತೇಕ ಪ್ರಮುಖ ನಟರೆಲ್ಲ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರ ಇದೇ 9ಕ್ಕೆ ತೆರೆಕಾಣಲಿದೆ.

ಈ ಚಿತ್ರಗಳ ಜತೆಗೆ ರಜಿನಿಕಾಂತ್ ನಟನೆಯ ‘ಪೆಟ್ಟಾ’ ತೆಲುಗು ಅವತರಣಿಕೆ ‘ಪೇಟ’ ಕೂಡ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ಯಾವ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತದೆ ಎಂಬ ಕುತೂಹಲ
ಅಭಿಮಾನಿಗಳನ್ನು ಕಾಡುತ್ತಿದೆ.

ಇಷ್ಟುದಿನ ಸಂಕ್ರಾಂತಿ ದಿನವೇ ಚಿತ್ರ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೆಲವು ದಿನಗಳ ಮುಂಚೆಯೇ ಬಿಡುಗಡೆ ಮಾಡಲಾಗುತ್ತಿದೆ. ಹಬ್ಬದ ರಜೆ ಆರಂಭಕ್ಕೂ ಮುನ್ನವೇ ಚಿತ್ರದ ಬಗ್ಗೆ ಮಾಹಿತಿ ತಿಳಿಯುವುದರಿಂದ ಹಿಟ್‌ ಟಾಕ್ ಸಿಕ್ಕರೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದು ನಿಶ್ಚಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT