ಗುರುವಾರ , ಜೂಲೈ 9, 2020
21 °C
ಸಿಎಂ ಭೇಟಿಯಾಗಲು ಫಿಲ್ಮ್‌ ಛೇಂಬರ್‌ ನಿರ್ಧಾರ

ಚಿತ್ರೋದ್ಯಮ ಚಟುವಟಿಕೆ ಆರಂಭಿಸಲು ದಿನಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವ ಚಿತ್ರೋದ್ಯಮದ ಚಟುವಟಿಕೆಗಳನ್ನು ಪುನರ್‌ ಆರಂಭಿಸಲು ಚಿತ್ರರಂಗದ ಮಂದಿ ದಿನಗಣನೆಯಲ್ಲಿ ತೊಡಗಿದ್ದಾರೆ. ಚಿತ್ರೀಕರಣ ಆರಂಭಿಸುವ ಸಲುವಾಗಿ ರಾಜ್ಯ ಸರ್ಕಾರದ ಅನುಮತಿ ಪಡೆಯಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಫಿಲ್ಮ್‌ ಛೇಂಬರ್‌) ನಿಯೋಗ ಇದೇ ಬುಧವಾರ (ಮೇ 27) ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.

ಕಳೆದ ಮೂರು ತಿಂಗಳಿಂದ ಕೊರೊನಾ ಕಾರಣಕ್ಕೆ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಅಪಾರ ನಷ್ಟ ಅನುಭವಿಸಿದ್ದಾರೆ. ಮತ್ತೆ ಉದ್ಯಮದ ಚಟುವಟಿಕೆಗಳು ಆರಂಭವಾಗಿ ಚಿತ್ರಬದುಕು ಸಹಜ ಸ್ಥಿತಿಗೆ ಮರಳಬೇಕು. ಈಗಾಗಲೇ ಅರ್ಧಕ್ಕೆ ನಿಂತಿರುವ ಚಿತ್ರಗಳ ಚಿತ್ರೀಕರಣವೂ ಪೂರ್ಣವಾಗಬೇಕು. ಹೊಸ ಚಿತ್ರಗಳನ್ನೂ ನಿರ್ಮಾಪಕರು ಕೈಗೆತ್ತಿಕೊಳ್ಳಬೇಕು. ಚಿತ್ರೀಕರಣ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಯ ಸದಸ್ಯರು ಮತ್ತು ನಿರ್ಮಾಪಕರು ಒಟ್ಟಿಗೆ ಸೇರಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ. ನಮ್ಮ ಮನವಿ ಸಲ್ಲಿಸಲು ಬುಧವಾರ ಮುಖ್ಯಮಂತ್ರಿಯವರನ್ನು ಭೇಟಿಗೆ ಸಮಯಾವಕಾಶ ಕೇಳಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್‌.ಜೈರಾಜ್‌ ‘ಪ್ರಜಾಪ್ಲಸ್‌’ಗೆ ತಿಳಿಸಿದರು.

ತಕ್ಷಣಕ್ಕೆ ಅನುಮತಿ ಸಿಕ್ಕರೂ ಶೂಟಿಂಗ್‌ ಆರಂಭಿಸಲು ಚಿತ್ರತಂಡಗಳು ಸಿದ್ಧತೆ ಮಾಡಿಕೊಂಡಿಲ್ಲ. ಲಾಕ್‌ಡೌನ್‌ ಕಾರಣಕ್ಕೆ ತಂತ್ರಜ್ಞರು, ಕಲಾವಿದರು ಸ್ವಂತ ಸ್ಥಳಗಳಿಗೆ ಹೋಗಿದ್ದಾರೆ. ಅವರೆಲ್ಲರೂ ಚಿತ್ರತಂಡ ಕೂಡಿಕೊಳ್ಳಲು ಮತ್ತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗಾಗಿ ಸರ್ಕಾರ ಅನುಮತಿ ನೀಡುವುದನ್ನು ಎದುರು ನೋಡುತ್ತಿದ್ದೇವೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಂತರ ಮಂಡಳಿಯ ಸಭೆ ಕರೆಯುತ್ತೇವೆ. ಶೂಟಿಂಗ್‌ಗೆ ತಕ್ಷಣ ಅನುಮತಿ ಸಿಕ್ಕರೆ ಮುಂದೆ ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಮತ್ತು ಯಾವತ್ತಿನಿಂದ ಶೂಟಿಂಗ್‌ ಆರಂಭಿಸಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಡಬ್ಬಿಂಗ್‌ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕನ್ನಡಕ್ಕೆ ಪರಭಾಷೆಗಳಿಂದ ಸಾಕಷ್ಟು ಸಿನಿಮಾಗಳು ಡಬ್ಬಿಂಗ್‌ ಆಗಿ ಬರುತ್ತಿದ್ದು, ಟಿ.ವಿಗಳಲ್ಲಿ ಪ್ರಸಾರವಾಗುತ್ತಿವೆ. ಇದಕ್ಕೆ ಕಾನೂನಿನಲ್ಲೇ ಅವಕಾಶ ಇರುವುದರಿಂದ ಅವುಗಳನ್ನು ಪ್ರಶ್ನಿಸಲು ಆಗುವುದಿಲ್ಲ. ಪ್ರೈಮ್‌ ಟೈಮ್‌ನಲ್ಲಿ ಪ್ರಸಾರ ಮಾಡಿಕೊಂಡರೂ ನಾವು ಏನೂ ಮಾಡದ ಸ್ಥಿತಿಯಲ್ಲಿರುವಂತೆ ಕಾನೂನಿನ ನಿಯಮಗಳು ನಮ್ಮ ಕೈಕಟ್ಟಿಹಾಕಿವೆ’ ಎಂದರು.

ಕಿರುತೆರೆ ಚಿತ್ರೀಕರಣಕ್ಕೆ ರಾಜ್ಯಸರ್ಕಾರ ಈಗಾಗಲೇ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಮೇ 24ರಿಂದಲೇ ಕೆಲವು ಧಾರಾವಾಹಿಗಳ ಚಿತ್ರೀಕರಣ ಶುರುವಾಗಿದೆ.

ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಅಳವಡಿಸಿಕೊಳ್ಳಲು ಎಲ್ಲ ಟಿ.ವಿ ಚಾನೆಲ್‌ಗಳ ಮುಖ್ಯಸ್ಥರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರು ಇತ್ತೀಚೆಗೆ ಸಭೆ ನಡೆಸಿದ್ದಾರೆ. ಹಾಗೆಯೇ ಎಲ್ಲ ಕಲಾವಿದರು ಮತ್ತು ತಂತ್ರಜ್ಞರಿಗೆ ತಲಾ ₹3 ಲಕ್ಷ ಮೊತ್ತದ ಕೋವಿಡ್‌ 19 ವಿಮೆ ಮಾಡಿಸಲಾಗಿದೆ ಎನ್ನುತ್ತಾರೆ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ವಿ.ಶಿವಕುಮಾರ್‌.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು