ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನು ಪಾಟೀಲ್‌ ಮನೋಗತ

Last Updated 17 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಕಡಪಟ್ಟಿಯಾದರೂ ಬದುಕು ಕಟ್ಟಿಕೊಳ್ಳಲು ಆಕೆಯನ್ನು ಸೆಳೆದಿದ್ದು ಬೆಂಗಳೂರು. ಉದ್ಯೋಗ ನಿಮಿತ್ತ ಉದ್ಯಾನ ನಗರಿ ಪ್ರವೇಶಿಸಿದ ಆಕೆ ನಟನೆಯ ಗೀಳು ಹತ್ತಿಸಿಕೊಂಡವರಲ್ಲ. ಆದರೆ, ಉದಯ ಟಿ.ವಿಯಲ್ಲಿ ಪ್ರಸಾರವಾದ ‘ಮೊಗ್ಗಿನ ಮನಸು’ ಧಾರಾವಾಹಿಯಲ್ಲಿ ಅಚಾನಕ್‌ ಆಗಿ ನಟನೆಯ ಅವಕಾಶ ಸಿಕ್ಕಿತು. ಸೀರಿಯಲ್‌ ಮೂಲಕವೇ ಕ್ಯಾಮೆರಾ ಎದುರಿಸುವಲ್ಲಿ ಪಳಗಿದ ನಟಿ ಸೋನು ಪಾಟೀಲ್‌ ಹಿರಿತೆರೆಯಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದ್ದು ಕನ್ನಡದಲ್ಲಿಯೇ.

‘ಧರ್ಮಸ್ಯ’ ಸೋನು ನಟಿಸಿದ ಮೊದಲ ಚಿತ್ರ. ಇದಾದ ಬಳಿಕ ‘ಗೋಸಿ ಗ್ಯಾಂಗ್‌’, ‘ಕೆಲವು ದಿನಗಳ ನಂತರ’, ‘ಗರ’ ಚಿತ್ರಗಳಲ್ಲಿ ನಟಿಸಿದರು. ಅವರು ಪತ್ರಿಕೋದ್ಯಮದಲ್ಲಿ ಎಂ.ಎ ಪದವೀಧರೆ. ಬರಹದ ಮೇಲೂ ಅವರಿಗೆ ಬಹುಪ್ರೀತಿ. ಆದರೆ ನಟನೆ, ರಿಯಾಲಿಟಿ ಶೋಗಳಲ್ಲಿ ತೊಡಗಿಸಿಕೊಂಡ ಪರಿಣಾಮ ಬರವಣಿಗೆಯಿಂದ ದೂರ ಉಳಿಯುವಂತಾಗಿದೆ ಎಂಬ ಬೇಸರವೂ ಅವರಲ್ಲಿದೆ.

ಕಿರುತೆರೆ ಮತ್ತು ಹಿರಿತೆರೆ ಪ್ರವೇಶಿಸುವುದಕ್ಕೂ ಮೊದಲ ಅವರು ತಮಿಳಿನ ರಿಯಾಲಿಟಿ ಶೋವೊಂದರಲ್ಲೂ ಪಾಲ್ಗೊಂಡಿದ್ದೂ ಉಂಟು. ಕನ್ನಡದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡ ಬಳಿಕ ಸೋನುಗೆ ಅವಕಾಶಗಳ ಬಾಗಿಲು ತೆರೆದಿದೆ. ಆದರೆ, ಕನ್ನಡ ಸಿನಿಮಾ ಹೊರತಾಗಿ ಬೇರೆ ಭಾಷೆಯಲ್ಲಿ ನಟಿಸಲು ಆಕೆಗೆ ಇಷ್ಟವಿಲ್ಲವಂತೆ. ಬೇರೆ ಭಾಷೆಗಳು ಮಾತನಾಡಲು ಬಾರದಿರುವುದೇ ಇದಕ್ಕೆ ಮೂಲ ಕಾರಣ.

‘ಉದ್ಯೋಗ ಅರಸಿ ಬೆಂಗಳೂರಿಗೆ ಎಲ್ಲರಂತೆ ನಾನೂ ಬಂದೆ. ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆಪಟ್ಟಿರಲಿಲ್ಲ. ಇಂಡಸ್ಟ್ರಿಗೆ ಅಚಾನಕ್‌ ಆಗಿ ಕಾಲಿಟ್ಟೆ. ‘ಮೊಗ್ಗಿನ ಮನಸು’ ಧಾರಾವಾಹಿಯಲ್ಲಿನ ನನ್ನ ನಟನೆಯು ಪ್ರೇಕ್ಷಕರಿಗೆ ಇಷ್ಟವಾಯಿತು. ಇದಾದ ಬಳಿಕ ‘ಗಾಂಧಾರಿ’, ‘ಪಂಚ ಕಜ್ಜಾಯ’, ‘ಅಮೃತ ವರ್ಷಿಣಿ’ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ಇದೇ ನನಗೆ ಚಿತ್ರರಂಗ ಪ್ರವೇಶಿಸಲು ರಹದಾರಿಯಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಸಿನಿಮಾ ಒಪ್ಪಿಕೊಳ್ಳುವಾಗಲೂ ಅವರು ಸಾಕಷ್ಟು ಚ್ಯೂಸಿ. ‘ಕಥೆ ಚೆನ್ನಾಗಿರಬೇಕು. ರಿಯಲಿಸ್ಟಿಕ್‌ ಆಗಿದ್ದರೆ ಚೆಂದ. ಹಳ್ಳಿ ಹುಡುಗಿಯ ಪಾತ್ರವೆಂದರೆ ನನಗಿಷ್ಟ. ಗ್ಲಾಮರ್‌ ಪಾತ್ರಗಳಲ್ಲಿ ನಟಿಸಲು ಇಷ್ಟವಿ‌ಲ್ಲ. ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ನಟಿಸುವ ಆಸೆಯಿದೆ. ಉತ್ತರ ಕರ್ನಾಟಕದ ಭಾಷಾ ಶೈಲಿಯ ಚಿತ್ರದಲ್ಲಿ ನಟಿಸುವ ಹಂಬಲವಿದೆ. ಆದರೆ, ಅಂತಹ ಸ್ಕ್ರಿಪ್ಟ್‌ಗಳು ಬಂದಿಲ್ಲ. ಅಂತಹ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ವಿವರಿಸುತ್ತಾರೆ.

ಸೋನು ನಟನೆಯ ‘ಗುಲಾಲ್‌’ ಮತ್ತು ‘ಯರ‍್ರಾಬಿರ‍್ರಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಅವರು ನಟಿಸುತ್ತಿರುವ ಮತ್ತೊಂದು ಚಿತ್ರ ‘ಬೇತಾಳ’ದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆಯಂತೆ. ಇದರಲ್ಲಿ ಅವರದು ಬಬ್ಲಿ ಹುಡುಗಿಯ ಪಾತ್ರ. ಇಬ್ಬರು ನಾಯಕರ ಜೊತೆಗೂ ಪ್ರೀತಿಯಾಗುತ್ತದೆಯಂತೆ. ಕೊನೆಗೆ ಯಾರ ಜೊತೆಗೆ ನಾಯಕಿ ಒಂದಾಗುತ್ತಾಳೆ ಎನ್ನುವುದೇ ಇದರ ಹೂರಣ.

ಲಾಕ್‌ಡೌನ್‌ ಅವಧಿಯಲ್ಲಿ ಅವರು ಹಲವು ಕಥೆಗಳನ್ನು ಕೇಳಿದ್ದಾರಂತೆ. ‘ನಾಲ್ಕು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿರುವೆ. ಈ ವರ್ಷದ ಅಂತ್ಯದಲ್ಲಿಯೇ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT