ಶನಿವಾರ, ಜನವರಿ 16, 2021
28 °C

ಕೊಡಗಿನ ಕುವರಿಯ ಬೆಳ್ಳಿತೆರೆ ಸವಾರಿ

ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ನನಗೆ ಸಿಸ್ಟಂ (ಕಂಪ್ಯೂಟರ್‌) ಮುಂದೆ ಮಾತನಾಡುವುದಕ್ಕಿಂತ ಜನರ ಮುಂದಿರುವುದೇ ಇಷ್ಟ. ಹಾಗಾಗಿ ನಾನು ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ ಎನ್ನುತ್ತಾ ಖುಷಿ ಹಂಚಿಕೊಂಡರು ನಟಿ ತೇಜಸ್ವಿನಿ ಶರ್ಮಾ.

ಮೂಲತಃ ಮಡಿಕೇರಿಯವರಾದ ತೇಜಸ್ವಿನಿ ಅವರ ಕೈಯಲ್ಲಿ ನಾಲ್ಕಾರು ಚಿತ್ರಗಳಿವೆ. ಕೊಡಗರ ಸಿಪಾಯಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅವರು ‘ಭಾವ ಬಟ್ಟೆಲ್‌’ ಹೆಸರಿನ ಕೊಡವ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರಗಳ ಜತೆಗೆ ಅವರು ಹೆಚ್ಚು ಕಾಣಿಸಿಕೊಂಡು ಹೆಸರು ಮಾಡಿದ್ದು ‘ಸೂಪರ್‌ ಕಪಲ್‌’ ವೆಬ್‌ಸರಣಿಗಳ ಮೂಲಕ. ತೇಜಸ್ವಿನಿ ಹಾಗೂ ರಾಘವೇಂದ್ರ ಜೋಡಿ ಈಗ ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಗಿದೆ. ತೇಜಸ್ವಿನಿ ಜತೆಗೆ ‘ಪ್ರಜಾಪ್ಲಸ್‌’ ಮಾತುಕತೆಯ ಝಲಕ್‌ ಕೇಳಿ.

ಚಿತ್ರರಂಗಕ್ಕೆ ಪ್ರವೇಶಿಸಿದ್ದು ಹೇಗೆ?
ಎಂಜಿನಿಯರಿಂಗ್‌ ಓದುತ್ತಿದ್ದಾಗಲೇ ಮಾಡೆಲಿಂಗ್‌ನತ್ತ ಆಸಕ್ತಿ ವಹಿಸಿದ್ದೆ. ‘ವರ್ಲ್ಡ್‌ ಸೂಪರ್‌ ಮಾಡೆಲ್‌’ ಸ್ಪರ್ಧೆಯಲ್ಲಿ ದಕ್ಷಿಣ ಏಷ್ಯಾ ಪ್ರತಿನಿಧಿಸಿ ಗುರುತಿಸಿಕೊಂಡಿದ್ದೆ. ಹಾಗೇ ಇದೇ ಕ್ಷೇತ್ರದಲ್ಲಿ ಮುಂದುವರಿಯಬಹುದೇ ಹೇಗೆ ಎಂಬ ಆಲೋಚನೆ ಮೊಳೆತಿತ್ತು. ಆದರೆ, ಕುಟುಂಬ, ಭದ್ರತೆಯ ದೃಷ್ಟಿಯಿಂದ ನಾನು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಒಳ್ಳೆಯ ವೇತನವೂ ಇತ್ತು. ಆದರೆ, ಮೊದಲೇ ಹೇಳಿದೆನಲ್ಲಾ, ಇದು ನನ್ನ ಆಸಕ್ತಿ ಆಗಿರಲಿಲ್ಲ. ನನ್ನ ಆಲೋಚನೆಗಳೆಲ್ಲವೂ ಕಲಾ ಕ್ಷೇತ್ರದತ್ತಲೇ ಇತ್ತು. ಹಾಗಾಗಿ ಈ ಕ್ಷೇತ್ರಕ್ಕೆ ಪ್ರವೇಶಿಸುವ ರಿಸ್ಕ್‌ ತೆಗೆದುಕೊಂಡೆ. ಕುಟುಂಬದ ಬೆಂಬಲವೂ ಇದಕ್ಕೆ ಸಿಕ್ಕಿದೆ. ಚೆನ್ನಾಗಿ ಕೆಲಸ ಮಾಡಿದರೆ ಇಲ್ಲೂ ಬೆಳೆಯಬಹುದು.

ಕೈಲಿರುವ ಚಿತ್ರಗಳು?
ಫ್ಲ್ಯಾಟ್‌ ನಂಬರ್‌ 9 ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದೆ. ಆರ್ಯ ಮಹೇಶ್‌ ನಿರ್ದೇಶನದ ‘ಇಂಗ್ಲಿಷ್‌ ಮಂಜ’ ಚಿತ್ರದಲ್ಲಿ ನನ್ನದು ಕಮಲಿ ಎಂಬ ಪಾತ್ರ. ಫೆಬ್ರುವರಿಯಲ್ಲಿ ಚಿತ್ರೀಕರಣ ಆರಂಭವಾಗಬಹುದು. ‘ಬೈ ಲಾ’ ಹೆಸರಿನ ಚಿತ್ರದ ಶೂಟಿಂಗ್‌ ಮುಗಿದಿದೆ. ರಾಘವೇಂದ್ರ ರಾಜ್‌ಕುಮಾರ್‌ ಅವರ ‘ವಾರ್ಡ್‌ ನಂ. 11’ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ.

ವೆಬ್‌ಸರಣಿಯ ಬಗ್ಗೆ ಹೇಳಿ
ಲಾಕ್‌ಡೌನ್‌ ಅವಧಿಯಲ್ಲಿ ನೂರಾರು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆಗ ಮನರಂಜನೆಗಾಗಿ ಒಟಿಟಿ ವೇದಿಕೆಗಳನ್ನೇ ಅವಲಂಬಿಸಿದರು. ಬೇರೆ ಬೇರೆ ಭಾಷೆಗಳಲ್ಲಿ ಸಾಕಷ್ಟು ವೆಬ್‌ ಸರಣಿಗಳು ಬರುತ್ತಿವೆ. ಹಾಗಿರುವಾಗ ಕನ್ನಡದಲ್ಲಿ ನಾವೇಕೆ ಮಾಡಬಾರದು ಎಂದು ಪ್ರಯತ್ನಿಸಿದೆವು. ‘ಮಾಧ್ಯಮ ಅನೇಕ ಕ್ರಿಯೇಷನ್ಸ್‌’ ಸಂಸ್ಥೆ ಈ ವೆಬ್‌ಸರಣಿ ನಿರ್ಮಾಣಕ್ಕೆ ಮುಂದಾಯಿತು. ರಘು ಅವರ ಜತೆ ನಟಿಸಿದ್ದು ಖುಷಿ ತಂದಿದೆ. ಒಳ್ಳೆಯ ತಂಡ ಅದು. 10 ಎಪಿಸೋಡ್‌ಗಳನ್ನು ಮೊದಲ ಆವೃತ್ತಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದೆವು. ಈಗ ಉತ್ತಮವಾಗಿ ಜನರ ಬೆಂಬಲ ಸಿಕ್ಕಿದೆ. ಇನ್ನಷ್ಟು ಆವೃತ್ತಿ ಮಾಡುವ ಬಗ್ಗೆ ಆಲೋಚಿಸಿದ್ದೇವೆ.

ಹೊಸ ಯೋಜನೆಗಳೇನಾದರೂ ಇವೆಯೇ?
ನಾನಿನ್ನೂ ಕಲಿಯುತ್ತಿದ್ದೇನೆ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಭಾರತೀಯ ಭಾಷೆಯ ಯಾವುದೇ ಚಿತ್ರವಾದರೂ ಸರಿ ಪಾತ್ರ ಮಾಡುತ್ತೇನೆ. ಆದರೆ, ಕನ್ನಡಕ್ಕೆ ಆದ್ಯತೆ. ಸ್ವಂತ ನಿರ್ಮಾಣದ ಬಗೆಗೂ ದೂರದ ಕನಸು ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು