ಬುಧವಾರ, ಡಿಸೆಂಬರ್ 8, 2021
28 °C

ಸಿಂಧೂರ ಲಕ್ಷ್ಮಣ: ಕಿಶೋರ್ ನಟಿಸಬೇಕಿದ್ದ‌ ಪಾತ್ರ ದರ್ಶನ್‌ ಪಾಲಾದ ಒಳಗುಟ್ಟೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿಂಧೂರ ಲಕ್ಷ್ಮಣ’ 18ನೇ ಶತಮಾನದ ಅಂತ್ಯದಲ್ಲಿ ಆಂಗ್ಲರ ವಿರುದ್ಧ ಹೋರಾಡಿಸಿದ ದೇಶಭಕ್ತ. ಆತನ ಕುರಿತು ಈಗಾಗಲೇ ನಾಟಕಗಳು ಪ‍್ರದರ್ಶನ ಕಂಡಿವೆ. ಸಿನಿಮಾಗಳೂ ಬಂದಿವೆ. ಈಗ ಮತ್ತೆ ಕನ್ನಡದಲ್ಲಿ ಆತನ ಹೆಸರಿನ ಸಿನಿಮಾವೊಂದು ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸುದ್ದಿ ಕೇಳಿಬರುತ್ತಿದೆ.

ಕಳೆದ ಎರಡು ವರ್ಷದ ಹಿಂದೆ ರಾಧಾಕೃಷ್ಣ ಪಲ್ಲಕ್ಕಿ ಅವರು, ‘ಶೂರ ಸಿಂಧೂರ ಲಕ್ಷ್ಮಣ’ ಎಂಬ ಹೆಸರಿನಡಿ ಸಿನಿಮಾ ನಿರ್ದೇಶಿಸುತ್ತಿರುವುದಾಗಿ ಘೋಷಿಸಿದ್ದರು. ಒಂದು ದಶಕಗಳ ಕಾಲ ಸಿಂಧೂರ ಲಕ್ಷ್ಮಣನ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿದ್ದು, ಆತನ ಚರಿತೆಯನ್ನು ತೆರೆಯ ಮೇಲೆ ತರಲು ನಿರ್ಧರಿಸಿರುವುದಾಗಿ ಹೇಳಿದ್ದರು.

ಸಿಂಧೂರ ಲಕ್ಷ್ಮಣನಾಗಿ ನಟ ಕಿಶೋರ್‌ ನಟಿಸುತ್ತಿದ್ದಾರೆ. ಅವರೇ ಈ ಪಾತ್ರಕ್ಕೆ ಸೂಕ್ತ ನಟ. ಅವರ ಫೋಟೊಶೂಟ್‌ ಕೂಡ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಈಗ ತರುಣ್‌ ಸುಧೀರ್‌ ಅವರು, ದರ್ಶನ್‌ಗಾಗಿ ಹೊಸ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಪೂಜೆ ನೆರವೇರಿಸಿ ಸ್ಕ್ರಿಪ್ಟ್‌ ಬರೆಯುತ್ತಿದ್ದಾರೆ. ಇದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಇದು ಸಿಂಧೂರ ಲಕ್ಷ್ಮಣನ ಕಥೆಯಾಗಿದ್ದು, ಈ ಪಾತ್ರದಲ್ಲಿ ದರ್ಶನ್ ನಟಿಸಲಿದ್ದಾರೆ ಎನ್ನಲಾಗಿದೆ. ‘ರಾಬರ್ಟ್‌’ ಸಿನಿಮಾಕ್ಕೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಗೌಡ ಅವರೇ ಇದಕ್ಕೂ ಬಂಡವಾಳ ಹೂಡುತ್ತಿದ್ದಾರೆ. ಹಾಗಿದ್ದರೆ, ಕಿಶೋರ್‌ಗಾಗಿ ನಟಿಸಬೇಕಿದ್ದ ಸಿನಿಮಾದ ಕಥೆ ಏನಾಯಿತು ಎಂಬುದು ಅವರ ಅಭಿಮಾನಿಗಳ ಪ್ರಶ್ನೆ.

ಇದಕ್ಕೆ ರಾಧಾಕೃಷ್ಣ ಪಲ್ಲಕ್ಕಿ ಹೇಳುವುದು ಹೀಗೆ

‘ಕಳೆದ ಹನ್ನೆರಡು ವರ್ಷಗಳಿಂದಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸಿಂಧೂರ ಲಕ್ಷ್ಮಣ’ ಚಿತ್ರದ ಟೈಟಲ್‌ ಇದೆ. ದರ್ಶನ್‌ ಅವರು ಸಿಂಧೂರ ಲಕ್ಷ್ಮಣನಾಗಿ ನಟಿಸಿದರೆ ಕಮರ್ಷಿಯಲ್‌ ಆಗಿ ಸಿನಿಮಾ ಸಾಕಷ್ಟು ಯಶಸ್ಸು ಕಾಣಲಿದೆ ಎಂದು ಶಾಸಕ ರಾಜೂಗೌಡ, ಉಮಾಪತಿ ಮತ್ತು ತರುಣ್‌ ಸುಧೀರ್‌ ಅವರು ನನ್ನೊಟ್ಟಿಗೆ ಚರ್ಚಿಸಿದರು. ಹಾಗಾಗಿ, ಕಥೆಯನ್ನು ಅವರಿಗೆ ಕೊಟ್ಟಿರುವೆ. ಈ ಬಗ್ಗೆ ಕಿಶೋರ್‌ ಅವರಿಗೂ ಮಾಹಿತಿ ನೀಡಿದ್ದೇನೆ. ಆದರೆ, ಅವರಿಂದ ಇದಕ್ಕೆ ಪ್ರತಿಕ್ರಿಯೆ ಬಂದಿಲ್ಲ’.

‘ತರುಣ್‌ ಸುಧೀರ್‌ ಅವರಿಗೆ ನಾನು ಮಾಡಿರುವ ಸಂಶೋಧನೆ ಬಗ್ಗೆ ಹೇಳಿದ್ದೇನೆ. ದಾಖಲೆಗಳನ್ನೂ ನೀಡುತ್ತೇನೆ. ಕಿಶೋರ್ ಅವರು ಒಳ್ಳೆಯ ನಟ. ಸಿಂಧೂರ ಲಕ್ಷ್ಮಣ ಚಿತ್ರಕ್ಕಾಗಿ ಅವರ ಫೋಟೊಶೂಟ್‌ ಕೂಡ ಮಾಡಲಾಗಿತ್ತು. ಅವರಿಗಾಗಿ ಮತ್ತೊಂದು ಸ್ಕ್ರಿಪ್ಟ್‌ ಸಿದ್ಧಪಡಿಸಿಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು.

ತರುಣ್‌ ಸುಧೀರ್‌ ಹೇಳೋದೇನು?

‘ರಾಧಾಕೃಷ್ಣ ಪಲ್ಲಕ್ಕಿ ಅವರ ಸಿಂಧೂರ ಲಕ್ಷ್ಮಣ ಸಿನಿಮಾದ ಕಥೆಯ ಹಕ್ಕು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರ ಬಳಿ ಇರುವುದಂತೂ ನಿಜ. ನಾವು ಎಲ್ಲಿಯೂ ಸಿನಿಮಾದ ಟೈಟಲ್‌ ಘೋಷಿಸಿಲ್ಲ. ಪೂಜೆಯನ್ನಷ್ಟೇ ನೆರವೇರಿಸಿದ್ದೇವೆ. ಈಗ ಸ್ಕ್ರಿಪ್ಟ್‌ ಬರೆಯುತ್ತಿದ್ದೇನೆ. ಏನು ಕಥೆ, ಯಾವ ಸಿನಿಮಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಇನ್ನೂ ದರ್ಶನ್‌ ಅವರ ಎರಡು ಸಿನಿಮಾಗಳಿವೆ. ಅವುಗಳು ಪೂರ್ಣಗೊಂಡ ಬಳಿಕ ನನ್ನ ಹೊಸ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸುತ್ತೇನೆ’ ಎಂದು ನಿರ್ದೇಶಕ ತರುಣ್‌ ಸುಧೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು