ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ರಾಜ್‌ಕುಮಾರ್ ಅವರ ಈಡೇರದ ಕನಸು ಇದು!

Last Updated 29 ಅಕ್ಟೋಬರ್ 2021, 12:19 IST
ಅಕ್ಷರ ಗಾತ್ರ

ಬೆಂಗಳೂರು: ಅದು ‘ನಟಸಾರ್ವಭೌಮ’ ಸಿನಿಮಾದ ಬಿಡುಗಡೆಯ ಸಂದರ್ಭ. ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹೂಡಿದ್ದ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಪವನ್‌ ಒಡೆಯರ್‌.
ಬೆಂಗಳೂರಿನ ಸ್ಯಾಂಕಿ ಕೆರೆಯ ಕೂಗಳತೆ ದೂರದಲ್ಲಿಯೇ ನಟ ಪುನೀತ್‌ ರಾಜ್‌ಕುಮಾರ್‌ ಅವರ ಕಚೇರಿ ಇದೆ. ‘ನಟಸಾರ್ವಭೌಮ’ ಸಿನಿಮಾದ ಬಿಡುಗಡೆಯ ಮುನ್ನಾ ದಿನ ಕಚೇರಿಯಲ್ಲಿ ಅವರ ಆಗಮನಕ್ಕಾಗಿಯೇ ಅಭಿಮಾನಿಗಳು ಮತ್ತು ಪತ್ರಕರ್ತರ ದಂಡು ನೆರೆದಿತ್ತು.

‘ಅಪ್ಪು’ವಿನ ಆಗಮನದ ನಿರೀಕ್ಷೆಯಲ್ಲಿ ಕೂತಿದ್ದವರಿಗೆ ಥಟ್ಟನೆ ಕಚೇರಿಯಲ್ಲಿ ಮನ ಸೆಳೆದಿದ್ದು ಅಣ್ಣಾವ್ರು ಮತ್ತು ಪುನೀತ್‌ ಮನದುಂಬಿ ನಗುತ್ತಿರುವ ಫೋಟೊ. ಮೈಸೂರಿನ ಅಭಿಮಾನಿಗಳಾದ ಪವರ್ ಗ್ರೂಪ್‌ನವರು ನೀಡಿದ್ದ ಫೋಟೊ ಅದು. ಅದರ ಮೂಲೆಯಲ್ಲಿ ‘ನಗುವಿನ ಸಾಹುಕಾರರು’ ಎಂದು ದಪ್ಪನೆ ಅಕ್ಷರದಲ್ಲಿ ಬರೆದಿತ್ತು. ಅಭಿಮಾನಿಗಳ ಪ್ರೀತಿಯ ಚೌಕಟ್ಟಿನೊಳಗೆ ಬಣ್ಣ ಮೆತ್ತಿಕೊಂಡು ಬೆಚ್ಚಗೆ ಆ ಫೋಟೊ ಕುಳಿತಿತ್ತು. ಒಮ್ಮೆಲೆ ಬದಲಾದ ಕಚೇರಿ ಸಿಬ್ಬಂದಿಯ ಚಲನವಲನ ‘ಅಪ್ಪು’ ಬರುತ್ತಿರುವ ಸುಳಿವು ನೀಡಿತ್ತು.

ಒಮ್ಮೆಲೆ ಕಾರಿನ ಹಾರನ್‌ ಶಬ್ದವಾಯಿತು. ಕಾರಿನಿಂದ ಇಳಿದು ಕಚೇರಿ ಪ್ರವೇಶಿಸಿದ ಪುನೀತ್‌ ಗೋಡೆಯ ಮೇಲಿದ್ದ ವರನಟ ರಾಜ್‍ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ನಮಿಸಿದರು. ಬಳಿಕ ಅಭಿಮಾನಿಗಳು, ಸಂದರ್ಶಕರತ್ತ ತಿರುಗಿ ಮುಗುಳ್ನಕ್ಕರು.
ಅವರ ಮುಂದೆ ಸಂದರ್ಶನಕ್ಕೆ ಕುಳಿತಾಗ ಮನದ ಮೂಲೆಯಲ್ಲಿದ್ದ ಸಿನಿಮಾ ನಿರ್ದೇಶನ ಮಾಡಬೇಕೆಂಬ ತನ್ನ ಆಸೆಯನ್ನು ತೆರೆದಿಟ್ಟಿದ್ದರು.

‘ಮೊದಲಿನಿಂದಲೂ ಸಿನಿಮಾ‌ ನಿರ್ದೇಶಿಸಬೇಕೆಂಬ ಆಸೆ ಮನದಲ್ಲಿ ಗಟ್ಟಿಯಾಗಿ ಕೂತಿದೆ. ಇನ್ನೊಂದೆಡೆ ಕೆಲಸದ ಒತ್ತಡವೂ ಹೆಚ್ಚುತ್ತಿದೆ. ನಾನು ಸಿನಿಮಾ ನಿರ್ದೇಶಿಸುವುದಾದರೆ ಶಿವಣ್ಣ (ಶಿವರಾಜ್‌ಕುಮಾರ್)ನ ಸಿನಿಮಾವನ್ನೇ ಮೊದಲು ನಿರ್ದೇಶಿಸುತ್ತೇನೆ. ಕಾಲ ಕೂಡಿ ಬಂದರೆ ಅಣ್ಣನ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತೇನೆ’ ಎಂದು ಹೇಳಿದ್ದರು.

1976ರಲ್ಲಿ ತೆರೆ ಕಂಡ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ ‘ಅಪ್ಪು’. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ತೆಲುಗಿನ ನಿರ್ದೇಶಕ ಪುರಿ ಜಗನ್ನಾಥ್‌. ಈ ಚಿತ್ರದ ಅಭೂತಪೂರ್ವ ಯಶಸ್ಸು ಅವರ ಅಭಿಮಾನಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿತ್ತು.‌ ಆ ನಂತರ ‘ಅರಸು’, ‘‘ಮಿಲನ’, ‘ವಂಶಿ’, ‘ಪೃಥ್ವಿ’, ’ಜಾಕಿ‘, ‘ಹುಡುಗರು’, ’ಅಣ್ಣಾ ಬಾಂಡ್‌’, ‘ರಾಜಕುಮಾರ’,‘ಯುವರತ್ನ’ ಚಿತ್ರದಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಗ್ಗಳಿಕೆ ಅವರದ್ದು.

ಪ್ರಸ್ತುತ ಚೇತನ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ’ಜೇಮ್ಸ್‌’ ಚಿತ್ರದಲ್ಲಿ ಅವರು ನಟಿಸುತ್ತಿದ್ದರು. ಇದಾದ ಬಳಿಕ ‘ಲೂಸಿಯಾ’ ಖ್ಯಾತಿಯ ಪವನ್‌ ಕುಮಾರ್‌ ನಿರ್ದೇಶನದ ‘ದ್ವಿತ್ವ’ ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT