ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಕಥನ: ರಾಘಣ್ಣನ ಅನಾರೋಗ್ಯದ ಆ ದಿನಗಳು...

ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ... ನಟ ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಸಂದರ್ಶನ
Last Updated 18 ಫೆಬ್ರುವರಿ 2019, 10:20 IST
ಅಕ್ಷರ ಗಾತ್ರ

ಬೆಂಗಳೂರಿನ ಸದಾಶಿವನಗರದ ದೊಡ್ಡಮನೆ. ರಾಜ್‌ಕುಮಾರ್ ಅವರ ಬದುಕಿನ ಸ್ಮೃತಿಗಳನ್ನು ಉಸಿರಾಡುವಂತೆ ಕಾಣಿಸುತ್ತಿದ್ದ ಮನೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ನಿರೀಕ್ಷೆಯಲ್ಲಿ ಕೂತವರನ್ನು ಒಮ್ಮೆಗೇ ಸೆಳೆದದ್ದು ಗೋಡೆಯ ಮೇಲಿನ ರಾಜ್‌ಕುಮಾರ್‌ ಫೋಟೊಗಳು. ವಿವಿಧ ಸಿನಿಮಾಗಳನ್ನೂ ಪಾತ್ರಗಳನ್ನೂ ನೆನಪಿಸುವಂತಿದ್ದ ಆ ಫೋಟೊಗಳು ಬದುಕಿನ ಭಾವ–ಬಣ್ಣಗಳ ಅಭಿವ್ಯಕ್ತಿಯಂತೆಯೂ ಕಾಣಿಸುತ್ತಿದ್ದೆವು. ಆ ಪಾತ್ರಗಳನ್ನು ನೆನಪಿಸಿಕೊಳ್ಳುತ್ತ, ಕಾಫಿ ಗುಟುಕರಿಸುತ್ತಿರುವಾಗಲೇ ರಾಘವೇಂದ್ರ ರಾಜ್‌ಕುಮಾರ್‌ ಬಂದು ಎದುರಿಗೆ ಕೂತರು. ಮಾತು ಶುರುವಾದುದು ಅಪ್ಪಾಜಿ ನೆನಪಿನ ಮೂಲಕವೇ.

‘‘ಅಪ್ಪಾಜಿ ತಮ್ಮ ಬದುಕಿನ ಕೊನೆಯ ಹತ್ತು ವರ್ಷಗಳಲ್ಲಿ ಪತ್ರಿಕೆಯನ್ನು ತಪ್ಪದೆ ಓದುತ್ತಿದ್ದರು. ವರಾಂಡದಲ್ಲಿ ಬಂದು ಕೂರುತ್ತಿದ್ದ ಅವರು – ‘ಪೇಪರ್‌ ಕೊಡ್ರಪ್ಪ?’ ಎಂದು ಕೇಳುತ್ತಿದ್ದರು. ‘ಯಾವ ಪೇಪರ್‌?’ ಎಂದು ಕೇಳಿದರೆ ‘ಪ್ರಜಾವಾಣಿ’ ಎನ್ನುತ್ತಿದ್ದರು. ಅವರ ಬಾಯಿಗೆ ಬರುತ್ತಿದ್ದ ಒಂದೇ ಒಂದು ಪತ್ರಿಕೆಯ ಹೆಸರು ‘ಪ್ರಜಾವಾಣಿ’. ಅದನ್ನು ಬಿಟ್ಟರೆ ‘ವಿಜಯಚಿತ್ರ’ದ ಹೆಸರು ಅವರಿಗೆ ನೆನಪಿತ್ತು – ‘ಕಥಾನಾಯಕನ ಕಥೆ’ ಬರೆಯುತ್ತಿದ್ದರಲ್ಲ, ಅದಕ್ಕೆ. ಮದರಾಸಿನಲ್ಲಿ ಶೂಟಿಂಗ್‌ಗೆ ಹೋಗುವಾಗಲೆಲ್ಲ ‘ಚಂದಮಾಮ’ ಕಚೇರಿ ಎದುರು ಕನ್ನಡದ ಫಲಕ ನೋಡಿ, ‘ಅಬ್ಬಾ, ಕನ್ನಡ ಅಕ್ಷರಗಳು ಕಾಣುತ್ತಿವೆಯಲ್ಲ’ ಎಂದು ಸಂಭ್ರಮಪಡುತ್ತಿದ್ದರು’’ ಎಂದು ರಾಘವೇಂದ್ರ ಅವರು ಕೂಡ ಸಂಭ್ರಮದಿಂದಲೇ ಹೇಳಿದರು. ಆನಂತರ ಸಂದರ್ಶನದ ನೆಪದಲ್ಲಿ ಮಾತುಕತೆ ಶುರುವಾಯಿತು.

* ಆರು ವರ್ಷಗಳ ಅನಾರೋಗ್ಯದ ನಂತರ ‘ಅಮ್ಮನ ಮನೆ’ ಸಿನಿಮಾ ಒಪ್ಪಿಕೊಂಡಿದ್ದೀರಿ. ಈ ಪುನರಾಗಮನ ಹೇಗನ್ನಿಸುತ್ತಿದೆ?

ಅಮ್ಮನ ಮನೆಸಿನಿಮಾದ ಮಹತ್ವ ಇರುವುದು, ಈ ಚಿತ್ರದಲ್ಲಿ ರಾಘಣ್ಣ ಮಾಡ್ತಿದ್ದಾರೆ, ಹದಿನೈದು ವರ್ಷಗಳ ನಂತರ ಮೇಕಪ್‌ ಹಾಕುತ್ತಿದ್ದಾರೆ ಎನ್ನುವುದರಲ್ಲಲ್ಲ. ಆರು ವರ್ಷಗಳ ಅನಾರೋಗ್ಯದ ನಂತರ ಒಪ್ಪಿಕೊಂಡ ಸಿನಿಮಾ ಇದು. ಒಬ್ಬ ಮನುಷ್ಯ ಆರು ವರ್ಷಗಳ ಅನಾರೋಗ್ಯದ ನಂತರ ಸಿನಿಮಾ ಮಾಡುತ್ತಿದ್ದಾನೆ ಎಂದರೆ ಈ ಸಿನಿಮಾದಲ್ಲಿ ಏನೋ ಇರಲೇಬೇಕು. ನನ್ನ ಎಡಗಡೆ ಭಾಗ ಪೂರ್ತಿ ಪೆರಾಲಿಸಿಸ್‌ ಆಗಿತ್ತು. ಇಂಥ ವ್ಯಕ್ತಿಯನ್ನೇ ನಿರ್ದೇಶಕರು ಏಕೆ ಹುಡುಕಿಕೊಂಡು ಬಂದರು? ನನ್ನಲ್ಲಿ ಅಂತಹದ್ದೇನು ಕಂಡರು? ರಾಘಣ್ಣ ಅವರನ್ನು ಹಾಕಿಕೊಂಡರೆ ಸಿನಿಮಾ ಗೆಲ್ಲುತ್ತೆ ಎನ್ನುವ ಕಾಲ ಹೊರಟುಹೋಯಿತು. ನಂಜುಂಡಿ ಕಲ್ಯಾಣಆಗಿ ಮೂವತ್ತು ವರ್ಷಗಳಾದವು. ನಿಜವಾಗಿ, ಈ ಮನೆಯಿಂದ ಏನಾದರೂ ಆಗಬೇಕಿದ್ದರೆ ಶಿವಣ್ಣನನ್ನೋ ಅಪ್ಪುವನ್ನೋ ಹಾಕಿಕೊಂಡು ಸಿನಿಮಾ ಮಾಡಬೇಕು. ಅದನ್ನು ಮೀರಿ ನನ್ನನ್ನೇಕೆ ಕೇಳಿದರು ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಅದನ್ನೇ ನಾನು ಕೇಳಿದೆ.

‘ಮಂಜೂ ಅವರೇ, ನನ್ನನ್ನೇ ಹುಡುಕಿಕೊಂಡು ಏಕೆ ಬಂದಿರಿ? ಈಗ ಬಿಜಿನೆಸ್‌ ಏನಾಗ್ತಿದೆ ಎನ್ನುವುದು ನಿಮಗೆ ಗೊತ್ತಾ?’ ಎಂದು ನಿರ್ದೇಶಕರನ್ನು ಕೇಳಿದೆ.

‘ನೀವು ಮೊದಲಿನ ಇಮೇಜ್‌ನಲ್ಲಿಯೇ ಉಳಿದುಕೊಂಡಿದ್ದರೆ ನಿಮ್ಮನ್ನು ಬಂದು ಕೇಳುತ್ತಲೇ ಇರಲಿಲ್ಲ. ನನ್ನ ಪಾತ್ರದಲ್ಲಿ ನಟಿಸುತ್ತಿರುವ ನಟನಿಗೆ ಅಂಥ ಸ್ಟಾರ್‌ ಇಮೇಜ್‌ ಇರಬಾರದು. ಅವರು ಜನಕ್ಕೆ ಗೊತ್ತಿದ್ದರೂ ಒಂಥರಾ ಫ್ರೆಶ್‌ ಆಗಿರಬೇಕು. ನಿಮ್ಮಲ್ಲಿ ಅಂಥ ಗುಣಗಳಿವೆ. ಆದ್ದರಿಂದಲೇ ನಿಮ್ಮಿಂದ ಒಂದು ಮೆಸೇಜ್‌ ಕೊಡಿಸಬೇಕು ಅನಿಸಿತು’

‘ನನ್ನಿಂದ ಏಕೆ ಮೆಸೇಜ್‌ ಕೊಡಿಸುತ್ತಿದ್ದೀರಿ? ನಾನು ಮೆಸೇಜ್‌ ಕೊಟ್ಟರೆ ಜನ ಒಪ್ಪಿಕೊಳ್ಳಲಿಕ್ಕೆ ನಾನೇನು ರಾಜ್‌ಕುಮಾರ್ರಾ ಅಥವಾ ವಿಷ್ಣುವರ್ಧನ್ನಾ?’

‘ಹೇಳ್ತೇನೆ ರಾಘಣ್ಣ. ನೀವು ಹೀಗೆ ಪ್ರಶ್ನಿಸಿದ್ದು ನನಗೆ ಇಷ್ಟವಾಯಿತು. ಕಳೆದ ಹದಿನೈದು ವರ್ಷದಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ. ಅಣ್ಣಾವ್ರು ಕಿಡ್ನ್ಯಾಪ್‌ ಆಗಿ ಕಾಡಿಗೆ ಹೋಗ್ತಾರೆ. ಆ ಸಂದರ್ಭದಲ್ಲಿ ಜನರ ಎದುರು ಬರುವ ರಾಘಣ್ಣ ಎಲ್ಲರಿಗೂ ಸಮಾಧಾನ ಹೇಳುತ್ತಾರೆ. ಅಮ್ಮನನ್ನೂ ಸಂಭಾಳಿಸುತ್ತಾರೆ. ಕಾಡಿನಿಂದ ನಾಡಿಗೆ ಬರುವಾಗ ಅಪ್ಪಾಜಿಯನ್ನು ಕರೆದುಕೊಂಡು ಬರಲು ಅವರೇ ಹೋಗುತ್ತಾರೆ. ಅಪ್ಪಾಜಿಗೆ ಮಂಡಿಗೆ, ಸೊಂಟಕ್ಕೆ ಆಪರೇಷನ್‌ ಆದಾಗಲೂ ನೀವು ಮುಂದೆ ನಿಲ್ಲುತ್ತೀರಿ. ಈ ಎಲ್ಲ ಸಂದರ್ಭದಲ್ಲಿ ನೀವು ನಿರ್ವಹಿಸಿದ ಜವಾಬ್ದಾರಿ ನನ್ನ ಗಮನಸೆಳೆಯಿತು. ‘ನಂಜುಂಡಿ ಕಲ್ಯಾಣ’ದ ನಾಯಕ ನನಗೆ ಮರೆತುಹೋಗಿ, ಮನೆಯ ಮಗ ರಾಘಣ್ಣನಾಗಿ ಮನಸ್ಸಿನಲ್ಲಿ ಉಳಿದಿರಿ. ಅಪ್ಪಾಜಿ ದೇಹಾಂತವಾದಾಗ ಅಳುವುದನ್ನೂ ಬಿಟ್ಟು ಶಾಂತಿ ಕಾಪಾಡಲಿಕ್ಕೆ ಹೊರಟಿದ್ದು ಇಷ್ಟವಾಯಿತು. ಪರಮೇಶ್ವರನನ್ನು ಬಿಟ್ಟು ಒಂಟಿಯಾಗಿ ಬದುಕಬೇಕಾದ ಪಾರ್ವತಿ ಜೊತೆ (ಅಮ್ಮನ ಜೊತೆ) ನಿಲ್ಲುತ್ತೀರಿ. ಅಮ್ಮನೊಂದಿಗೆ ಎಲ್ಲ ಕಡೆ ಹೋಗುತ್ತೀರಿ. ಇದೆಲ್ಲದರ ನಡುವೆ ಸಂಸ್ಥೆಯಿಂದ ನಾಲ್ಕು ಸಿನಿಮಾ ಮಾಡುತ್ತೀರಿ.

ನಟಿಸುವುದನ್ನು ಪಕ್ಕಕ್ಕಿಟ್ಟು ವಜ್ರೇಶ್ವರಿ ಕಂಬೈನ್ಸ್‌ ಸಂಸ್ಥೆಯಲ್ಲಿ ಕೂರುತ್ತೀರಿ. ಇದು ತ್ಯಾಗವಾ ಕರ್ತವ್ಯವಾ ನನಗೆ ಗೊತ್ತಿಲ್ಲ. ತಮ್ಮನ ಸಿನಿಮಾದ ಕಥೆಗಳನ್ನೂ ಕೇಳುತ್ತೀರಿ, ಅವರಿಗೆ ಜೊತೆಯಾಗಿ ನಿಲ್ಲುತ್ತೀರಿ. ನಿಮಗೆ ಹುಷಾರು ತಪ್ಪಿದಾಗಲೂ ಮಗನ ಸಿನಿಮಾದ ಬಗ್ಗೆ ಗಮನಹರಿಸುತ್ತೀರಿ. ಅನಾರೋಗ್ಯದಿಂದಿರುವಾಗಲೂ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದ್ದೀರಿ. ಹಾಗಾಗಿ ನಮ್ಮ ಚಿತ್ರದ ಸಂದೇಶವನ್ನು ದಾಟಿಸಲು ನೀವು ಸರಿಯಾದ ವ್ಯಕ್ತಿ ಎಂದು ನನಗನ್ನಿಸಿತು. ಆ ಜವಾಬ್ದಾರಿ ನಿಮ್ಮಲ್ಲಿ ಈಗಲೇ ಇದೆ. ಅದನ್ನು ತೆರೆಯಮೇಲೆ ಹೇಳಬೇಕಷ್ಟೇ’.

ನಿಖಿಲ್‌ ಅವರ ಮಾತು ಕೇಳಿದ ಮೇಲೆ ನಾನವರಿಗೆ ಹೇಳಿದೆ: ನೀವು ಹೇಳಿದ್ದೆಲ್ಲ ನನ್ನಲ್ಲಿ ಇದೆಯೋ ಇಲ್ಲವೋ ತಿಳಿದಿಲ್ಲ. ಅದನ್ನು ನೀವು ನನ್ನಲ್ಲಿ ತರಬೇಕಷ್ಟೇ.

* ‘ಅಮ್ಮನ ಮನೆ’ ಎನ್ನುವ ಶೀರ್ಷಿಕೆ ನೀವು ಸಿನಿಮಾಕ್ಕೆ ಮರಳುತ್ತಿರುವ ರೂಪಕದಂತೆಯೂ ಇದೆಯಲ್ಲವೇ?

‘ಅಮ್ಮನ ಮನೆ’ ಎನ್ನುವ ಹೆಸರು ನನಗೆ ತುಂಬಾ ಇಷ್ಟವಾಯಿತು. ಅಮ್ಮನಿಗೆ ನನ್ನ ಬಗ್ಗೆ ಒಂದು ಕೊರಗಿತ್ತು. ‘ಅಚ್ಚುಕಟ್ಟಾಗಿ ಆ್ಯಕ್ಟ್‌ ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆ ಆರಾಮಾಗಿದ್ದೆ. ಆಫೀಸ್‌ ನೋಡ್ಕೊ, ಜವಾಬ್ದಾರಿ ತಗೋ, ಬಿಜಿನೆಸ್‌ ಮಾಡು ಎಂದು ನಿನ್ನ ಮೇಲೆ ಒತ್ತಡ ಹಾಕಿದೆ. ಆ ಒತ್ತಡದಲ್ಲಿ ಸಿಲುಕಿ ಕಲೆಯ ಬಗ್ಗೆ ನೀನು ಗಮನಹರಿಸಲಿಲ್ಲ. ಆ ಒತ್ತಡವೇ ಸ್ಟ್ರೋಕ್‌ಗೆ ಕಾರಣವಾಯಿತು. ನಿನ್ನ ಸ್ಟ್ರೋಕ್‌ಗೆ ನಾನೇ ಕಾರಣ’ ಎಂದು ಅಮ್ಮ ಹೋಗುವ ಒಂದು ತಿಂಗಳ ಮೊದಲಷ್ಟೇ ನನಗೆ ಹೇಳಿದ್ದರು.

ಅಮ್ಮನ ಮನೆ
ಅಮ್ಮನ ಮನೆ

ಅಮ್ಮನ ಮಾತು ಕೇಳಿ ತುಂಬಾ ಬೇಸರವೆನ್ನಿಸಿತು. ಅಮ್ಮ ಆಸ್ಪತ್ರೆಯಲ್ಲಿ ಲೈಫ್‌ ಸಪೋರ್ಟ್‌ನಲ್ಲಿದ್ದರು. ಅವರ ಮನಸ್ಸಿನಲ್ಲಿದ್ದ ಕೊರಗನ್ನು ತೆಗೆಯಬೇಕು ಅನ್ನಿಸಿತು. ದೇಹ ಬಿಡುವಾಗ ಆತ್ಮ ನೊಂದುಕೊಂಡು ಹೋದರೆ ನಮಗೆ ಒಳ್ಳೆಯದಾಗಲ್ಲ. ನೋವಿನಲ್ಲಿ ಅವರು ದೇಹತ್ಯಾಗ ಮಾಡುವುದು ನನಗಿಷ್ಟವಿರಲಿಲ್ಲ. ‘ಹೆಚ್ಚೆಂದರೆ ಇನ್ನೆರಡು ದಿನವಷ್ಟೇ. ಅಮ್ಮನಿಗೆ ಏನಾದರೂ ಹೇಳಬೇಕಿದ್ದರೆ ಹೇಳಿಬಿಡಿ’ ಎಂದು ವೈದ್ಯರು ಹೇಳಿದರು. ಅಮ್ಮನ ಬಳಿ ಕುಳಿತ ನಾನು, ‘ಅಮ್ಮಾ... ನನ್ನಿಂದ ಹೀಗಾಯಿತು ಎಂದು ನೀನು ನನಗೆ ಹೇಳಿದ ಮಾತನ್ನು ನಿನ್ನ ಮನಸ್ಸಿನಿಂದ ತೆಗೆದುಬಿಡು. ಯಾವ ತಾಯಿಯೂ ಮಕ್ಕಳಿಗೆ ಹಾಗೆ ಮಾಡಲು ಸಾಧ್ಯವಿಲ್ಲ. ಕೆಲಸ ಮಾಡಿದ್ದರಿಂದಾಗಿ ನನಗೆ ಜವಾಬ್ದಾರಿ ಬಂದಿದೆ. ಇದರ ಪರಿಣಾಮವನ್ನು ಮುಂದೆ ನೀನೇ ನೋಡುವೆ. ನಾನು ಮತ್ತೆ ಪಿಕ್ಚರ್‌ ಮಾಡ್ತೇನೆ. ನೀನೇ ಮಾಡಿಸುತ್ತೀಯಾ. ಆ ಸಿನಿಮಾವನ್ನು ನಿನಗೇ ಅರ್ಪಿಸುವೆ. ದೇಹ ಬಿಡಬೇಕಾದರೆ ನೀನು ಇಂತಹ ಮಾತನಾಡಬೇಡ. ನೊಂದುಕೊಂಡು ಹೋಗಬೇಡ’ ಎಂದು ಹೇಳಿದೆ. ಅಮ್ಮನ ಕಣ್ಣಲ್ಲಿ ನೀರು ಕಾಣಿಸಿತು. ನನ್ನ ಕೈ ಹಿಡಿದುಕೊಂಡರು. ಅದಾದ ಇಪ್ಪತ್ತನಾಲ್ಕು ತಾಸುಗಳಲ್ಲಿ ತೀರಿಕೊಂಡರು.

ಅಮ್ಮನ ಸಾವಿಗೆ ಒಂದು ವರ್ಷ ತುಂಬುವ ಮೊದಲೇ ನಿಖಿಲ್‌ ಮಂಜೂ ನನ್ನನ್ನು ಹುಡುಕಿಕೊಂಡು ಬಂದರು. ‘ಅಮ್ಮನ ಸಾವಿಗೆ ಒಂದು ವರ್ಷ ತುಂಬುವವರೆಗೆ ನಾನು ಸಿನಿಮಾದಲ್ಲಿ ನಟಿಸುವುದಿಲ್ಲ. ನೀವು ಬೇಕಾದರೆ ಬೇರೆಯವರನ್ನು ಹಾಕಿಕೊಳ್ಳಬಹುದು’ ಎಂದೆ. ನಿಖಿಲ್‌ ಒಪ್ಪಲಿಲ್ಲ. ‘ಎಷ್ಟು ವರ್ಷ ಬೇಕಾದರೂ ಕಾಯುತ್ತೇನೆ. ಈ ಪಾತ್ರದಲ್ಲಿ ನಿಮ್ಮನ್ನಷ್ಟೇ ಕಾಣುತ್ತಿದ್ದೇನೆ’ ಎಂದರು.

ಆ ಮನುಷ್ಯನ ಮಾತು, ಭಾಷೆ, ಶಿಸ್ತು ನನಗೆ ತುಂಬಾ ಇಷ್ಟವಾಯಿತು. ‘ನಾನೊಬ್ಬ ನಟ, ನಂಜುಂಡಿ ಕಲ್ಯಾಣದ ನಾಯಕ ಎಂದುಕೊಂಡು ನನ್ನ ಬಳಿ ಬಂದಿದ್ದರೆ ಅದನ್ನು ಮರೆತುಬಿಡಿ. ಆ ಕಾಲ ಹೋಯಿತು. ಅದ್ಯಾವುದೂ ನನಗೆ ನೆನಪಿಲ್ಲ. ಈಗ ನಾನೊಬ್ಬ ಹೊಸ ನಟ. ನೀವು ಮಾಡಿಸುವುದಿದ್ದರೆ ಮಾಡಿಸಿ. ಈಗ ನನಗೆ ಮೊದಲಿಗಿಂತಲೂ ಹೆಚ್ಚು ಭಯವಿದೆ. ನಾನಿದನ್ನು ಪ್ರಸಾದ ಎಂದು ಕಣ್ಣಿಗೊತ್ತಿಕೊಂಡು ಮಾಡುವೆ ಅಷ್ಟೇ. ನಿಮಗಿದು ಸಿನಿಮಾ, ನನ್ನ ಪಾಲಿಗಿದು ಬದುಕು–ಚಿಕಿತ್ಸೆ. ದೇವರು ಕೊಟ್ಟಿರುವ ಅವಕಾಶ’ ಎಂದು ಅವರಿಗೆ ಹೇಳಿದೆ.

ಕಥೆಯಲ್ಲಿನ ಕೆಲವು ಸನ್ನಿವೇಶಗಳು ನಾನು ಅಮ್ಮನೊಂದಿಗೆ ಕಳೆದ ಸಂದರ್ಭವನ್ನು ನೆನಪಿಸುವಂತಿವೆ. ಈ ಸಿನಿಮಾ ಮೂಲಕ ಅಮ್ಮನೊಂದಿಗೆ ಒಂದಷ್ಟು ಸಮಯವನ್ನು ಕಳೆಯಬಹುದು ಎನ್ನಿಸುತ್ತಿದೆ. ಇದು, ಎಲ್ಲಿಂದಲೋ ಅಮ್ಮನೇ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟ ಸಿನಿಮಾ ಅನ್ನಿಸುತ್ತಿದೆ. ಹೀಗಿದ್ದೂ ಇದನ್ನು ನನ್ನ ಕಮ್‌ಬ್ಯಾಕ್‌ ಸಿನಿಮಾ ಎಂದು ಕರೆಯಲು ನಾನು ಬಯಸುವುದಿಲ್ಲ. ರಾಘಣ್ಣ ಆರು ವರ್ಷಗಳಿಂದ ದೂರ ಉಳಿದಿದ್ದರಿಂದ ಚಿತ್ರೋದ್ಯಮಕ್ಕೇನೂ ನಷ್ಟವಾಗಿಲ್ಲ. ಅಪ್ಪಾಜಿ ಒಂದಷ್ಟು ವರ್ಷ ನಟನೆಯಿಂದ ದೂರವುಳಿದು ಮತ್ತೆ ಜೀವನಚೈತ್ರದಲ್ಲಿ ನಟಿಸಿದರಲ್ಲ, ಅದು ನಿಜವಾದ ಕಮ್‌ಬ್ಯಾಕ್‌.

ಸಿನಿಮಾ ಯಾವಾಗಲೂ ನಮಗಿಂತ ದೊಡ್ಡದು. ನಾವು ಸಿನಿಮಾದೊಳಗಿರಬೇಕು. ‘ಇನ್ನು ನೂರು ವರ್ಷವಾದರೆ ನಾವ್ಯಾರೂ ಇರುವುದಿಲ್ಲ. ಆದರೆ ಸಿನಿಮಾ ಇರುತ್ತಿದೆ. ಸಿನಿಮಾ ನಮಗಿಂತಲೂ ದೊಡ್ಡದು. ನಾವು ಅದನ್ನು ಮೀರಿ ಬೆಳೆಯುವಂತಾಗಬಾರದು’ ಎಂದು ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು. ಒಂದು ಒಳ್ಳೆಯ ಸಿನಿಮಾದಲ್ಲಿ ನಾನಿದ್ದೇನೆ ಅನ್ನುವಂತಾದರೆ ಸಾಕು.

* ನಿಮ್ಮ ಕಮ್‌ಬ್ಯಾಕ್‌ ಎನ್ನುವುದು ಬೇಡ. ಆದರೆ, ನಿರ್ದೇಶಕರು ಹೇಳುವ ಕಥೆಯನ್ನು ಕೇಳಿದರೆ ‘ಅನುರಾಗ ಅರಳಿತು’ ಹಾಗೂ ‘ಜೀವನಚೈತ್ರ’ ಚಿತ್ರಗಳಲ್ಲಿನ ತಾಯಿ–ಮಗನ ನಂಟು ನೆನಪಿಗೆ ಬರುವಂತಿದೆ. ಅಭಿರುಚಿಯ ದೃಷ್ಟಿಯಿಂದ ಇದನ್ನು ಕಮ್‌ಬ್ಯಾಕ್‌ ಸಿನಿಮಾ ಅನ್ನಬಹುದಾ?

ಜೀವನದಲ್ಲಿ ಎಲ್ಲರೂ ಅನುಭವಿಸುವ ಪಾತ್ರಗಳು ‘ಅಮ್ಮನ ಮನೆ’ ಸಿನಿಮಾದಲ್ಲಿವೆ. ಅಮ್ಮ, ಹೆಂಡತಿ, ಮನೆ–ಮಕ್ಕಳು... ಇವೆಲ್ಲ ಎಂದೂ ಬದಲಾಗುವಂತಹದ್ದಲ್ಲ. ಸೂರ್ಯ ಚಂದ್ರನಂತೆ ಶಾಶ್ವತ. ‘ರಾಘಣ್ಣನ ಪಾತ್ರ ನನ್ನ ಜೀವನದಂತಿದೆ, ಅಮ್ಮನ ಪಾತ್ರ ನನ್ನಮ್ಮನಂತಿದೆ’ ಎಂದು ಪ್ರೇಕ್ಷಕರು ತಮ್ಮನ್ನು ಕನೆಕ್ಟ್‌ ಮಾಡಿಕೊಳ್ಳುವಂತೆ ಚಿತ್ರದ ಕಥೆಯಿದೆ.

ನನಗೆ ಇಷ್ಟವಾದುದು ಈ ಸಿನಿಮಾದಲ್ಲಿ ಪ್ರೀಚಿಂಗ್‌ ಇಲ್ಲದಿರುವುದು. ಯಾರನ್ನೂ ತಿದ್ದುವ ಉದ್ದೇಶ ಸಿನಿಮಾದಲ್ಲಿಲ್ಲ. ಸಿನಿಮಾದಿಂದ ಜನರನ್ನು ತಿದ್ದಬಹುದು ಎನ್ನುವಂಥ ಕಲಾವಿದರು ಹೊರಟುಹೋದರು. ‘ಅಣ್ಣಾವ್ರು ಹೇಳಿದ್ದಾರೆ, ನಾವು ಕುಡಿಯಬಾರದು’ ಎಂದು ‘ಜೀವನಚೈತ್ರ’ ಸಿನಿಮಾ ನೋಡಿದ ಕೆಲವರಿಗೆ ಅನ್ನಿಸಿರಬಹುದು. ಆ ಕಾಲ ಹೊರಟುಹೋಯಿತು. ಈಗ ಜನ ಸಿನಿಮಾಗಳನ್ನು ಮಾರಲ್‌ ಆಗಿ ತೆಗೆದುಕೊಳ್ಳುವುದು ಈಜಿ ಅಲ್ಲ. ಏಕೆಂದರೆ, ನಮ್ಮನ್ನು ನೋಡಿದರೆ ಜನರಿಗೆ ಆ ಭಾವನೆಯೇ ಉಂಟಾಗೊಲ್ಲ. ಅಂಥ ಕಥೆಗಳು, ವ್ಯಕ್ತಿಗಳು ಈಗಿಲ್ಲ. ನಮ್ಮ ಕಥೆಯೊಳಗೆ ಅವರನ್ನು ಎಳೆದುಕೊಳ್ಳುವುದು ಸಾಧ್ಯವಾದರೆ – ಹೀಗೂ ಇರಬಹುದಾ, ಹೀಗೂ ಬದುಕಬಹುದಾ ಎಂದು ಅವರಿಗನ್ನಿಸುವಂತಾದರೆ ಸಾಕು.

ಅಮ್ಮ ಮತ್ತು ಹೆಂಡತಿಯ ನಡುವೆ ಬ್ಯಾಲೆನ್ಸ್‌ ಮಾಡುವುದು ಹೇಗೆ ಎನ್ನುವ ಕಾನ್ಸೆಪ್ಟ್‌ ‘ಅಮ್ಮನ ಮನೆ’ ಸಿನಿಮಾದಲ್ಲಿದೆ. ಹೆಂಡತಿಯನ್ನು ಯಾವಾಗಲೂ ತಮಾಷೆ ಮಾಡುತ್ತಿರುತ್ತೇವೆ. ‘ನಿನ್ನನ್ನು ಕಟ್ಟಿಕೊಂಡಿದ್ದು ಜೈಲಿಗೆ ಹೋದ ಹಾಗಾಯಿತು’ ಎನ್ನುವಂಥ ಮಾತುಗಳನ್ನಾಡುತ್ತೇವೆ. ಆದರೆ, ಹೆಂಡತಿ ಪದದ ನಿಜವಾದ ಅರ್ಥವೇನು ಎನ್ನುವುದನ್ನು ಈ ಸಿನಿಮಾದಲ್ಲಿ ಅನುಭವಿಸಬಹುದು ಎನ್ನಿಸುತ್ತದೆ. ಸಿನಿಮಾದಲ್ಲಿನ ತಾಯಿ ಹೇಳುತ್ತಾಳೆ: ‘ನಾನು ನಿನಗೆ ಪ್ರಪಂಚ ತೋರಿಸಿದ ಅಮ್ಮ. ಆದರೆ, ನೀನೇ ಪ್ರಪಂಚ ಎಂದು ನಂಬಿಕೊಂಡು ಬಂದವಳು ಅವಳು’. ಇಬ್ಬರು ತಾಯಂದಿರು. ಹೆಂಡತಿಯನ್ನು ಅಮ್ಮನ ದೃಷ್ಟಿಕೋನದಿಂದ ನೋಡಬೇಕು. ಹೆಂಡತಿಯ ಕಣ್ಣಿನಿಂದ ಅಮ್ಮನನ್ನು ನೋಡಬೇಕು. ಆಗ ಇಬ್ಬರೂ ಅರ್ಥವಾಗುತ್ತಾರೆ. ಇಬ್ಬರನ್ನೂ ಸರಿತೂಗಿಸಿಕೊಂಡು ಸಂತೋಷವನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಬೋಧನೆಯಿಲ್ಲದೆ ಸಿನಿಮಾ ಹೇಳುತ್ತದೆ. ಎಲ್ಲರಿಗೂ ಕುಟುಂಬಗಳಿರುತ್ತವೆ, ಅವರು ತಮ್ಮ ಕುಟುಂಬಗಳೊಂದಿಗೆ ಸಿನಿಮಾದ ಕಥೆಯನ್ನು ಗುರ್ತಿಸಿಕೊಳ್ಳುತ್ತಾರೆ.

ಈ ಪಾತ್ರ ನನಗೊಂದು ಜವಾಬ್ದಾರಿಯೂ ಹೌದು. ವೃತ್ತಿಜೀವನದ ಮೊದಲ ಭಾಗದಲ್ಲಿ ನಾನು ಮಾಡದೆ ಇರುವಂತಹ ಪಾತ್ರವಿದು. ಅಮ್ಮ, ಹೆಂಡತಿ, ಇಬ್ಬರು ಮಕ್ಕಳನ್ನು ಹೊಂದಿರುವ ಗೃಹಸ್ಥನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದೊಂದು ರೀತಿಯಲ್ಲಿ ಜವಾಬ್ದಾರಿಯುತ ಕ್ಯಾರೆಕ್ಟರ್‌.

* ತುಂಬಾ ವರ್ಷಗಳ ನಂತರ ಕ್ಯಾಮೆರಾ ಎದುರು ನಿಂತಾಗ ಏನನ್ನಿಸಿತು?

ಸಿನಿಮಾ ಟೆಕ್ನಾಲಜಿ ಎಷ್ಟೊಂದು ಬದಲಾಗಿದೆ‍! ನಾನು ನಟಿಸುವ ಸಂದರ್ಭದಲ್ಲಿ ಕ್ಯಾಮೆರಾ ಶಬ್ದ ಮಾಡುತ್ತಿತ್ತು. ಮೊನ್ನೆ ಮುಹೂರ್ತದ ಸಂದರ್ಭದಲ್ಲಿ ಕ್ಯಾಮೆರಾ ಸದ್ದೇ ಮಾಡುತ್ತಿಲ್ಲ. ಮೊದಲ ದೃಶ್ಯಕ್ಕೆ ಆ್ಯಕ್ಷನ್‌ ಹೇಳಿದ್ದು ಶಿವಣ್ಣ. ಆ್ಯಕ್ಷನ್‌ ಎಂದರೂ ನನಗೆ ನಟಿಸಲೇ ಆಗುತ್ತಿಲ್ಲ. ಏಕೆಂದರೆ ಕ್ಯಾಮೆರಾ ಗರ್ರ್ ಎನ್ನುತ್ತಲೇ ಇಲ್ಲ. ಎಲ್ಲವೂ ಹೊಸದು ಎನ್ನಿಸಿತು. ಆ ಕಾರಣದಿಂದಲೇ ನನಗೊಂದು ವರ್ಕ್‌ಶಾಪ್‌ ಕೊಡಿ ಎಂದು ನಿರ್ದೇಶಕರನ್ನು ಕೇಳಿಕೊಂಡಿದ್ದೇನೆ.

ಸಿನಿಮಾ ಮೂಲಕ ಯಾರನ್ನು ಒಪ್ಪಿಸುವುದು ಎನ್ನುವ ಬಗ್ಗೆ ಅಪ್ಪಾಜಿ ಹಾಗೂ ನನ್ನ ನಡುವೆ ಒಮ್ಮೆ ಚರ್ಚೆ ನಡೆದಿತ್ತು. ‘ಜನರನ್ನು ಮೆಚ್ಚಿಸಲು, ದೇವರನ್ನು ಮೆಚ್ಚಿಸಲು’ ಎಂದು ನಾನು ಹೇಳಿದ್ದೆ. ‘ಯಾವ ದೇವರನ್ನು ಮೆಚ್ಚಿಸಲು?’ ಎಂದು ಅಪ್ಪಾಜಿ ಪ್ರಶ್ನಿಸಿದರು. ‘ನಿಮ್ಮ ಅಪ್ಪ ಯಾರನ್ನು ಮೆಚ್ಚಿಸಲು ನಟಿಸುತ್ತಿದ್ದಾನೆ ಗೊತ್ತಾ?’ ಎಂದರು. ‘ನಿರ್ದೇಶಕನನ್ನು ಮೆಚ್ಚಿಸಿಬಿಟ್ಟರೆ ನನ್ನ ಕೆಲಸ ಮುಗಿಯಿತು. ಜನರನ್ನು ಮೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ ಎನ್ನುವುದು ಸುಳ್ಳು ಕಂದ. ನಮ್ಮನ್ನು ಹುಡುಕಿಕೊಂಡು ಬರುವುದು ನಿರ್ದೇಶಕ. ಆತ ಕಥೆಯನ್ನು ಹುಟ್ಟಿಸುತ್ತಾನೆ. ಮೊದಲು ಆ ಆತ್ಮವನ್ನು ಒಪ್ಪಿಸಬೇಕು. ಅವರನ್ನ ಒಪ್ಪಿಸಲೇ ನಮಗೆ ಸಾಧ್ಯವಾಗದೆ ಹೋದರೆ ಬೇರೆ ಯಾರನ್ನು ಒಪ್ಪಿಸಲು ಸಾಧ್ಯ’ ಎಂದರು. ತಮ್ಮ ಮಾತಿಗೆ ಅಪ್ಪಾಜಿ ಮಂತ್ರಾಲಯ ಮಹಾತ್ಮೆಚಿತ್ರದ ಉದಾಹರಣೆಯನ್ನು ನೀಡಿದರು.

‘‘ನನ್ನ ಜೀವನದಲ್ಲಿ ನಾನು ರಾಘವೇಂದ್ರ ಸ್ವಾಮಿಗಳನ್ನು ನೋಡಿಲ್ಲ. ನಿರ್ದೇಶಕರಿಗೆ ಕೇಳಿದೆ: ‘ನಾನು ರಾಘವೇಂದ್ರ ಸ್ವಾಮಿಗಳನ್ನು ನೋಡಿಯೇ ಇಲ್ಲ. ಪಾತ್ರಕ್ಕೆ ಹೇಗೆ ಸಿದ್ಧತೆ ನಡೆಸಲಿ’. ‘ನೀವೇ ನೋಡಿಲ್ಲವೆಂದ ಮೇಲೆ ನಾವಿನ್ನು ಎಲ್ಲಿಂದ ನೋಡುವುದು’ ಎಂದರು ನಿರ್ದೇಶಕರು. ‘ಸರಿ, ನನ್ನಲ್ಲಿ ನಿಮಗೆ ಸ್ವಾಮಿ ಕಾಣಿಸುತ್ತಿದ್ದಾನಾ? ಹೌದಾದರೆ ನನ್ನಿಂದ ನಟನೆ ಮಾಡಿಸಿ’ ಎಂದೆ. ಅವರು ಒಪ್ಪಿಕೊಂಡರು. ಕಾಳಿದಾಸನನ್ನು ನಾನು ನೋಡಿರಲಿಲ್ಲ. ಭಕ್ತ ಕುಂಬಾರನನ್ನು ನೋಡಿರಲಿಲ್ಲ. ಆದರೆ, ಆ ಪಾತ್ರಗಳು ನಿರ್ದೇಶಕರಿಗೆ ನನ್ನಲ್ಲಿ ಕಾಣಿಸಿದ್ದರಿಂದ ಮಾಡಿಸಿದರು’’.

ಅಪ್ಪಾಜಿಗೆ ಯಾವುದೇ ಪ್ರಶಸ್ತಿ ಬಂದಾಗಲೂ ಅವರು ಹೇಳುತ್ತಿದ್ದುದು ಒಂದೇ ಮಾತು. ‘ಇದು ನನ್ನದಲ್ಲ. ಕಥೆ ಹುಟ್ಟಿಸಿದವರದು’. ಅಪ್ಪಾಜಿ ಅವಾರ್ಡ್‌ ತಗೊಂದು ದೇವರ ಕೋಣೆಗೆ ಬರುತ್ತಿದ್ದರಂತೆ. ‘ನೀನೊಬ್ಬನೇ ಇದನ್ನು ಮಾಡಿದ್ಯಾ? ನಾಚಿಕೆ ಆಗೊಲ್ಲವಾ ನಿನಗೆ?’ ಎಂದು ದೇವರು ಪ್ರಶ್ನಿಸಿದಂತೆ ಅವರಿಗೆ ಅನ್ನಿಸುತ್ತಿತ್ತಂತೆ. ಪ್ರಶಸ್ತಿ ಎಂದರೆ ಅವರಿಗೆ ನಾಚಿಕೆ, ಕಸಿವಿಸಿ. ಗೌರವ ಡಾಕ್ಟರೇಟ್‌, ಪದ್ಮಭೂಷಣ ಬಂದಾಗಲೂ ಹೀಗೆ ಮುಜುಗರ ಅನುಭವಿಸಿದ್ದರು. ಸಂದೇಹವೇ ಇಲ್ಲ, ಅವರು ಸರಳತೆಗೆ ಸಾರ್ವಭೌಮ. ಈ ಮಾರ್ಗದಲ್ಲಿ ನನ್ನ ಸೆಕೆಂಡ್‌ ಇನಿಂಗ್ಸ್‌ ಹೋಗಬೇಕು ಎನ್ನುವುದು ನನ್ನ ಆಸೆ. ‘ಇಷ್ಟು ಬಂತು, ಇಷ್ಟು ಹೋಯಿತು’ ಎನ್ನುವ ಕಮರ್ಷಿಯಲ್‌ ಲೆಕ್ಕಾಚಾರ ನಟನಾಗಿ ನನಗೆ ಮುಖ್ಯವೆನ್ನಿಸುತ್ತಿಲ್ಲ. ಒಂದು ಹತ್ತು ಆತ್ಮಗಳು ಒಪ್ಪಿಕೊಂಡರೆ ಸಾಕು. ಕೆಲವರಿಗಾದರೂ ತಮ್ಮ ತಂದೆ–ತಾಯಿ ನೆನಪಾದರೆ ಸಾಕು.

* ಕಳೆದ ಆರು ವರ್ಷಗಳಲ್ಲಿ ನೀವು ಅನುಭವಿಸಿದ ಅನಾರೋಗ್ಯದ ಬಗ್ಗೆ ಕೇಳಬಹುದೆ? ಆ ಸಂದರ್ಭ ಹೇಗಿತ್ತು?

ಕೆಲವು ರೋಗಗಳು ಇಪ್ಪತ್ತೈದು ವರ್ಷಗಳ ಹಿಂದೆ ಏನನ್ನುವುದು ಗೊತ್ತಿರಲಿಲ್ಲ. ಕ್ಯಾನ್ಸರ್, ಸ್ಟ್ರೋಕ್‌ ಬಗ್ಗೆ ಎಲ್ಲರಿಗೂ ತಿಳಿದಿರಲಿಲ್ಲ. ಆಗ ಟಿ.ಬಿ. ದೊಡ್ಡ ಕಾಯಿಲೆ. ಈಗದು ತುಂಬಾ ಸಣ್ಣ ಕಾಯಿಲೆ. ಸ್ಟ್ರೋಕ್‌ ಆಗಿ ನರಳುತ್ತಿರುವ ನನ್ನ ವಯಸ್ಸಿನ ತುಂಬಾ ಜನರನ್ನು ನೋಡಿದ್ದೇನೆ. ‘ಮುಂದೆ ಜೀವನವಿಲ್ಲ’ ಎಂದು ನಾನೇ ಅಂದುಕೊಂಡಿದ್ದೆ. ‘ಇಲ್ಲ, ಇನ್ನೂ ಜೀವನವಿದೆ’ ಎನ್ನುವ ಪ್ರೇರಣೆ ಯಾರಿಗಾದರೂ ಉಂಟಾದರೆ, ನನ್ನ ವಯಸ್ಸಿನ ಕಷ್ಟಪಡುತ್ತಿರುವ ಜನಕ್ಕೆ ಭರವಸೆ ಮೂಡಬಹುದು.

‘ರಾಘಣ್ಣ, ರಾಜ್‌ಕುಮಾರ್‌ ಅವರ ಮಗ. ಫಾರಿನ್‌ನಲ್ಲಿ ಟ್ರೀಟ್‌ಮೆಂಟ್‌ ಮಾಡಿಸಿಕೊಂಡು ಗುಣವಾಗಿದ್ದಾರೆ’ ಎಂದು ಕೆಲವರಿಗೆ ಅನ್ನಿಸಬಹುದು. ವಿಷಯ ಹಾಗೇನೂ ಇಲ್ಲ. ನಾನು ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆದು ಇಷ್ಟರಮಟ್ಟಿಗೆ ಗುಣವಾಗಿದ್ದೇನೆ. ನಮ್ಮ ಭಾರತೀಯ ವೈದ್ಯರುಗಳು ಹಾಗೂ ಫಿಜಿಯೊಥೆರಪಿಸ್ಟ್‌ಗಳು ಯಾರಿಗೇನೂ ಕಡಿಮೆಯಿಲ್ಲ. ಸ್ಟ್ರೋಕ್‌ ಆದ ಮೊದಲ ಮೂರು ತಿಂಗಳುಗಳಲ್ಲಿ ನಾನು ಸಿಂಗಪುರಕ್ಕೆ ಹೋಗಿಬಂದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಅಲ್ಲಿಗೆ ಹೋಗಿದ್ದಕ್ಕಾಗಿ ಸ್ವಲ್ಪವೂ ಗುಣಕಾಣಲಿಲ್ಲ. ಹೇಗೆ ಹೋದೆನೋ ಹಾಗೆಯೇ ಬಂದೆ. ಇವತ್ತು ನಾನು ನಡೆಯುವೆ, ಕುಳಿತುಕೊಳ್ಳುವೆ, ಹಾಡುವೆ, ನಟಿಸುವೆ ಎಂದರೆ ಅದಕ್ಕೆ ಇಲ್ಲಿನ ವೈದ್ಯರು ನೀಡಿದ ಚಿಕಿತ್ಸೆಯೇ ಕಾರಣ.

ಆರು ವರ್ಷಗಳ ಹಿಂದಿನ ಮಾತು. 2013ರಲ್ಲಿ ಸ್ಟ್ರೋಕ್‌ ಆದದ್ದು. ಹಿಂದಿನ ದಿನವಷ್ಟೇ ಮಗನ ಸಿನಿಮಾದ ಕಥೆಯನ್ನು ಪೂರ್ಣವಾಗಿ ಕೇಳಿ, ಖುಷಿಯಿಂದ ಒಪ್ಪಿಕೊಂಡಿದ್ದೆ. ಅದಾದ ಮಾರನೇ ದಿನ ಬೆಳಿಗ್ಗೆ ಜಿಮ್‌ಗೆ ಹೋಗಿ ರನ್ನಿಂಗ್‌ ಮಾಡ್ತಿದ್ದೆ. ಸಡನ್ನಾಗಿ ಹಿಂದಿನಿಂದ ಏನೋ ಪಾಸಾದಂತೆ ಅನ್ನಿಸಿತು. ಏನೋ ಆಯಿತು ಎನ್ನುವುದಷ್ಟೇ ಗೊತ್ತು. ಓಡುತ್ತಿದ್ದ ಯಂತ್ರವನ್ನು ನಿಲ್ಲಿಸಬೇಕು ಅನ್ನಿಸಿತು. ಬೇಡ, ಮುಗಿಸಿಬಿಡೋಣ ಎಂದೂ ಅನ್ನಿಸಿತು. ಆ ಸಮಯದಲ್ಲೇ ಒಬ್ಬರು ಮಹಿಳೆ ನನ್ನ ಹಿಂದೆ ಬಂದರು. ಅವರ ಹೆಸರು ರೇಖಾ, ಡಾ. ರೇಖಾ. ನನ್ನ ಸ್ನೇಹಿತರು. ವಿಧಿ ಹೇಗಿದೆ ನೋಡಿ. ‘ನೀವು ಕಂಫರ್ಟಬಲ್ ಆಗಿಲ್ಲ. ನಿಮಗೆ ಏನೋ ಆಗ್ತಿದೆ. ಅದನ್ನು ಆಫ್‌ ಮಾಡಿ’ ಎಂದರು. ‘ನೀವೇ ಆಫ್‌ ಮಾಡಿ’ ಎಂದೆ. ಅವರು ಕಿರುಚಿಕೊಂಡರು. ಯಾರೋ ಬಂದು ಆಫ್‌ ಮಾಡಿದರು. ‘ತಕ್ಷಣವೇ ನಾವು ಆಸ್ಪತ್ರೆಗೆ ಹೋಗಬೇಕು’ ಎಂದು ಅವರು ಹೇಳುತ್ತಿದ್ದುದು ನನಗೆ ಕೇಳಿಸುತ್ತಿತ್ತು. ನಾವಿದ್ದುದು ನಾಲ್ಕನೇ ಮಹಡಿಯಲ್ಲಿ. ಅಲ್ಲಿಂದ ನನ್ನನ್ನು ಹೆಚ್ಚೂಕಡಿಮೆ ಎಳೆದುಕೊಂಡೇ ಕೆಳಗೆ ಕರೆದುಕೊಂಡು ಬಂದು ಕಾರಲ್ಲಿ ಕೂರಿಸಿಕೊಂಡರು. ಆ ಸಮಯದಲ್ಲೂ ‘ಮನೆಗೆ ಹೋಗುತ್ತೇನೆ’ ಎಂದು ಅವರೊಂದಿಗೆ ಹೇಳಿದ್ದೇನೆ. ‘ಇದೊಂದು ಸಲ ನನ್ನೊಂದಿಗೆ ಆಸ್ಪತ್ರೆಗೆ ಬನ್ನಿ. ಆಮೇಲೆ ಮನೆಗೆ ಬಿಡ್ತೇನೆ’ ಎಂದು ಮಾತನಾಡುತ್ತ, ನನ್ನನ್ನು ಎಚ್ಚರವಾಗಿರಿಸಲು ಪ್ರಯತ್ನಿಸುತ್ತಲೇ ಆಸ್ಪತ್ರೆಗೆ ಫೋನ್‌ ಮಾಡಿದರು. ‘ಮುಖ್ಯವಾದ ವ್ಯಕ್ತಿಯೊಂದಿಗೆ ಬರುತ್ತಿದ್ದೇನೆ. ಕ್ಯಾಥ್‌ ಲ್ಯಾಬ್‌ ಸಿದ್ಧವಾಗಿರಿಸಿಕೊಂಡಿರಿ’ ಎಂದವರು ಫೋನ್‌ನಲ್ಲಿ ಹೇಳಿದ್ದು ನನಗೆ ನೆನಪಿದೆ.

ನನ್ನ ಪುಣ್ಯ, ಅವತ್ತು ಬಕ್ರೀದ್‌. ಟ್ರಾಫಿಕ್‌ ಇರಲಿಲ್ಲ. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ರಕ್ತಸಂಚಾರವನ್ನು ಮರಳಿತಂದುಕೊಟ್ಟರು. ಆ ಕಾರಣದಿಂದಲೇ ನಾನಿಂದು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ನಾನೂ ಮೆಡಿಸಿನ್‌ ಓದಿದವನು. ಗೋಲ್ಡನ್‌ ಅವರ್‌ನಲ್ಲಿ ಆ ತಾಯಿ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು. ‘48 ಗಂಟೆ ಏನನ್ನೂ ಹೇಳಲಿಕ್ಕಾಗುವುದಿಲ್ಲ’ ಎಂದು ವೈದ್ಯರು ಹೇಳಿದ್ದರು. ‘ಮತ್ತೆ ಆ್ಯಕ್ಟ್‌ ಮಾಡಬಹುದಾ?’ ಎಂದು ಕೆಲವರು ವೈದ್ಯರನ್ನು ಕೇಳಿದ್ದೂ ಇದೆ. ‘ನಟನೆಯ ಮಾತಿರಲಿ, ಬದುಕಿ ಮನೆಗೆ ಬರುವ ಬಗ್ಗೆ ಯೋಚನೆ ಮಾಡಿ’ ಎಂದು ವೈದ್ಯರು ಹೇಳಿದ್ದೂ ನನಗೆ ಕೇಳಿಸಿತ್ತು.

ಈಗ ‘ಅಮ್ಮನ ಮನೆ’ ಚಿತ್ರದ ಮೊದಲ ದೃಶ್ಯದಲ್ಲಿ ನಟಿಸಿದ್ದರ ಬಗ್ಗೆ ಏನು ಹೇಳುವುದು? ಇದು ಪವಾಡವಾ? ದೈವಕೃಪೆಯಾ? ಜನರ ಆಶೀರ್ವಾದವಾ? ಅಪ್ಪ–ಅಮ್ಮನ ಹರಕೆಯಾ? ನನ್ನಿಂದ ಏನನ್ನಾದರೂ ಮಾಡಿಸಲು ಆ ದೇವರು ನನಗೆ ಕೊಟ್ಟ ಎರಡನೇ ಅವಕಾಶವಾ? ಏನು ಹೇಳಬೇಕೆನ್ನುವುದು ನನಗೆ ತಿಳಿದಿಲ್ಲ. ಏನನ್ನಾದರೂ ಹೇಳುವುದಾದರೆ, ನನ್ನನ್ನು ಆಸ್ಪತ್ರೆಗೆ ಸೇರಿಸಿದ ಆ ಹೆಣ್ಣುಮಗಳಿಗೆ ಕೃತಜ್ಞತೆ ಹೇಳಬಹುದಷ್ಟೇ. ವಿಧಿ ನೋಡಿ, ಆ ಹೆಣ್ಣುಮಗಳ ತಂದೆಯ ಹೆಸರು ಕೂಡ ರಾಘವೇಂದ್ರ. ಅವರ ತಂದೆ ಕೂಡ ಸ್ಟ್ರೋಕ್‌ ಆಗಿ ತೀರಿಹೋದದ್ದು. ‘ನಮ್ಮಪ್ಪ ನನ್ನನ್ನು ಡಾಕ್ಟರ್‌ ಓದಿಸಿದರು. ಆದರೆ ಅವರನ್ನು ಉಳಿಸಿಕೊಳ್ಳುವುದು ನನ್ನಿಂದಾಗಲಿಲ್ಲ. ನಾನು ಮೆಡಿಸಿನ್ ಓದಿ ಏನು ಉಪಯೋಗವಾಯಿತು?’ ಎನ್ನುವ ಬೇಸರ ಅವರಲ್ಲಿತ್ತಂತೆ. ಅಪ್ಪನಿಗೆ ಮಾಡಲಾಗದ್ದನ್ನು ನಿಮಗೆ ಮಾಡಲು ಸಾಧ್ಯವಾಯಿತು ಎಂದವರು ಹೇಳಿದರು. ನಾನು ಈಗ ಎಲ್ಲಿಗೆ ಹೋದರೂ ಆ ಹೆಣ್ಣುಮಗಳ ಹೆಸರು ಹೇಳುತ್ತೇನೆ. ವಯಸ್ಸಿನಲ್ಲಿ ಅವರು ನನಗಿಂತಲೂ ಕಿರಿಯರು. ಆದರೂ ಅವರು ನನ್ನಪಾಲಿಗೆ ಎರಡನೇ ತಾಯಿ. ಸಿಂಗಪುರಕ್ಕೆ ಹೋದಾಗ ಅಲ್ಲಿನ ವೈದ್ಯರು ಹೇಳಿದರು: ‘ನೀವು ಈ ದಿನ ಸಿಂಗಪುರಕ್ಕೆ ಬರಲಿಕ್ಕೆ ಆ ತಾಯಿಯೇ ಕಾರಣ. ಇನ್ನೈದು ನಿಮಿಷ ತಡವಾಗಿದ್ದರೂ ದೃಷ್ಟಿ, ಮಾತು ಕಳೆದುಕೊಳ್ಳುವ ಸಾಧ್ಯತೆಯಿತ್ತು. ನೀವು ವೆಜಿಟಬಲ್‌ (ನಿರ್ಜೀವ ವಸ್ತು) ಆಗುವ ಸಾಧ್ಯತೆಯಿತ್ತು’.

ಅನೇಕ ಡಾಕ್ಟರ್‌ಗಳು, ಫಿಜಿಯೊಥೆರಪಿಸ್ಟ್‌ಗಳು ಚಿಕಿತ್ಸೆ ನೀಡಿದ್ದಾರೆ. ಅಧ್ಯಾತ್ಮ, ಆಯುರ್ವೇದವನ್ನೂ ನೆಚ್ಚಿದ್ದೇನೆ. ಒಂದರಿಂದ ಗುಣವಾಯಿತೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಗುಣವಾಗಲೆಂದು ಅನೇಕರು ಪ್ರಾರ್ಥಿಸಿದ್ದಾರೆ. ದೇವಸ್ಥಾನಗಳಿಗೆ ಹೋದಾಗ, ‘ಈಗಷ್ಟೇ ನಿಮ್ಮ ಹೆಸರಲ್ಲಿ ಪೂಜೆ ಮಾಡಿಸಿಕೊಂಡು ಹೋದರು’ ಎಂದು ಹೇಳಿದ್ದಾರೆ. ಇಂಥ ಅನಾಮಿಕರ ಪ್ರಾರ್ಥನೆಗಳೂ ನಾನು ಗುಣಮುಖನಾಗಲು ಕಾರಣವಾಗಿವೆ. ಇನ್ನುಮೇಲೆ ನನಗೆ ಏನು ಬಂದರೂ ಅದು ಎಲ್ಲರಿಗೂ ಸೇರಿದ್ದು. ಪ್ರಶಸ್ತಿ–ಕೀರ್ತಿ ಯಾವುದನ್ನೂ ವೈಯಕ್ತಿಕವಾಗಿ ಸ್ವೀಕರಿಸುವ ಯೋಗ್ಯತೆ ನನಗಿಲ್ಲ.

ಸವಲತ್ತುಳ್ಳವರು ಅನಾರೋಗ್ಯ ಉಂಟಾದಾಗ ವಿದೇಶಗಳಿಗೆ ಹೋಗುತ್ತಾರೆ. ನಾನು ಕೂಡ ಸಿಂಗಪುರಕ್ಕೆ ಹೋಗಿದ್ದೆ. ಅಲ್ಲಿಯ ಚಿಕಿತ್ಸೆಯೂ ಚೆನ್ನಾಗಿದೆ. ಆದರೆ, ಅಲ್ಲಿನ ಚಿಕಿತ್ಸೆಯಲ್ಲಿ ವ್ಯಾಪಾರಿ ಮನೋಭಾವ ಎದ್ದುಕಾಣುತ್ತದೆ. ನಮ್ಮದು ಸೇವಾ ಮನೋಭಾವ. ಇಲ್ಲಿ ರೋಗಿಗಳಿಗೆ ವೈದ್ಯರು ತಮ್ಮ ಸಮಯ ನೀಡುತ್ತಾರೆ. ನಾನು ಯಾರನ್ನೂ ದೂಷಿಸುತ್ತಿಲ್ಲ. ನಮ್ಮೂರಲ್ಲಿ, ನನ್ನ ಮಣ್ಣಲ್ಲೇ ಗುಣವಾಗಿದ್ದು ನನಗೆ ಸಂತೋಷ ತಂದಿದೆ. ಎಲ್ಲರೂ ಫಾರಿನ್‌ಗೆ ಹೋಗುವುದು ಸಾಧ್ಯವಿಲ್ಲ. ಆದರೆ, ಭಾರತದಲ್ಲೇ ಒಳ್ಳೆಯ ಚಿಕಿತ್ಸೆ ಲಭ್ಯ ಎನ್ನುವುದಕ್ಕೆ ಉದಾಹರಣೆಯಾಗಿ ನಾನು ಉಳಿದುಕೊಂಡಿರುವೆ. ನಾನು ಆಘಾತಕ್ಕೆ ಒಳಗಾದ ದೃಶ್ಯ ಹಾಗೂ ಚೇತರಿಸಿಕೊಂಡಿರುವುದು – ಎಲ್ಲ ದೃಶ್ಯಗಳೂ ಆನ್‌ಲೈನ್‌ನಲ್ಲಿ ಲಭ್ಯ. ಭಾರತೀಯ ಚಿಕಿತ್ಸೆಯಿಂದ, ಹೇಗಿದ್ದವನು ಹೇಗಾದ ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದ್ದೇನೆ.

* ಪಾರ್ಶ್ವವಾಯುವಿಗೆ ತುತ್ತಾಗಿ ಚೇತರಿಸಿಕೊಂಡವರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆಯೇ?

ಸ್ಟ್ರೋಕ್‌ಗೆ ಒಳಗಾದವರು ಗುಣಮುಖರಾದ ನಂತರ ಸಿನಿಮಾದಲ್ಲಿ ನಟಿಸಿರುವುದು ವೈದ್ಯಕೀಯ ಇತಿಹಾಸದಲ್ಲೇ ಇಲ್ಲ ಎಂದು ಹೇಳಿರುವುದನ್ನು ಕೇಳಿದ್ದೇನೆ. ‘ಸಿನಿಮಾ ಮುಗಿದ ಮೇಲೆ ಇದನ್ನು ಮೆಡಿಕಲ್‌ ಕೌನ್ಸಿಲ್‌ ಮುಂದಿಡೋಣ. ಇದರಿಂದ ಒಂದಷ್ಟು ಜನರಿಗೆ ಪ್ರೇರಣೆ ದೊರೆಯಬಹುದು’ ಎಂದು ನನಗೆ ಚಿಕಿತ್ಸೆ ನೀಡಿದ ಡಾ. ಮಹೇಶ್ವರಪ್ಪ ಹೇಳಿದ್ದಾರೆ.

ಚಿಕಿತ್ಸೆಯಷ್ಟೇ ಮುಖ್ಯವಾದುದು ನನ್ನ ಇಡೀ ಕುಟುಂಬ ನೀಡಿದ ಬೆಂಬಲ. ಶಿವಣ್ಣ ಆಸ್ಪತ್ರೆಯಲ್ಲಿಯೇ ಒಂದು ರೂಮು ತೆಗೆದುಕೊಂಡಿದ್ದರು. ಅವರು ಮತ್ತು ಅತ್ತಿಗೆ ನನ್ನನ್ನು ಸಿಂಗಪುರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲೊಂದು ಅಪಾರ್ಟ್‌ಮೆಂಟ್‌ ಬಾಡಿಗೆಗೆ ತೆಗೆದುಕೊಂಡಿದ್ದರು. ಅತ್ತಿಗೆ ಮತ್ತು ನನ್ನ ಹೆಂಡತಿ ಸೇರಿಕೊಂಡು ಆರು ಜನರಿಗೆ ಅಡುಗೆ ಮಾಡುತ್ತಿದ್ದರು, ಬಟ್ಟೆ ತೊಳೆಯುತ್ತಿದ್ದರು. ನನ್ನನ್ನು ಮಗುವಿನಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಬರುತ್ತಿದ್ದರು. ನನ್ನ ಮಗ ಜೊತೆಗಿದ್ದ. ನನ್ನ ಪತ್ನಿಯಂತೂ ಅಮ್ಮನಂತಾಗಿಹೋಗಿದ್ದವಳು.

ಈಗಲೂ ನನ್ನ ತಮ್ಮ ಎಷ್ಟೇ ಸಮಯವಾದರೂ ನನಗೆ ನಮಸ್ಕರಿಸಿಯೇ ಮನೆಯಿಂದ ಹೊರಗೆ ಹೋಗುವುದು. ನನಗೆ ಅನಾರೋಗ್ಯವಿದ್ದಾಗಲೂ ‘ರಾಜ್‌ಕುಮಾರ’, ‘ನಿನ್ನಿಂದಲೇ’ ಸಿನಿಮಾಗಳ ಕಥೆ ಕೇಳಿಸಿದ್ದರು. ನಾನು ಯಾವಾಗಲೂ ಕೆಲಸದಲ್ಲಿ ತೊಡಗಿಕೊಂಡಿರಬೇಕು ಎನ್ನುವುದು ಅಪ್ಪು ಆಸೆ. ನಾನು ಸುಮ್ಮನೆ ಕೂರುವುದನ್ನು ಮನೆಯವರು ಬಯಸುವುದಿಲ್ಲ. ಕೆಲಸ ಕೂಡ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಭಾವಿಸಿದ್ದೇನೆ.

* ಸಂಕಷ್ಟದ ಸಂದರ್ಭಗಳು ಕೆಲವೊಮ್ಮೆ ಜೀವನದ ಕುರಿತ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತವೆ. ಈ ರೀತಿ ಅನಾರೋಗ್ಯದ ಸಂದರ್ಭ ನಿಮ್ಮ ಯೋಚನೆಗಳನ್ನೇನಾದರೂ ಬದಲಿಸಿತೇ?

ಸ್ಟ್ರೋಕ್‌ಗೆ ಒಳಗಾದ ಮೊದಲ ವರ್ಷ ತುಂಬಾ ಕಷ್ಟವಾಗಿತ್ತು. ಬಾತ್‌ರೂಂಗೆ ಹೋದರೆ ತೊಳೆದುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲವೂ ಮರೆತುಹೋಗುತ್ತಿತ್ತು ಬೇರೆ. ನನ್ನ ಹೆಂಡತಿ ಎಲ್ಲವನ್ನೂ ಮಾಡುತ್ತಿದ್ದಳು. ಅಮ್ಮ ಮಾಡಿದ್ದು ಬಿಟ್ಟರೆ, ಮತ್ತೆ ನನ್ನ ಹೆಂಡತಿಯೇ ಮಾಡಿದ್ದು. ಆದರೆ, ಅಮ್ಮ ಮಾಡಿದ್ದು ಯಾವಾಗ? ನಾನು ಮೂರು ವರ್ಷದ ಮಗು ಆಗಿರುವವರೆಗೆ ಅಮ್ಮ ಇದನ್ನೆಲ್ಲ ಮಾಡಿದ್ದು. ಹೆಂಡತಿ ಮಾಡಿದ್ದು, ನಾನು ದೊಡ್ಡವನಾದ ಮೇಲೆ. ನಾನಂತೂ ನನ್ನ ಪತ್ನಿಯಲ್ಲಿ ಅಮ್ಮನನ್ನು ಕಂಡೆ. ಅಮ್ಮ–ಪತ್ನಿ ಇಬ್ಬರೂ ನನ್ನ ಎರಡು ಕಣ್ಣುಗಳು. ‘ಅಮ್ಮನ ಮನೆ’ ಸಿನಿಮಾ ಹೇಳುವುದು ಕೂಡ ಇದನ್ನೇ. ನಿಖಿಲ್‌ ಮಂಜೂ ಸುಮಾರು ಎಂಟು ಒಂಬತ್ತು ವರ್ಷಗಳಿಂದ ಈ ಕಥೆ ಮಾಡುತ್ತಿದ್ದಾರಂತೆ. ನಾನು ಕಥೆಗೆ ನನ್ನನ್ನು ಒಪ್ಪಿಸಿಕೊಂಡಿದ್ದೇನೆ. ಅದಕ್ಕೆ ಸೋತಿದ್ದೇನೆ.

* ‘ನಂಜುಂಡಿ ಕಲ್ಯಾಣ’ದಂಥ ಸಿನಿಮಾದಲ್ಲಿ ನಟಿಸಿದ ನಟ ನಟನೆಯನ್ನು ಬಿಟ್ಟು ‘ವಜ್ರೇಶ್ವರಿ ಸಂಸ್ಥೆ’ಯ ಬೇರೆ ಜವಾಬ್ದಾರಿಗೆ ತನ್ನನ್ನು ಒಪ್ಪಿಸಿಕೊಳ್ಳುವುದು ಸರ್ಪೈಸಿಂಗ್‌ ಅಲ್ಲವಾ?

ಆ ವಯಸ್ಸಲ್ಲಿ ನನಗದೆಲ್ಲ ಗೊತ್ತಾಗಲೇ ಇಲ್ಲ. ನಮ್ಮ ಜೊತೆಯಲ್ಲಿ ಎರಡು ಶಕ್ತಿಗಳಿದ್ದವು. ಒಂದು ಕಡೆ ಅಪ್ಪ, ‌ಇನ್ನೊಂದು ಕಡೆ ಅಮ್ಮ. ಒಂದು ಶಕ್ತಿ, ಇನ್ನೊಂದು ಭಕ್ತಿ. ಅಮ್ಮ ಇದ್ದಕ್ಕಿದ್ದಂತೆ ‘ನಾಳೆಯಿಂದ ಇದನ್ನು ನೋಡಿಕೊ’ ಎಂದು ನನಗೆ ಹೇಳಲಿಲ್ಲ. ಜೊತೆಯಲ್ಲಿಯೇ ಇರಿಸಿಕೊಂಡು, ‘ಇದು ಹೀಗೆ, ಇದು ಹಾಗೆ’ ಎಂದು ಎಲ್ಲವನ್ನೂ ತಿಳಿಸಿಕೊಟ್ಟರು. ಸಿನಿಮಾ ಮಾಡುವುದನ್ನು, ವ್ಯಾಪಾರ ನಿರ್ವಹಿಸುವುದನ್ನು ನಿಧಾನವಾಗಿ ಹೇಳಿಕೊಟ್ಟರು.‌

* ಅಪ್ಪು ಅವರ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಮುಖ್ಯವಾದುದು. ಅಪ್ಪು ನಾಯಕನಾಗುವ ವೇಳೆಗೆ ನಿಮ್ಮ ಚಿಕ್ಕಪ್ಪ ವರದರಾಜ್‌ ಹಾಗೂ ಅಮ್ಮ ಹೆಚ್ಚೂಕಡಿಮೆ ನಿವೃತ್ತಿಯ ಅಂಚಿನಲ್ಲಿದ್ದರು. ಅಂಥ ಸಂದರ್ಭದಲ್ಲಿ ಅಪ್ಪು ಸಿನಿಮಾದ ಕಥೆಗಳನ್ನು ಅಳೆದುತೂಗುವ ಜವಾಬ್ದಾರಿಯನ್ನು ನಿಭಾಯಿಸಿದಿರಿ, ತಮ್ಮನಿಗೆ ಬೆನ್ನೆಲುಬಾಗಿ ನಿಂತಿರಿ. ನಾನು ನಟಿಸೊಲ್ಲ, ತಮ್ಮನಿಗೆ ಬೆಂಬಲವಾಗಿ ನಿಲ್ತೇನೆ ಎನ್ನುವುದು ಕೂಡ ಸುಲಭವಾದ ನಿರ್ಣಯ ಅಲ್ಲ.

‘ಪಕ್ಕದ್ಮನೆ ಹುಡುಗಿ’ ನಾನು ಕಡೆಯದಾಗಿ ನಟಿಸಿದ ಸಿನಿಮಾ. ಅದಾದ ನಂತರ ಅಪ್ಪಾಜಿಯವರ ಕಾಡಿನ ಪ್ರಕರಣ ಸಂಭವಿಸಿತು. ನಟಿಸುವುದಿಲ್ಲ ಎನ್ನುವ ನಿರ್ಣಯಕ್ಕೆ ನಾನು ಬರಲಿಲ್ಲ. ನಿಜ ಹೇಳಬೇಕೆಂದರೆ ಒಳ್ಳೆಯ ಸಿನಿಮಾಗಳೇ ನನಗೆ ಬರಲಿಲ್ಲ. ಒಂದು ಇಪ್ಪತ್ತು ಸಿನಿಮಾಗಳು ಬಂದು ನಾನು ಅವುಗಳನ್ನು ನಿರಾಕರಿಸುವಂತಹ ಪ್ರಸಂಗವೇನೂ ನಡೆಯಲಿಲ್ಲ. ಹೊರಗಿನ ಬ್ಯಾನರ್‌ಗಳಿಗೆ ನಾನು ಮಾಡಿದ ಸಿನಿಮಾಗಳು ಚೆನ್ನಾಗಿ ಹೋಗಲಿಲ್ಲ. ಹದಿನೈದು, ಇಪ್ಪತ್ತು ದಿವಸಗಳಷ್ಟೇ ಹೋದವು. ಒಳ್ಳೊಳ್ಳೆಯ ಸ್ಕ್ರಿಪ್ಟ್‌ ಬರದೆ, ‘ನನ್ನನ್ನು ಜನ ನೋಡಲ್ಲವಾ’ ಎನ್ನುವ ಬೇಸರವೂ ಉಂಟಾಗಿತ್ತು. ಅಲ್ಲದೆ, ನಾನು ನಟನಾಗಿ ಬೆಳೆದದ್ದಕ್ಕಿಂತಲೂ ದೊಡ್ಡದಾಗಿ ‘ವಜ್ರೇಶ್ವರಿ ಸಂಸ್ಥೆ’ ಬೆಳೆದಿತ್ತು. ಒಬ್ಬ ನಟ ಬೆಳೆದರೆ ಐದಾರು ಮಂದಿ ಬೆಳೆಯಬಹುದು. ಆದರೆ, ಒಂದು ಸಂಸ್ಥೆ ಬೆಳೆದರೆ ಒಂದು ಸಾವಿರ ಮಂದಿ ಬದುಕುತ್ತಾರೆ. ಇದು ನನ್ನ ಅಭಿನಯಕ್ಕಿಂತಲೂ ಹೆಚ್ಚು ಮುಖ್ಯ. ನಾನು ನಟಿಸಿ, ಸಿನಿಮಾ ಗೆದ್ದರೆ ನನಗೆ ಹೆಸರು–ದುಡ್ಡು ಬರಬಹುದು. ನಾನು ಮತ್ತು ಹೆಂಡತಿ ಮಕ್ಕಳು ಸುಖವಾಗಿರಬಹುದು. ಆದರೆ, ಸಂಸ್ಥೆಯ ಸಿನಿಮಾಗಳು ಗೆದ್ದರೆ ಸಾವಿರಾರು ಕುಟುಂಬಗಳು ಬದುಕುತ್ತವೆ.

ಚಿಕ್ಕಪ್ಪ ಹೋದನಂತರ ಒಂದು ರೀತಿಯಲ್ಲಿ ಸಂಸ್ಥೆಯ ಅಡಿಪಾಯವೇ ಹೋದಂತಾಯಿತು. ಭಯವೂ ಆಯಿತು. ಅಂಥ ಸಂಕೀರ್ಣ ಸಂದರ್ಭದಲ್ಲಿ ಬಂದದ್ದು ‘ಅರಸು’, ‘ಆಕಾಶ್‌’, ‘ಮಿಲನ’ ರೀತಿಯ ಚಿತ್ರಗಳು. ದೇವರ ಆಶೀರ್ವಾದವೋ ಏನೋ ಸಿನಿಮಾಗಳು ಗೆದ್ದವು. ನಮ್ಮ ಯುನಿಟ್‌ ಉಳಿಯಲು ಸಿನಿಮಾಗಳನ್ನು ಫೀಡ್‌ ಮಾಡಲೇಬೇಕಿತ್ತು.

* ಸ್ಕ್ರಿಪ್ಟ್‌ ವರ್ಕ್‌ನಲ್ಲಿ ಕೂಡ ನಿಮಗೆ ಆಸಕ್ತಿಯಿದೆ ಅಲ್ಲವೇ?

‘ಜೀವನಚೈತ್ರ’ ಸಿನಿಮಾದಿಂದ ಚಿತ್ರಕಥೆ ಸಂದರ್ಭದಲ್ಲಿ ಚಿಕ್ಕಪ್ಪ ಜೊತೆಯಲ್ಲಿ ಕೂರಿಸಿಕೊಳ್ಳತೊಡಗಿದರು. ‘ಡಿಸ್ಕಷನ್‌ ಟೇಬಲ್‌ ಮೇಲೆ ಸರಿಯಾಗಿ ಕೆಲಸ ಮಾಡಿದ್ರೆ ಡಿಸ್ಟ್ರಿಬ್ಯೂಷನ್‌ ಟೇಬಲ್‌ ಫುಲ್‌ ಆಗುತ್ತೆ’ ಎಂದು ಹೇಳುತ್ತಿದ್ದರು. ಸಿನಿಮಾ ಎರಡು ಟೇಬಲ್‌ಗಳ ಮೇಲೆ ರೂಪುಗೊಳ್ಳುತ್ತದೆ ಎನ್ನುತ್ತಾರೆ: ಚಿತ್ರಕಥೆ ಮತ್ತು ಸಂಕಲನದ ಮೇಜುಗಳವು. ಇಲ್ಲಿ ಸರಿಯಾಗಿ ಕೆಲಸ ಆದರೆ, ಡಿಸ್ಟ್ರಿಬ್ಯೂಷನ್‌ ಟೇಬಲ್‌ನಲ್ಲೂ ಸರಿಯಾಗಿರುತ್ತದೆ.

* ಅಮ್ಮನಿಂದ, ಚಿಕ್ಕಪ್ಪನಿಂದ ಚಿತ್ರಕಥೆಗೆ ಸಂಬಂಧಿಸಿದಂತೆ ಏನನ್ನು ಕಲಿತಿರಿ?

ಒಂದು ಕಥೆ ಮನಸ್ಸಿಗೆ ಹೇಗೆ ಇಷ್ಡವಾಗುತ್ತದೆ ಎನ್ನುವುದನ್ನು. ವಿತರಣೆಯ ದೃಷ್ಟಿಕೋನದಿಂದ ಕಥೆಯನ್ನು ನೋಡಬೇಡ. ‘ಭಕ್ತಕುಂಬಾರ’ ಮಾಡಿದಾಗ ಅಲ್ಲಿ ಫೈಟ್‌ ಇದೆಯೇ ಎಂದು ನೋಡಲಿಲ್ಲ. ಅಲ್ಲಿ ಭಕ್ತಿಯಷ್ಟೇ ಇತ್ತು. ಆ ಸಿನಿಮಾ ಸಂದರ್ಭದಲ್ಲಿ ಅಣ್ಣಾವ್ರು ಕೂಡ ದೊಡ್ಡವರಾಗಿ ಕಾಣಲಿಲ್ಲ. ಪಾತ್ರವಷ್ಟೇ ದೊಡ್ಡದಾಗಿತ್ತು. ಇದೇ ಆದರ್ಶವನ್ನು ಬಳಸಿಕೊಂಡು ಹೋದೆವು. ನನ್ನ ಮನಸ್ಸಿಗೆ ಇಷ್ಟವಾಗಬೇಕು. ನನ್ನ ತಮ್ಮನಿಗೂ ಇಷ್ಟವಾಗಬೇಕು. ಇದರ ಜೊತೆಗೆ ಕೆಲವು ವ್ಯಕ್ತಿಗಳಿಗೂ ಕಥೆಯನ್ನು ಕೇಳಿಸುತ್ತೇವೆ. ಉದಾ: ಜಯಂತ ಕಾಯ್ಕಿಣಿ ಅವರಿಗೆ ಕೇಳಿಸುತ್ತೇವೆ ಅಥವಾ ಪತ್ರಕರ್ತರೊಬ್ಬರಿಗೆ ಕೇಳಿಸುತ್ತೇವೆ. ಅವರು ನಮಗೆ ಇಷ್ಟವಾಗಲಿಲ್ಲವೆಂದೂ ಹೇಳಬಹುದು. ಕಾರಣ ಹೇಳುತ್ತಾರೆ. ಚರ್ಚೆ ಮುಂದುವರೆಯುತ್ತದೆ. ಅಂತಿಮವಾಗಿ ಕಥೆ ಪರಿಷ್ಕಾರಗೊಳ್ಳುತ್ತದೆ.

‘ಮಿಲನ’ ಸಿನಿಮಾ ಆರಂಭಿಸುವ ಸಂದರ್ಭದಲ್ಲಿ ಇಬ್ಬರು ದೇವರುಗಳೂ ನಮ್ಮ ಜೊತೆಯಿರಲಿಲ್ಲ. ಅಪ್ಪಾಜಿ ಹಾಗೂ ಅಪ್ಪಣ್ಣ (ವರದಪ್ಪ) ಮಾಸ್ಟರ್ಸ್‌ ಆಫ್‌ ಸೆಲೆಕ್ಟಿಂಗ್‌. ಅಪ್ಪುಗೊಂದು ಸಿನಿಮಾ ಮಾಡಬೇಕಿತ್ತು. ‘ಶಬ್ದವೇಧಿ’ ನಂತರ ಯಾವುದೂ ಸಿನಿಮಾ ಇರಲಿಲ್ಲ. ಆ ಸಂದರ್ಭದಲ್ಲಿ ಪ್ರಕಾಶ್‌, ಹೊರಗಿನ ನಿರ್ಮಾಣದ ‘ಮಿಲನ’ ಚಿತ್ರಕಥೆ ತೆಗೆದುಕೊಂಡು ಬಂದರು. ಕಥೆ ಸ್ವಲ್ಪ ರಿಸ್ಕ್‌ ಎನ್ನಿಸಿತು. ‘ನಿನಗೆ ಯಾವುದಾದರೂ ಕಥೆ ರಿಸ್ಕ್‌ ಎನ್ನಿಸಿದಾಗ ಸ್ಕ್ರಿಪ್ಟ್‌ನ ಒಂದು ವರ್ಷನ್‌ ಸಿದ್ಧಪಡಿಸಿಕೊಂಡು ಬರಲಿಕ್ಕೆ ಹೇಳು. ಕಥೆಯ ಫ್ಲೋ ಹೇಗೆ ಬರುತ್ತದೆ ಎನ್ನುವುದು ಅರ್ಥವಾಗುತ್ತದೆ’ ಎಂದು ಚಿಕ್ಕಪ್ಪ ಹೇಳಿದ್ದು ನೆನಪಾಯಿತು. ಹುಡುಗಿಯೊಬ್ಬಳು ಸಿನಿಮಾದ ಆರಂಭದಲ್ಲೇ ವಿಚ್ಛೇದನ ಕೇಳುವುದು ‘ಮಿಲನ’ ಚಿತ್ರದ ಕಥೆ. ಇಡೀ ಸಿನಿಮಾವನ್ನು ಕಾಮಿಡಿಯಾಗಿ ಹೇಳುವ ಉದ್ದೇಶ ನಿರ್ದೇಶಕರದಾಗಿತ್ತು. ‘ನಮಗೆ ಆಡಿಯೆನ್ಸ್‌ ಇದ್ದಾರೆ. ಯಾರನ್ನೂ ಅಸಮಾಧಾನ ಮಾಡಬಾರದು. ಒಂದು ಹಾಡು, ಫೈಟ್‌ ಇಟ್ಟರೆ ಏನೂ ತಪ್ಪಾಗುವುದಿಲ್ಲ. ಅಪ್ಪು ಆಡಿಯೆನ್ಸ್‌ಗೆ ನಿರಾಶೆ ಮಾಡದಂತೆ ಬಫೆ ರೀತಿ ಸಿನಿಮಾ ಮಾಡಿ’ ಎಂದು ಅಪ್ಪಣ್ಣನ ಮಾತನ್ನು ಆಧರಿಸಿ ಹೇಳಿದೆ. ಯಾವುದನ್ನೂ ತುರುಕಬೇಡಿ, ಹಾಕಿ ಎಂದು ಹೇಳಿದೆ. ಊಟದಲ್ಲಿನ ಎಲ್ಲ ಪದಾರ್ಥಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಒಂದೊಂದು ಪದಾರ್ಥ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಊಟದ ರೀತಿಯಲ್ಲೇ ಸಿನಿಮಾದಲ್ಲೂ ಎಲ್ಲರಿಗೂ ಬೇಕಾದ್ದು ಇರಬೇಕು ಎನ್ನುವುದು ಕೂಡ ಅಪ್ಪಣ್ಣ ಹೇಳಿಕೊಟ್ಟ ಪಾಠವೇ.

ಸಿನಿಮಾ ಗೆದ್ದಾಗ ನಮಗೆ ಧೈರ್ಯ ಬರುತ್ತೆ. ಗೆದ್ದಾಗಷ್ಟೇ ಹೀಗೆಲ್ಲ ಮಾತನಾಡುತ್ತೇವೆ. ಸಿನಿಮಾ ಸೋತಿದ್ದರೂ ಇಷ್ಟೆಲ್ಲ ಮಾತನಾಡುತ್ತಿರಲಿಲ್ಲ.

* ಕೌಟುಂಬಿಕ ಚೌಕಟ್ಟಿನ ಸಿನಿಮಾಗಳ ಬೆನ್ನಿಗೆ ರೂಪುಗೊಂಡ ಸೂರಿ ನಿರ್ದೇಶನದ ‘ಜಾಕಿ’ ಸಂಪೂರ್ಣ ಭಿನ್ನವಾಗಿತ್ತು. ಇದು ರಿಸ್ಕ್‌ ಅನ್ನಿಸಲಿಲ್ಲವೇ?

ರಿಸ್ಕ್‌ ಎನ್ನುವುದಕ್ಕಿಂತಲೂ ಅಪ್ಪುವಿಗೆ ಬೇಕಾದ ಕ್ಯಾರಕ್ಟರೈಸೇಷನ್‌ ‘ಜಾಕಿ’ಯಲ್ಲಿ ಇದೆ ಅನ್ನಿಸಿತು. ಕಲಾವಿದನೊಬ್ಬ ಒಂದೇ ರೀತಿಯ ಪಾತ್ರಗಳನ್ನು ಮಾಡಲಿಕ್ಕಾಗೊಲ್ಲ. ಮೂರ್ನಾಲ್ಕು ದಾರಿಗಳು ಇದ್ದರೆ ಸಿನಿಮಾ ಮಾಡಲಿಕ್ಕೆ ಅನುಕೂಲ. ಅಪ್ಪಾಜಿಯ ಆರಂಭದ ಆರೇಳು ಸಿನಿಮಾಗಳನ್ನು ನೋಡಿದರೆ ಉದ್ದ ಕೂದಲು ಕಾಣಿಸುತ್ತದೆ. ರಾಜ್‌ಕುಮಾರ್‌ ಅವರಿಗೆ ಕಟಿಂಗ್‌ ಮಾಡಿದರೆ ಚೆನ್ನಾಗಿರುತ್ತದಲ್ಲವಾ ಎಂದು ಯಾರೋ ಒಬ್ಬರು ಕೂದಲು ಕಟ್ ಮಾಡಿಸಿದರು. ಆ ರಿಸ್ಕ್‌ ತೆಗೆದುಕೊಂಡ ನಂತರವೇ ‘ಜೇಡರಬಲೆ’, ‘ಆಪರೇಷನ್‌ ಡೈಮಂಡ್‌ ರಾಕೆಟ್‌’ನಂಥ ಸಿನಿಮಾಗಳು ಬಂದಿದ್ದು. ಯಾವುದಕ್ಕೂ ಬ್ರಾಂಡ್‌ ಆಗಬಾರದು. ಒಂದಂತೂ ನಿಜ. ಎಲ್ಲವೂ ಟ್ರಯಲ್‌ ಅಂಡ್‌ ಎರರ್. ಗೆಲುವಿನ ಜೊತೆಗೆ ಸೋಲನ್ನೂ ಕಂಡಿದ್ದೇವೆ. ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡ ‘ಜನುಮದ ಜೋಡಿ’ಯಂಥ ಸಿನಿಮಾದ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗದ ‘ಚಿಗುರಿದ ಕನಸು’ ರೀತಿಯ ಚಿತ್ರವನ್ನೂ ಕಂಡಿದ್ದೇವೆ. ಎರಡನ್ನೂ ಅನುಭವ ಎಂದೇ ಪರಿಗಣಿಸಿದ್ದೇವೆ. ಎಲ್ಲವೂ ನಮ್ಮಿಂದ, ನನ್ನಿಂದ ಆದದ್ದು ಎಂದರೆ ತಪ್ಪಾಗುತ್ತೆ.

ನನಗೆ ಸ್ಟ್ರೋಕ್‌ ಆದ ಮೇಲೆ ಮಗನ ಸಿನಿಮಾ ಮಾಡುವ ಸಂದರ್ಭದಲ್ಲಿ ‘ಹೀಗಾಯಿತಲ್ಲ’ ಎಂದು ಬೇಸರವಾಯಿತು. ಅದುವರೆಗೆ ಚೆನ್ನಾಗಿದ್ದವನು ಇದ್ದಕ್ಕಿದ್ದಂತೆ ಹೀಗಾಯಿತಲ್ಲ ಎಂದು ಬೇಸರ. ಆದರೆ, ಅಮ್ಮ ಇದ್ದರು, ಒಳ್ಳೆಯ ನಿರ್ದೇಶಕರಿದ್ದರು. ಯಜಮಾನರಿಂದ ಸಿನಿಮಾ ಮಾಡಿಸಿ, ಮಕ್ಕಳಿಂದ ಮಾಡಿಸಿದ ಅಮ್ಮ, ಮೊಮ್ಮಕ್ಕಳನ್ನೂ ಸಿನಿಮಾಕ್ಕೆ ತಂದರು. ಈ ಮನೆ ಅಂದರೆ ಸಿನಿಮಾ. ಅಪ್ಪಾಜಿ ಹೇಳುತ್ತಿದ್ದರು: ‘ಕಂದಾ, ಈ ಮನೆಯಲ್ಲಿನ ಒಂದೊಂದು ಇಟ್ಟಿಗೆಯೂ ನಿರ್ಮಾಪಕರದು. ನಾವು ಬಣ್ಣವನ್ನಷ್ಟೇ ಹಚ್ಚಿದ್ದೇವೆ’. ಅಪ್ಪಾಜಿ ನಮ್ಮ ತಲೆಗೆ ತುಂಬಿದ್ದೆಲ್ಲ ಇಂಥ ಸಂಗತಿಗಳೇ.

* ಅಪ್ಪಾಜಿ ಇದ್ದಾಗ ಸಮಸ್ಯೆಗಳನ್ನು ಎದುರಿಸುವುದು ಬೇರೆ. ಆದರೆ, ಅಪ್ಪಾಜಿ ಅವರ ಗೈರುಹಾಜರಿಯಲ್ಲಿ ಅನಾರೋಗ್ಯಕ್ಕೆ ಗುರಿಯಾದಿರಿ. ಅವರು ಇದ್ದಿದ್ದರೆ ನಿಮಗೆ ಬೇರೆ ರೀತಿ ಸಹಾಯ ಆಗುತ್ತಿತ್ತು ಅನ್ನಿಸಿತ್ತಾ?

ಹೌದು, ಅನ್ನಿಸಿತು. ಅಪ್ಪಾಜಿ ಇದ್ದಿದ್ದರೆ ನನಗೆ ಹೀಗಾಗುತ್ತಲೇ ಇರಲಿಲ್ಲ ಅನ್ನಿಸಿತ್ತು. ಅವರಲ್ಲಿದ್ದ ಯಾವುದೋ ದೈವಿಕ ಶಕ್ತಿ ನನಗೆ ಹೀಗಾಗದಂತೆ ತಡೆಯುತ್ತಿತ್ತು ಎನ್ನುವ ನಂಬಿಕೆ. ನನ್ನೊಳಗೆ ನೆಗಟಿವ್‌ ಎನರ್ಜಿ ಬರಲಿಕ್ಕೆ ಬಿಡುತ್ತಿರಲಿಲ್ಲ. ‘ನಂಜುಂಡಿ ಕಲ್ಯಾಣ’ದ ನಂತರ, 1990ರಲ್ಲಿ ನನಗೆ ಹೃದಯಾಘಾತ ಆಗಿತ್ತು. ಒಂದು ತಿಂಗಳಲ್ಲೇ ಚೇತರಿಸಿಕೊಂಡು ಸಿನಿಮಾದಲ್ಲಿ ನಟಿಸತೊಡಗಿದೆ. ಅಪ್ಪಾಜಿ ಇದ್ದಾರೆ ಎನ್ನುವ ಧೈರ್ಯ. ದೇವಸ್ಥಾನಕ್ಕೆ ಹೋದಾಗ ಒಂದು ಬಗೆಯ ಭರವಸೆ ಉಂಟಾಗುತ್ತದಲ್ಲ; ಆ ಬಗೆಯ ನಂಬಿಕೆ ಅಪ್ಪಾಜಿಯಿಂದ ದೊರೆಯುತ್ತಿತ್ತು. ಈಗಲೂ ಅನೇಕರು ಅಪ್ಪಾಜಿಯ ಸಾವನ್ನು ಒಪ್ಪಿಕೊಂಡೇ ಇಲ್ಲ. ಅವರು ದೇಹವನ್ನಷ್ಟೇ ಬಿಟ್ಟುಹೋಗಿದ್ದಾರೆ, ಅವರನ್ನು ದಿವಂಗತರು ಎನ್ನಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಅದು. ಆದರೆ, ಅಮ್ಮನೂ ನಮ್ಮನ್ನು ಬಿಟ್ಟುಹೋದಾಗ ನನಗೆ ಭಯವಾಯಿತು. ಅಮ್ಮ ಇದ್ದರೆ ಒಂದು ಬಗೆಯ ಭರವಸೆ. ಅಮ್ಮ ಬೆನ್ನುಸವರುತ್ತಾರೆ... ಊಟ ಆಯಿತಾ, ಚೆನ್ನಾಗಿರುವೆಯಾ ಕಂದಾ... ಎಂದು ವಿಚಾರಿಸುತ್ತಾರೆ. ಅಮ್ಮನೊಂದಿಗೆ ಎಲ್ಲವನ್ನೂ ಕಳೆದುಕೊಂಡೆವು ಅನ್ನಿಸಿತು. ಕಳೆದ ಒಂದು ವರ್ಷ ತುಂಬಾ ಕಷ್ಟ ಎನ್ನಿಸಿದ ಸಮಯ.

ದೇವರು ಮನುಷ್ಯನಿಗೆ ನೀಡಿರುವ ಬಹುದೊಡ್ಡ ಕೊಡುಗೆ ‘ಅಡ್ಜಸ್ಟ್‌ಮೆಂಟ್‌’ ಮತ್ತು ‘ಅಡಾಪ್ಟೇಷನ್‌’. ಮನುಷ್ಯ ಎಂಥ ಸಂದರ್ಭಕ್ಕೂ ಒಗ್ಗಿಕೊಳ್ಳಬಲ್ಲ. ಅಪ್ಪಾಜಿ ಇಲ್ಲದೆ ಹತ್ತು ವರ್ಷ ಬದುಕಬಲ್ಲೆವು ಎನ್ನುವುದು ನಮಗೆ ಗೊತ್ತೇ ಇರಲಿಲ್ಲ. ಈ ಪರಿಸ್ಥಿತಿಯನ್ನು ಅಪ್ಪಾಜಿ ವ್ಯಂಗ್ಯವಾಗಿ ಹೇಳುತ್ತಿದ್ದರು. ‘ನಮ್ಮ ತಂದೆ ಸತ್ತಾಗ, ನಾವೆಲ್ಲ ಬದುಕಲು ಸಾಧ್ಯವಿಲ್ಲ, ಬಾವಿಗೆ ಹೋಗಿ ಬಿದ್ದುಬಿಡೋಣ ಎಂದುಕೊಂಡಿದ್ದೆವು. ಆದರೆ, ಈ ದೇಹವಿದೆಯಲ್ಲ ಕಂದಾ... ನಾಚಿಕೆ ಇಲ್ಲ ಇದಕ್ಕೆ... ಬದುಕಬೇಕು ಎನ್ನುವ ಆಸೆ ಇದಕ್ಕೆ... ಬದುಕುತ್ತಲೇ ಇರುತ್ತೆ’. ಅಪ್ಪಾಜಿ ಮಾತು ನಿಜ. ದೇಹ ಹೇಗೋ ಬದುಕುತ್ತೆ.

* ಅನಾರೋಗ್ಯದ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿದ್ದ ಭಾವನೆಗಳೇನು?

ಇವು ನನ್ನ ಕೊನೆಯ ದಿನಗಳಾ? ನರಕ ಎಂದರೆ ಇದೇನಾ? ಹೀಗೆಲ್ಲ ಸ್ವಲ್ಪ ಸಮಯ ಅನ್ನಿಸಿದ್ದು ನಿಜ. ಇನ್ನೊಬ್ಬರಿಗೆ ಭಾರವಾಗಿರುವ ಭಾವನೆ ಮನಸ್ಸನ್ನು ಕಾಡುತ್ತಿತ್ತು. ಇನ್ನೊಂದು ಕಡೆ, ಜೀವನಪ್ರೀತಿ ಇದ್ದೇಇತ್ತು. ನಾನು ಸಾಯದೆ ಉಳಿದಿದ್ದೇನೆ ಎಂದರೆ ಅದಕ್ಕೆ ಅರ್ಥ ಬೇರೇನೋ ಇದೆ ಎಂದೂ ಅನ್ನಿಸುತ್ತಿತ್ತು.

ಅಪ್ಪಾಜಿ ಹಾಡುಗಳು ನನಗೆ ಮೆಡಿಸಿನ್‌ನಂತೆ ಕೆಲಸ ಮಾಡುತ್ತಿದ್ದವು. ದಿನಕ್ಕೆ ಎಂಟು ತಾಸು ಫಿಸಿಯೊಥೆರಪಿಗೆ ಒಳಗಾಗುತ್ತಿದ್ದೆ. ಫಿಸಿಯೊಥೆರಪಿ ಸಮಯದಲ್ಲಿ ಅವರು ಹಾಡಿದ ಭಕ್ತಿಗೀತೆಗಳನ್ನು ಕೇಳುತ್ತಿದ್ದೆ. ಹಂಸಲೇಖ ಅವರ ‘ಬಾಳುವಂಥ ಆಸೆ ಬಾಡುವಾಸೆ ಏಕೆ’ ಹಾಡು ಇಷ್ಟವಾಗುತ್ತಿತ್ತು. ‘ನಂಬಿಕೆಯೇ ನಂದಾದೀಪ’ ಎಂದು ಬಾಲ ಯೇಸುವಿನ ಬಗ್ಗೆ ಅಪ್ಪಾಜಿ ಹಾಡಿದ ಗೀತೆ ನನಗೆ ಸ್ಫೂರ್ತಿ ನೀಡಿದ ಹಾಡುಗಳಲ್ಲೊಂದು. ಮಾವಿನ ಮರಕ್ಕೆ ದಿನವೂ ನೀರು ಹಾಕುವೆ. ಹಾಗೆಂದು ಅದು ನೀನು ಬಯಸಿದ ಸಂದರ್ಭದಲ್ಲಿ ಹಣ್ಣು ನೀಡುವುದಿಲ್ಲ. ಹಣ್ಣು ಬಿಡುವ ಕಾಲ ಬಂದಾಗಲಷ್ಟೇ ಮರದಲ್ಲಿ ಹಣ್ಣು ದೊರೆಯುವುದು ಎನ್ನುವ ಹಾಡಿನ ಸಾರ ನನಗೆ ಬದುಕಿನ ಸತ್ಯವನ್ನು ಕಾಣಿಸಿತು. ‘ಮುಂದಿನ ವರ್ಷ ಸರಿಹೋಗುತ್ತೆ...’ ಎನ್ನುವ ನಂಬಿಕೆಯೇ ಇಲ್ಲಿಯವರೆಗೂ ನನ್ನನ್ನು ಕರೆದುಕೊಂಡು ಬಂದಿದೆ. ಈಗ ಸಿನಿಮಾ ಕೊಟ್ಟಿರುವ ದೇವರು ನನ್ನಿಂದ ಅಭಿನಯ ಮಾಡಿಸದೆ ಇರುತ್ತಾನೆಯೇ?

ಈ ಆರು ವರ್ಷಗಳಲ್ಲಿ ನನ್ನ ಬದುಕಿನಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಅಧ್ಯಾತ್ಮದ ಮಾರ್ಗದಲ್ಲಿ ನಡೆದಿದ್ದೇನೆ. ಬಹುಶಃ, ನಾನು ಚೆನ್ನಾಗಿಯೇ ಇದ್ದಿದ್ದರೆ ಇದೆಲ್ಲ ಅನುಭವ ನನಗೆ ದೊರೆಯುತ್ತಿರಲಿಲ್ಲ. ಆದುದೆಲ್ಲವನ್ನೂ ಅನುಭವ ಎಂದು ಸ್ವೀಕರಿಸಬೇಕು. ಪ್ರತಿ ಅನುಭವದಲ್ಲಿನ ಒಳ್ಳೆಯದು ಮತ್ತು ಕಹಿಯಾದುದು – ಎರಡನ್ನೂ ಸ್ವೀಕರಿಸುವ ಮನೋಭಾವ ಬಂದಿದೆ. ಇತ್ತೀಚೆಗೆ ಭಗವಾನ್‌ ನಿರ್ದೇಶನದ ‘ಆಡುವ ಗೊಂಬೆ’ ಸಿನಿಮಾದಲ್ಲಿ ಒಂದು ಹಾಡು ಹಾಡಿದೆ. ‘ಆಡಿಸಿ ನೋಡು, ಬೀಳಿಸಿ ನೋಡು, ಗೊಂಬೆಗೆ ಏನಾಗದು’ ಎನ್ನುವ ಹಾಡು ನನ್ನನ್ನೇ ನೋಡಿ ಬರೆದಂತಿದೆ. ಇಂಥ ಸಂಗತಿಗಳೇ ಹೆಜ್ಜೆ ಮುಂದೂಡಲು ನನ್ನನ್ನು ಮುಂದಕ್ಕೆ ತಳ್ಳುತ್ತಿವೆ.‌

* ಪಾರ್ಶ್ವವಾಯುವಿಗೆ ತುತ್ತಾದವರಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ನೀವು ನೀಡುವ ಸಲಹೆ ಏನು?

ಫಿಜಿಯೊಥೆರಪಿ, ಚಿಕಿತ್ಸೆ ಮತ್ತು ಜೀವನ ಮುಂದಕ್ಕೆ ಹೋಗಲು ನಂಬಿಕೆ ಬಹಳ ಮುಖ್ಯ. ನಾನು ದೇವರ ವ್ರತವೊಂದನ್ನು ಮಾಡಿದೆ. ಇತ್ತೀಚೆಗೆ ಮಂತ್ರಾಲಯಕ್ಕೆ ಹೋದಾಗ ಉರುಳುಸೇವೆ ಮಾಡಿದೆ. ಎಲ್ಲೋ ಒಂದು ಕಡೆ ನನಗೆ ‘ರಾಯರು ಇದ್ದಾರೆ’ ಎನ್ನಿಸುತ್ತಿತ್ತು. ಮೂರು ವರ್ಷದ ಹಿಂದೆ ಮಂತ್ರಾಲಯಕ್ಕೆ ಹೋದಾಗ ನನಗೆ ನಡೆಯಲಿಕ್ಕೆ ಆಗುತ್ತಿರಲಿಲ್ಲ. ಈ ಬಾರಿ, ‘ನಾನು ಸುತ್ತುತ್ತೇನೆ, ನೀನು ಸುತ್ತಿಸು’ ಎಂದು ಸಂಕಲ್ಪ ಮಾಡಿ ಉರುಳುಸೇವೆ ಮಾಡಿದೆ. ನನ್ನ ಜೊತೆಯಲ್ಲಿದ್ದವರೆಲ್ಲ ಗಾಬರಿಯಾಗಿದ್ದರು. ಮಠದ ಸ್ವಾಮಿಗಳು, ‘ಉರುಳುಸೇವೆ ಏಕೆ ಮಾಡಲು ಹೋಗಿದ್ದಿರಿ. ದೇವರು ಇದನ್ನೆಲ್ಲ ಮಾಡಲು ಬಯಸುವುದಿಲ್ಲ’ ಎಂದಿದ್ದರು. ಆದರೆ, ನನ್ನ ನಂಬಿಕೆಯೇ ನನಗೆ ಬಲ ತಂದುಕೊಟ್ಟಿತ್ತು. ಜೊತೆಗೆ ಬಂದಿದ್ದ ನನ್ನ ಮಗನ ಗೆಳೆಯರಿಗೆ ಉರುಳುಸೇವೆ ಮಾಡಲು ಆಗಲಿಲ್ಲ. ಮುಂದಿನ ಬಾರಿ ರಾಯರ ಸನ್ನಿಧಿಗೆ ಹೋಗುವ ವೇಳೆಗೆ ಓಡುವಷ್ಟು ಶಕ್ತಿ ನನಗೆ ಬಂದಿರುತ್ತದೆ ಎನ್ನುವ ನಂಬಿಕೆ ಬಂದಿದೆ.

ಒಂದಂತೂ ನಿಜ, ಬದುಕಲಿಕ್ಕೆ ಯಾವುದಾದರೂ ನಂಬಿಕೆ ಬೇಕು. ಪ್ರತಿಯೊಂದು ಸಂಗತಿಯನ್ನು ನಂಬಿದಾಗಲೂ ಜೀವನ ಒಂದು ಮೂರು ತಿಂಗಳ ಕಾಲ ಮುಂದಕ್ಕೆ ಹೋಗುತ್ತದೆ. ಈಗ, ‘ಅಮ್ಮನ ಮನೆ’ ಸಿನಿಮಾ ಆಗುವ ವೇಳೆಗೆ ನಾನು ಪೂರ್ಣವಾಗಿ ಹುಷಾರಾಗಿರುತ್ತೇನೆ ಎನ್ನುವ ನಂಬಿಕೆ. ಹೀಗೆ ಯಾವುದಾದರೊಂದು ನಂಬಿಕೆಯೇ ಜೀವನವನ್ನು ಮುನ್ನಡೆಸುತ್ತದೆ. ನಂಬಿಕೆ–ಧೈರ್ಯ ಕಳೆದುಕೊಂಡರೆ ಅದು ಸಾವು. ಎಲ್ಲರೂ ಬೀಳುತ್ತೇವೆ. ಏಳುವುದು ಸಾಧ್ಯವಿಲ್ಲ ಎಂದು ನಮಗನ್ನಿಸಿದರೆ ಬದುಕು ಮುಗಿದಂತೆ. ಯಾವುದನ್ನಾದರೂ ಪ್ರಯತ್ನಿಸಬೇಕು, ಅದು ಸಾಧ್ಯವಾಗದಿದ್ದರೆ ಮತ್ತೊಂದನ್ನು ಪ್ರಯತ್ನಿಸಬೇಕು. ಇಂಥ ನಂಬಿಕೆಗಳಲ್ಲೇ ಐದು ಹುಟ್ಟಿದ ಹಬ್ಬಗಳನ್ನು ಕಳೆದೆ. ಈ ವರ್ಷದ ಹುಟ್ಟಿದ ಹಬ್ಬಕ್ಕೆ (ಆಗಸ್ಟ್ 15) ಇಡೀ ದಿನ ಚಟುವಟಿಕೆಯಿಂದಿದ್ದೆ. ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ.

ಈಗ ಬೆಳಗ್ಗೆ ನಾಲ್ಕಕ್ಕೆ (ಅಪ್ಪಾಜಿಯಂತೆ) ಏಳುತ್ತೇನೆ. ಮಂತ್ರಗಳನ್ನು ಓದುತ್ತೇನೆ. ಜೋರಾಗಿ ಓದುತ್ತೇನೆ. ಇದರಿಂದಾಗಿ ನನ್ನ ಧ್ವನಿಗೆ ಬಿಡುಗಡೆ ಆಯ್ತು. ನಮ್ಮ ಮಂತ್ರಗಳು ಟಂಗ್‌ ಟ್ವಿಸ್ಟರ್‌ಗಳಂತೆ. ಮೊದಲಿಗೆ ತೊದಲುತ್ತಿದ್ದೆ, ಈಗ ಸರಿಯಾಗಿದೆ. ವ್ಯಾಯಾಮ ಮಾಡುವೆ, ವಾಕಿಂಗ್‌ ಹೋಗುವೆ. ಸದಾ ಚಲಿಸುತ್ತಿರಲೇ ಬಯಸುವೆ.

ನನಗೆ ಹತ್ತು ನಿಮಿಷ ನಡೆಯಲು ಆಗುತ್ತಿರಲಿಲ್ಲ. ‘ರಾಮ ರಾಮ’ ಎಂದುಕೊಳ್ಳುತ್ತ ಈಗ ಎರಡು ತಾಸು ನಡೆಯಬಲ್ಲೆ. ಔಷಧಿ ಒಂದು ಎಂದಿಲ್ಲ, ಹೇಳಿದ್ದೆಲ್ಲವನ್ನು ಮಾಡಿರುವೆ. ಈಗ ಸಿನಿಮಾಕ್ಕೆ ಬಂದಿರುವೆ ಎಂದಮೇಲೆ ಮುಖ್ಯವಾಹಿನಿಗೆ ಬಂದಂತಾಯಿತಲ್ಲ.

* ಆಹಾರದ ಅಭ್ಯಾಸ ಬದಲಾಯಿತಾ?

ನಾನು ಸಸ್ಯಾಹಾರಿ ಆಗಿಬಿಟ್ಟಿರುವೆ. ಈ ಅನಾರೋಗ್ಯದ ದಿನಗಳಲ್ಲಿ ಒಂದು ವಿಷಯ ಕಂಡುಕೊಂಡೆ. ಎಂಜಾಯ್‌ ದಿ ಪ್ರಾಬ್ಲಂ ಅಂಥ. ‘ಬೇಜಾರನ್ನು ನಾವು ಇಷ್ಟಪಡತೊಡಗಿದರೆ ಆ ಬೇಜಾರಿಗೇ ಬೇಜಾರು ಬಂದು ಬಿಡುತ್ತೆ’ ಎಂದು ಮಂಡಿನೋವು ಸಮಯದಲ್ಲಿ ಅಪ್ಪಾಜಿ ಹೇಳುತ್ತಿದ್ದರು. ಮಂಡಿನೋವನ್ನು ಅಪ್ಪಾಜಿ ಸ್ನೇಹಿತ ಎಂದುಕೊಂಡಿದ್ದರು. ಆ ಕಾಡಿನಲ್ಲಿದ್ದಾಗಲೂ ಬೇಜಾರಿಗೆ ಬೇಜಾರು ತರುವ ಕೆಲಸವನ್ನು ಅಪ್ಪಾಜಿ ಮಾಡುತ್ತಿದ್ದರಂತೆ.

* ನಿಮ್ಮ ಈ ಕಥೆ ಸ್ಫೂರ್ತಿದಾಯಕವಾಗಿದೆ. ಇದನ್ನು ಸಿನಿಮಾ ಮಾಡಬಹುದು ಎನ್ನಿಸಿದೆಯೇ?

ಇಲ್ಲ. ನಮ್ಮ ಅನುಭವ ಸಿನಿಮಾ ಆಗಬೇಕೆಂದು ಕಲಾವಿದರಿಗೆ ಅನ್ನಿಸುವುದು ಕಡಿಮೆ. ಬೇರೆಯವರ ಅನುಭವಗಳನ್ನು ತೆರೆಯ ಮೇಲೆ ತರುವಲ್ಲಿ ಕುತೂಹಲ. ಅಲ್ಲದೆ, ನಮ್ಮ ಎಷ್ಟೋ ಅನುಭವಗಳು ಸಿನಿಮಾ ಮಾಧ್ಯಮದಲ್ಲಿ ನಾವು ಅಂದುಕೊಂಡಂತೆ ಕಾಣಿಸದಿರಬಹುದು. ನಮಗೆ ಮುಖ್ಯವೆನ್ನಿಸಿದ್ದು ಪ್ರೇಕ್ಷಕರಿಗೆ ಇಷ್ಟವಾಗದೆ ಇರಬಹುದು. ಅಪ್ಪಾಜಿ ಕಾಡಿನಿಂದ ಬಂದಾಗ, ‘ಕಾಡಿನಲ್ಲಿ ನಿಮ್ಮ ಅನುಭವ ಹೇಗಿತ್ತು?’ ಎಂದು ಕೇಳಿದೆ. ‘ಐದು ನಿಮಿಷ ಕಣ್ಣು ಮುಚ್ಚಿಕೋ ಕಂದ’ ಎಂದರು. ಕಣ್ಣು ತೆರೆದ ನಂತರ – ‘ನೀನು ಕಣ್ಣುಮುಚ್ಚಿಕೊಂಡಿದ್ದೆಯಲ್ಲ, ಕಾಡಿನಲ್ಲಿ ಇಡೀ ದಿನ ಹೀಗೇ ಇರುತ್ತಿತ್ತು, ಕತ್ತಲೆ. ಮಲಗುವಂತಿಲ್ಲ. ಹುಳುಗಳ ಓಡಾಟ’ ಎಂದರು. ಈ ಅನುಭವವನ್ನು ಸಿನಿಮಾಕ್ಕೆ ತರುವುದು ಹೇಗೆ? ಜನರಿಗೆ ನಮ್ಮ ಅನುಭವ ನೋವಾಗಿ ಕಾಣಿಸಬಾರದು, ಅದು ಅನುಭವವಾಗಿ, ಒಂದು ಜರ್ನಿಯಾಗಿ ಅವರಿಗೆ ತಲುಪಬೇಕು.

* ಅಪ್ಪಾಜಿ ಸಿನಿಮಾಗಳು, ನಿಮ್ಮ ಕಾಲದ ಸಿನಿಮಾಗಳು ಹಾಗೂ ಈಗಿನ ಕಾಲದ ಸಿನಿಮಾಗಳು. ಈ ಸಿನಿಮಾ ಜರ್ನಿಯಲ್ಲಿ ನೀವು ಕಂಡಿರುವ ಬದಲಾವಣೆ ಯಾವ ರೀತಿಯದು?

ತಂತ್ರಜ್ಞಾನ ತುಂಬಾ ಬದಲಾಗಿದೆ. ಆದರೆ, ಸಿನಿಮಾ ಮನಸ್ಸಿಗೆ ಹತ್ತಿರವಾಗೋದು ಸ್ವಲ್ಪ ಕಡಿಮೆಯಾಗಿದೆ. ಈಗ ಮಾಡುವ ಸಿನಿಮಾಗಳು ಎರಡು ವರ್ಷದ ನಂತರ ನೋಡಬೇಕು ಅನ್ನಿಸುತ್ತೋ ಇಲ್ಲವೋ ಗೊತ್ತಿಲ್ಲ.

ಇವತ್ತು ಸಿನಿಮಾ ಜನರಿಗೆ ಕೊನೆಯ ಆದ್ಯತೆ ಆಗಿದೆ. ಮೊದಲು ಮನರಂಜನೆಗೆ ಸಿನಿಮಾ ಒಂದೇ ಆಯ್ಕೆಯಾಗಿತ್ತು. ಅಲ್ಲದೆ, ತಂಡದ ಕೆಲಸ ಎನ್ನುವಂತಿತ್ತು. ‘ನಾವು ಕೊಡೋದನ್ನು ಅವರು ನೋಡುವ ಹಾಗೆ ಮಾಡಬೇಕು. ಅವರು ಬಯಸೋದನ್ನು ನಾವು ಕೊಡುವಂತಾಗಬಾರದು’ ಎನ್ನುವುದು ಅಪ್ಪಾಜಿ ನಂಬಿಕೆಯಾಗಿತ್ತು. ಸಿನಿಮಾ ಏನು ಕೇಳುತ್ತೆ, ಕಥೆ ಏನನ್ನು ಬಯಸುತ್ತೆ, ಅದನ್ನು ಕೊಡಬೇಕು ಅಷ್ಟೇ.

* ಚಿತ್ರಕಥೆಯ ಬಗ್ಗೆ ಇಷ್ಟೊಂದು ಪ್ರೀತಿಯಿಂದ ಮಾತನಾಡುವಿರಿ. ನಿರ್ದೇಶನ ಮಾಡಬೇಕು ಅನ್ನಿಸಿಲ್ಲವಾ?

ಇಲ್ಲ. ಒಂದು ಸಿನಿಮಾ ರೂಪುಗೊಳ್ಳುವಲ್ಲಿ ನಿರ್ದೇಶಕನ ಜವಾಬ್ದಾರಿ ದೊಡ್ಡದು. ನಿರ್ದೇಶನ ಮಾಡಲಿಕ್ಕೆ ಹೋದರೆ ಉಳಿದ ಕೆಲಸಗಳು ಹಿಂದುಳಿದುಬಿಡುತ್ತವೆ. ‘ನನ್ನ ಕೆಲಸ ನಟಿಸುವುದು. ಅದನ್ನು ಬಿಟ್ಟು ಬೇರೆ ಕೆಲಸ ಮಾಡಬಾರದು. ಬೇರೆಯದರ ಗಂಧವೂ ನನಗಿಲ್ಲ’ ಎಂದು ಅಪ್ಪಾಜಿ ಹೇಳುತ್ತಿದ್ದರು. ಆ ಕಾರಣದಿಂದಲೇ ಅವರು ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡರು. ನಾನೂ ಅಷ್ಟೇ. ನಟಿಸಬಲ್ಲೆ. ನಾಯಕನ ಪಾತ್ರವೇ ಎಂದಲ್ಲ. ಅಪ್ಪ, ಅಣ್ಣ ಸೇರಿದಂತೆ ಕಥೆಯಲ್ಲಿ ಮುಖ್ಯವೆನ್ನಿಸುವ ಯಾವ ಪಾತ್ರವಾದರೂ ನಟಿಸುವೆ.

ಅಪ್ಪಾಜಿಯ ಹಳೆಯ ಸಿನಿಮಾಗಳನ್ನು ಪುನೀತ್‌ ನಟನೆಯಲ್ಲಿ ಮರು ನಿರ್ಮಿಸಬೇಕು ಎನ್ನುವ ಆಸೆಯೂ ಇದೆ.

***

ರಾಘವೇಂದ್ರ ರಾಜ್‌ಕುಮಾರ್‌ ಬೀಳ್ಕೊಡಲು ಎದ್ದು ನಿಂತರು. ಕೆಲವು ಕ್ಷಣ ಮೌನ. ಗೋಡೆಯ ಮೇಲಿನ ರಾಜಕುಮಾರರು ಎಲ್ಲವನ್ನೂ ಕೇಳಿಸಿಕೊಂಡಂತೆ ಕಾಣಿಸುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿದ್ದು ನಮ್ಮೊಂದಿಗಾ ಅಥವಾ ರಾಜಕುಮಾರ್‌ ಅವರ ಜೊತೆಗಾ?

‘ಮತ್ತೆ ಬನ್ನಿ, ತಿಂಡಿಗೆ ಅಥವಾ ಊಟಕ್ಕೆ’.

ರಾಘವೇಂದ್ರ ರಾಜ್‌ಕುಮಾರ್‌ ಮಾತಿನಲ್ಲೂ ರಾಜ್‌ ಅವರೇ ಕಾಣಿಸತೊಡಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT