ಗುರುವಿನ ಗುಲಾಮ ಟೈಗರ್ ಶ್ರಾಫ್‌

7

ಗುರುವಿನ ಗುಲಾಮ ಟೈಗರ್ ಶ್ರಾಫ್‌

Published:
Updated:
Prajavani

ಕೈತುಂಬಾ ಅವಕಾಶಗಳು, ಬಿಡುವಿಲ್ಲದ ಚಿತ್ರೀಕರಣ ಶೆಡ್ಯೂಲ್‌ಗಳು, ಪ್ರೀತಿ ಪ್ರೇಮ ಪ್ರಣಯದ ಗಾಳಿಸುದ್ದಿ... ಟೈಗರ್‌ ಶ್ರಾಫ್‌ ಬಳಲಿದ್ದಾರೆ. ದೇಹ ವಿಶ್ರಾಂತಿಗಾಗಿ ಬೇಡಿದರೂ ಗುರುವಿನ ಮುಖವನ್ನು ನೆನಪಿಸಿಕೊಂಡು ಚೈತನ್ಯದ ಚಿಲುಮೆಯಾಗಿ ಪುಟಿದೇಳುತ್ತಾರೆ.

ಟೈಗರ್‌ ಗುರುಭಾವದಿಂದ ಆರಾಧಿಸುವ ವ್ಯಕ್ತಿ ಯಾರು ಎಂದು ನಿಮಗೂ ಕುತೂಹಲವಾಯಿತೇ? ಬೇರಾರೂ ಅಲ್ಲ, ಟೈಗರ್‌ ಅವರನ್ನು ಬಾಲ್ಯದಿಂದಲೇ ಆಕರ್ಷಿಸಿರುವ ನಟ ಹೃತಿಕ್‌ ರೋಶನ್‌!

ಕಳೆದ ವರ್ಷ ‘ಬಾಗಿ 2’ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಾಗಲೇ, ಅದರ ಮೂರನೇ ಭಾಗವನ್ನು ಪ್ರೇಕ್ಷಕರು ನಿರೀಕ್ಷಿಸಿದ್ದರು. ನಿರ್ದೇಶಕ, ನಿರ್ಮಾಪಕರೂ ಪ್ರೇಕ್ಷಕರ ಅಭಿಮಾನಕ್ಕೆ ಸೈ ಎಂದರು. ಹಾಗಾಗಿ ‘ಬಾಗಿ 3’ ಕೂಡಾ ಸಿದ್ಧಗೊಂಡು ಬಿಡುಗಡೆಗೆ ದಿನಗಣನೆ ನಡೆಯುತ್ತಿದೆ. ಅದೇ ಹೊತ್ತಿಗೆ ಟೈಗರ್‌ ಕೈಯಲ್ಲಿ ‘ಸ್ಟೂಡೆಂಟ್ ಆಫ್‌ ದಿ ಇಯರ್‌ 2’ ಇತ್ತಲ್ಲ! ಎರಡೂ ಚಿತ್ರಗಳ ಚಿತ್ರೀಕರಣಕ್ಕೆ ಸ್ವಲ್ಪವೂ ತೊಡಕಾಗದಂತೆ ಟೈಗರ್‌ ನಿಭಾಯಿಸಿದರು. 

ಗುರು–ಶಿಷ್ಯರ ಸಮಾಗಮ

ಹೌದು, ಈಗ ಟೈಗರ್‌ ದಣಿದಿದ್ದಾರೆ. ಒಂದಾದ ಮೇಲೊಂದರಂತೆ ಚಿತ್ರೀಕರಣದ ಶೆಡ್ಯೂಲ್‌, ತಮ್ಮ ದೈನಂದಿನ ಚಟುವಟಿಕೆಗಳ ನಡುವೆ ತಮ್ಮ ಗುರುವಿನೊಂದಿಗೆ ‘ಹೃತಿಕ್‌ ವರ್ಸಸ್‌ ಟೈಗರ್‌’ ಚಿತ್ರದ ಚಿತ್ರೀಕರಣವೂ ಸಾಗಿತ್ತು! ಹೇಳಿಕೇಳಿ ಹೃತಿಕ್‌ ಜೊತೆಗೆ ಸಮತೂಕದ ಪಾತ್ರವನ್ನು ಹಂಚಿಕೊಳ್ಳುವ ಅವಕಾಶ ಈ ಚಿತ್ರದ್ದು.

ಯಶ್‌ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಹೃತಿಕ್‌ ಮತ್ತು ಟೈಗರ್‌ ಅವರದು ಗುರು ಶಿಷ್ಯರ ಪಾತ್ರ. ಜಿಮ್‌ನಲ್ಲಿ ಇಬ್ಬರೂ ವರ್ಕ್‌ ಔಟ್‌ ಮಾಡುವುದು, ಮೈನವಿರೇಳಿಸುವ ವ್ಯಾಯಾಮ ಮಾಡುವುದು, ಒಬ್ಬರಿಗೊಬ್ಬರು ಸಡ್ಡುಹೊಡೆಯುವಂತೆ ಮಾಂಸಖಂಡಗಳನ್ನು ಹುರಿಗೊಳಿಸುವುದು... ಅಬ್ಬಾ... ‘ಹೃತಿಕ್‌ ವರ್ಸಸ್‌ ಟೈಗರ್‌’ನ ಕೆಲವು ವಿಡಿಯೊಗಳನ್ನು ನೋಡಿದರೆ ಸಿನಿಮಾಕ್ಕಾಗಿ ಕಾತರಿಸುವಂತೆ ಮಾಡುತ್ತವೆ.

‘ಹೃತಿಕ್‌ ರೋಶನ್‌ ಜೊತೆ ತೆರೆ ಹಂಚಿಕೊಳ್ಳುವುದು ನನ್ನ ಬದುಕಿನ ಅತಿ ದೊಡ್ಡ ಕನಸಾಗಿತ್ತು. ಅದು ನನಸಾಗುವ ಅವಕಾಶ ಸಿಕ್ಕಿದಾಗ ಇಲ್ಲ ಎನ್ನುತ್ತೇನೆಯೇ? ಹಾಗಾಗಿ ಈ ಸಿನಿಮಾ ನನ್ನ ಜೀವಮಾನದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯದ್ದು. ಇಬ್ಬರೂ ಒಟ್ಟೊಟ್ಟಿಗೇ ಸನ್ನಿವೇಶಗಳನ್ನು ಮಾಡುವಾಗ ನಾನೇ ರೋಮಾಂಚನಗೊಳ್ಳುತ್ತೇನೆ. ಪ್ರತಿ ದೃಶ್ಯದ ಚಿತ್ರೀಕರಣ ಮುಗಿದ ತಕ್ಷಣ ಕಂಪ್ಯೂಟರ್‌ ಪರದೆಯಲ್ಲಿ ಅದೇ ವಿಡಿಯೊವನ್ನು ನೋಡಿದಾಗ ಇದೆಲ್ಲಾ ಕನಸೇ ವಾಸ್ತವವೇ ಎಂದು ಯೋಚಿಸುತ್ತೇನೆ’ ಎಂದು ಟೈಗರ್‌ ಭಾವುಕರಾಗಿ ಹೇಳುತ್ತಾರೆ. 

ಕಠಿಣ ಪರಿಶ್ರಮ, ಕೆಲಸದ ಮೇಲಿನ ಬದ್ಧತೆ ಮತ್ತು ಪಾತ್ರಕ್ಕೆ ಬೇಕಾದಂತೆ ತಮ್ಮನ್ನು ಒಗ್ಗಿಸಿಕೊಳ್ಳುವ ಜಾಯಮಾನ ಟೈಗರ್‌ ಅವರದ್ದು. ಆದರೂ, ‘ಗುರು’ವಿನ ಪ್ರತಿ ನಡೆಯಿಂದಲೂ ಅವರು ಕಲಿಯುತ್ತಲೇ ಇದ್ದಾರಂತೆ.

ಬರಹ ಇಷ್ಟವಾಯಿತೆ?

 • 21

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !