ಸೋಮವಾರ, ಜನವರಿ 27, 2020
24 °C
ನೇರಾನೇರ ಕಿತ್ತಾಟ

ಟಾಲಿವುಡ್‌ ಸ್ಟಾರ್‌ ವಾರ್: ಮತ್ತೆ ಭುಗಿಲೆದ್ದ ಚಿರಂಜೀವಿ –ರಾಜಶೇಖರ್‌ ವೈಷಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲುಗು ಚಿತ್ರರಂಗದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸತ್ಯ ಕೊನೆಗೂ ಬಹಿರಂಗಗೊಂಡಿದೆ. ಸ್ಟಾರ್‌ ನಟರ ನಡುವಿನ ಮುಸುಕಿನ ಗುದ್ದಾಟ ಹೊಸ ವರ್ಷದ ಮೊದಲ ದಿನವೇ ಬಟಾಬಯಲಾಗಿದೆ. ನಟರ ಅಂತರ್ಯುದ್ಧ ಕಂಡು ಅವರ ಅಭಿಮಾನಿಗಳಲ್ಲೂ ಆತಂಕ ಮಡುಗಟ್ಟಿದೆ. ‘ಮೆಗಾಸ್ಟಾರ್’ ಚಿರಂಜೀವಿ ಮತ್ತು ರಾಜಶೇಖರ್‌ ನಡುವಿನ ತಿಕ್ಕಾಟ ಮತ್ತೆ ಬೀದಿಗೆ ಬಿದ್ದಿದೆ. ಅದು ಆಗಿದ್ದು ಇಷ್ಟೇ.

ಟಾಲಿವುಡ್‌ನ ದಿ ಮೂವಿ ಆರ್ಟಿಸ್ಟ್‌ ಅಸೋಸಿಯೇಷನ್‌(ಮಾ) ಹೊಸ ವರ್ಷದ ಮೊದಲ ದಿನದಂದು ಡೈರಿ ಬಿಡುಗಡೆ ಸಮಾರಂಭ ಹಮ್ಮಿಕೊಂಡಿತ್ತು. ತೆಲುಗಿನ ಹಿರಿಯ ನಟರಾದ ‘ಮೆಗಾಸ್ಟಾರ್‌’ ಚಿರಂಜೀವಿ, ಮೋಹನ್‌ ಬಾಬು, ಕೃಷ್ಣಂರಾಜು ಸೇರಿದಂತೆ ಅಸೋಸಿಯೇಷನ್‌ನ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಸುಸೂತ್ರವಾಗಿಯೇ ನಡೆಯುತ್ತಿತ್ತು. ಒಮ್ಮೆಲೆ ಹಿರಿಯ ನಟ ರಾಜಶೇಖರ್‌ ವೇದಿಕೆ ಏರಿದಾಗ ಎಲ್ಲರಿಗೂ ಅಚ್ಚರಿಯಾಯಿತು. ಪಾರುಚೂರಿ ವೆಂಕಟೇಶ್ವರ್‌ ರಾವ್‌ ಅವರಿಂದ ಮೈಕ್‌ ಕಿತ್ತುಕೊಂಡ ಅವರು, ವೇದಿಕೆಯಲ್ಲಿದ್ದ ಎಲ್ಲರಿಗೂ ನಮಸ್ಕರಿಸಿದರು. ಬಳಿಕ ಭಾವುಕರಾದ ಅವರು ನೇರವಾಗಿ ವಾಗ್ದಾಳಿಗೆ ಇಳಿದೇ ಬಿಟ್ಟರು.

‘ಎಲ್ಲಾ ಕಲಾವಿದರು ಚಿತ್ರರಂಗದ ಅಭಿವೃದ್ಧಿಗೆ ಒಟ್ಟಾಗಿ ದುಡಿಯೋಣ ಎಂದು ಚಿರಂಜೀವಿ ಹೇಳುತ್ತಾರೆ. ಸಂಘದ ಚಟುವಟಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಎನ್ನುತ್ತಾರೆ. ನಾನು ಸಂಪೂರ್ಣವಾಗಿ ಸಂಘದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವೆ. ಇದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಕಳೆದ ನವೆಂಬರ್‌ನಲ್ಲಿ ಕಾರು ಅಪಘಾತಕ್ಕೂ ತುತ್ತಾದೆ. ಜೊತೆಗೆ ಮನೆಯಲ್ಲಿಯೂ ಗಲಾಟೆ ನಡೆಯುತ್ತಿದೆ. ಮತ್ತೊಂದೆಡೆ ಸಿನಿಮಾಗಳಲ್ಲೂ ನಟಿಸಲು ಆಗುತ್ತಿಲ್ಲ. ನಾವೆಲ್ಲರೂ ತೆರೆಯ ಮೇಲೆ ಹೀರೊಗಳಾಗಿ ವಿಜೃಂಭಿಸುತ್ತೇವೆ. ಸಂಘದ ಅಭಿವೃದ್ಧಿಗೆ ದುಡಿಯುವವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ’ ಎಂದು ‘ಮಾ’ ಅಧ್ಯಕ್ಷ ನರೇಶ್‌ ಅವರ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದರು. 

ರಾಜಶೇಖರ್‌ ಅವರ ಈ ಮಾತುಗಳಿಂದ ಕಾರ್ಯಕ್ರಮದಲ್ಲಿ ಹಾಜರಿದ್ದವರು ಕೆಲಕಾಲ ವಿಚಲಿತರಾದರು. ರಾಜಶೇಖರ್‌ ಮಾತನಾಡದಂತೆ ತಡೆಯಲು ವೇದಿಕೆಯಲ್ಲಿದ್ದ ಚಿರಂಜೀವಿ ಮತ್ತು ಮೋಹನ್‌ ಬಾಬು ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಅದು ಫಲಪ್ರದವಾಗಲಿಲ್ಲ. ಅಸಮಾಧಾನ ಹೊರಹಾಕಿದ ಬಳಿಕ ರಾಜಶೇಖರ್‌ ಅಲ್ಲಿಂದ ನಿರ್ಗಮಿಸಿದರು.

ಬಳಿಕ ಮೈಕ್‌ ಕೈಗೆತ್ತಿಕೊಂಡ ಚಿರಂಜೀವಿ ಅವರು, ರಾಜಶೇಖರ್‌ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದರು. ‘ಕೆಟ್ಟ ಮಾತುಗಳು ಕಿವಿಗಷ್ಟೇ ಸೀಮಿತವಾಗಬೇಕು. ಮೈಕ್‌ನಲ್ಲಿ ಒಳ್ಳೆಯ ಮಾತುಗಳನ್ನಷ್ಟೇ ಆಡಬೇಕು ಎಂದು ಎಲ್ಲರಿಗೂ ಹೇಳಿದ್ದೇನೆ. ನಾನು ಸೇರಿದಂತೆ ಇಲ್ಲಿ ಕುಳಿತಿರುವ ಹಿರಿಯ ನಟರಿಗೆ ರಾಜಶೇಖರ್‌ ಗೌರವ ನೀಡಿಲ್ಲ. ಅವರ ವಿರುದ್ಧ ಸಂಘದಿಂದ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಪರಿಸ್ಥಿತಿ ಅಷ್ಟಕ್ಕೆ ತಿಳಿಯಾಗಲಿಲ್ಲ. ಚಿರಂಜೀವಿ ಅವರ ಮಾತು ಮುಗಿಯುತ್ತಿದ್ದಂತೆ ವೇದಿಕೆ ಏರಿದ ರಾಜಶೇಖರ್‌ ಅವರ ಪತ್ನಿ ಜೀವಿತಾ, ‘ನಮ್ಮ ಸಿನಿಮಾಗಳ ಬಗ್ಗೆ ಟೀಕೆ ಮಾಡಲು ಎಲ್ಲರಿಗೂ ಅರ್ಹತೆ ಇದೆ. ಆದರೆ, ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ’ ಎಂದ ಅವರು, ಘಟನೆ ಬಗ್ಗೆ ಎಲ್ಲರಲ್ಲೂ ಕ್ಷಮೆ ಕೋರಿದರು.

ವೈಯಕ್ತಿಕ ದ್ವೇಷವಿಲ್ಲ ಎಂದ ರಾಜಶೇಖರ್

‘ಚಿರಂಜೀವಿ, ಮೋಹನ್‌ ಬಾಬು ಮತ್ತು ನನ್ನ ನಡುವೆ ಯಾವುದೇ ಅಪನಂಬಿಕೆಗಳಿಲ್ಲ. ವೈಯಕ್ತಿಕ ದ್ವೇಷವೂ ಇಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ತೊಂದರೆಯಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ರಾಜಶೇಖರ್‌ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ‘ಮಾ’ ಉಪಾಧ್ಯಕ್ಷ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದಾರೆ.

‘ನಾನು ತೆಲುಗು ಚಿತ್ರರಂಗದ ಅಭಿವೃದ್ಧಿಗೆ ದುಡಿಯುತ್ತಿರುವೆ. ಯಾರೊಬ್ಬರು ಈ ವಿಷಯವನ್ನು ಮತ್ತಷ್ಟು ಬೆಳೆಸಲು ಹೋಗಬೇಡಿ. ಇದು ಚಿರಂಜೀವಿ, ಮೋಹನ್‌ ಬಾಬು ಮತ್ತು ನನ್ನ ನಡುವಿನ ವೈಯಕ್ತಿಕ ಗಲಾಟೆಯೆಂದು ಬಿಂಬಿಸಬೇಡಿ’ ಎಂದು ಕೋರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು