ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬೆಳಿಗ್ಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳಲಿದ್ದೇನೆ: ನಟಿ ರಮ್ಯಾ ಟ್ವೀಟ್

Last Updated 30 ಆಗಸ್ಟ್ 2022, 6:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಿತೆರೆಗೆ ಬ್ರೇಕ್‌ ಕೊಟ್ಟು ರಾಜಕೀಯಕ್ಕೆ ಧುಮುಕಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌, ನಟಿ ರಮ್ಯಾ ಇದೀಗ ಮತ್ತೆ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತಾರಾ ಎನ್ನುವ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣವೂ ಇದೆ. ಮಂಗಳವಾರ ರಮ್ಯಾ ಮಾಡಿರುವ ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

‘ಆ.31ರಂದು ಬೆಳಗ್ಗೆ 11.15ಕ್ಕೆ ಒಂದು ಸಿಹಿಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. It's Official!’ ಎಂದು ರಮ್ಯಾ ತಮ್ಮ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ರಮ್ಯಾ ಸಿನಿಮಾ ಕ್ಷೇತ್ರಕ್ಕೆ ಮತ್ತೆ ಹೆಜ್ಜೆ ಇರಿಸಲಿದ್ದಾರೆ ಎಂದು ಹಲವರು ಊಹಿಸಿದ್ದು, ಇನ್ನೂ ಕೆಲವರು ‘ಮದುವೆಯೇ?’ ಎಂದು ಪ್ರಶ್ನಿಸಿದ್ದಾರೆ. 39 ವರ್ಷದ ರಮ್ಯಾ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರಾ ಅಥವಾ ಮದುವೆ ಬಗ್ಗೆ ನಿರ್ಧಾರ ಕೈಗೊಂಡಿದ್ದಾರಾ ಎನ್ನುವುದೇ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರ.

ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರಿಗೆ ಜೋಡಿಯಾಗಿ 2003ರಲ್ಲಿ ‘ಅಭಿ’ ಸಿನಿಮಾ ಮುಖಾಂತರ ಚಿತ್ರರಂಗಕ್ಕೆ ರಮ್ಯಾ ಕಾಲಿಟ್ಟಿದ್ದರು. ಈ ಜೋಡಿ ಸಿನಿ ಪ್ರೇಕ್ಷಕರಲ್ಲಿ ಮೋಡಿ ಮಾಡಿತ್ತು. ಇದಾದ ಬಳಿಕ ಚಂದನವನ ಹಾಗೂ ಕಾಲಿವುಡ್‌ನ ಖ್ಯಾತ ನಟರೊಂದಿಗೆ ಸಾಲು ಸಾಲು ಚಿತ್ರಗಳಲ್ಲಿ ಜೋಡಿಯಾಗಿ ರಮ್ಯಾ ಕಾಣಿಸಿಕೊಂಡರು. ಹೀಗೆ ಸ್ಯಾಂಡಲ್‌ವುಡ್‌ ಕ್ವೀನ್‌ ಆದ ರಮ್ಯಾ, ರಾಜಕೀಯದ ಸೆಳೆತಕ್ಕೂ ಒಳಗಾಗಿ ಮಂಡ್ಯ ಲೋಕಸಭೆಯ ಸಂಸದರಾಗಿಯೂ ಆಯ್ಕೆಯಾಗಿದ್ದರು. ರಾಜಕೀಯಕ್ಕೆ ಇಳಿದ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು.

ಮತ್ತೆ ನಟನೆಯ ಆಸೆ ಬಿಚ್ಚಿಟ್ಟಿದ್ದ ರಮ್ಯಾ: ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾದ ಸಂದರ್ಭದಲ್ಲಿ ಮತ್ತೆ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ತಮ್ಮ ನಿರ್ಧಾರದ ಬಗ್ಗೆ ರಮ್ಯಾ ಮಾತನಾಡಿದ್ದರು. ‘ಜೇಮ್ಸ್‌, ದ್ವಿತ್ವ ಸಿನಿಮಾದಲ್ಲೂ ನಟಿಸಲು ಪುನೀತ್‌ ಕರೆದಿದ್ದರು. ನೀವು ಸಿದ್ಧರಿದ್ದಾಗ, ಯಾವುದಾದರೂ ಸ್ಕ್ರಿಪ್ಟ್‌ ಒಪ್ಪಿಗೆಯಾದರೆ ಸಿನಿಮಾ ಮಾಡೋಣ ಎಂದಿದ್ದರು. ಶಿವಣ್ಣನಿಗೆ ಜೋಡಿಯಾಗಿ ನಾನು ಅಭಿನಯಿಸುವ ಸಿನಿಮಾವನ್ನು ನಿರ್ದೇಶಿಸಬೇಕು ಎಂಬ ಕನಸು ಅಪ್ಪುವಿಗಿತ್ತು. ಅವರ ಬ್ಯಾನರ್‌ನಲ್ಲಿ ಯಾವುದೇ ಸಿನಿಮಾ ಮಾಡಿದರೆ ನನಗೆ ಮೊದಲ ಆದ್ಯತೆ ನೀಡುತ್ತಿದ್ದರು. ‘ನಾವಿಬ್ಬರೂ ಮತ್ತೆ ಜೊತೆಯಾಗಿ ಸಿನಿಮಾ ಮಾಡುವುದಿದ್ದರೆ ಪ್ರೇಕ್ಷಕರ ನಿರೀಕ್ಷೆ ಬಹಳ ಹೆಚ್ಚಾಗಿರುತ್ತದೆ. ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳುವುದಿದ್ದರೆ ಅಪ್ಪು ಜೋಡಿಯಾಗಿಯೇ ಎಂದು ನಾನು ಅವರಲ್ಲಿ ಹೇಳಿದ್ದೆ’ ಎಂದು ರಮ್ಯಾ ನೆನಪಿಸಿಕೊಂಡಿದ್ದರು.

ಇದಾದ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ರಮ್ಯಾ ಅವರು, ಹಲವು ಸಿನಿಮಾಗಳ ಹಾಡು ಮತ್ತು ಟೀಸರ್‌ ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಡಾಲಿ ಧನಂಜಯ ನಟನೆಯ ‘ಹೊಯ್ಸಳ’ ಚಿತ್ರದ ಸೆಟ್‌ಗೆ ಭೇಟಿ ನೀಡಿ ಚಿತ್ರೀಕರಣವನ್ನು ವೀಕ್ಷಿಸಿದ್ದರು. ಈ ಸಂದರ್ಭದಲ್ಲೇ ರಮ್ಯಾ ಕಂಬ್ಯಾಕ್‌ ಮಾಡ್ತಾರಾ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಮುಂದಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT