ಗುರುವಾರ , ಆಗಸ್ಟ್ 22, 2019
27 °C

ಟೊರಂಟೊ ಸಿನಿಮೋತ್ಸವದಲ್ಲಿ ಪ್ರಿಯಾಂಕಾ ಚಿತ್ರ

Published:
Updated:
Prajavani

ಮೂರು ವರ್ಷಗಳ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ‘ದಿ ಸ್ಕೈ ಈಸ್ ಪಿಂಕ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಮರಳಿದ್ದಾರೆ. ಅಕ್ಟೋಬರ್‌ 11 ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಅದಕ್ಕೂ ಮೊದಲು ಸೆಪ್ಟೆಂಬರ್‌ 13ರಂದು ಟೊರಂಟೊ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ (ಟಿಐಎಫ್‌ಎಫ್‌) ಸೊನಾಲಿ ಬೋಸ್‌ ನಿರ್ದೇಶನದ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಟ್ವಿಟರ್‌ನಲ್ಲಿ ಟಿಐಎಫ್‌ಎಫ್‌ ತನ್ನ ಅಧಿಕೃತ ಖಾತೆಯ ಮೂಲಕ ಈ ವಿಷಯವನ್ನು ಹಂಚಿಕೊಂಡಿದೆ. ಈ ಸಿನಿಮಾದ ಮೊದಲ ಪೋಸ್ಟರ್‌  ಕೂಡ ಶೇರ್ ಮಾಡಿದೆ. ಪ್ರಿಯಾಂಕಾ ಚೋಪ್ರಾ ಅವರ ಜೊತೆ ಫರ‍್ಹಾನ್‌, ಜೈರಾ ವಾಸಿಂ, ರೋಹಿತ್ ಕೂಡ ನಟಿಸಿದ್ದಾರೆ.

ಸಮುದ್ರತೀರದಲ್ಲಿ ಸೂರ್ಯಾಸ್ತದ ಸಂದರ್ಭದಲ್ಲಿ ನಟ, ನಟಿಯರೆಲ್ಲರೂ ಕ್ಯಾಮೆರಾಗೆ ಬೆನ್ನು ತೋರಿಸಿ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

‘ಜೈ ಗಂಗಾಜಲ್‌’ ಸಿನಿಮಾ ಬಳಿಕ ಪ್ರಿಯಾಂಕಾ ಮೂರು ವರ್ಷಗಳವರೆಗೆ ಬಾಲಿವುಡ್‌ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರು.

‘ಸೊನಾಲಿ ನನಗೆ ಕತೆ ಹೇಳಿದಾಗ, ಈ ಸಿನಿಮಾ ಮಾಡಲೇಬೇಕು ಎನ್ನುವಷ್ಟು ಖುಷಿಯಾಯಿತು. ಪ್ರೀತಿ ಹಾಗೂ ಜೀವನ ಎರಡೂ ಮುಖ್ಯ ಎನ್ನುವ ಸಂದೇಶ ಈ ಸಿನಿಮಾದಲ್ಲಿದೆ. ಟಿಐಎಫ್‌ಎಫ್‌ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ’ ಎಂದು ಪ್ರಿಯಾಂಕಾ ಟ್ವೀಟಿಸಿದ್ದಾರೆ.

ಸಿದ್ದಾರ್ಥ್ ರಾಯ್‌ ಕಪೂರ್‌ ಅವರ ನಿರ್ಮಾಣ ಸಂಸ್ಥೆ ಕೂಡ ಈ ಸಿನಿಮಾಕ್ಕೆ ದುಡ್ಡು ಹಾಕಿದೆ. ಅದಿತಿ ಮತ್ತು ನರೇನ್‌ ಚೌಧರಿ ಜೋಡಿಯ ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಒಬ್ಬಳೇ ಮಗಳು ಐಶಾ ಚೌಧರಿ. ಆಕೆ ಅನಾರೋಗ್ಯಕ್ಕೆ ತುತ್ತಾಗುವ ಎಳೆಯನ್ನು ಕತೆ ಹೊಂದಿದೆ. ಐಶಾ ಪಾತ್ರವನ್ನು ಜೈರಾ ವಾಸಿಂ ಮಾಡಿದ್ದಾರೆ.

Post Comments (+)