ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.30ರಂದು ತೋತಾಪುರಿ ಬಿಡುಗಡೆ, ನಗುವಿನ ಹಬ್ಬಕ್ಕೆ ಸಿದ್ಧರಾಗಿ ಎಂದ ಜಗ್ಗೇಶ್

Last Updated 5 ಆಗಸ್ಟ್ 2022, 12:36 IST
ಅಕ್ಷರ ಗಾತ್ರ

ನಟ ಜಗ್ಗೇಶ್‌ ಅಭಿನಯದ, ವಿಜಯ್‌ಪ್ರಸಾದ್‌ ನಿರ್ದೇಶನದ ‘ತೋತಾಪುರಿ’ ಸಿನಿಮಾದ ಮೊದಲ ಭಾಗ ಸೆ.30ರಂದು ಬಿಡುಗಡೆಯಾಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಇದನ್ನು ಘೋಷಿಸಿದೆ.

ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡು ಕೂಡಾ ವೈರಲ್‌ ಆಗಿದೆ. ಮೊದಲ ಭಾಗಕ್ಕೆ ‘ತೊಟ್ಟ್‌ ಕೀಳ್ಬೇಕಷ್ಟೇ’ ಎಂಬ ಟ್ಯಾಗ್‌ಲೈನ್‌ ನೀಡಿರುವ ನಿರ್ದೇಶಕರು, ಎರಡನೇ ಭಾಗಕ್ಕೆ ‘ತೊಟ್ಟ್‌ ಕಿತ್ತಾಯ್ತು’ ಎಂಬ ಅಡಿಬರಹ ನೀಡಿದ್ದಾರೆ.

ನವರಸನಾಯಕ ಜಗ್ಗೇಶ್‌ ಹಾಗೂ ವಿಜಯ್‌ ಪ್ರಸಾದ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದ್ದು, ತುಂಟತನ, ಪೋಲಿತನದ ಜೊತೆಗೆ ಭಾವೈಕ್ಯದ ಕಥೆಯನ್ನು ತೋತಾಪುರಿ ಹೊಂದಿದೆ. ಜಗ್ಗೇಶ್‌ ಹಾಗೂ ವಿಜಯ್‌ಪ್ರಸಾದ್‌ ಅವರ ‘ನೀರ್‌ದೋಸೆ’ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ‘ನೀರ್‌ದೋಸೆ’ಯಲ್ಲಿ ಶವದ ವಾಹನದ ಚಾಲಕನಾಗಿ ಕಾಣಿಸಿಕೊಂಡಿದ್ದ ಜಗ್ಗೇಶ್‌ ಅವರು ‘ತೋತಾಪುರಿ’ಯಲ್ಲಿಟೈಲರ್‌ ಈರೇಗೌಡ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

‘ತೋತಾಪುರಿ’ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಮೇಲೆ ಬರಲಿದೆ. ಅದಿತಿ ಪ್ರಭುದೇವ ನಾಯಕಿಯಾಗಿ ಜಗ್ಗೇಶ್‌ಗೆ ಇಲ್ಲಿ ಜೋಡಿಯಾಗಿದ್ದಾರೆ. ‘ಡಾಲಿ’ ಧನಂಜಯ್‌ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದತ್ತಣ್ಣ ಕೂಡಾ ತಾರಾಗಣದಲ್ಲಿದ್ದಾರೆ.

ಸಿನಿಮಾದ ಕುರಿತು ಇತ್ತೀಚೆಗೆ ಪ್ರಜಾವಾಣಿ ಜೊತೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಗ್ಗೇಶ್‌, ‘ಈ ಸಿನಿಮಾ ಬಂದ ಮೇಲೆ ಹೆಣ್ಣುಕುಲವು, ಇವತ್ತಿನ ಜಗ್ಗೇಶ್‌ ಏನಿದ್ದಾನೆ ಆತನನ್ನು ನೂರುಪಟ್ಟು ಹೆಚ್ಚು ಪ್ರೀತಿಸುತ್ತದೆ. ಏಕೆಂದರೆ ಅಷ್ಟು ಜವಾಬ್ದಾರಿಯುತವಾದ ಪಾತ್ರವದು. ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡಿನಲ್ಲಿ ತಮಾಷೆಯಾಗಿ ಕಾಣಿಸಬಹುದು. ಆದರೆ ಚಿತ್ರದಲ್ಲಿ ತುಂಬಾ ಪ್ರಭಾವ ಬೀರುವ ಪಾತ್ರವದು. ಇದೊಂದು ಸಾಮಾನ್ಯ ವ್ಯಕ್ತಿಯೊಬ್ಬನ ಜೀವನ. ಪ್ರತಿಯೊಬ್ಬರೂ ತಮ್ಮನ್ನು ತಾವು ಅದಕ್ಕೆ ಹೋಲಿಸುತ್ತಾರೆ. ನಟನೊಬ್ಬ ವೈಭವೀಕರಿಸುವ ಪಾತ್ರ ಮಾಡಿದಾಗ ಜನರಿಂದ ದೂರ ಉಳಿದುಬಿಡುತ್ತಾನೆ. ಜನರ ಹತ್ತಿರವಿರುವ ಪಾತ್ರದಲ್ಲೇ ಅಭಿನಯಿಸಿದಾಗ ಜನರೂ ಹತ್ತಿರವಾಗುತ್ತಾರೆ. ಹೀಗಾಗಿ ಹೀರೇಗೌಡ ಸಾಮಾನ್ಯನಿಗೂ ಇಷ್ಟವಾಗುವ ಪಾತ್ರ’ಎಂದಿದ್ದರು.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ವಿಜಯ್‌ಪ್ರಸಾದ್‌ ನಿರ್ದೇಶನದ ‘ಪೆಟ್ರೋಮ್ಯಾಕ್ಸ್‌’ ನಿರೀಕ್ಷಿತ ಮಟ್ಟಕ್ಕೆ ಜನರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಈ ಕುರಿತು ಟ್ವೀಟ್‌ ಮಾಡಿದ್ದ ಅವರು, ‘ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ! ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ! ಇದಕ್ಕೆ ಕಾರಣ ನಾನೋಬ್ಬನೇ.! ಕ್ಷಮೆ ಇರಲಿ’ ಎಂದು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT