ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಸಿನಿಮಾ ರಂಗದಲ್ಲಿ ಬ್ಯುಸಿ ನಟ ಟೊವಿನೊ

Last Updated 26 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಪೋಷಕ ನಟನಾಗಿ ಮಾಲಿವುಡ್‌ ಚಿತ್ರರಂಗಕ್ಕೆ ಕಾಲಿರಿಸಿ, ಪ್ರೇಕ್ಷಕರ ಹೃದಯ ಗೆದ್ದಿರುವ ಟೊವಿನೊ‌ ಥಾಮಸ್‌ ಸದ್ಯ ಬಿಡುವಿಲ್ಲದ ನಟ. ಅವರ ಅಭಿನಯದ ಆರು ಚಿತ್ರಗಳು ಈ ವರ್ಷದಲ್ಲಿ ಈವರೆಗೆ ಬಿಡುಗಡೆಯಾಗಿವೆ. ಇನ್ನು ನಿರ್ಮಾಣ ಹಂತದಲ್ಲಿರುವ ಚಿತ್ರಗಳ ಪಟ್ಟಿ ಇದಕ್ಕಿಂತಲೂ ದೊಡ್ಡದಿದೆ.

ಹುರಿಗಟ್ಟಿದ ದೇಹ ಹಾಗೂ ನೈಜ ಅಭಿನಯದ ಮೂಲಕ ಮೋಡಿ ಮಾಡುವ ಟೊವಿನೊ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ.ಇವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ 'ಕಲ್ಕಿ' ಸಿನಿಮಾ ಈಚೆಗೆ ಬಿಡುಗಡೆಗೊಂಡಿದ್ದು, ಇದು ಕೂಡ ಯಶಸ್ವಿ ಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಈ ಚಿತ್ರವನ್ನು ಪ್ರವೀಣ್ ಪ್ರಭಾರಂ ನಿರ್ದೇಶಿಸಿದ್ದಾರೆ. ಶಿವಜಿತ್ ಪದ್ಮನಾಭನ್, ಸಂಯುಕ್ತ ಮೆನನ್, ಅಪರ್ಣಾ ನಾಯರ್ ಮೊದಲಾದವರೂ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದ ಗ್ರಾಮವೊಂದಕ್ಕೆ ವರ್ಗಾವಣೆಗೊಂಡು ಬರುವ ಪೊಲೀಸ್ ಅಧಿಕಾರಿಯೊಬ್ಬರು ಅಲ್ಲಿನ ಜನರಿಗೆ ನ್ಯಾಯ ಒದಗಿಸಲು ಪುಢಾರಿಗಳ ವಿರುದ್ಧ ಹೋರಾಟ ನಡೆಸುವುದೇ ಈ ಚಿತ್ರದ ಕಥಾಹಂದರ. ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಟೊವಿನೊ ಮೋಡಿ ಮಾಡಿದ್ದಾರೆ.

‘ಉಯರೆ’, ‘ಲೂಸಿಫರ್’, ‘ಅಂಡ್ ದಿ ಆಸ್ಕರ್ ಗೋಸ್ ಟು’, ‘ವೈರಸ್’, ‘ಲೂಕ’ ಇವು ಈ ವರ್ಷ ಬಿಡುಗಡೆಗೊಂಡಿರುವ ಟೊವಿನೊ ಅಭಿನಯದ ಸಿನಿಮಾಗಳು. ಮೋಹನ್ ಲಾಲ್ ಅಭಿನಯದ ‘ಲೂಸಿಫರ್’ ಚಿತ್ರದಲ್ಲಿ ಟೊವಿನೊ ಪ್ರಧಾನ ಪಾತ್ರದಲ್ಲೇ ನಟಿಸಿದ್ದಾರೆ.

‘563 ಸೇಂಟ್ ಚಾರ್ಲ್ಸ್ ಸ್ಟ್ರೀಟ್’, ‘ಕಿಲೋ ಮೀಟರ್ಸ್ ಅಂಡ್ ಕಿಲೋ ಮೀಟರ್ಸ್’, ‘ಫಾರೆನ್ಸಿಕ್’, ‘ಆರವಂ’, ‘ಎಡಕ್ಕಾಡ್ ಬೆಟಾಲಿಯನ್ 06’, ‘ಭೂಮಿ’, ‘ಟಿಕ್ ಟಾಕ್’, ‘ಪಳ್ಳಿ ಚಟ್ಟಂಬಿ’, ‘ಮಿನ್ನಲ್ ಮುರಳಿ’ ಇವು ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಟೊವಿನೊ ನಾಯಕನಾಗಿ ನಟಿಸಿರುವ ಸಿನಿಮಾಗಳು.

2012ರಲ್ಲಿ ಸಜೀವ್ ಅಂದಿಕ್ಕಾಡ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಪ್ರಭುವಿಂಡೆ ಮಕ್ಕಳ್’ ಚಿತ್ರದಲ್ಲಿ ಮೊದಲ ಬಾರಿಗೆ ಸಣ್ಣ ಪಾತ್ರವೊಂದರಲ್ಲಿ ಟೊವಿನೊ ಕಾಣಿಸಿಕೊಂಡಿದ್ದರು. ಸಹ ನಿರ್ದೇಶಕರಾಗಿಯೂ ಇವರು ತಮ್ಮನ್ನು ಒರೆಗೆ ಹಚ್ಚಿಕೊಂಡಿದ್ದರು. ಆದರೆ ಅದರಲ್ಲಿ ಅಷ್ಟೇನು ಯಶಸ್ಸು ಕಂಡಿರಲಿಲ್ಲ. 2014ರಲ್ಲಿ ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ ಮೋಹನ್ ಲಾಲ್ ಚಿತ್ರ 'ಕೂದರ' ದಲ್ಲಿ ಟೊವಿನೊ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅನಂತರ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿವೆ. ‘ಯೂ ಟು ಬ್ರೂಟಸ್’, ‘ಎನ್ನುಂ ನಿಂಡೆ ಮೊಯ್ದೀನ್’ ಮೊದಲಾದ ಸಿನಿಮಾಗಳಲ್ಲೂ ಗಮನಾರ್ಹ ಪಾತ್ರದಲ್ಲಿ ಅವರು ಅಭಿನಯಿಸಿದ್ದರು.

2016ರಲ್ಲಿ ಜಾನ್ ಪೌಲ್ ಜಾರ್ಜ್ ನಿರ್ದೇಶನದ ‘ಗಪ್ಪಿ’ ಚಿತ್ರದಲ್ಲಿ ಟೊವಿನೊ ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಅಭಿನಯ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಇದರಲ್ಲಿ ನೀಳವಾದ ಗಡ್ಡ ಬಿಟ್ಟು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ಅವರು ಹಿಂದಿರುಗಿ ನೋಡಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಕೇರಳದಲ್ಲಿ ಮನೆಮಾತಾಗಿದ್ದಾರೆ.

‘ಒರು ಮೆಕ್ಸಿಕನ್ ಅಪರಥಾ’, ‘ಗೋಧಾ’, ‘ಮಾಯಾನದಿ’, ‘ತೀವಂಡಿ’, ‘ಎಂಡೆ ಉಮ್ಮಂಡೆ ಪೇರ್’, ‘ಮೆರಡೋನಾ’, ‘ಒರು ಕುಪ್ರಸಿದ್ಧ ಪೈಯನ್’ ಇವು ಟೊವಿನೊ ನಾಯಕನಾಗಿ ಅಭಿನಯಿಸಿರುವ ಪ್ರಮುಖ ಚಿತ್ರಗಳು. ಇವುಗಳಲ್ಲಿ ಹೆಚ್ಚಿನವು ಹಿಟ್ ಆಗಿದ್ದವು. 2018 ರಲ್ಲಿ ಬಿಡುಗಡೆಗೊಂಡಿದ್ದ ಧನುಷ್ ಅಭಿನಯದ ‘ಮಾರಿ-2’ ಚಿತ್ರದಲ್ಲೂ ಟೊವಿನೊ ನಟಿಸಿದ್ದರು. ಕೆಲವು ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲೂ ಅವರು ನಟಿಸಿದ್ದಾರೆ.

‘ಎಂಡೆ ಉಮ್ಮಂಡೆ ಪೇರ್’ ಸಿನಿಮಾದಲ್ಲಿ ಕಳೆದು ಹೋದ ತಾಯಿಯನ್ನು ಹುಡುಕುವ ಮಗನ ಪಾತ್ರದಲ್ಲಿ ನಟಿಸಿದ್ದ ಟೊವಿನೊ, ಮನೋಜ್ಞ ಅಭಿನಯ ನೀಡಿದ್ದರು. ಅಭಿನಯ ಕೌಶಲದ ಮೂಲಕವೇ ಯಶಸ್ಸಿನ ಮೆಟ್ಟಿಲೇರಿರುವ ಟೊವಿನೊ ಇಂದು ಮಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT