ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನೋಡಿದ ಸಿನಿಮಾ: ಸರಣಿ ಕೊಲೆ, ‌ನಿಗೂಢ ಬಲೆಯ ‘ತ್ರಾಟಕ‘

Last Updated 19 ಸೆಪ್ಟೆಂಬರ್ 2019, 10:19 IST
ಅಕ್ಷರ ಗಾತ್ರ

ಚಿತ್ರ: ತ್ರಾಟಕ

ನಿರ್ಮಾಣ: ರಾಹುಲ್‌ ಐನಾಪುರ

ನಿರ್ದೇಶಕರು: ಶಿವಗಣೇಶ್‌

ತಾರಾಗಣ: ರಾಹುಲ್‌ ಐನಾಪುರ, ಹೃದಯ ಆವಂತಿ, ಅಜಿತ್‌ ಜಯರಾಮ್, ಅಕ್ಷತಾ, ಭವಾನಿ ಪ್ರಕಾಶ್‌

ದೇವ್‌ ದಕ್ಷ ತನಿಖಾಧಿಕಾರಿ. ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುತ್ತಾನೆ. ಕಾಯಿಲೆ ಕಾಣಿಸಿಕೊಂಡಾಗ ಪ್ರಜ್ಞಾಹೀನನಾಗುತ್ತಾನೆ. ಎಚ್ಚರವಾದಾಗ ಅವನ ಸ್ನೇಹಿತರು ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ. ತಾನೇ ಅವರನ್ನು ಕೊಲೆ ಮಾಡಿದೆ ಎಂಬ ಪಾಪಪ್ರಜ್ಞೆ ಅವನದು. ಈ ನಡುವೆ ಆತನ ತಮ್ಮನ ನಿಗೂಢ ಕೊಲೆಯಾಗುತ್ತದೆ. ಆತನನ್ನು ಕೊಂದಿದ್ದು ತಾನೇ ಎಂದು ಭ್ರಮಿಸಿ ಬಹುಮಹಡಿ ಕಟ್ಟಡದ ಮೇಲಿಂದ ಕೆಳಕ್ಕೆ ಜಿಗಿಯುತ್ತಾನೆ.

ಇಷ್ಟು ಸನ್ನಿವೇಶ ಮುಗಿಯುವುದರೊಳಗೆ ‘ತ್ರಾಟಕ’ ಚಿತ್ರದ ಮೊದಲಾರ್ಧವೂ ಮುಗಿದು ಹೋಗುತ್ತದೆ. ಚಿತ್ರದ ನಾಯಕನೇ ಸತ್ತು ಹೋದ, ಇನ್ನು ಕಥೆ ಯಾವ ಜಾಡಿನಲ್ಲಿ ಸಾಗುತ್ತದೆ ಎಂದು ಪ್ರೇಕ್ಷಕರ ತಲೆಯಲ್ಲಿ ಪ್ರಶ್ನೆ ಮೂಡುವ ಹೊತ್ತಿಗೆ ಆತ ನಿಗೂಢ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೇಳಲು ನಿರ್ದೇಶಕ ಶಿವಗಣೇಶ್‌ ನಡೆಸಿರುವ ಕಸರತ್ತು ಚಿತ್ರದುದ್ದಕ್ಕೂ ಎದ್ದುಕಾಣುತ್ತದೆ. ಆರಂಭದಲ್ಲಿ ಕುತೂಹಲ ಹುಟ್ಟಿಸುವ ಕಥೆ ಕೆಲವೆಡೆ ಇಂತಹ ಆಭಾಸಗಳಿಂದ ದಿಕ್ಕುತಪ್ಪುತ್ತದೆ.

ದೇವ್‌, ಶರತ್ ಮತ್ತು ರವಿ ಸ್ನೇಹಿತರು. ತಮ್ಮನ ಕೊಲೆಯಾದಾಗ ದೇವ್‌ ದುಃಖತಪ್ತನಾಗುತ್ತಾನೆ. ಕೊಲೆಗಾರನನ್ನು ಪತ್ತೆಹಚ್ಚಲು ಹೊರಟಾಗಲೆಲ್ಲಾ ಮಾನಸಿಕ ರೋಗ ಆತನ ತನಿಖೆಗೆ ಅಡ್ಡಿಯಾಗುತ್ತದೆ. ಈ ನಡುವೆಯೇ ಮನೋವೈದ್ಯೆ ಡಾ.ಪವಿತ್ರಾ ಆತನಿಗೆ ಚಿಕಿತ್ಸೆ ನೀಡಿ ರೋಗದಿಂದ ಗುಣಮುಖನನ್ನಾಗಿ ಮಾಡುತ್ತಾಳೆ. ತಾನು ಕೊಲೆಗಾರನಲ್ಲ ಎನ್ನುವುದು ಅವನಿಗೆ ಅರಿವಾಗುತ್ತದೆ. ಆದರೆ, ಸರಣಿ ಕೊಲೆಗಳ ಹಂತಕನ ಬೆನ್ನುಹತ್ತಿದ ದೇವ್‌ಗೆ ಹೆಜ್ಜೆಹೆಜ್ಜೆಗೂ ಸವಾಲುಗಳು ಎದುರಾಗುತ್ತವೆ. ಕೊಲೆಗಾರ ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತದೆ.

ಕಥೆಗೆ ಲಯ ಸಿಗುವುದೇ ದ್ವಿತೀಯಾರ್ಧದಲ್ಲಿ. ಕೊಲೆಗಾರ ಯಾರು ಎನ್ನುವ ಗುಟ್ಟನ್ನು ಕೊನೆಯವರೆಗೂ ನಿರ್ದೇಶಕರು ಬಿಟ್ಟುಕೊಡುವುದಿಲ್ಲ. ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಲ್ಲಿ ನಿರ್ದೇಶಕರು ಬಳಸಿರುವ ತಂತ್ರಗಾರಿಕೆ ಮೆಚ್ಚುಗೆಯಾಗುತ್ತದೆ. ದೇವ್‌ನ ಇಬ್ಬರು ಸ್ನೇಹಿತರಲ್ಲಿ ಒಬ್ಬ ಈ ಕೊಲೆಗಳನ್ನು ಮಾಡಿರುತ್ತಾನೆ. ಆತ ಏಕೆ ಈ ಕೃತ್ಯ ಎಸಗುತ್ತಾನೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ರಾಹುಲ್‌ ಐನಾಪುರ ಇನ್ನಷ್ಟು ಪ್ರಖರವಾಗಿ ಪಾತ್ರಕ್ಕೆ ಜೀವ ತುಂಬುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಹೃದಯ ಆವಂತಿ, ಅಜಿತ್ ಜಯರಾಮ್‌, ಭವಾನಿ ಪ್ರಕಾಶ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರುಣ್ ಸುರಧಾ ಸಂಗೀತ ಸಂಯೋಜನೆಯ ಒಂದು ಹಾಡು ಕೇಳುವಂತಿದೆ. ವಿನೋದ್‌ ಭಾರತಿ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT