ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮೆ, ವಾಸ್ತವ ಬದುಕಿನ ಪಯಣ

Last Updated 19 ಏಪ್ರಿಲ್ 2019, 10:54 IST
ಅಕ್ಷರ ಗಾತ್ರ

ಚಿತ್ರ: ತ್ರಯಂಬಕಂ

ನಿರ್ಮಾಣ: ಫ್ಯೂಚರ್‌ ಎಂಟರ್‌ಟೈನ್‌ಮೆಂಟ್‌ ಫಿಲಂಸ್

ನಿರ್ದೇಶನ: ದಯಾಳ್‌ ಪದ್ಮನಾಭನ್

ತಾರಾಗಣ: ರಾಘವೇಂದ್ರ ರಾಜ್‌ಕುಮಾರ್‌, ಅನುಪಮಾ ಗೌಡ, ರೋಹಿತ್, ಶಿವಮಣಿ

ಮುಂಜಾನೆಯೇ ಎದ್ದ ಶಿವರುದ್ರಯ್ಯನಿಗೆ ಚಹ ಕುಡಿಯುವ ಆಸೆ. ಚಹ ನೀಡುವಂತೆ ಮಗಳಿಗೆ ಕೇಳುತ್ತಾರೆ. ರಸ್ತೆಬದಿಯ ಅಂಗಡಿಯಲ್ಲಿ ಕೊಡಿಸುವುದಾಗಿ ಹೇಳುತ್ತಾಳೆ ಪುತ್ರಿ ನಮನಾ. ಇಬ್ಬರು ವಾಹನದಲ್ಲಿ ಪಯಣಿಸುತ್ತಾರೆ. ಕೈಗೆ ಬೆಚ್ಚನೆಯ ಚಹದ ಕಪ್ಪು ಬಂದಾಗ ಮೆಣಸಿನಕಾಯಿಯ ಬಜ್ಜಿಯನ್ನೂ ಕೇಳುತ್ತದೆ ಮನಸ್ಸು. ಬಜ್ಜಿ ಸುತ್ತಿದ್ದ ಪೇಪರ್‌ನಲ್ಲಿ ಮಗಳ ಸಾವಿನ ಸುದ್ದಿ ಪ್ರಕಟವಾಗಿರುತ್ತದೆ. ಮಗಳು ಜೀವಂತವಾಗಿಯೇ ಎದುರಿಗಿರುವಾಗ ಅವಳ ಸಾವಿನ ಸುದ್ದಿ ಓದಿ ದಿಗಿಲುಗೊಳ್ಳುತ್ತಾರೆ ಶಿವರುದ್ರಯ್ಯ.

ಮಗಳು ಅಪಘಾತದಲ್ಲಿ ಮೃತಪಡುವ ದೃಶ್ಯ ಅವರ ಸ್ಮೃತಿಪಟಲದಲ್ಲಿ ಸುರಳಿ ಸುತ್ತುತ್ತಿರುತ್ತದೆ. ಕನಸಿನಲ್ಲಿಯೂ ಅದೇ ಚಿತ್ರಣ. ಬೆಚ್ಚಿಬಿದ್ದು ಎದ್ದಾಗ ಮಗಳು ತರಕಾರಿ ಕತ್ತರಿಸುತ್ತಿರುತ್ತಾಳೆ. ಕನಸಿನಲ್ಲಿ ಕಂಡ ಪಾತ್ರಗಳು ಅವರಿಗೆ ಜೀವಂತವಾಗಿಯೇ ಎದುರಾಗುತ್ತವೆ. ಕೊನೆಗೆ, ವೈದ್ಯರ ಬಳಿಗೆ ಹೋಗುತ್ತಾರೆ. ‘ನೀವು ನನ್ನ ಭ್ರಮೆನಾ, ಇಲ್ಲಾ ನಿಜನಾ’ ಎಂದು ಅವರಿಗೆ ಪ್ರಶ್ನಿಸುತ್ತಾರೆ.

‘ತ್ರಯಂಬಕಂ’ ಚಿತ್ರದ ಮೊದಲಾರ್ಧ ಪೂರ್ಣಗೊಂಡಾಗ ‘ನಾವು ಸಿನಿಮಾ ನೋಡುತ್ತಿರುವುದು ಭ್ರಮೆಯೋ, ನಿಜವೋ’ ಎಂದು ಪ್ರೇಕ್ಷಕರು ಒಳಗೊಳಗೆ ಪ್ರಶ್ನಿಸಿಕೊಂಡರೆ ಅಚ್ಚರಿಪಡಬೇಕಿಲ್ಲ. ಚಿತ್ರದಲ್ಲಿ ಫ್ಯಾಂಟಸಿ ಮತ್ತು ವಾಸ್ತವದ ಬದುಕಿನ ಕಥೆ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಅಪ್ಪ ಮತ್ತು ಮಗಳ ಬಾಂಧವ್ಯದ ತಾಕಲಾಟಕ್ಕೆ ಥ್ರಿಲ್ಲರ್‌ ಸೂತ್ರ ಜೋಡಿಸಿದ್ದಾರೆ.

ಥ್ರಿಲ್ಲರ್‌ ಸಿನಿಮಾಗಳ ಯಶಸ್ಸು ನಿಂತಿರುವುದೇ ಬಿಗಿಯಾದ ನಿರೂಪಣೆ ಮೇಲೆ. ಜೊತೆಗೆ, ಹಿನ್ನೆಲೆ ಸಂಗೀತವೂ ಹದವಾಗಿರಬೇಕು. ಕಥೆಗೆ ನೋಡುಗರ ಮನಸ್ಸು ಅತ್ತಿತ್ತ ಅಲುಗಾಡದಂತೆ ನೋಡಿಸಿಕೊಂಡು ಹೋಗುವ ಗುಣ ಇರಬೇಕು. ಈ ಸೂತ್ರ ಪಾಲನೆಯಾದರಷ್ಟೇ ಸಿನಿಮಾದ ಯಶಸ್ಸು ಸಾಧ್ಯ. ಆದರೆ, ಮೊದಲಾರ್ಧದಲ್ಲಿಯೇ ಕಥೆಯು ನಿರೂಪಣೆಯ ಗಟ್ಟಿತನ ಕಳೆದುಕೊಂಡು ತೆಳುವಾಗಿ ಬಿಡುತ್ತದೆ. ಕಥೆಯ ಎಳೆ ಅರ್ಥವಾಗದೆ ನೋಡುಗರು ಗೊಂದಲದ ಸುಳಿಗೆ ಬೀಳುತ್ತಾರೆ. ವಿರಾಮದ ವೇಳೆಗೆ ತೆರೆಯ ಮೇಲೆ ಮೂಡುವ ‘ಕನ್‌‍ಫ್ಯೂಷನ್‌’ ಪದ ಪ್ರೇಕ್ಷಕರ ಮನಸ್ಸಿನ ಗೊಂದಲಕ್ಕೆ ಕನ್ನಡಿ ಹಿಡಿಯುತ್ತದೆ.

ಆದರೆ, ದ್ವಿತೀಯಾರ್ಧದಲ್ಲಿ ಎಲ್ಲಾ ಗೊಂದಲಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಶಿವರುದ್ರಯ್ಯ‍ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಇನ್ನೊಬ್ಬ ಪುತ್ರಿಯ ಸಾವಿನ ರಹಸ್ಯದ ಹುಡುಕಾಟಕ್ಕೆ ಹೊರಡುತ್ತಾರೆ. ನವಪಾಷಾಣ ಲಿಂಗದ ವಿಷಯ ಮುನ್ನೆಲೆಗೆ ಬಂದಾಗಕಥೆ ಹೊಸಹಾದಿಗೆ ಹೊರಳುತ್ತದೆ. ಆದರೆ, ಚಿತ್ರದ ಕೊನೆಯೂ ಭಾವತೀವ್ರತೆಯ ಘಟ್ಟ ಮುಟ್ಟದೆ ನೀರಸವಾಗಿ ಮುಕ್ತಾಯವಾಗುತ್ತದೆ. ಶಿವರುದ್ರಯ್ಯನ ಮಾನಸಿಕ ತೊಳಲಾಟ, ಮಗಳ ಸಾವಿಗೆ ಕಾರಣವೇನು ಎನ್ನುವುದೇ ಚಿತ್ರದ ಹೂರಣ. ಥಿಯೇಟರ್‌ಗೆ ಹೋಗಿಯೇ ಇದನ್ನು ನೋಡಬೇಕು.

ರಾಘವೇಂದ್ರ ರಾಜ್‌ಕುಮಾರ್‌ ಅಪ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮಾ ಗೌಡ, ರೋಹಿತ್‌ ತಮ್ಮ ‍ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗಣೇಶ್‌ ನಾರಾಯಣನ್‌ ಸಂಗೀತ ಸಂಯೋಜನೆಯ ಒಂದು ಹಾಡು ಕೇಳಲು ಇಂಪಾಗಿದೆ. ಬಿ. ರಾಕೇಶ್‌ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT