‘ಟ್ರಂಕ್’ ತುಂಬಿಸಿಕೊಂಡ ಚಿತ್ರ!

7

‘ಟ್ರಂಕ್’ ತುಂಬಿಸಿಕೊಂಡ ಚಿತ್ರ!

Published:
Updated:

‘ಅಂಬಿ ನಿಂಗ್ ವಯಸ್ಸಾಯ್ತೋ’ ಶೀರ್ಷಿಕೆಯ ಒಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ನಟ ಅಂಬರೀಷ್ ಅವರಿಗೆ ವಯಸ್ಸಾಗಿದೆ ಎಂದು ಈ ಸಿನಿಮಾ ಹೇಳುತ್ತಿದೆಯೇ? ಗೊತ್ತಿಲ್ಲ. ಆದರೆ, ರಿಷಿಕಾ ಶರ್ಮಾ ನಿರ್ದೇಶನದ ‘ಟ್ರಂಕ್‌’ ಸಿನಿಮಾ ತಂಡದ ಪ್ರಕಾರ ಅಂಬರೀಷ್ ಅವರು ಹೊಸ ಹುಡುಗರಿಗೆ ಸಹಾಯ ಮಾಡುವ ವಿಚಾರದಲ್ಲಿ ಇಂದಿಗೂ ಹೊಸ ಹುರುಪಿನ ಯುವಕ!

‘ಟ್ರಂಕ್‌’ ಚಿತ್ರ ಮಾಡಿರುವುದು ಹೊಸ ಹುಡುಗರ ತಂಡ. ಇದು ತೆರೆಗೆ ಬಂದು ಇಪ್ಪತ್ತೈದು ದಿನಗಳ ಪ್ರದರ್ಶನ ಪೂರೈಸಿದೆ. ಈ ಬಗ್ಗೆ ಮಾಹಿತಿ ನೀಡಲು ತಂಡ ಸುದ್ದಿಗಾರರನ್ನು ಆಹ್ವಾನಿಸಿತ್ತು. ಇದೇ ವೇಳೆ ಮಾತಿಗೆ ಸಿಕ್ಕ ನಿರ್ದೇಶಕಿ ರಿಷಿಕಾ ತಮ್ಮ ತಂಡಕ್ಕೆ ಅಂಬರೀಷ್ ಅವರಿಂದ ಆಗಿರುವ ಸಹಾಯವನ್ನು ಸ್ಮರಿಸಿಕೊಂಡರು. ‘ಆರಂಭದಲ್ಲಿ ನಮ್ಮ ಸಿನಿಮಾವನ್ನು ಒಟ್ಟು 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಹೊಸ ಸಿನಿಮಾಗಳು ಬಂದ ಕಾರಣ, ಮೊದಲ ವಾರದ ನಂತರ 59 ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನ ನಿಲ್ಲಿಸಲಾಯಿತು’ ಎಂದರು ರಿಷಿಕಾ.

‘ಚಿತ್ರಮಂದಿರಗಳಲ್ಲಿ ಮೊದಲ ವಾರದಲ್ಲಿ ಸರಾಸರಿ ಶೇಕಡ 40ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದರೂ ನಮಗೆ ಇಂತಹ ಸ್ಥಿತಿ ಎದುರಾಯಿತು. ಈ ವೇಳೆ ಅಂಬರೀಷ್ ಅವರು ನಮ್ಮನ್ನು ಕರೆಸಿಕೊಂಡರು. ಚಿತ್ರದ ವಿಚಾರದಲ್ಲಿ ಏನಾದರೂ ಸಹಾಯ ಬೇಕಿದ್ದರೆ ಕೇಳಿ ಎಂದು ಅವರು ನಮ್ಮಲ್ಲಿ ಹೇಳಿದ್ದರು. ಅವರನ್ನು ಭೇಟಿ ಮಾಡಿದಾಗ ನಾವು, ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ತಿಳಿಸಿದೆವು. ಅವರು ಚಿತ್ರ ವಿತರಕ ಜಯಣ್ಣ ಅವರಿಗೆ ಕರೆ ಮಾಡಿ, ನಮಗೆ ಚಿತ್ರಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಹೇಳಿದರು. ಅವರು ಮಾಡಿದ ಸಹಾಯ ದೊಡ್ಡದು’ ಎಂದರು ರಿಷಿಕಾ.

ಈ ಚಿತ್ರ ಈಗ ಹಿಂದಿಗೆ ಡಬ್ ಆಗುತ್ತಿದೆಯಂತೆ. ಹಾಗೆಯೇ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳಿಗೆ ಇದನ್ನು ರಿಮೇಕ್ ಮಾಡುವ ಮಾತುಕತೆಗಳು ನಡೆಯುತ್ತಿವೆ. ಆನ್‌ಲೈನ್‌ ಮೂಲಕ ಚಿತ್ರವನ್ನು ವೀಕ್ಷಕರಿಗೆ ತಲುಪಿಸುವ ಯತ್ನವೂ ಸಾಗಿದೆ ಎಂದು ಚಿತ್ರತಂಡ ಹೇಳಿದೆ. ಅಂದಹಾಗೆ, ಈ ಚಿತ್ರದ ನಿರ್ಮಾಪಕ ರಾಜೇಶ್ ಭಟ್ ಅವರಿಗೆ ‘ಹಾಕಿದ್ದ ಬಂಡವಾಳ ಹಿಂದಿರುಗಿ ಬಂದಿದೆ’ ಎಂಬ ಸುದ್ದಿಯನ್ನು ಕೂಡ ಚಿತ್ರತಂಡ ನೀಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !