ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಂಗಾರ’ಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ತುಳು ಚಿತ್ರಕ್ಕೆ ಗೌರವ
Last Updated 22 ಮಾರ್ಚ್ 2021, 17:14 IST
ಅಕ್ಷರ ಗಾತ್ರ

ಮಂಗಳೂರು: ‘ತುಳು ಚಿತ್ರರಂಗಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲೇ ತುಳು ಸಿನಿಮಾ ‘ಪಿಂಗಾರ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಸುವರ್ಣ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಪ್ರಶಸ್ತಿಯನ್ನು ತುಳು ಚಿತ್ರರಂಗಕ್ಕೆ ಅರ್ಪಿಸುತ್ತೇವೆ.’ ಹೀಗೆ ಪ್ರತಿಕ್ರಿಯಿಸಿದವರು ಪಿಂಗಾರ ಚಿತ್ರದ ನಿರ್ದೇಶಕ ಆರ್.ಪ್ರೀತಮ್ ಶೆಟ್ಟಿ.

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟಗೊಂಡಿದ್ದು, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇರದ ಇತರೆ ಭಾಷೆಗಳಲ್ಲಿನ ಚಲನಚಿತ್ರ ವಿಭಾಗದಲ್ಲಿ ತುಳು ಭಾಷೆಯ ‘ಪಿಂಗಾರ’ ಚಿತ್ರ ‘ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿ’ಗೆ ಭಾಜನವಾಗಿದೆ. ‘ಪಡ್ಡಾಯಿ’ ಮತ್ತು ‘ಮದಿಪು’ ಚಿತ್ರಕ್ಕೆ ಈ ಹಿಂದೆ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಕನ್ನಡ ಮತ್ತು ತುಳು ಭಾಷೆಯಲ್ಲಿ ನಿರ್ಮಾಣವಾದ ‘ಪಿಂಗಾರ’ ಚಿತ್ರ ಇನ್ನಷ್ಟೇ ಚಿತ್ರಮಂದಿರಕ್ಕೆ ಬರಬೇಕಿದೆ.

‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿದ್ದು, ನನ್ನ ತಾಯಿ ಭಾಷೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತವಿತ್ತು. ಹೀಗಾಗಿ, ಕಲಾತ್ಮಕ ವಿಷಯವನ್ನು ಆಯ್ಕೆ ಮಾಡಿಕೊಂಡು ಪಿಂಗಾರ ನಿರ್ದೇಶನ ಮಾಡಿದ್ದೇನೆ. ಅದೇ ನನ್ನ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರವೂ ಆಗಿದೆ. ಪ್ರಶಸ್ತಿಯ ನಿರೀಕ್ಷೆಯಿಂದ ಸಿನಿಮಾ ಮಾಡಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇನ್ನಷ್ಟು ಕೊಡುಗೆ ನೀಡಲು ಪ್ರೇರಣೆಯಾಗಲಿದೆ’ ಎಂದು ಸಂತಸವನ್ನು ಹಂಚಿಕೊಂಡರು.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್‌ ನೆಲ್ಲಿಗುಡ್ಡ ಪ್ರತಿಕ್ರಿಯಿಸಿ, ‘ಇಂತಹ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಚಿತ್ರದಲ್ಲಿ ನನ್ನ ಪಾತ್ರ ಸವಾಲಿನದು. ಇಷ್ಟಪಟ್ಟು ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದೇನೆ. ಸಾಲುಸಾಲು ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ತುಳು ಚಿತ್ರ ಗುರುತಿಸಿಕೊಂಡಿರುವುದಕ್ಕೆ ತುಳುವರು ಹೆಮ್ಮೆಪಡಬೇಕು’ ಎಂದು ಹೇಳಿದ್ದಾರೆ.

ಪಿಂಗಾರ ಸಿನಿಮಾವು ತುಳುನಾಡಿನ ದೈವಾರಾಧನೆ, ನಂಬಿಕೆ, ಆಚರಣೆ ಹಾಗೂ ಅದರ ಸುತ್ತ ಹೆಣೆದುಕೊಂಡಿರುವ ಜನರ ಸಂಸ್ಕೃತಿಗಳ ಬದುಕಿನ ಕಥೆಯನ್ನು ಒಳಗೊಂಡಿದೆ. ಭೂತ ಕೋಲ, ಸ್ತ್ರೀಯರ ಮೇಲಾಗುವ ದೌರ್ಜನ್ಯ, ಅಹಂ ಮತ್ತು ತಾರತಮ್ಯದ ಅಭ್ಯಾಸಗಳು ಹುಟ್ಟಿಕೊಂಡ ಬಗೆಯನ್ನು ಇಲ್ಲಿ ಬಿಂಬಿಸಲಾಗಿದೆ.

ಡಿಎಂಕೆ ಪ್ರೊಡಕ್ಷನ್ಸ್‌ ನಿರ್ಮಾಣದ ಈ ಚಿತ್ರಕ್ಕೆ ಮಂಗಳೂರಿನ ಅವಿನಾಶ್ ಯು. ಶೆಟ್ಟಿ ಮತ್ತು ಮಂಜುನಾಥ ರೆಡ್ಡಿ ಬಂಡವಾಳ ಹಾಕಿದ್ದಾರೆ. ಚಿತ್ರದ ತಾರಾಗಣದಲ್ಲಿ ನೀಮಾರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ ಹಾಗೂ ಪ್ರಶಾಂತ್ ಸಿ.ಕೆ. ಕಾಣಿಸಿಕೊಂಡಿದ್ದಾರೆ.

ಶಶಿರಾಜ್ ಕಾವೂರು ಸಂಭಾಷಣೆ ಹೊಂದಿರುವ ಸಿನಿಮಾಕ್ಕೆ ಅಮೃತ್‌ ಸೋಮೇಶ್ವರ್ ಮತ್ತು ಶಶಿರಾಜ್‌ ಅವರ ಸಾಹಿತ್ಯವಿದೆ. ಸಂಗೀತದಲ್ಲಿ ಮೈಮ್‌ ರಾಮ್‌ದಾಸ್‌, ಶೀನ ನಾಡೋಲಿ ಕೈಚಳಕ ತೋರಿಸಿದ್ದಾರೆ. ಛಾಯಾಗ್ರಹಣದಲ್ಲಿ ವಿ. ಪವನ್ ಕುಮಾರ್ ಸಹಕರಿಸಿದ್ದು, ಗಣೇಶ್ ನೀರ್ಚಾಲ್ ಮತ್ತು ಶೇಷಾಚಲ ಕುಲಕರ್ಣಿ ಅವರ ಸಂಕಲನವಿದೆ.

ಪನೋರಮಾ ಚಿತ್ರೋತ್ಸವಕ್ಕೂ ಆಯ್ಕೆ: ಚೆನ್ನೈನಲ್ಲಿ ನಡೆಯಲಿರುವ 2021ನೇ ಸಾಲಿನ ಇಂಡಿಯನ್‌ ಪನೋರಮಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೂ ‘ಪಿಂಗಾರ’ ಚಿತ್ರ ಆಯ್ಕೆಯಾಗಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ 12ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಿಂಗಾರ ಚಿತ್ರವು ‘ನೆಟ್‌ವರ್ಕ್ ಫಾರ್ ಪ್ರಮೋಶನ್ ಆಫ್ ಏಷ್ಯನ್’ ಮತ್ತು ಏಷ್ಯನ್ ಫೆಸಿಫಿಕ್ ವಿಭಾಗದಿಂದ ‘ಬೆಸ್ಟ್ ಏಶಿಯನ್ ಚಲನಚಿತ್ರ’ ಎಂಬ ಬಿರುದನ್ನು ಮುಡಿಗೇರಿಸಿಕೊಂಡಿತ್ತು. ಈ ಪ್ರಶಸ್ತಿಯನ್ನು ಮೊದಲ ತುಳು ಚಿತ್ರ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT