ಟರ್ನಿಂಗ್ ಪಾಯಿಂಟ್ ನಿರೀಕ್ಷೆಯಲ್ಲಿ...

ಶುಕ್ರವಾರ, ಮಾರ್ಚ್ 22, 2019
26 °C

ಟರ್ನಿಂಗ್ ಪಾಯಿಂಟ್ ನಿರೀಕ್ಷೆಯಲ್ಲಿ...

Published:
Updated:

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶನ ಮಾಡಿರುವ ವಿನು ಮಹೇಶ್ ರೈ ಅವರು ತಮ್ಮ ಜೀವನದಲ್ಲಿ ಒಂದು ‘ಟರ್ನಿಂಗ್ ಪಾಯಿಂಟ್’ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಏಕೆಂದರೆ, ಅವರು ನಿರ್ದೇಶಿಸಿರುವ ‘ಟರ್ನಿಂಗ್ ಪಾಯಿಂಟ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ರೈ ಅವರು ಈ ಹಿಂದೆ ತುಳು ಹಾಗೂ ಕೊಡವ ಭಾಷೆಯ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಟರ್ನಿಂಗ್ ಪಾಯಿಂಟ್ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಪ್ರೀತಿ ಹಾಗೂ ತಾಯಿಯ ಸೆಂಟಿಮೆಂಟ್‌ ಎನ್ನುವ ಎರಡು ಹಳಿಗಳ ಮೇಲೆ ಚಿತ್ರದ ಬಂಡಿ ಸಾಗುತ್ತದೆ’ ಎನ್ನುತ್ತ ಸುದ್ದಿಗಾರರ ಜೊತೆ ಮಾತಿಗೆ ಕುಳಿತರು ರೈ.

ಅವರು ಚಿತ್ರೀಕರಣ ಪೂರ್ಣಗೊಂಡ ಖುಷಿಯಲ್ಲಿ, ಸಿನಿಮಾ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿದ್ದರು. ‘ಆದಿಕೇಶವ್ ಅವರು ಈ ಚಿತ್ರದ ಹೀರೊ. ಚಿತ್ರದ ಕೆಲವು ದೃಶ್ಯಗಳನ್ನು ಸಿಕ್ಕಿಂನಲ್ಲಿ ಚಿತ್ರೀಕರಿಸಲಾಗಿದೆ. ಇದಲ್ಲದೆ, ಮಡಿಕೇರಿ, ಸುಳ್ಯ, ಕುಶಾಲನಗರ ಮತ್ತು ಬೆಂಗಳೂರಿನಲ್ಲಿ ಸಹ ಚಿತ್ರೀಕರಣ ನಡೆದಿದೆ’ ಎಂದು ತಿಳಿಸಿದರು.

ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ತೃತೀಯ ಲಿಂಗಿ ವ್ಯಕ್ತಿಯೊಬ್ಬರು ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರಂತೆ. ಮನೋಜ್ ಗೌಡ ನಿರ್ಮಾಣದ ಈ ಚಿತ್ರ ಏಪ್ರಿಲ್ ಮೊದಲ ವಾರ ಅಥವಾ ಎರಡನೆಯ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದ ಹಾಡುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಂಡ ಹೇಳಿದೆ.

ಆದಿಕೇಶವ್ ಅವರ ತಾಯಿಗೆ ತಮ್ಮ ಮಗನನ್ನು ಸಿನಿಮಾ ಹೀರೊ ಮಾಡಬೇಕು ಎಂಬ ಆಸೆ ಬಹಳ ಇದೆಯಂತೆ. ಹಾಗಾಗಿಯೇ ಚಿತ್ರರಂಗಕ್ಕೆ ಬಂದಿದ್ದಾಗಿ ಆದಿಕೇಶವ್ ಹೇಳಿಕೊಂಡಿದ್ದಾರೆ.

‘ಟರ್ನಿಂಗ್ ಪಾಯಿಂಟ್ ಚಿತ್ರಕ್ಕಾಗಿ ನಾನು ಜಿಮ್ನಾಸ್ಟಿಕ್ಸ್ ಮತ್ತು ಫೈಟ್‌ ಬಗ್ಗೆ ತರಬೇತಿ ಪಡೆದಿದ್ದೇನೆ. ಚಿತ್ರದಲ್ಲಿ ನಾಲ್ಕು ಫೈಟ್ ದೃಶ್ಯಗಳು ಇವೆ. ಇದು ಹಾಸ್ಯ, ಆ್ಯಕ್ಷನ್ ಮತ್ತು ಸೆಂಟಿಮೆಂಟ್‌ ದೃಶ್ಯಗಳ ಮಿಶ್ರಣ’ ಎಂದರು ಆದಿಕೇಶವ್.

ಈ ಚಿತ್ರದಲ್ಲಿ ಆದಿಕೇಶವ್ ಅವರು ಚಿಕ್ಕಂದಿನಲ್ಲಿ ತಂದೆ–ತಾಯಿಯಿಂದ ತಪ್ಪಿಸಿಕೊಂಡು, ಸಿಕ್ಕಿಂನಲ್ಲಿ ಬೆಳೆಯುತ್ತಾರೆ. ತಮ್ಮ ನಿಜವಾದ ತಂದೆ–ತಾಯಿ ಬೆಂಗಳೂರಿನಲ್ಲಿ ಇದ್ದಾರೆ ಎಂಬುದು ನಂತರ ಗೊತ್ತಾಗುತ್ತದೆ. ಸಿಕ್ಕಿಂನಿಂದ ಹೊರಟು ನಾಯಕ ಬೆಂಗಳೂರಿಗೆ ಬರುತ್ತಾನೆ. ಅಲ್ಲಿಂದ ಚಿತ್ರ ಹಲವು ತಿರುವುಗಳನ್ನು ಪಡೆಯುತ್ತ ಸಾಗುತ್ತದೆ.

ನಾಯಕಿ ದಿಶಾ ಅವರದ್ದು ಸೋಫಿಯಾ ಎನ್ನುವ ಪಾತ್ರ. ‘ನಾನು ಬಬ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ದಿಶಾ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !