ಭಾನುವಾರ, ಆಗಸ್ಟ್ 18, 2019
24 °C

‘ಟೈಪ್ ರೈಟರ್’ ಭೂತದ ಬೆನ್ನತ್ತಿ...

Published:
Updated:
Prajavani

ಹಾರರ್, ಕ್ರೈಂ ಥ್ರಿಲ್ಲರ್ ವೆಬ್ ಸರಣಿಗಳು ಈಚೆಗೆ ಹೆಚ್ಚು ನಿರ್ಮಾಣವಾಗುತ್ತಿದ್ದರೂ ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಈಚೆಗೆ ಪ್ರಸಾರವಾಗಿರುವ ‘ಟೈಪ್ ರೈಟರ್’ ಹಿಂದಿ ವೆಬ್ ಸರಣಿಯು ಭಿನ್ನವಾಗಿ ಮೂಡಿ ಬಂದಿದೆ.

ಬಾಲಿವುಡ್‌ನ ‘ಅಲ್ಲಾದ್ದೀನ್’, ‘ಕಹಾನಿ’, ‘ಕಹಾನಿ-2’ ಚಿತ್ರಗಳನ್ನು ನಿರ್ದೇಶಿಸಿರುವ ಸುಜೋಯ್ ಘೋಷ್ ಅವರು ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಐದು ಕಂತುಗಳ ಸರಣಿ ಇದಾಗಿದ್ದು, 55 ನಿಮಿಷಗಳ ಅವಧಿಯ ಪ್ರತಿ ಕಂತು ಕೂಡ ರೋಚಕವಾಗಿ ಮೂಡಿಬಂದಿದೆ.

ಸಾಮಾನ್ಯವಾಗಿ ಎಲ್ಲ ಹಾರರ್ ಸಿನಿಮಾಗಳಲ್ಲಿ ಕಂಡು ಬರುವಂತೆ ಈ ವೆಬ್ ಸರಣಿಯಲ್ಲೂ ಭಯ ಹುಟ್ಟಿಸುವ ಬಂಗಲೆ, ಭೂತ ಚೇಷ್ಟೆ, ಫ್ಲ್ಯಾಷ್ ಬ್ಯಾಕ್ ಕಥನತಂತ್ರ... ಇವೆಲ್ಲವೂ ಇವೆ. ಆದರೆ ಇಲ್ಲಿ ‘ಟೈಪ್ ರೈಟರ್’ ಪ್ರಧಾನ ಕಥಾವಸ್ತು. ಇದರ ಸುತ್ತವೇ ಇಡೀ ಸರಣಿಯ ಕಥೆ ಗಿರಕಿ ಹೊಡೆಯುತ್ತದೆ. ಕಥಾವಸ್ತುವಿನಿಂದಾಗಿಯೇ ಈ ಸರಣಿ ಸಾಂಪ್ರದಾಯಿಕ ಹಾರರ್, ಥ್ರಿಲ್ಲರ್ ಕಥಾನಕಗಳಿಗಿಂತ ಸ್ವಲ್ಪ ಭಿನ್ನವಾಗಿ ಮೂಡಿಬಂದಿದೆ ಎನ್ನಬಹುದು. ‌ಗೋವಾದಲ್ಲಿನ ಹಳೆಯ ಕಾಲದ ಬಂಗಲೆಯನ್ನು ಕೇಂದ್ರೀಕರಿಸಿ ಇಡೀ ಸರಣಿಯನ್ನು ಚಿತ್ರೀಕರಿಸಲಾಗಿದೆ.

ಪುರಬ್ ಕೊಹ್ಲಿ, ಪಲೋಮಿ ಘೋಷ್, ಸಮೀರ್ ಕೊಚ್ಚರ್, ಜಿಶ್ಸು ಸೆನ್‌ಗುಪ್ತ, ಅರ್ನಾ ಶರ್ಮಾ, ಕೆ.ಸಿ.‌ ಶಂಕರ್ ಮತ್ತಿತರರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ಭೂತಗಳ ಬಗ್ಗೆ ಕಥೆ ಬರೆಯುವ ವ್ಯಕ್ತಿಯೊಬ್ಬರು ಪುಟ್ಟ ಮೊಮ್ಮಗಳ ಜೊತೆ ದೊಡ್ಡ ಬಂಗಲೆಯಲ್ಲಿ ವಾಸವಿರುತ್ತಾರೆ‌. ಕಾಲ್ಪನಿಕ ಕಥೆ ರಚಿಸಿದರೂ ಆ ವ್ಯಕ್ತಿ ನಿಜ ಜೀವನದಲ್ಲಿ ಇವುಗಳ ಅಸ್ತಿತ್ವವನ್ನು ನಂಬುವುದಿಲ್ಲ. ಆದರೆ ಒಂದು ರಾತ್ರಿ ಅವರ ನಿಲುವಿಗೆ ವಿರುದ್ಧವಾದ ಘಟನೆಗಳು ಆ ಮನೆಯಲ್ಲಿ ನಡೆಯುತ್ತವೆ. ಈ ಕಥಾನಕದೊಂದಿಗೆ ಈ ಸರಣಿಯ ಮೊದಲ ಕಂತು ಆರಂಭವಾಗುತ್ತದೆ. ಹಲವು ವರ್ಷಗಳ ಬಳಿಕ ಈ ಲೇಖಕನ ಮೊಮ್ಮಗಳು ಮರಳಿ ಆ ಬಂಗಲೆಗೆ ಬರುವಲ್ಲಿಂದ ಕಥೆ ಪುನಃ ಆರಂಭವಾಗುತ್ತದೆ.

ಮುಂದೆ ಕಥೆಯು ನಮ್ಮನ್ನು 1950ರ ಕಾಲಘಟ್ಟಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಅತಿಮಾನುಷ ಶಕ್ತಿ ಹೊಂದಿರುವ ತಾಯಿ, ಮಗನ ಬದುಕಿನಲ್ಲಿ ಸಂಭವಿಸುವ ದುರ್ಘಟನೆ ಹಾಗೂ ಅವರ ಪ್ರತೀಕಾರವೇ ಈ ಎಲ್ಲಾ ಘಟನೆಗಳಿಗೂ ಹೇತುವಾಗಿದೆ ಎಂಬುದು ಮನದಟ್ಟಾಗುತ್ತದೆ.

ಪ್ರತಿ ಕಂತಿನ ಕೊನೆಯಲ್ಲೂ ಕುತೂಹಲಕಾರಿ ಅಂಶವೊಂದನ್ನು ಬಾಕಿ ಉಳಿಸುವ ಮೂಲಕ ನಿರ್ದೇಶಕರು ಮುಂದಿನ ಕಂತುಗಳನ್ನು ನೋಡಲು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಾರೆ. ಫ್ಲ್ಯಾಷ್ ಬ್ಯಾಕ್ ಮತ್ತು ಅತಿಮಾನುಷ ಅಂಶಗಳನ್ನು ನಿರ್ದೇಶಕರು ಅತಿಯಾಗಿ ಬಳಸದ ಕಾರಣ ಎಲ್ಲೂ ನೀರಸ ಎನಿಸುವುದಿಲ್ಲ. ಟೈಪ್ ರೈಟರ್‌ಗೆ ಸೇರಿಕೊಂಡಿರುವ ಭೂತ ಹೇಗೆ ಜನರನ್ನು ಕಾಡುತ್ತದೆ ಎಂಬುದೇ ಈ ಸರಣಿಯ ಕಥಾಸಾರ.

ಭೂತ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಘೋಸ್ಟ್ ಕ್ಲಬ್ ಸ್ಥಾಪಿಸಿ ಬಂಗಲೆ ಹಿಂದಿನ ಕಥೆಯನ್ನು ಕೆದಕುವ ನಾಲ್ವರು ಮಕ್ಕಳ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತವೆ.

ಹಾಲಿವುಡ್‌ನ ಹಾರರ್ ಸಿನಿಮಾಗಳಾದ ‘ದಿ ಕಂಜರಿಂಗ್’, ‘ಅಮಿಟಿ ವಿಲ್’ನ ಛಾಯೆ ಅಲ್ಲಲ್ಲಿ ಕಂಡು ಬಂದಿದೆ. ಸರಣಿಯ ಕಥೆ ಮುಂದುವರಿದಂತೆ ಮಧ್ಯೆ‌ ಮಧ್ಯೆ ಫ್ಲ್ಯಾಷ್ ಬ್ಯಾಕ್ ಕಥೆಯನ್ನು ತೋರಿಸುವ ಮೂಲಕ ಒಟ್ಟು ಕಥಾ ನಿರೂಪಣೆ ಸಾಗುತ್ತದೆ. ಕೆಲವೆಡೆ ಕಥೆಗೆ ನೇರವಾಗಿ ಸಂಬಂಧವಿಲ್ಲದ ಕೆಲವು ರಂಗಗಳನ್ನೂ ನಿರ್ದೇಶಕರು ಅನಗತ್ಯವಾಗಿ ತುರುಕಿದ್ದಾರೆ.

ಎಲ್ಲ ಮುಗಿಯಿತು ಎನ್ನುವಾಗ ಮತ್ತೆ ಭೂತ ಚೇಷ್ಟೆ ಕಾಣಿಸಿಕೊಳ್ಳುವ ಮೂಲಕ ಎರಡನೇ ಸೀಸನ್‌ ಕೂಡ ಸಿದ್ಧವಾಗಬಹುದು ಎಂಬ ಸೂಚನೆಯನ್ನೂ ನಿರ್ದೇಶಕರು ನೀಡಿದ್ದಾರೆ.

Post Comments (+)