ಮಂಗಳವಾರ, ನವೆಂಬರ್ 12, 2019
19 °C

ಮತ್ತೊಂದು ‘ಯೂಟರ್ನ್‌’ ಸಿನಿಮಾ

Published:
Updated:

2018ರಲ್ಲಿ ಬಿಡುಗಡೆ ಆದ, ಪವನ್ ಕುಮಾರ್ ನಿರ್ದೇಶನದ ಯಶಸ್ವಿ ಚಿತ್ರ ‘ಯೂಟರ್ನ್‌’ ಬಗ್ಗೆ ಸಿನಿಮಾ ಪ್ರೇಮಿಗಳು ಕೇಳಿರುತ್ತಾರೆ, ಹಲವರು ಆ ಚಿತ್ರವನ್ನು ವೀಕ್ಷಿಸಿರುತ್ತಾರೆ. ಆ ಚಿತ್ರದ ಮುಂದುವರಿದ ಭಾಗವೊಂದು ಬರಬಹುದು ಎಂಬ ನಿರೀಕ್ಷೆ ಎಷ್ಟು ಜನರಿಗೆ ಇತ್ತೋ ಗೊತ್ತಿಲ್ಲ.

ಆದರೆ, ಆ ಚಿತ್ರದ ಮುಂದುವರಿದ ಭಾಗವೇ ಎಂಬ ಪ್ರಶ್ನೆ ಹುಟ್ಟಿಸುವ ಚಿತ್ರವೊಂದು ಚಂದನವನದಲ್ಲಿ ಸೆಟ್ಟೇರಲಿದೆ. ಹೊಸ ಸಿನಿಮಾಕ್ಕೆ ‘ಯೂಟರ್ನ್‌ 2’ ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಹೀಗಿದ್ದರೂ, ‘ಈ ಸಿನಿಮಾಕ್ಕೂ, ಪವನ್ ಕುಮಾರ್ ನಿರ್ದೇಶನದ ಸಿನಿಮಾ ಕಥೆಗೂ ಯಾವ ಸಂಬಂಧವೂ ಇಲ್ಲ’ ಎಂದು ಹೊಸ ಸಿನಿಮಾ ತಂಡ ಸ್ಪಷ್ಟಪಡಿಸಿದೆ.

‘ಯೂಟರ್ನ್‌ 2’ ಚಿತ್ರದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ, ನಾಯಕ ನಟ ಚಂದ್ರು ಓಬಯ್ಯ ಅವರು ಸುದ್ದಿಗೋಷ್ಠಿ ಕರೆದಿದ್ದರು. ‘ಇದು ಹಾರರ್‌ ಕಥೆ ಇರುವ ಸಿನಿಮಾ. ಈ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಹುಡುಕುತ್ತ ಇದ್ದಾಗ ಯೂಟರ್ನ್‌–2 ಸಿಕ್ಕಿತು. ಇದು 2018ರಲ್ಲಿ ತೆರೆ ಕಂಡ ಯೂಟರ್ನ್‌ ಚಿತ್ರದ ಮುಂದುವರಿದ ಭಾಗ ಖಂಡಿತ ಅಲ್ಲ’ ಎಂದರು ಓಬಯ್ಯ.

ಇವರು ಮೊದಲು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಚಿತ್ರಕ್ಕೆ ಈ ಶೀರ್ಷಿಕೆ ನೀಡುವ ಮುನ್ನ ಇವರು ಪವನ್ ಕುಮಾರ್ ಜೊತೆ ಮಾತುಕತೆ ನಡೆಸಿಲ್ಲ. ಚಿತ್ರದ ಬಹುತೇಕ ಭಾಗಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿವೆ. ಚಿತ್ರದಲ್ಲಿ ಐದು ಹಾಡುಗಳು ಇರಲಿವೆ.

ಚಂದನಾ ಅವರು ಈ ಚಿತ್ರದ ನಾಯಕಿಯಾಗಿ ಅಭಿನಯಿಸಲಿದ್ದಾರೆ. ‘ಬೋಲ್ಡ್ ಮತ್ತು ಗಟ್ಟಿಗಿತ್ತಿ ಹುಡುಗಿಯಾಗಿ ನಾನು ಇದರಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಪಾತ್ರ ಬಹಳ ಚೆನ್ನಾಗಿದೆ’ ಎಂದರು ಚಂದನಾ.

ಪ್ರತಿಕ್ರಿಯಿಸಿ (+)