ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಭಾವದ ಹೂವು ಅರಳಿಸಿದ ವಾಣಿ ಜಯರಾಂ

Last Updated 4 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

‘ತೆರೆದಿದೆ ಮನೆ ಓ ಬಾ ಅತಿಥಿ’ ಹಾಡಿನಲ್ಲಿ ಇರುವುದು ಜುಗಲ್‌ಬಂದಿಯಂಥ ಅನುಭವ. ಎಸ್‌. ಜಾನಕಿ ಅವರೊಟ್ಟಿಗೆ ವಾಣಿ ಜಯರಾಂ ಶಾರೀರ ಕೊಟ್ಟ ಮಜಾ. ಆ ಹಾಡು ಬರೆದವರು ಕುವೆಂಪು. ಅದು ಜನಪ್ರಿಯವಾದದ್ದು ‘ಹೊಸಬೆಳಕು’ ಸಿನಿಮಾದಲ್ಲಿ ಬಳಕೆಯಾದ ಮೇಲೆ. ಸ್ವರ ಸಂಯೋಜನೆ ಮಾಡಿದ್ದವರು ಎಂ. ರಂಗರಾವ್.

ಶಾಸ್ತ್ರೀಯ ಸಂಗೀತದ ಸಂಸ್ಕಾರದ ವಾತಾವರಣದಲ್ಲೇ ಹುಟ್ಟಿ ಬೆಳೆದ ವಾಣಿ ಜಯರಾಂ ಅವರೀಗ ನೆನಪು.

ವಾಣಿ ಅವರ ಗಾಯನದಲ್ಲಿ ಅನುರಣಿಸುವುದು ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ ಮೂರೂ ಶಾಸ್ತ್ರೀಯ ಪ್ರಕಾರಗಳ ಸಿದ್ಧಿ. ‘ಬಿಳಿ ಹೆಂಡ್ತಿ’ ಸಿನಿಮಾದಲ್ಲಿ ಅವರು ಹಾಡಿರುವ ಶೀರ್ಷಿಕೆ ಗೀತೆಯಲ್ಲಿನ ಇಂಗ್ಲಿಷ್‌ ಸಾಲುಗಳ ಅಭಿವ್ಯಕ್ತಿ ಗಮನಿಸಿದರೆ ಇದು ಸುಸ್ಪಷ್ಟ. ‘ಭಾವವೆಂಬ ಹೂವು ಅರಳಿ’ ಎನ್ನುವ, ‘ಉಪಾಸನೆ’ ಸಿನಿಮಾದ ಹಾಡನ್ನು ಕೇಳಿದವರ ಹೃದಯ ಅರಳದಿದ್ದರೆ ಹೇಳಿ.

ವಾಣಿ ಅವರ ಮೂಲ ಹೆಸರು ಕಲೈವಾಣಿ. ತಮಿಳುನಾಡಿನ ವೆಲ್ಲೋರ್‌ ತವರು. ಆರು ಹೆಣ್ಣುಮಕ್ಕಳಲ್ಲಿ ಅವರು ಐದನೆಯವರು. ಮೂವರು ಗಂಡುಮಕ್ಕಳೂ ಇದ್ದ ತುಂಬು ಕುಟುಂಬದ ಕುಡಿ. ತಂದೆ ದುರೈಸ್ವಾಮಿ ಅಯ್ಯಂಗಾರ್‌ ಹಾಗೂ ತಾಯಿ ಪದ್ಮಾವತಿ ಇಬ್ಬರೂ ಶಾಸ್ತ್ರೀಯ ಸಂಗೀತ ಕಲಿತಿದ್ದವರೇ. ರಂಗರಾಮಾನುಜ ಅಯ್ಯಂಗಾರ್ ಅವರಲ್ಲಿ ಕಲಿಯಲು ಮಗಳನ್ನು ಹಚ್ಚಿದರು. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಪರಿಚಯ ಆದದ್ದು ಅಲ್ಲಿ. ಕಡಲೂರು ಶ್ರೀನಿವಾಸ ಅಯ್ಯಂಗಾರ್, ಟಿ.ಆರ್. ಬಾಲಸುಬ್ರಮಣಿಯನ್ ತರಹದ ಗುರುಗಳಿಂದಾಗಿ ಕಲಿಕೆಯನ್ನು ವಿಸ್ತರಿಸಿಕೊಳ್ಳುವ ಅವಕಾಶ ಸಿಕ್ಕಿತು.

ಬಾಲ್ಯದಲ್ಲಿಯೇ ರೇಡಿಯೊ ಸಿಲೋನ್‌ಗೆ ವಾಣಿ ಕಿವಿ ಅಂಟಿಸಿಕೊಂಡು ಕೂರುತ್ತಿದ್ದರು. ಸಿನಿಮಾ ಹಾಡುಗಳ ಮೋಹ ಹುಟ್ಟಿದ್ದು ಹಾಗೆ. ಇಪ್ಪತ್ತೆರಡನೇ ವಯಸ್ಸಿನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಕೆಲಸ ಸಿಕ್ಕಿತು. ಎರಡು ವರ್ಷ ಕಳೆಯುವಷ್ಟರಲ್ಲೆ ಜಯರಾಂ ಎಂಬುವವರನ್ನು ಮದುವೆಯಾಗಿ, ಮುಂಬೈನಲ್ಲಿ ಸಂಸಾರ ಹೂಡಿದರು. ಜಯರಾಂ ಕೂಡ ಸಂಗೀತ ಪ್ರೇಮಿ. ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯಲು ಹೆಂಡತಿಯನ್ನು ಪ್ರೇರೇಪಿಸಿದ್ದೆ ಅವರು. ಠುಮ್ರಿ, ಗಜಲ್, ಭಜನೆ ಇವೆಲ್ಲದರ ಸೂಕ್ಷ್ಮಗಳನ್ನು ವಾಣಿ ಕಲಿಯಲು ಇದು ಕಾರಣವಾಯಿತು.

ಕಛೇರಿಯೊಂದನ್ನು ನೀಡುವ ಸಂದರ್ಭದಲ್ಲೇ ಸಂಗೀತ ನಿರ್ದೇಶಕ ವಸಂತ ದೇಸಾಯಿ ಅವರ ಪರಿಚಯವಾಯಿತು. ಕುಮಾರ ಗಂಧರ್ವ ಅವರ ಕಂಠದಲ್ಲಿ ಮರಾಠಿ ಆಲ್ಬಂ ಅನ್ನು ಅವರು ಆಗ ಸಿದ್ಧಪಡಿಸುತ್ತಿದ್ದರು. ವಾಣಿ ಅವರ ಕಂಠಮಾಧುರ್ಯ ಅವರನ್ನೂ ಕರಗಿಸಿದ್ದೇ, ಕುಮಾರ ಗಂಧರ್ವ ಅವರೊಟ್ಟಿಗೆ ಹಾಡಲು ಅವಕಾಶ ಕೊಟ್ಟರು. ಆ ಗೀತೆ ಹಿಟ್‌ ಆಯಿತು. ಪಂಡಿತ್‌ ರವಿಶಂಕರ್ ಸ್ವರ ಸಂಯೋಜನೆ ಮಾಡಿದ್ದ ‘ಮೀರಾ’ ಎಂಬ ಸಿನಿಮಾದಲ್ಲಿ ಹಾಡುವ ಅವಕಾಶವೂ ಹುಡುಕಿಕೊಂಡು ಬಂತು. ‘ಎಪ್ಪಟಿವಲೆಕಾದುರ ಸ್ವಾಮಿ’ ಎಂಬ ಭಕ್ತಿಗೀತೆ ಅವರ ಶಾಸ್ತ್ರೀಯ ಪ್ರಜ್ಞೆಯನ್ನು ತೆಲುಗಿನಲ್ಲಿ ಪಸರಿಸಿತು. ಅದು ಅಲ್ಲಿನ ಚಲನಚಿತ್ರ ಲೋಕ ಅವರನ್ನು ಒಳಗೊಳ್ಳಲು ಸ್ಫೂರ್ತಿ. ತಮಿಳು, ಮಲಯಾಳಂ, ಹಿಂದಿ, ಕನ್ನಡ, ಗುಜರಾತಿ, ಒಡಿಯಾ ಹೀಗೆ ಎಲ್ಲ ಭಾಷೆಗಳಲ್ಲಿ ವಾಣಿ ಅವರ ಗಾನಸುಧೆ ಹರಿಯಿತು.

ಗುರುವಾರವಷ್ಟೆ ನಿಧನರಾದ ನಿರ್ದೇಶಕ ಕೆ. ವಿಶ್ವನಾಥ್ ನಿರ್ದೇಶನದ ‘ಶಂಕರಾಭರಣಂ’ ಸಿನಿಮಾದ ಎಲ್ಲ ಹಾಡುಗಳಿಗೂ ಸೇರಿ ರಾಷ್ಟ್ರಪ್ರಶಸ್ತಿ ಸಂದಿತ್ತು. ವಾಣಿ ಜಯರಾಂ ಕಾಣ್ಕೆಯೂ ಅದರಲ್ಲಿ ಇತ್ತು. ಅದೇ ಸಿನಿಮಾ ಹಾಡುಗಳಿಗೆ ನಂದಿ ಪ್ರಶಸ್ತಿಗೂ ವಾಣಿ ಭಾಜನರಾಗಿದ್ದರು.

ಕೆ.ವಿ. ಮಹದೇವನ್, ರಾಜನ್‌– ನಾಗೇಂದ್ರ, ಸತ್ಯಂ, ಚಕ್ರವರ್ತಿ, ಎಂ.ಎಸ್. ವಿಶ್ವನಾಥನ್ ಅಷ್ಟೇ ಅಲ್ಲದೆ ಇಳಯರಾಜಾ ಸಂಯೋಜನೆಯಲ್ಲಿ ವಾಣಿ ಅವರ ಶಾಸ್ತ್ರೀಯ ಸಂಗೀತದ ಪಲುಕುಗಳು ಅರಳಿದವು. ಹಿಂದಿಯ ‘ಗುಡ್ಡಿ’ ಸಿನಿಮಾದಲ್ಲಿ ಅವರು ಹಾಡಿದ ‘ಬೋಲೆ ರೆ ಪಪೀ ಹರಾ’ ಹಾಡನ್ನು ಈಗಲೂ ಗುನುಗುನಿಸುವ ಅಭಿಮಾನಿಗಳಿದ್ದಾರೆ. ಇದೇ ವರ್ಷ ವಾಣಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕಾರ ಒಲಿದಿತ್ತು. ಅಪೂರ್ವ ರಾಗಂಗಳ್ (ತಮಿಳು), ಸ್ವಾತಿ ಕಿರಣಂ (ತೆಲುಗು) ಸಿನಿಮಾ ಹಾಡುಗಳಿಗೆ ರಾಷ್ಟ್ರಪ್ರಶಸ್ತಿಗಳು ಸಂದವು. 2013ರಲ್ಲಿ ಜೀವನ ಶ್ರೇಷ್ಠ ಸಾಧನೆಗಾಗಿ ‘ಫಿಲ್ಮ್‌ಫೇರ್’ ಪ್ರಶಸ್ತಿಯ ಗರಿ ಎಲ್ಲಕ್ಕೂ ಭಾಜನರಾದರು.

‘ಪ್ರಿಯತಮ ಕರುಣೆಯ ತೋರೆಯಾ’, ‘ಲಾಲಿ ಲಾಲಿ ಸುಕುಮಾರ’, ‘ಸವಿ ನೆನಪುಗಳು ಬೇಕು’, ‘ಕನಸಲೂ ನೀನೆ ಮನಸಲೂ ನೀನೆ’, ‘ಕಣ್ಣು ಕಣ್ಣು ಕಲೆತಾಗ’, ‘ಬೆಸುಗೆ ಬೆಸುಗೆ’... ಹೀಗೆ ಹಲವು ಕಾಡುವ ಹಾಡುಗಳ ಮೂಲಕ ವಾಣಿ ಜೀವಂತ. ಹತ್ತು ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳಲ್ಲಿ ಅವರ ದನಿಯ ಬನಿ ಇದೆ. ಐದು ದಶಕಗಳ ಕಾಲ ಹಾಡಿ, ಅವರು ಉಳಿಸಿಹೋಗಿರುವ ಗಾನಮಾಧುರ್ಯ ಕಿವಿಯಲ್ಲಿ ಹಾಗೆಯೇ ಗುಂಯ್‌ಗುಡುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT