ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಂಗಕರ್ಮಿ' ಅನಾಮಿಕ ಚೊಚ್ಚಲ ಚಿತ್ರ ಪ್ರಯೋಗ

Last Updated 16 ಜೂನ್ 2022, 21:30 IST
ಅಕ್ಷರ ಗಾತ್ರ

ಅನಾಮಿಕ ಹಕ್ಸರ್ 1980ರ ದಶಕದಲ್ಲಿ ಬಿ.ವಿ. ಕಾರಂತರ ಗರಡಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ ಪಳಗಿದ್ದವರು. ಚಿದಂಬರರಾವ್ ಜಂಬೆ ಅವರ ಸಹಪಾಠಿ. ಎಸ್. ರಘುನಂದನ್ ಅವರು ಎನ್‌ಎಸ್‌ಡಿಯಲ್ಲಿ ಇವರಿಗೂ ಮುಂಚಿನ ಬ್ಯಾಚ್‌ನಲ್ಲಿ ಕಲಿತವರು. ದಶಕಗಟ್ಟಲೆ ರಂಗಭೂಮಿಯಲ್ಲೇ ತೊಡಗಿಕೊಂಡಿದ್ದ ಅನಾಮಿಕ ತಾವು ಏಳು ವರ್ಷಗಳಿಂದ ದಾಖಲಿಸಿರುವ ದೃಶ್ಯಗಳನ್ನೆಲ್ಲ ಬೆಸೆದು, ‘ಘೋಡೆ ಕೋ ಜಲೇಬಿ ಖಿಲಾನೆ ಲೇ ಜಾ ರಿಯಾ ಹೂಂ’ ಎಂಬ ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. ಅದು ಶುಕ್ರವಾರ ಬೆಂಗಳೂರಿನಲ್ಲಿ ತೆರೆಕಾಣಲಿದೆ.

ಅನಾಮಿಕ ಹಳೆಯ ದೆಹಲಿಯವರು. ಅದಕ್ಕೇ ಹಳೆಯ ದೆಹಲಿಯ ಸಾವಯವ ಗುಣವನ್ನು ಅವರು ಹಲವು ಬಗೆಯ ಉಪಭಾಷೆಗಳನ್ನು ಯಥಾವತ್ತಾಗಿ ಬಳಸಿಕೊಂಡು ಪಾತ್ರಗಳಿಂದ ಅಭಿನಯ ತೆಗೆಸಿದ್ದಾರೆ. ಚಿತ್ರದಲ್ಲಿ ಪಳಗಿದ ನಟರಲ್ಲದೆ ಅಭಿನಯದ ಗಂಧ–ಗಾಳಿ ಇಲ್ಲದವರನ್ನೂ ದುಡಿಸಿಕೊಂಡಿದ್ದಾರೆ. ನೈಜ ಲೊಕೇಷನ್‌ಗಳನ್ನು ಒಳಗೊಳ್ಳುತ್ತಾ ದೃಶ್ಯಗಳನ್ನು ಮೂಡಿಸುವ ಚಿತ್ರವು ಪೇಂಟಿಂಗ್‌, ಅನಿಮೇಷನ್, ರಂಗತಂತ್ರ ಎಲ್ಲವನ್ನೂ ಬೆಸೆದುಕೊಂಡು ಹಲವು ಪದರಗಳಲ್ಲಿ ಚಿತ್ರಕಥೆಯನ್ನು ತುಳುಕಿಸುತ್ತದೆ. ಇದೇ ಕಾರಣಕ್ಕೆ ಇದೊಂದು ಮಹತ್ವದ ಪ್ರಯೋಗಾತ್ಮಕ ಸಿನಿಮಾ ಎಂದು ಕೆಲವು ಚಿತ್ರೋತ್ಸವಗಳನ್ನು ಇದನ್ನು ಕಂಡುಂಡ ಸಿನಿಮಾ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

ಜೇಬುಗಳ್ಳ, ಸಿಹಿ ಮಾರುವವ, ಕಾರ್ಮಿಕ ಹೋರಾಟಗಾರ... ಈ ಮೂವರನ್ನೂ ಮುಖ್ಯ ಪಾತ್ರಗಳನ್ನಾಗಿಸಿ ಸಿದ್ಧಗೊಂಡಿರುವ ಚಿತ್ರವಿದು. ಹಳೆಯ ದೆಹಲಿಯ ಜನರ ಭರವಸೆ, ಉತ್ಕಟತೆ, ಕನಸುಗಳನ್ನೆಲ್ಲ ಈ ಪಾತ್ರಗಳ ಮೂಲಕ ಕಾಣಿಸುವ ಪ್ರಯತ್ನವನ್ನು ಅನಾಮಿಕ ಮಾಡಿದ್ದಾರೆ.

‘ನನ್ನ ಸಿನಿಮಾ ಏಳು ವರ್ಷಗಳ ಪ್ರಯತ್ನ. ಇಂತಹುದೊಂದು ವಿಷಯವನ್ನು ಸಿನಿಮಾದಲ್ಲಿ ತೋರಬೇಕು ಎನ್ನುವ ಕಾರಣಕ್ಕಷ್ಟೆ ಈ ಮಾಧ್ಯಮವನ್ನು ಆರಿಸಿಕೊಂಡೆ. ರಂಗಭೂಮಿಯಲ್ಲಿ ನನ್ನ ಕೆಲಸಗಳನ್ನು ಸದಾ ಮುಂದುವರಿಸಿಕೊಂಡು ಹೋಗುವೆ. ಕೋವಿಡ್‌ ಕಾಲದಲ್ಲಿ ಕಾರ್ಮಿಕರು ಮರುವಲಸೆ ಹೋದದ್ದನ್ನು ಕಂಡೆವು. ನನ್ನ ಸಿನಿಮಾದಲ್ಲಿ ಕಾರ್ಮಿಕರಿಗೆ ಅವಕಾಶಗಳ ಬಾಗಿಲುಗಳು ಹೇಗೆಲ್ಲ ಮುಚ್ಚುತ್ತಿವೆ ಎನ್ನುವ ವಿಷಯವೂ ಅಡಗಿದೆ. ಇದು ಕಾಲಾತೀತವಾದ ವಿಚಾರ. ಹಳೆಯ ದೆಹಲಿಯ ಸಮಸ್ಯೆಯಷ್ಟನ್ನೆ ಚಿತ್ರ ತೋರುವುದಿಲ್ಲ. ಇಂತಹ ಎಷ್ಟೋ ಸಮಸ್ಯೆಗಳು ಬಹುತೇಕ ನಗರಗಳಲ್ಲಿ ಇವೆ. ಕುದುರೆಗೆ ಜಿಲೇಬಿ ತಿನ್ನಿಸಲು ಹೋಗಬೇಕು ಎನ್ನುವುದು ಒಂದು ಧ್ವನಿಯಷ್ಟೆ. ಅದನ್ನು ತಿನ್ನಿಸುತ್ತಾರೆ ಎಂದೇನೂ ಅಲ್ಲ. ಇಂತಹ ಹಲವು ಉಪಭಾಷಾ ಧ್ವನಿಗಳನ್ನು ಈ ಸಿನಿಮಾ ಅಡಗಿಸಿಟ್ಟುಕೊಂಡಿದೆ’ ಎಂದು ಅನಾಮಿಕ ತಮ್ಮ ಸಿನಿಮಾದ ಆತ್ಮವನ್ನು ತೆರೆದಿಟ್ಟರು.

ಮಾಸ್ಕೋದ ಸ್ಟೇಟ್‌ ಇನ್‌ಸ್ಟಿಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್‌ನಲ್ಲಿ ಕಲಿತಿರುವ ಕೆಲವೇ ಭಾರತೀಯರಲ್ಲಿ ಅನಾಮಿಕ ಕೂಡ ಒಬ್ಬರು. ರಂಗಶಂಕರದಲ್ಲಿ ಹಿಂದೊಮ್ಮೆ ಅಧ್ಯಯನಕ್ಕೆಂದು ಬಂದಿದ್ದಾಗ, ದೇವನೂರ ಮಹದೇವರ ‘ಅಮಾಸ’ ಕಥೆಯನ್ನು ನಾಟಕಕ್ಕೆ ಒಗ್ಗಿಸುತ್ತಿದ್ದ ಪ್ರಕ್ರಿಯೆಯನ್ನು ಅವರು ಗಮನಿಸಿದ್ದರು. ಅದಾದ ಮೇಲೆ ದೇವನೂರರ ಕಥೆಗಳನ್ನು ಓದಿ, ಅವುಗಳ ಮಿಡಿತವನ್ನು ಅರಿತು ವಿಸ್ಮಯಗೊಂಡಿದ್ದನ್ನು ನೆನಪಿಸಿಕೊಂಡರು.

ಮ್ಯಾಡ್ರಿಡ್, ನ್ಯೂಯಾರ್ಕ್‌ನ ಮೋಮಾ, ಮೆಲ್ಬರ್ನ್, ಬ್ರೆಜಿಲ್ ಮೊದಲಾದೆಡೆ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈಗಾಗಲೇ ಈ ಚಿತ್ರ ಪ್ರದರ್ಶಿತವಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಭಾರತೀಯ ಚಿತ್ರ’ ಪ್ರಶಸ್ತಿಯೂ ಸಂದಿದೆ.

ರವೀಂದ್ರ ಸಾಹು, ಲೋಕೇಶ್ ಜೈನ್, ರಘುಬೀರ್ ಯಾದವ್ ಮುಖ್ಯಪಾತ್ರಗಳನ್ನು ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ಸೌಮ್ಯಾನಂದ ಸಾಹಿ ಸಿನಿಮಾಟೊಗ್ರಫಿ, ಸೌಮಿತ್ರ ರಾನಡೆ ಅನುಮೇಷನ್ ಕೆಲಸಗಳನ್ನ ಮಾಡಿಕೊಟ್ಟಿದ್ದಾರೆ. ಗೌತಮ್ ನಾಯರ್ ಅವರ ಆಡಿಯೋಗ್ರಫಿ ಇದೆ. ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿಯ ಪಿವಿಆರ್‌ನಲ್ಲಿ ಶುಕ್ರವಾರ ರಾತ್ರಿ 7.25ಕ್ಕೆ ಚಿತ್ರದ ಪ್ರದರ್ಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT