ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಜಗತ್ತಿನಲ್ಲೂ ವೀರಪ್ಪನ್‌ ರಕ್ತಸಿಕ್ತ ಚರಿತೆ ಅನಾವರಣ

ಇ4 ಎಂಟರ್‌ಟೈನ್‌ಮೆಂಟ್‌ನಿಂದ ವೆಬ್‌ ಸರಣಿ ನಿರ್ಮಾಣ
Last Updated 31 ಜುಲೈ 2020, 9:49 IST
ಅಕ್ಷರ ಗಾತ್ರ

ನರಹಂತಕ ವೀರಪ್ಪನ್‌ ಹತನಾಗಿ ಒಂದೂವರೆ ದಶಕ ಕಳೆದಿದೆ. ಆತನ ಬದುಕು ಮತ್ತು ರಕ್ತಸಿಕ್ತ ಚರಿತೆ ಕುರಿತು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಿನಿಮಾಗಳು ನಿರ್ಮಾಣವಾಗಿವೆ. ಆದರೆ, ಡಿಜಿಟಲ್‌ ಜಗತ್ತಿನಲ್ಲಿ ಆತನ ಕ್ರೌರ್ಯದ ಅಧ್ಯಾಯ ಅನಾವರಣಗೊಂಡಿರಲಿಲ್ಲ. ಈಗ ಕಾಡುಗಳ್ಳನ ಚರಿತೆಯು ವೆಬ್‌ ಸರಣಿಯಾಗಿಯೂ ಬರಲಿದೆ.

2004ರಲ್ಲಿ ತಮಿಳುನಾಡಿನ ಪಾಪರಪಟ್ಟಿ ಬಳಿ ತಮಿಳುನಾಡಿನ ಆಗಿನ ಎಸ್‌ಟಿಎಫ್‌ ಮುಖ್ಯಸ್ಥರಾಗಿದ್ದ ಕೆ. ವಿಜಯ್‌ಕುಮಾರ್‌ ನೇತೃತ್ವದ ತಂಡ ವೀರಪ್ಪನ್‌ನನ್ನು ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿತ್ತು. ಇದಾದ ಕೆಲವು ದಿನಗಳ ಬಳಿಕ ಅವರು ಈ ಕಾರ್ಯಾಚರಣೆಯ ಹಿಂದಿನ ಪರಿಶ್ರಮ ಕುರಿತು ‘ವೀರಪ್ಪನ್‌ ಚೇಸಿಂಗ್‌ ದಿ ಬ್ರಿಗೇಂಡ್‌‌’ ಎಂಬ ಪುಸ್ತಕ ಕೂಡ ಬರೆದರು. ಇದು ‘ವೀರಪ್ಪನ್‌– ದಂತಚೋರನ ಬೆನ್ನಟ್ಟಿ’ ಹೆಸರಿನಡಿ ಕನ್ನಡದಲ್ಲಿಯೂ ಪ್ರಕಟಗೊಂಡಿದೆ. ದೇಶದ ವಿವಿಧ ಭಾಷೆಗಳಿಗೂ ಭಾಷಾಂತರಗೊಂಡಿದೆ. ಪ್ರಸ್ತುತ ಈ ಪುಸ್ತಕ ಆಧರಿಸಿಯೇ ವೆಬ್‌ ಸರಣಿ ನಿರ್ಮಾಣವಾಗಲಿದೆ.

ಇ4 ಎಂಟರ್‌ಟೈನ್‌ಮೆಂಟ್‌ ದಕ್ಷಿಣ ಭಾರತದ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆ. ವೆಬ್‌ ಸರಣಿಯ ನಿರ್ಮಾಣಕ್ಕಾಗಿ ವಿಜಯ್‌ ಕುಮಾರ್‌ ಬರೆದ ಪುಸ್ತಕದ ಹಕ್ಕುಗಳನ್ನು ಈ ಸಂಸ್ಥೆಯು ಖರೀದಿಸಿದೆ. ಈಗಾಗಲೇ, ಪ್ರಿಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಸರಣಿಯಲ್ಲಿ ನಟಿಸಲಿರುವ ಪಾತ್ರವರ್ಗದ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

‘ನಾವು ವಿಜಯ್‌ಕುಮಾರ್‌ ಬರೆದ ಪುಸ್ತಕದ ಹಕ್ಕುಗಳನ್ನು ಖರೀದಿಸಿದ್ದೇವೆ. ಈ ಪುಸ್ತಕ ಆಧರಿಸಿ ಯಾರೊಬ್ಬರೂ ವೆಬ್‌ ಸರಣಿ ಅಥವಾ ಸಿನಿಮಾ ನಿರ್ಮಾಣ ಮಾಡುವುದು ನಿಷಿದ್ಧ. ಪುಸ್ತಕದಲ್ಲಿನ ಯಾವುದೇ ಕ್ಯಾರೆಕ್ಟರ್‌ ಆಧರಿಸಿ ಸಿನಿಮಾ ನಿರ್ಮಿಸಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಇ4 ಎಂಟರ್‌ಟೈನ್‌ಮೆಂಟ್‌ ಎಚ್ಚರಿಸಿದೆ.

ಅಂದಹಾಗೆ ಕನ್ನಡದಲ್ಲಿ ವೀರಪ್ಪನ್‌ ಕುರಿತು ‘ಅಟ್ಟಹಾಸ’ ಸಿನಿಮಾ ನಿರ್ದೇಶಿಸಿದ್ದ ಎ.ಎಂ.ಆರ್‌. ರಮೇಶ್‌ ಅವರು ವೀರಪ್ಪನ್‌ ಕುರಿತು ವೆಬ್‌ ಸರಣಿ ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಹತ್ತು ಎಪಿಸೋಡ್‌ಗಳಲ್ಲಿ ಇದು ನಿರ್ಮಾಣವಾಗಲಿದೆ. ನಟ ಕಿಶೋರ್‌ ಅವರು ವೀರಪ್ಪನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT