ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13,176 ಮತಗಟ್ಟೆ ಸಿಬ್ಬಂದಿ ನಿಯೋಜನೆ

ಚುನಾವಣೆಗೆ ದಕ್ಷಿಣ ಕನ್ನಡ ಸನ್ನದ್ಧ– ಜಿಲ್ಲಾಧಿಕಾರಿ
Last Updated 11 ಮೇ 2018, 6:41 IST
ಅಕ್ಷರ ಗಾತ್ರ

ಮಂಗಳೂರು: ‘ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸನ್ನದ್ಧವಾಗಿದ್ದು, 1,858 ಮತಗಟ್ಟೆಗಳಿಗೆ ಒಟ್ಟು 13,176 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ್ ಸೆಂಥಿಲ್‌ ತಿಳಿಸಿದರು.

ಚುನಾವಣಾ ಸಿದ್ಧತೆ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಪುಲ್‌ ಕುಮಾರ್ ಮತ್ತು ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ ಅವರೊಂದಿಗೆ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾಧಿಕಾರಿ, ‘ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ನಾಲ್ವರು ಮತಗಟ್ಟೆ ಅಧಿಕಾರಿಗಳು ಮತ್ತು ಒಬ್ಬ ಡಿ ದರ್ಜೆ ನೌಕರರನ್ನು ನಿಯೋಜನೆ ಮಾಡಲಾಗುತ್ತದೆ. ಶುಕ್ರವಾರ ಬೆಳಿಗ್ಗೆ ಅಂತಿಮ ಹಂತದ ನಿಯೋಜನೆ ನಡೆಯಲಿದೆ’ ಎಂದರು.

ಈ ಚುನಾವಣೆಗೆ 2,196 ಅಧ್ಯಕ್ಷಾಧಿಕಾರಿಗಳು, 8,784 ಮತಗಟ್ಟೆ ಅಧಿಕಾರಿಗಳು ಮತ್ತು 2196 ಡಿ ದರ್ಜೆ ನೌಕರರನ್ನು ಮತಗಟ್ಟೆ ಸಿಬ್ಬಂದಿಯಾಗಿ ನಿಯೋಜಿಸಲಾಗುತ್ತಿದೆ. ಎಲ್ಲ ಸಿಬ್ಬಂದಿಗೆ ಎರಡು ಹಂತದ ತರಬೇತಿ ನೀಡಿದ್ದು, ಶುಕ್ರವಾರ ಬೆಳಿಗ್ಗೆ ಸಿಬ್ಬಂದಿಯ ಮಿಶ್ರಣ ಮತ್ತು ಹಂಚಿಕೆ ಮಾಡಲಾಗುವುದು. ಆ ಬಳಿಕ ಅವರು ಆಯಾ ಮತಗಟ್ಟೆಗಳಿಗೆ ತೆರಳುವರು ಎಂದು ತಿಳಿಸಿದರು.

ಮತಯಂತ್ರ ಸಿದ್ಧ:

2,699 ಬ್ಯಾಲೆಟ್‌ ಯೂನಿಟ್‌, 2,262 ಕಂಟ್ರೋಲ್ ಯೂನಿಟ್‌ ಮತ್ತು 2,608 ವಿವಿಪ್ಯಾಟ್‌ ಯಂತ್ರಗಳು ಜಿಲ್ಲಾಡಳಿತದ ಬಳಿ ಇವೆ. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಶೇಕಡ 20ರಷ್ಟು ಹೆಚ್ಚುವರಿ ಯಂತ್ರಗಳನ್ನು ಕಾಯ್ದಿರಿಸಿಕೊಳ್ಳುವುದು ಅಗತ್ಯ. ಆದರೆ, ಈ ಬಾರಿ ಶೇ 30 ಮತ್ತು ಶೇ 40ರಷ್ಟು ಯಂತ್ರಗಳು ಹೆಚ್ಚುವರಿಯಾಗಿ ಲಭ್ಯವಿವೆ ಎಂದರು.

ಚುನಾವಣಾ ಉದ್ದೇಶಕ್ಕಾಗಿ 335 ಬಸ್‌ಗಳು, 163 ವ್ಯಾನ್‌ಗಳು ಮತ್ತು 150 ಜೀಪುಗಳು ಸೇರಿ 648 ವಾಹನಗಳನ್ನು ಬಳಕೆ ಮಾಡಲಾಗುವುದು. ಎಲ್ಲ ಮತಗಟ್ಟೆಗಳಲ್ಲೂ ಶೌಚಾಲಯ, ರ‍್ಯಾಂಪ್‌ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಮತಗಟ್ಟೆ ಅಧಿಕಾರಿಗಲು ಮತ್ತು ಸಿಬ್ಬಂದಿಗೆ ಆಹಾರ ಒದಗಿಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

12,837 ಮತಗಟ್ಟೆ ಸಿಬ್ಬಂದಿ, 1,295 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ, 43 ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳಿಗೆ ಅಂಚೆ ಮತಪತ್ರ ವಿತರಿಸಲಾಗಿದೆ. ಈ ಪೈ 5,900 ಮಂದಿ ಇದುವರೆಗೆ ಮತ ಚಲಾಯಿಸಿದ್ದಾರೆ. 380 ಸೇವಾ ಮತದಾರರಿಗೆ ಇ–ಮೇಲ್‌ ಮೂಲಕ ಮತಪತ್ರ ರವಾನಿಸಲಾಗಿದೆ ಎಂದು ಹೇಳಿದರು.

ಬಹುಹಂತದ ಭದ್ರತೆ:

ಕಮಿಷನರ್‌ ವಿಪುಲ್‌ ಕುಮಾರ್ ಮಾತನಾಡಿ, ‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 877 ಮತಗಟ್ಟೆಗಳಿವೆ. ಶೇ 75ರಷ್ಟು ಮತಗಟ್ಟೆಗಳಿಗೆ ಅರೆ ಸೇನಾಪಡೆಯ ಸಿಬ್ಬಂದಿ ಭದ್ರತೆ ಒದಗಿಸುವರು. 52 ಸೆಕ್ಟರ್‌ಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಸಂಚಾರಿ ಗಸ್ತು ತಂಡ ನಿಯೋಜಿಸಲಾಗುವುದು’ ಎಂದರು.

ಮೂರರಿಂದ ನಾಲ್ಕು ಸೆಕ್ಟರ್‌ಗೆ ಒಂದು ಪೊಲೀಸ್ ಇನ್‌ಸ್ಪೆಕ್ಟರ್‌ ನೇತೃತ್ವದ ಸಂಚಾರಿ ಗಸ್ತು ತಂಡ ಕಾರ್ಯನಿರ್ವಹಿಸಲಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬ ಎಸಿಪಿ ಮತ್ತು ತಲಾ ಎರಡು ಕ್ಷೇತ್ರಕ್ಕೆ ಒಬ್ಬ ಡಿಸಿಪಿಯನ್ನು ಮೇಲುಸ್ತುವಾರಿಗಾಗಿ ನಿಯೋಜಿಸಲಾಗಿದೆ. ಮತದಾನಕ್ಕೆ ಅಡಚಣೆ ಉಂಟುಮಾಡಲು ಪ್ರಯತ್ನಿಸುವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗವುದು ಎಂದು ಎಚ್ಚರಿಕೆ ನೀಡಿದರು.

ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ ಮಾತನಾಡಿ, ‘ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 981 ಮತಗಟ್ಟೆಗಳಿವೆ. ಇಲ್ಲಿ ಬಹುಹಂತದ ಭದ್ರತಾ ಯೋಜನೆ ರೂಪಿಸಲಾಗಿದೆ. ಶೇ 40ರಷ್ಟು ಮತಗಟ್ಟೆಗಳಿಗೆ ಅರೆ ಸೇನಾಪಡೆಯ ಸಿಬ್ಬಂದಿ ಭದ್ರತೆ ಒದಗಿಸುತ್ತಾರೆ. ಉಳಿದ ಮತಗಟ್ಟೆಗಳಿಗೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗುವುದು’ ಎಂದರು.

ಅರೆ ಸೇನಾಪಡೆಯ 150 ಸಿಬ್ಬಂದಿಯನ್ನು ತುರ್ತು ಬಳಕೆಗಾಗಿ ಕಾಯ್ದಿರಿಸಲಾಗುವುದು. ಸಬ್‌ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 72 ಸಂಚಾರಿ ಗಸ್ತು ತಂಡ, ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 14 ಸಂಚಾರಿ ಗಸ್ತು ತಂಡ ರಚಿಸಲಾಗಿದೆ. ಗುರುವಾರ ರಾತ್ರಿಯಿಂದಲೇ ಈ ತಂಡಗಳು ಗಸ್ತು ತಿರುಗಲಿವೆ. ಮೇಲುಸ್ತುವಾರಿಗಾಗಿ ಆರು ಡಿವೈಎಸ್‌ಪಿಗಳು ಮತ್ತು ಹೆಚ್ಚುವರಿ ಎಸ್‌ಪಿಯವರನ್ನು ನಿಯೋಜಿಸಲಾಗಿದೆ ಎಂದು ವಿವರ ನೀಡಿದರು.

ಬೆಳಿಗ್ಗೆ 5.45ಕ್ಕೆ ಪ್ರಕ್ರಿಯೆ ಆರಂಭ

ಶನಿವಾರ ಬೆಳಿಗ್ಗೆ 5.45ಕ್ಕೆ ಮತಗಟ್ಟೆಗಳಲ್ಲಿ ಮತಯಂತ್ರಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ. ಆಯಾ ಅಭ್ಯರ್ಥಿಗಳ ಏಜೆಂಟರು ಆ ಸಮಯಕ್ಕೆ ಸರಿಯಾಗಿ ಮತಗಟ್ಟೆಗಳಲ್ಲಿ ಹಾಜರಿರಬೇಕು. 7 ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಲಿದೆ.

––––––––

ಒಟ್ಟು ಮತದಾರರು– 17,11,848

ಪುರುಷರು– 8,41,073

ಮಹಿಳೆಯರು– 8,70,675

ಇತರೆ– 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT